ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನಿಯಾಗಲು ಈ 4 ಅಂಶ ನೆನಪಿರಲಿ; ಮಣಿಪಾಲ್ ಆಸ್ಪತ್ರೆಯ ಡಾ.ರಶ್ಮಿ ಎಸ್‌ ಆರ್‌ ವಿವರಣೆ-how to become a kidney donor in india 4 important points explained by dr rashmi s r consultant nephrologist uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನಿಯಾಗಲು ಈ 4 ಅಂಶ ನೆನಪಿರಲಿ; ಮಣಿಪಾಲ್ ಆಸ್ಪತ್ರೆಯ ಡಾ.ರಶ್ಮಿ ಎಸ್‌ ಆರ್‌ ವಿವರಣೆ

ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನಿಯಾಗಲು ಈ 4 ಅಂಶ ನೆನಪಿರಲಿ; ಮಣಿಪಾಲ್ ಆಸ್ಪತ್ರೆಯ ಡಾ.ರಶ್ಮಿ ಎಸ್‌ ಆರ್‌ ವಿವರಣೆ

ಆರೋಗ್ಯ ಸಮಸ್ಯೆಗಳ ಪೈಕಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಕಡಿಮೆಯೇನಲ್ಲ. ಹೀಗಾಗಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಯೂ ತುಸು ಹೆಚ್ಚೇ ಇದೆ. ಹೀಗಿರುವಾಗ, ಕಿಡ್ನಿ ದಾನದ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಪ್ರಗತಿಯಲ್ಲಿದೆ. ನೀವೇನಾದರೂ ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನ ಮಾಡುವುದಾದರೆ ಈ 4 ಅಂಶ ನೆನಪಿರಲಿ.

ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನಿಯಾಗಲು ಈ 4 ಅಂಶ ನೆನಪಿರಲಿ; ಮಣಿಪಾಲ್ ಆಸ್ಪತ್ರೆಯ ಡಾ.ರಶ್ಮಿ ಎಸ್‌ ಆರ್‌ ವಿವರಣೆ.
ಕಿಡ್ನಿ ದಾನ ಮಾಡ್ತೀರಾ?, ಭಾರತದಲ್ಲಿ ಮೂತ್ರಪಿಂಡ ದಾನಿಯಾಗಲು ಈ 4 ಅಂಶ ನೆನಪಿರಲಿ; ಮಣಿಪಾಲ್ ಆಸ್ಪತ್ರೆಯ ಡಾ.ರಶ್ಮಿ ಎಸ್‌ ಆರ್‌ ವಿವರಣೆ.

ಮನುಷ್ಯರಲ್ಲಿ ಬಹುತೇಕರು ಸಹಜವಾಗಿಯೇ ಎರಡು ಮೂತ್ರಪಿಂಡಗಳೊಂದಿಗೆ ಜನಿಸುತ್ತಾರೆ. ಆದಾಗ್ಯೂ, ಪ್ರತಿ 5000 ವ್ಯಕ್ತಿಗಳಲ್ಲಿ ಒಬ್ಬರು ಒಂದು ಮೂತ್ರಪಿಂಡದೊಂದಿಗೆ ಜನಿಸಬಹುದು. ಒಂದೇ ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಇಂಥವರು ಕೂಡ ಎರಡು ಮೂತ್ರಪಿಂಡಗಳೊಂದಿಗೆ ಜನಿಸಿದವರಂತೆ ಸಾಮಾನ್ಯ ಆರೋಗ್ಯಕರ ಜೀವನವನ್ನು ನಡೆಸಬಹುದು. ಅಂತೆಯೇ, ಜನರು ತಮ್ಮ ಮೂತ್ರಪಿಂಡವನ್ನು ದಾನ ಮಾಡುವ ಸಂದರ್ಭಗಳಲ್ಲಿಯೂ, ದಾನದ ನಂತರ ಅವರಲ್ಲಿ ಒಂದೇ ಮೂತ್ರಪಿಂಡ ಉಳಿಯುತ್ತದೆ. ಈ ಜನರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಮೂತ್ರಪಿಂಡ ದಾನದ ನಂತರ ಹಲವಾರು ವರ್ಷಗಳವರೆಗೆ ಸಾಮಾನ್ಯ ಜೀವನವನ್ನು ನಡೆಸಬಹುದು. ಆದ್ದರಿಂದ, ಅಗತ್ಯವಿರುವವರ ಜೀವವನ್ನು ಉಳಿಸಲು ನಮ್ಮ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡುವುದರಿಂದ ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಮೂತ್ರಪಿಂಡ ದಾನಿಗಳು ಎರಡು ವಿಧಗಳಾಗಿರಬಹುದು, ಜೀವಂತ ದಾನಿಗಳು ಮತ್ತು ಮರಣೋತ್ತರ ದಾನಿಗಳು.

1) ಜೀವಂತ ದಾನಿಗಳ ಮಾನದಂಡ

18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸ್ವಯಂಪ್ರೇರಿತವಾಗಿ ತಮ್ಮ ಮೂತ್ರಪಿಂಡವನ್ನು ದಾನ ಮಾಡಬಹುದು. ಮೂತ್ರಪಿಂಡ ದಾನಕ್ಕೆ ಅರ್ಹ ಅಭ್ಯರ್ಥಿ ಎಂದು ಪರಿಗಣಿಸಲು ನಿಮ್ಮ ನೆಫ್ರಾಲಜಿಸ್ಟ್‌ನಿಂದ ಸಂಪೂರ್ಣ ಮೌಲ್ಯಮಾಪನಕ್ಕೆ ಒಳಗಾಗುವುದು ಮುಖ್ಯ. ಮೌಲ್ಯಮಾಪನದ ಸಮಯದಲ್ಲಿ ನಿಮ್ಮ ವೈದ್ಯರು ನಿಮ್ಮ ಒಟ್ಟಾರೆ ಆರೋಗ್ಯ, ಮೂತ್ರಪಿಂಡದ ಆರೋಗ್ಯ ಮತ್ತು ಇತರ ಅಂಗಗಳು ಮತ್ತು ಅಂಗ ವ್ಯವಸ್ಥೆಗಳ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಾರೆ. ಒಂದು ಮೂತ್ರಪಿಂಡವನ್ನು ದಾನ ಮಾಡುವುದರಿಂದ ಮುಂದಿನ ಹಲವಾರು ವರ್ಷಗಳಲ್ಲಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂದು ನಿಮ್ಮ ವೈದ್ಯರು ಮನಗಂಡರೆ ಮಾತ್ರ ನೀವು ಮೂತ್ರಪಿಂಡ ದಾನಕ್ಕೆ ಅರ್ಹರೆಂದು ಪರಿಗಣಿಸಲಾಗುವುದು.

ಅವರು ಮಧುಮೇಹ, ಅಧಿಕ ರಕ್ತದೊತ್ತಡ, ಇತರ ಚಯಾಪಚಯ ಅಸ್ವಸ್ಥತೆಗಳು ಮತ್ತು ಕ್ಯಾನ್ಸರ್‌ಗಳಂತಹ ಯಾವುದೇ ಇತರ ಕೊಮೊರ್ಬಿಡಿಟಿಗಳನ್ನು ಸಹ ಪರಿಶೀಲಿಸುತ್ತಾರೆ. ಈ ಯಾವುದೇ ಕೊಮೊರ್ಬಿಡಿಟಿಗಳ ಉಪಸ್ಥಿತಿಯು ಮೂತ್ರಪಿಂಡವನ್ನು ದಾನ ಮಾಡಲು ನಿಮ್ಮನ್ನು ಅನರ್ಹಗೊಳಿಸುತ್ತದೆ.

2) ನಾನು ಯಾರಿಗೆ ಬೇಕಾದರೂ ಮೂತ್ರಪಿಂಡವನ್ನು ದಾನ ಮಾಡಬಹುದೇ

ಇಲ್ಲ. ಒಬ್ಬ ಜೀವಂತ ದಾನಿ, HOTA (ಮಾನವ ಅಂಗಾಂಗ ಕಸಿ ಕಾಯಿದೆ) ಪ್ರಕಾರ, ತಮ್ಮ ನೇರ ಕುಟುಂಬಕ್ಕೆ ಮಾತ್ರ ಮೂತ್ರಪಿಂಡವನ್ನು ದಾನ ಮಾಡಬಹುದು. ಕುಟುಂಬದ ಸ್ನೇಹಿತ, ಹಿತೈಷಿ, ಉದ್ಯೋಗಿ ಅಥವಾ ಯಾವುದೇ ರೀತಿಯ ಇತರ ನಿಖಟ ಸಂಭಂದಗಳ ಅಡಿಯಲ್ಲಿ ನೀವು ದಾನಿಯಾಗಲು ಸಾಧ್ಯವಿಲ್ಲ. ಅಲ್ಲದೆ, ಸ್ವೀಕರಿಸುವವರಿಂದ ದಾನಿ ಅಥವಾ ಇತರರಿಗೆ ಯಾವುದೇ ಹಣಕಾಸಿನ ವಿನಿಮಯ ಇರುವುದಿಲ್ಲ. ಅಂಗಾಂಗ ಕಸಿ ಮಾಡಲು ದಾನಿ ಮತ್ತು ಸ್ವೀಕರಿಸುವವರ ನಡುವೆ ಯಾವುದೇ ತರಹದ ಹಣಕಾಸಿನ ವಿನಿಮಯ ಶಿಕ್ಷಾರ್ಹ ಅಪರಾಧವಾಗಿದೆ. ಉಲ್ಲಂಘಿಸುವವರಿಗೆ HOTA ಪ್ರಕಾರ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

3) ಮರಣೋತ್ತರ (ಸಾವಿನ ನಂತರ) ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವುದು ಹೇಗೆ

ಉತ್ತಮ ಆರೋಗ್ಯ ಹೊಂದಿರುವವರು ಮತ್ತು ತಮ್ಮ ಅಂಗಗಳನ್ನು ದಾನ ಮಾಡುವ ಇಚ್ಛೆ ಹೊಂದಿರುವವರು, ಅವರ ಜೀವಮಾನದಲ್ಲಿ ದಾನಿಗಳಾಗಲು ಅವಕಾಶ ದೊರಕದಿದ್ದಾಗ, ಅವರು ತಮ್ಮ ಮರಣದ ನಂತರ ದಾನಿಗಳಾಗಲು ಆಯ್ಕೆ ಮಾಡಬಹುದು. ಅವರು ಅಂಗಾಂಗ ದಾನಕ್ಕಾಗಿ ಪ್ರತಿಜ್ಞೆ ಮಾಡಬಹುದು ಮತ್ತು NOTTO (ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಮೂಲಕ ಪ್ರಮಾಣಪತ್ರವನ್ನು ಪಡೆಯಬಹುದು. NOTTO ಮೂಲಕ ಯಾವುದೇ ವ್ಯಕ್ತಿ ತಮ್ಮ ಮೂತ್ರಪಿಂಡ, ಕಣ್ಣು, ಹೃದಯ ಮತ್ತು ಶ್ವಾಸಕೋಶಗಳನ್ನು ದಾನ ಮಾಡಲು ನೋಂದಾಯಿಸಿಕೊಳ್ಳಬಹುದು. ಒಬ್ಬ ವ್ಯಕ್ತಿಯು ಅಂಗದಾನ ಪ್ರತಿಜ್ಞೆ ಮಾಡಿರದ ಸಂದರ್ಭಗಳಲ್ಲಿ, ಹಠಾತ್ ಅಥವಾ ಆಕಸ್ಮಿಕ ಮರಣವನ್ನು ಹೊಂದಿದರೆ, ಕುಟುಂಬವು ಸತ್ತ ವ್ಯಕ್ತಿಯ ಅಂಗಗಳನ್ನು ದಾನ ಮಾಡಲು ನಿರ್ಧರಿಸಬಹುದು. ವ್ಯಕ್ತಿಯು ತನ್ನ ಅಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರೂ ಅಥವಾ ಕುಟುಂಬದ ಸದಸ್ಯರ ಮರಣದ ನಂತರ ಕುಟುಂಬವು ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೂ, ಎರಡೂ ಸಂದರ್ಭಗಳಲ್ಲಿ ಯಾವುದೇ ಹಣಕಾಸಿನ ಲಾಭದ ನಿರೀಕ್ಷೆಗಳು ಇರಬಾರದು ಮತ್ತು ದೇಣಿಗೆಗಳು ಕೇವಲ ಮಾನವೀಯ ಆಧಾರದ ಮೇಲೆ ಇರಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

4) ಅಂಗಾಂಗ ದಾನ, ಸ್ವೀಕೃತಿಯ ಬಗ್ಗೆ ಅಧಿಕ ಮಾಹಿತಿ

ಒಬ್ಬ ವ್ಯಕ್ತಿಯು ತಮ್ಮ ಕುಟುಂಬದ ಸದಸ್ಯರಿಗೆ ನೇರ ದಾನಿಯಾಗಲು ನಿರ್ಧರಿಸಿದಾಗ, ಅವರು ಅಗತ್ಯವಿರುವ ಎಲ್ಲಾ ಮಾರ್ಗಸೂಚಿಗಳು ಮತ್ತು ಹೆಚ್ಚಿನ ಸಹಾಯಕ್ಕಾಗಿ ಆಯಾ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಸಂಯೋಜಕ (Organ Transplant Coordinator) ರನ್ನು ಸಂಪರ್ಕಿಸಬಹುದು. ಮರಣೋತ್ತರ-ದಾನಕ್ಕಾಗಿ ತಮ್ಮ ಅಂಗಗಳನ್ನು ಪ್ರತಿಜ್ಞೆ ಮಾಡಿರುವ ವ್ಯಕ್ತಿಯು ಮರಣಹೊಂದಿದಾಗ ಮತ್ತು ಇನ್ನೊಬ್ಬ ಕುಟುಂಬದ ಸದಸ್ಯರು ಅಂಗವನ್ನು ಸ್ವೀಕರಿಸಲು ಕಾಯುತ್ತಿರುವಾಗ, ಅವರು ಸತ್ತವರ ಕುಟುಂಬದ ಸದಸ್ಯರ ಅಂಗ ಅಥವಾ ಅಂಗಾಂಗಳನ್ನು ಸ್ವೀಕರಿಸಲು ನೇರವಾಗಿ ಅರ್ಹರಾಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅಂಗ-ಸ್ವೀಕರಿಸುವವರ ನೋಂದಣಿಯ ರಿಜಿಸ್ಟರ್‌ನಲ್ಲಿ ಅವರು ತಮ್ಮ ಸರದಿಗಾಗಿ ಕಾಯಬೇಕಾಗುತ್ತದೆ.

ಮುಖ್ಯ ಸಂದೇಶ: ಭಾರತವು ಪ್ರಸ್ತುತ ಅಂಗಾಂಗ ದಾನ ಮತ್ತು ದೇಣಿಗೆ ಸ್ವೀಕರಿಸಲು ಕಾಯುತ್ತಿರುವವರ ಸಂಖ್ಯೆಯಲ್ಲಿ ದೊಡ್ಡ ಅಂತರವಿದೆ. ಅನೇಕ ಜನರು ಅಂಗಗಳನ್ನು ಸ್ವೀಕರಿಸಲು ಮತ್ತು ಹೊಸ ಜೀವನ ಪ್ರಾರಂಭಿಸಲು ಕಾಯುತ್ತಿದ್ದಾರೆ. ಈ ವಿಶ್ವ ಅಂಗಾಂಗ ದಾನ ದಿನದಂದು (13ನೇ ಆಗಸ್ಟ್ 2024), ಹೆಚ್ಚು ಹೆಚ್ಚು ಜನರು ಈ ಸಮಯದ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಂಗಾಂಗ ದಾನಕ್ಕಾಗಿ ಪ್ರತಿಜ್ಞೆ ಮಾಡಲು ಮುಂದೆ ಬರುವುದು ಮುಖ್ಯವಾಗಿದೆ. ಒಬ್ಬ ವ್ಯಕ್ತಿಯು ಮೂತ್ರಪಿಂಡ, ಕಣ್ಣು, ಹೃದಯ ಮತ್ತು ಶ್ವಾಸಕೋಶಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡುವುದರಿಂದ ಕನಿಷ್ಠ ಏಳು ಜನರ ಬಾಳಲ್ಲಿ ಆಶಾಕಿರಣವಾಗಬಹುದಾಗಿದೆ.

(ಲೇಖನ- ಡಾ ರಶ್ಮಿ ಎಸ್ ಆರ್, ಕನ್ಸಲ್ಟೆಂಟ್ - ನೆಫ್ರಾಲಜಿ, ಮಣಿಪಾಲ್ ಆಸ್ಪತ್ರೆ ವರ್ತೂರ್ ರಸ್ತೆ ಮತ್ತು ವೈಟ್‌ಫೀಲ್ಡ್.)