ನೀರು ಕುಡಿದರೂ ಪದೇ ಪದೇ ಬಾಯಾರಿಕೆಯಾಗುತ್ತಿದೆಯೇ; ಇದಕ್ಕೇನು ಕಾರಣವಿರಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
Dec 14, 2024 08:00 AM IST
ನೀರು ಕುಡಿದರೂ ಪದೇ ಪದೇ ಬಾಯಾರಿಕೆಯಾಗುತ್ತಿದೆಯೇ; ಹೀಗಿರಬಹುದು ಕಾರಣ
ಕೆಲವೊಮ್ಮೆ ಸಾಕಷ್ಟು ನೀರು ಕುಡಿದರೂ ಮತ್ತೆ ಮತ್ತೆ ಬಾಯಾರಿಕೆಯಾಗುತ್ತದೆ. ಕೆಲವೊಮ್ಮೆ ಇದು ಪದೇ ಪದೇ ಸಂಭವಿಸುತ್ತದೆ. ಕೆಲವೊಮ್ಮೆ ನೀರು ಕುಡಿದರೂ ತಕ್ಷಣ ಬಾಯಾರಿಕೆಯಾಗುತ್ತದೆ. ಪದೇ ಪದೇ ನೀರು ಕುಡಿಯಬೇಕು ಎಂದೆನಿಸುತ್ತದೆ. ಇದಕ್ಕೆ ಕೆಲವು ಕಾರಣಗಳಿರಬಹುದು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಪ್ರತಿಯೊಬ್ಬರೂ ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗುವುದಿಲ್ಲವಾದ್ದರಿಂದ ಕೆಲವರು ಹೆಚ್ಚು ನೀರು ಕುಡಿಯುವುದಿಲ್ಲ. ಆದರೆ, ಇದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಹೆಚ್ಚೆಚ್ಚು ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ, ಕೆಲವೊಮ್ಮೆ ನೀರು ಕುಡಿದರೂ ತಕ್ಷಣ ಬಾಯಾರಿಕೆಯಾಗುತ್ತದೆ. ಪದೇ ಪದೇ ನೀರು ಕುಡಿಯಬೇಕು ಎಂದೆನಿಸುತ್ತದೆ. ಈ ಬಾಯಾರಿಕೆ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಇದಕ್ಕೆ ಕೆಲವು ಕಾರಣಗಳಿರಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ನೀರು ಕುಡಿದರೂ ಪದೇ ಪದೇ ಬಾಯಾರಿಕೆಯಾಗಲು ಹೀಗಿರಬಹುದು ಕಾರಣ
ಉಪ್ಪು ಅಧಿಕವಾಗಿರುವ ಆಹಾರ: ಉಪ್ಪು ಮತ್ತು ಕಾಳುಮೆಣಸು ಹೆಚ್ಚಿರುವ ಆಹಾರವನ್ನು ಸೇವಿಸಿದಾಗ ಹೆಚ್ಚಾಗಿ ಬಾಯಾರಿಕೆ ಉಂಟಾಗುತ್ತದೆ. ನೀರು ಕುಡಿದ ತಕ್ಷಣ ಮತ್ತೆ ಬಾಯಾರಿಕೆಯಾಗುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಇದಕ್ಕೆ ಕಾರಣ. ಉಪ್ಪು ಹೆಚ್ಚಿರುವ ಆಹಾರವನ್ನು ಸೇವಿಸಿದಾಗ ಉಪ್ಪು ರಕ್ತದಲ್ಲಿ ಕರಗುತ್ತದೆ. ರಕ್ತದಲ್ಲಿ ಹೆಚ್ಚು ಸೋಡಿಯಂ ಇದ್ದರೆ, ಮೂತ್ರಪಿಂಡಗಳು ಅದನ್ನು ಫಿಲ್ಟರ್ ಮಾಡಲು ಹೆಚ್ಚು ಮೂತ್ರವನ್ನು ಸೃಷ್ಟಿಸುತ್ತವೆ. ದ್ರವದ ಸವಕಳಿಯಿಂದ ಬಾಯಾರಿಕೆಗೆ ಕಾರಣವಾಗುತ್ತದೆ. ಈ ರೀತಿ ಉಂಟಾದಾಗ ಆದಷ್ಟು ಹೆಚ್ಚು ಉಪ್ಪು ಇರುವ ಆಹಾರವನ್ನು ಸೇವಿಸದಿರಿ.
ಹೆಚ್ಚು ನಿರ್ಜಲೀಕರಣ: ದೇಹದಿಂದ ಹೆಚ್ಚು ಬೆವರು ಹೋದರೆ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗುತ್ತದೆ. ತೀವ್ರವಾದ ವರ್ಕೌಟ್‌ಗಳನ್ನು ಮಾಡಿದಾಗ, ದೀರ್ಘಕಾಲ ಬಿಸಿಲಿಗೆ ಒಡ್ಡಿಕೊಂಡಾಗ ಹಾಗೂ ತುಂಬಾ ಉದ್ವೇಗದಲ್ಲಿದ್ದರೆ ನೀವು ಹೆಚ್ಚು ಬೆವರುತ್ತೀರಿ. ಇದು ವಾಂತಿ ಮತ್ತು ಅತಿಸಾರದ ಸಮಯದಲ್ಲಿಯೂ ಸಂಭವಿಸುತ್ತದೆ. ನಿರ್ಜಲೀಕರಣ ತೀವ್ರವಾಗಿದ್ದಾಗ ನೀರು ಕುಡಿದರೂ ಮತ್ತೆ ಬಾಯಾರಿಕೆಯಾಗುತ್ತದೆ.
ಮಧುಮೇಹ: ಮಧುಮೇಹ ಹೊಂದಿರುವ ಜನರು ಹೆಚ್ಚಾಗಿ ಬಾಯಾರಿಕೆ ಮತ್ತು ಅತಿಯಾದ ಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಎದುರಿಸುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಇದು ಸಂಭವಿಸುತ್ತದೆ. ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಮೂತ್ರದ ಮೂಲಕ ಗ್ಲೂಕೋಸ್ ಅನ್ನು ಹೊರಹಾಕಬೇಕು. ಮೂತ್ರದೊಂದಿಗೆ ಗ್ಲೂಕೋಸ್ ಅನ್ನು ಹೊರಹಾಕಿದಾಗ, ನೀರು ಕೂಡ ಹೊರಹೋಗುತ್ತದೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುವುದಲ್ಲದೆ ಆಗಾಗ ಬಾಯಾರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಮತ್ತೆ ಮತ್ತೆ ನೀರು ಕುಡಿಯಬೇಕು ಎಂದೆನಿಸುತ್ತದೆ.
ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಸಮಸ್ಯೆ ಇರುವವರಿಗೂ ಅತಿಯಾದ ಬಾಯಾರಿಕೆ ಉಂಟಾಗುತ್ತದೆ. ಥೈರಾಯ್ಡ್ ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದಲೇ ಸಾಕಷ್ಟು ನೀರು ಕುಡಿದರೂ ಆಗಾಗ ಬಾಯಾರಿಕೆಯಾಗುತ್ತದೆ.
ಮದ್ಯಪಾನ ಮತ್ತು ಸಿಹಿ ಪಾನೀಯಗಳನ್ನು ಸೇವಿಸುವಾಗ: ಮದ್ಯಪಾನ ಮಾಡುವಾಗ ಮೂತ್ರವು ಅಧಿಕವಾಗಿ ಬರುತ್ತದೆ. ಮದ್ಯಪಾನ ಮಾಡುವಾಗ ಹೆಚ್ಚು ಬಾಯಾರಿಕೆಯಾಗುತ್ತದೆ. ಕೆಲವೊಮ್ಮೆ ಇದು ಸಿಹಿ ಪಾನೀಯಗಳನ್ನು ಕುಡಿದಾಗ ಸಹ ಇದು ಸಂಭವಿಸುತ್ತದೆ. ಅದರಲ್ಲೂ ತಂಪು ಪಾನೀಯಗಳನ್ನು ಸೇವಿಸಿದಾಗ ಕೆಲವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಮಾದಕ ವಸ್ತುಗಳ ಸೇವನೆಯಿಂದಾಗಿ: ಕೆಲವು ಔಷಧಿಗಳು ಬಾಯಾರಿಕೆಯನ್ನು ಹೆಚ್ಚಿಸಬಹುದು. ಅವು ದೇಹದಲ್ಲಿನ ತೇವಾಂಶದ ಮೇಲೆ ಪರಿಣಾಮ ಬೀರುತ್ತವೆ. ಬಾಯಿ ಒಣಗುವುದು ಇತ್ಯಾದಿ ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿ ಆದಾಗ ಕೂಡಲೇ ಸಂಬಂಧಿಸಿದ ವೈದ್ಯಕೀಯ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾದುದು ಬಹಳ ಮುಖ್ಯ.
ಮೂತ್ರಪಿಂಡ ಮತ್ತು ಯಕೃತ್ತು ಹಾನಿಗೊಳಗಾದಾಗಲೂ ಬಾಯಾರಿಕೆ ವಿಪರೀತವಾಗಿರುತ್ತದೆ. ನೀವು ಅಂತಹ ಅನುಮಾನಗಳನ್ನು ಹೊಂದಿದ್ದರೆ, ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.
ವಿಭಾಗ