logo
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಹೆಪಟೊಟ್ರೋಪಿಕ್‌ ವೈರಸ್‌; ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ, ಸಿ ಹೇಗೆಲ್ಲಾ ಪರಿಣಾಮ ಬೀರುತ್ತೆ? ಇಲ್ಲಿದೆ ವಿವರ

ಏನಿದು ಹೆಪಟೊಟ್ರೋಪಿಕ್‌ ವೈರಸ್‌; ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ, ಸಿ ಹೇಗೆಲ್ಲಾ ಪರಿಣಾಮ ಬೀರುತ್ತೆ? ಇಲ್ಲಿದೆ ವಿವರ

Reshma HT Kannada

Aug 20, 2024 08:31 PM IST

google News

ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ ಮತ್ತು ಸಿ ಹೇಗೆಲ್ಲಾ ಪರಿಣಾಮ ಬೀರುತ್ತವೆ?

  • ಯಕೃತ್ತು ಮನುಷ್ಯ ದೇಹದ ಪ್ರಮುಖ ಅಂಗವಾಗಿರುವ ಕಾರಣ ಅದರ ಕಾಳಜಿ ಅಗತ್ಯ. ಹೆಪಟೈಟಿಸ್ ಬಿ ಮತ್ತು ಸಿಯಂತಹ ಹೆಪಟೊಟ್ರೋಪಿಕ್ ವೈರಸ್‌ಗಳು ಯಕೃತ್ತು ಹಾಗೂ ಲಿವರ್‌ಗೆ ಸಾಕಷ್ಟು ತೊಂದರೆ ಉಂಟು ಮಾಡಬಹುದು. ಈ ವೈರಸ್‌ಗಳು ಯಕೃತ್ತಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತವೆ, ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬಿತ್ಯಾದಿ ವಿವರ ಇಲ್ಲಿದೆ

ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ ಮತ್ತು ಸಿ ಹೇಗೆಲ್ಲಾ ಪರಿಣಾಮ ಬೀರುತ್ತವೆ?
ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ ಮತ್ತು ಸಿ ಹೇಗೆಲ್ಲಾ ಪರಿಣಾಮ ಬೀರುತ್ತವೆ?

ಮನುಷ್ಯನ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಕೂಡ ಒಂದು. ಯಕೃತ್ತು ಸರಿಯಾಗಿ ಕೆಲಸ ಮಾಡಿಲ್ಲ ದೇಹದಲ್ಲಿ ಹಲವು ವ್ಯತ್ಯಯಗಳು ಉಂಟಾಗಬಹುದು. ಸಾಮಾನ್ಯವಾಗಿ ನಮಗೆ ತಿಳಿದಿರುವ ಪ್ರತಿಯೊಂದು ವೈರಸ್ ಯಕೃತ್ತಿನಲ್ಲಿ ತಕ್ಕ ಮಟ್ಟಿಗೆ ಊತವನ್ನು ಉಂಟುಮಾಡುವ ಕ್ಷಮತೆಯನ್ನು ಹೊಂದಿರುತ್ತವೆ. ಆದಾಗ್ಯೂ, ಕೆಲವು ವೈರಸ್‌ಗಳು ನಿರ್ದಿಷ್ಟವಾಗಿ ಲಿವರ್‌ನಲ್ಲಿಯೇ ಊತ ಉಂಟುಮಾಡುತ್ತವೆ. ಇವುಗಳನ್ನು ಹೆಪಟೊಟ್ರೋಪಿಕ್ ವೈರಸ್‌ಗಳು ಎಂದು ಕರೆಯಲಾಗುತ್ತದೆ. ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಡೆಲ್ಟಾ ವೈರಸ್ (ಹೆಪಟೈಟಿಸ್ ಡಿ) ಮತ್ತು ಹೆಪಟೈಟಿಸ್ ಇ, (ಹೆಪಟೈಟಿಸ್ ಡಿ ಮತ್ತು ಹೆಪಟೈಟಿಸ್ ಇ ವೈರಸ್‌ಗಳನ್ನೂ ಈ ಹಿಂದೆ ನಾನ್-ಎ, ನಾನ್-ಬಿ ಹೆಪಟೈಟಿಸ್ ಎಂದು ಉಲ್ಲೇಖಿಸಲಾಗಿತ್ತು) ಎಂದು ಗುರುತಿಸಲಾಗಿದೆ. ಇವುಗಳಲ್ಲಿ, ಹೆಪಟೈಟಿಸ್ ಬಿ ಮತ್ತು ಸಿ, ಬಗ್ಗೆ ನಾವು ವಿಶೇಷವಾಗಿ ಗಮನಹರಿಸಬೇಕು. ಏಕೆಂದರೆ ಅವು ದೀರ್ಘಕಾಲದ ಲಿವರ್ ಕಾಯಿಲೆಗೆ ಕಾರಣವಾಗಬಹುದು. 

ಹೆಪಟೈಟಿಸ್ ಎ ಮತ್ತು ಇ ಯಂತಹ ಇತರ ವೈರಸ್‌ಗಳಿಂದ ಸಾಮಾನ್ಯವಾಗಿ ದೀರ್ಘಕಾಲದ ಲಿವರ್ ಸಮಸ್ಯೆಗಳು ಸಂಭವಿಸುವುದಿಲ್ಲ, ಇವುಗಳು ತೀವ್ರವಾದ ಲಿವರ್ ಊತ ಮತ್ತು ಗಂಭೀರವಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಆದರೂ ತುಂಬಾ ವಿರಳ. ಇನ್ನು, ಹೆಪಟೈಟಿಸ್ ಡಿ, ಹೆಪಟೈಟಿಸ್ ಬಿ ಯಿಂದ ಸಂಭವಿಸುವ ಸೋಂಕುಗಳಿಂದಲೂ ದೀರ್ಘಕಾಲದ ಲಿವರ್ ಸಮಸ್ಯೆಗಳು ಉಂಟಾಗಬಹುದು.

ಹೆಪಟೈಟಿಸ್‌ ಹರಡಲು ಪ್ರಮುಖ ಕಾರಣಗಳಿವು 

ಭಾರತದಲ್ಲಿ, ಒಂದು ನಿರ್ದಿಷ್ಟ ಸಮಯದಲ್ಲಿ ಹೆಪಟೈಟಿಸ್ ಬಿ ಯ ಹರಡುವಿಕೆ ಅಥವಾ ಒಟ್ಟು ಪ್ರಕರಣಗಳ ಸಂಖ್ಯೆಯು ಸರಿಸುಮಾರು 40 ಮಿಲಿಯನ್ ಆಗಿದ್ದರೆ, ಹೆಪಟೈಟಿಸ್ ಸಿ ಸುಮಾರು 12 ರಿಂದ 15 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಜನಸಂಖ್ಯೆಯ ಶೇಕಡಾವಾರು ಪ್ರಕಾರ, ಇದು ಹೆಪಟೈಟಿಸ್ ಬಿಗೆ ಸರಿಸುಮಾರು ಶೇ 2-5 ಮತ್ತು ಹೆಪಟೈಟಿಸ್ ಸಿಗೆ ಸುಮಾರು ಶೇ 2 ಕ್ಕೆ ಸಮನಾಗಿರುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ಎರಡೂ ರಕ್ತ ವರ್ಗಾವಣೆ, ಸೂಜಿಗಳ ಅಸಮರ್ಪಕ ಹಂಚಿಕೆ ಮತ್ತು ಅಸುರಕ್ಷಿತ ಲೈಂಗಿಕ ಅಭ್ಯಾಸಗಳ ಮೂಲಕ ಹರಡುತ್ತವೆ. ಈ ವೈರಸ್‌ಗಳು ಪ್ರಸವಪೂರ್ವವಾಗಿಯೂ ಅಂದರೆ ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡಬಹುದು.

ಹೆಪಟೈಟಿಸ್‌ ತಡೆಗಟ್ಟುವುದು ಹೇಗೆ?

ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಒಳಗೊಂಡಿರುವ ಹೆಪಟೈಟಿಸ್ ವ್ಯಾಕ್ಸಿನೇಷನ್ ಮೂಲಕ ಹೆಪಟೈಟಿಸ್ ಬಿ ಅನ್ನು ತಡೆಗಟ್ಟಬಹುದು. ಆದರೆ, ಸದ್ಯಕ್ಕೆ ಹೆಪಟೈಟಿಸ್ ಸಿಗೆ ಯಾವುದೇ ಲಸಿಕೆ ಇಲ್ಲ. ಹೆಪಟೈಟಿಸ್ ಸಿ ವೈರಸ್ ಅನ್ನು ರಕ್ತಪ್ರವಾಹದಿಂದ ತೆರವುಗೊಳಿಸಲು ಪರಿಣಾಮಕಾರಿ ಔಷಧಗಳು ಲಭ್ಯವಿದ್ದರೂ, ಹೆಪಟೈಟಿಸ್ ಬಿ ಚಿಕಿತ್ಸೆಗಳು ರೋಗವನ್ನು ನಿಯಂತ್ರಿಸಲು ಮಾತ್ರ ಸಹಕರಿಸುತ್ತವೆ ರೋಗವನ್ನು ಗುಣಪಡಿಸಲಿಕ್ಕಲ್ಲ.

ಹೆಪಟೈಟಿಸ್‌ ಯಕೃತ್ತಿಗೆ ಉಂಟು ಮಾಡುವ ತೊಂದರೆಗಳು 

ಹೆಪಟೈಟಿಸ್ ಬಿ ಮತ್ತು ಸಿ ಯ ಹಲವು ವಿಧಗಳಲ್ಲಿ ಹೋಲುತ್ತವೆ, ಆದರೆ ಅವುಗಳು ಗಮನಾರ್ಹ ವ್ಯತ್ಯಾಸಗಳನ್ನು ಕೂಡ ಹೊಂದಿವೆ. ಎರಡೂ ವೈರಸ್‌ಗಳು ದೀರ್ಘಕಾಲದ ಲಿವರ್‌ನ ಕಾಯಿಲೆ, ಗೆಡ್ಡೆಗಳು ಮತ್ತು ಕಾಮಾಲೆ, ಅಸ್ಸೈಟ್ಸ್ (ಹೊಟ್ಟೆಯಲ್ಲಿ ದ್ರವದ ಶೇಖರಣೆ), ಉಬ್ಬಿರುವ ಲಿವರ್-ಸಂಭಂದಿ ರಕ್ತನಾಳಗಳಿಂದ ರಕ್ತಸ್ರಾವ ಮತ್ತು ಹೆಪಾಟಿಕ್ ಎನ್ಸೆಫಲೋಪತಿಯಂತಹ ತೊಡಕುಗಳನ್ನು ಉಂಟು ಮಾಡಬಹುದು. ಈ ಪರಿಸ್ಥಿತಿಗಳು ಗಂಭೀರವಾಗಿರುತ್ತವೆ ಮತ್ತು ಡಿಕಂಪೆನ್ಸೇಟೆಡ್ ಸಿರೋಸಿಸ್‌ನಂತಹ ಗಂಭೀರ ಸ್ಥಿತಿಗೆ ಕಾರಣವಾಗಬಹುದು. ಡಿಕಂಪೆನ್ಸೇಶನ್ ಆದ ಸಂದರ್ಭದಲ್ಲಿ, ಔಷಧಿಗಳು ಮಾತ್ರ ಸಾಕಾಗುವುದಿಲ್ಲ, ದೀರ್ಘಕಾಲದ ಆರೋಗ್ಯಕ್ಕಾಗಿ ಲಿವರ್‌ನ ಕಸಿ ಅಗತ್ಯ ಪರಿಗಣನೆಯಾಗುತ್ತದೆ. ಮತ್ತೊಂದು ನಿರ್ಣಾಯಕ ವಿಷಯವೆಂದರೆ ಎರಡೂ ವೈರಸ್‌ಗಳು ಲಿವರ್‌ನ ಗೆಡ್ಡೆಗಳು ಅಥವಾ ಲಿವರ್ ಕ್ಯಾನ್ಸರ್ ಉಂಟುಮಾಡಬಹುದು. ಈ ಗೆಡ್ಡೆಗಳಿಗೆ ಚಿಕಿತ್ಸೆ ನೀಡಲು ಲಿವರ್‌ನ ಕಸಿ ಬಹಳ ಪರಿಣಾಮಕಾರಿ ವಿಧಾನವಾಗಿದೆ.

ಲಿವರ್‌ ಕಸಿಯ ಮೇಲೆ ಹೆಪಟೈಟಿಸ್‌ ಬಿ, ಸಿ ಪರಿಣಾಮ 

ಹೆಪಟೈಟಿಸ್ ಬಿ ಮತ್ತು ಸಿ ಕಾರಣದಿಂದಾಗಿ ಲಿವರ್‌ನ ಕಸಿ ಶಸ್ತ್ರಚಿಕಿತ್ಸೆ ಒಂದು ಗಂಭೀರವಾದ ವೈದ್ಯಕೀಯ ಮತ್ತು ಸಾಮಾಜಿಕ ಸವಾಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ, ಗಂಭೀರವಾದ ಲಿವರ್‌ನ ಸಮಸ್ಯೆಗಳಿರುವ ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಹೆಪಟೈಟಿಸ್ ಬಿ ಅಥವಾ ಸಿ ಹೊಂದಿರುತ್ತಾರೆ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಉತ್ತರ ಕರ್ನಾಟಕದಲ್ಲಿ, ಹೆಪಟೈಟಿಸ್ ಸಿ ಹೆಚ್ಚು ಪ್ರಚಲಿತದಲ್ಲಿದೆ, ಇದರಿಂದಾಗಿ ಅಲ್ಲಿಂದ ಲಿವರ್‌ನ ಕಸಿ ಬೇಡಿಕೆಯೂ ಪ್ರಬಲವಾಗಿದೆ. ಹೆಪಟೈಟಿಸ್ ಸಿ ಹೊಂದಿರುವ ರೋಗಿಗಳು, ಸಾಮಾನ್ಯವಾಗಿ, ವಯಸ್ಸಾದವರಾಗಿರುತ್ತಾರೆ ಮತ್ತು ಮಧುಮೇಹ, ಮೂತ್ರಪಿಂಡದ ಸಮಸ್ಯೆಗಳು ಮತ್ತು ಸ್ಥೂಲಕಾಯತೆಯಂತಹ ಇತರ ಸಹವರ್ತಿ ರೋಗಗಳನ್ನು ಹೊಂದಿರುತ್ತಾರೆ. ಈ ಹೆಚ್ಚುವರಿ ಆರೋಗ್ಯ ಸಮಸ್ಯೆಗಳು ಲಿವರ್‌ನ ಕಸಿ ಅಥವಾ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಪಾಯಗಳನ್ನು ಹೆಚ್ಚಿಸಬಹುದು.

ಒಟ್ಟಿನಲ್ಲಿ ಹೆಪಟೈಟಿಸ್ ಬಿ ಮತ್ತು ಸಿ ಭಾರತದಲ್ಲಿ ಸಾಮಾನ್ಯ ಸಮಸ್ಯೆಗಳು. ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ನಿರ್ಣಾಯಕವಾಗಿದೆ, ವಿಶೇಷವಾಗಿ ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ, ಸೂಜಿ ಹಂಚಿಕೆಯನ್ನು ತಪ್ಪಿಸುವಲ್ಲಿ ಮತ್ತು ಸುರಕ್ಷಿತ ಆರೋಗ್ಯ ಅಭ್ಯಾಸಗಳನ್ನು ಖಾತ್ರಿಪಡಿಸುವಲ್ಲಿ ನಿರ್ದಿಷ್ಟವಾದ ಕ್ರಮಗಳನ್ನು ಪ್ರೋತ್ಸಾಹಿಸುವುದು ಅನಿವಾರ್ಯವಾಗಿದೆ.

(ಲೇಖನ: ಡಾ ರಾಜೀವ್ ಲೋಚನ್, ಲೀಡ್ ಕನ್ಸಲ್ಟೆಂಟ್ - HPB, ಲಿವರ್ ಟ್ರಾನ್ಸ್‌ಪ್ಲಾಂಟೇಶನ್, ಮತ್ತು ರೋಬೋಟಿಕ್ ಸರ್ಜರಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್‌ಪೋರ್ಟ್ ರಸ್ತೆ & ಯಶವಂತಪುರ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ