ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಕಾರಿ ನುಗ್ಗೆಸೊಪ್ಪು-ಎಳ್ಳಿನ ಪುಡಿ; ಕಬ್ಬಿಣಾಂಶ ಹೇರಳವಾಗಿರುವ ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್
Nov 26, 2024 10:22 AM IST
ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಕಾರಿ ನುಗ್ಗೆಸೊಪ್ಪು-ಎಳ್ಳಿನ ಪುಡಿ; ಕಬ್ಬಿಣಾಂಶ ಹೇರಳವಾಗಿರುವ ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್
ನುಗ್ಗೆಸೊಪ್ಪು ಮತ್ತು ಎಳ್ಳಿನಿಂದ ತಯಾರಿಸಲಾಗುವ ಪುಡಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ನುಗ್ಗೆಸೊಪ್ಪು-ಎಳ್ಳಿನ ಪುಡಿ ತಯಾರಿಸುವುದು ತುಂಬಾನೇ ಸಿಂಪಲ್. ಇಲ್ಲಿದೆ ಮಾಡುವ ವಿಧಾನ.
ದೇಹದಲ್ಲಿ ಉತ್ತಮ ರಕ್ತ ಉತ್ಪಾದನೆಗೆ ಕಬ್ಬಿಣದ ಅಂಶವು ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅನೇಕ ಜನರು ಕಬ್ಬಿಣದ ಕೊರತೆಯ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದರೆ, ಕಬ್ಬಿಣದ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ನುಗ್ಗೆಸೊಪ್ಪು ಮತ್ತು ಎಳ್ಳಿನಲ್ಲಿ ಇಂತಹ ಪ್ರಮುಖ ಕಬ್ಬಿಣಾಂಶ ಹೇರಳವಾಗಿದೆ. ಇವೆರಡನ್ನು ಸೇರಿಸಿ ಪೌಡರ್ ಅಥವಾ ಪುಡಿ ತಯಾರಿಸಬಹುದು. ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ನುಗ್ಗೆಸೊಪ್ಪು-ಎಳ್ಳಿನ ಪುಡಿ ತಯಾರಿಸುವುದು ತುಂಬಾನೇ ಸಿಂಪಲ್. ಇಲ್ಲಿದೆ ಮಾಡುವ ವಿಧಾನ..
ನುಗ್ಗೆಸೊಪ್ಪು-ಎಳ್ಳಿನ ಪುಡಿ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಒಣಗಿಸಿದ ನುಗ್ಗೆಸೊಪ್ಪು- ½ ಕಪ್, ಎಳ್ಳು ಬೀಜಗಳು- ಅರ್ಧ ಕಪ್, ಕಡಲೆಬೇಳೆ- ಕಾಲು ಕಪ್, ಒಣ ಮೆಣಸಿನಕಾಯಿಗಳು- 10, ಶುಂಠಿ- 6 ಸಣ್ಣ ತುಂಡುಗಳು, ಕೊತ್ತಂಬರಿ ಬೀಜ- ಒಂದು ಚಮಚ, ಆಮ್ಚೂರ್ ಪುಡಿ- ಒಂದು ಚಮಚ, ಎಣ್ಣೆ- ಎರಡು ಟೀ ಚಮಚ, ಜೀರಿಗೆ- ಒಂದು ಚಮಚ, ಕಾಳುಮೆಣಸು – 1 ಚಮಚ, ಉಪ್ಪು.
ತಯಾರಿಸುವ ವಿಧಾನ: ಮೊದಲಿಗೆ ನುಗ್ಗೆಸೊಪ್ಪು ಒಣಗಿಸಿ. ತೇವಾಂಶವು ಒಣಗುವವರೆಗೆ ಒಣಗಲು ಬಿಡಿ. ನಂತರ ಆಳವಾದ ಬಾಣಲೆಯಲ್ಲಿ ಎಳ್ಳು, ಕಡಲೆಬೇಳೆ, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಹಾಕಿ ಉರಿಯನ್ನು ಕಡಿಮೆ ಮಾಡಿ ಚೆನ್ನಾಗಿ ಹುರಿಯಿರಿ. ಹೆಚ್ಚು ಉರಿಯಲ್ಲಿ ಹುರಿಯಬಾರದು. ಆ ನಂತರ ಒಂದು ಪ್ಲೇಟ್‌ನಲ್ಲಿ ಹುರಿದ ಇವೆಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಪಕ್ಕಕ್ಕೆ ಇಡಿ.
ಅದರ ನಂತರ, ಒಣಗಿದ ನುಗ್ಗೆಸೊಪ್ಪುವನ್ನು ಬಾಣಲೆಯಲ್ಲಿ ಹುರಿಯಬೇಕು. ನಂತರ ಅಮ್ಚೂರ್ ಪುಡಿಯನ್ನು ಹಾಕಬೇಕು. ನುಗ್ಗೆಸೊಪ್ಪನ್ನು ಒಂದು ನಿಮಿಷ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ಬಾಣಲೆಯಲ್ಲಿ ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ, ಕತ್ತರಿಸಿದ ಶುಂಠಿ ತುಂಡುಗಳನ್ನು ಹುರಿಯಿರಿ. ಅವು ಹುರಿದ ನಂತರ, ಅವುಗಳನ್ನು ಪಕ್ಕಕ್ಕೆ ಇರಿಸಿ.
ನಂತರ ಇನ್ನೊಂದು ಟೀ ಚಮಚ ಎಣ್ಣೆಯನ್ನು ಸುರಿಯಿರಿ. ಕರಿಮೆಣಸು ಸೇರಿಸಿ ಅದನ್ನು ಫ್ರೈ ಮಾಡಿ. ಬಣ್ಣ ಸ್ವಲ್ಪ ಬದಲಾದಾಗ ಅದನ್ನು ತೆಗೆದು ಪಕ್ಕಕ್ಕೆ ಇರಿಸಿ. ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ. ಅದರ ನಂತರ ಹುರಿದ ಎಳ್ಳು, ಕಡಲೆಬೇಳೆ, ನುಗ್ಗೆಸೊಪ್ಪು ಮತ್ತು ಕಾಳುಮೆಣಸು ಸೇರಿದಂತೆ ಉಳಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇಷ್ಟು ಮಾಡಿದರೆ ನುಗ್ಗೆಸೊಪ್ಪು-ಎಳ್ಳಿನ ಪುಡಿ ಸಿದ್ಧವಾಗುತ್ತದೆ. ತುಂಬಾ ಮೃದುವಾಗಿರದೆ ಸ್ವಲ್ಪ ಗಟ್ಟಿಯಾಗಿದ್ದರೆ ತಿನ್ನಲು ರುಚಿ ಇನ್ನೂ ಚೆನ್ನಾಗಿರುತ್ತದೆ.
ನುಗ್ಗೆಸೊಪ್ಪು ಎಳ್ಳಿನ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ತಿಂಗಳವರೆಗೆ ತಾಜಾತನವಿರುತ್ತದೆ. ಈ ಪುಡಿಯನ್ನು ಅನ್ನ, ದೋಸೆ, ಚಪಾತಿ ಮತ್ತು ರೊಟ್ಟಿ ಜತೆಗೂ ತಿನ್ನಬಹುದು. ನಿತ್ಯವೂ ಇದನ್ನು ತಿಂದರೆ ಇದರಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ನೆರವಾಗುತ್ತದೆ.