logo
ಕನ್ನಡ ಸುದ್ದಿ  /  ಜೀವನಶೈಲಿ  /  World Malaria Day: ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ; ಮಕ್ಕಳ ಆರೈಕೆಗೆ ಪೋಷಕರಿಗಿಲ್ಲಿದೆ ಸಲಹೆ

World Malaria Day: ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ; ಮಕ್ಕಳ ಆರೈಕೆಗೆ ಪೋಷಕರಿಗಿಲ್ಲಿದೆ ಸಲಹೆ

Reshma HT Kannada

Apr 25, 2024 10:17 AM IST

google News

ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ

    • ಭಾರತದಲ್ಲಿ ಹೆಚ್ಚು ಹರಡುವ ಸಾಂಕ್ರಾಮಿಕ ರೋಗಗಳಲ್ಲಿ ಮಲೇರಿಯಾ ಕೂಡ ಒಂದು. ನಮ್ಮ ದೇಶದಲ್ಲಿ ಪ್ರತಿವರ್ಷ 20 ಸಾವಿರದಷ್ಟು ಜನ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್‌ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಮಲೇರಿಯಾದಿಂದ ಮಕ್ಕಳ ರಕ್ಷಣೆ ಹೇಗೆ, ಈ ವರ್ಷದ ಥೀಮ್‌ ಏನು ನೋಡಿ. 
ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ
ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ

ಜಗತ್ತನ್ನು ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮಲೇರಿಯಾ ಕೂಡ ಒಂದು. ಸೊಳ್ಳೆಗಳಿಂದ ಹರಡುವ ಈ ಸಾಂಕ್ರಾಮಿಕ ರೋಗವು ಭಾರತದಲ್ಲಿ ಹಲವರ ಸಾವಿಗೆ ಕಾರಣವಾಗುತ್ತಿದೆ. ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ 20 ಸಾವಿರದಷ್ಟು ಜನ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆ. ಪುಟ್ಟ ಮಕ್ಕಳು ಮಲೇರಿಯಾಕ್ಕೆ ಹೆಚ್ಚು ಒಳಗಾಗುವ ಕಾರಣ ಅವರ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು.

ವಿಶ್ವ ಮಲೇರಿಯಾ ದಿನ 2024

ಪ್ರಪಂಚದಾದ್ಯಂತ ಮಲೇರಿಯಾವನ್ನು ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼವನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಮಲೇರಿಯಾ ದಿನದ ಹಿನ್ನೆಲೆಯಲ್ಲಿ ಈ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮದ ಜೊತೆಗೆ ಪೋಷಕರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ ವಿವರಿಸಿದ್ದಾರೆ.

ಮಲೇರಿಯಾ ಹರಡುವುದು, ಮಕ್ಕಳ ಕಾಳಜಿ, ಪೋಷಕರು ತೆಗೆದುಕೊಳ್ಳಬೇಕಾದ ನಿಯಮಗಳು ಈ ಎಲ್ಲದರ ಕುರಿತ ಪ್ರಶ್ನೋತ್ತರ ಇಲ್ಲಿದೆ.

ಪ್ರಶ್ನೆ: ಮಲೇರಿಯಾ ಹರಡುವುದು ಹೇಗೆ?

ಉತ್ತರ: ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ.

ಪ್ರಶ್ನೆ: ಮಕ್ಕಳಲ್ಲಿ ಕಂಡುಬರುವ ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು?

ಉತ್ತರ: ಮಲೇರಿಯಾ ಸೋಂಕಿತ ಮಕ್ಕಳು ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಅದಲ್ಲದೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ಭೇದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನ ಆರೈಕೆ ಹೇಗಿರಬೇಕು?

ಉತ್ತರ: ಮಲೇರಿಯಾ ಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆ ಇರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಮತ್ತು ಮಗುವಿನ ದೇಹ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಲು ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ತಮ ಆರೈಕೆಯನ್ನು ಒದಗಿಸುವುದು ಅತ್ಯಗತ್ಯ. ಮುಖ್ಯವಾಗಿ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆಗಳು ಯಾವುವು?

ಉತ್ತರ: ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವಂತಹ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಪೋಷಕರ ಕರ್ತವ್ಯ.

ಡಾ. ಶಿಲ್ಪಾ ಪಾಂಡ್ಯ (ಎಡಚಿತ್ರ)

ಪ್ರಶ್ನೆ: ಮಲೇರಿಯಾದ ಬಗೆಗೆ ಪೋಷಕರಲ್ಲಿ ಇರುವ ತಪ್ಪು ಕಲ್ಪನೆಗಳೇನು?

ಉತ್ತರ: ಮಲೇರಿಯಾ ಕಾಯಿಲೆಯ ಬಗೆಗೆ ಪೋಷಕರಲ್ಲಿ ಹಲವಾರು ತಪ್ಪುಕಲ್ಪನೆಗಳಿವೆ.

ತಪ್ಪುಕಲ್ಪನೆ: ಮಲೇರಿಯಾವು ಕಲುಷಿತ ನೀರಿನ ಸೇವನೆ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.

ಸತ್ಯಾಂಶ: ಮಲೇರಿಯಾವು ಸೊಳ್ಳೆ ಕಡಿತ ಅಥವಾ ರಕ್ತ ವರ್ಗಾವಣೆಯ ಮೂಲಕ ಮಾತ್ರ ಹರಡುತ್ತದೆ. ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕಿತ ತಾಯಂದಿರು ಸ್ತನ್ಯಪಾನ ಮಾಡಬಾರದು!

ಸತ್ಯಾಂಶ: ಮಲೇರಿಯಾ ಪರಾವಲಂಬಿಗಳು ಎದೆ ಹಾಲಿನ ಮೂಲಕ ಹರಡುವುದಿಲ್ಲ. ಆದರೆ ತಾಯಿಯು ಮಗುವಿಗೆ ಹಾಲುಣಿವಾಗ ಕೆಲವು ಔಷಧಿಗಳ ಸೇವನೆ ಬಗೆಗೆ ಎಚ್ಚರಿಕೆವಹಿಸುವುದು ಅತ್ಯಗತ್ಯ.

ತಪ್ಪುಕಲ್ಪನೆ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಮಲೇರಿಯಾ ಹರಡುತ್ತದೆ.

ಸತ್ಯಾಂಶ: ಸೋಂಕಿತ ಮಗುವಿನ ಸಂಪರ್ಕದಿಂದ, ಸೋಂಕಿತ ಮಗು ಬಳಸುವ ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.

ಸತ್ಯಾಂಶ: ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ರೋಗನಿರೋಧಕ ಶಕ್ತಿ ಶಾಶ್ವತವಲ್ಲ.

ತಪ್ಪುಕಲ್ಪನೆ: ಮಲೇರಿಯಾ ಕಾಯಿಲೆಗೆ ಲಸಿಕೆ ಲಭ್ಯವಿದೆ!

ಸತ್ಯಾಂಶ: ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಲಸಿಕೆ ಲಭ್ಯವಿಲ್ಲ.

ಪ್ರಶ್ನೆ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು?

ಉತ್ತರ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ

• ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.

• ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.

• ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.

• ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.

• ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.

• ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.

2024ರ ಥೀಮ್ ಕುರಿತಾಗಿ "ಮಲೇರಿಯಾವು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಮೃತಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗೋಣ ಮತ್ತು ಅನಗತ್ಯ ಜೀವಹಾನಿಯನ್ನು ತಡೆಗಟ್ಟೋಣ” ಎನ್ನುವುದು ಡಾ. ಶಿಲ್ಪಾ ಪಾಂಡ್ಯ ಅಭಿಪ್ರಾಯ ಪಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364409651, 6364466240

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ