logo
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾನ್ಸರ್‌ ಗೆದ್ದ ಪತ್ನಿಯ ಡಯೆಟ್‌ ಕ್ರಮ ವಿವರಿಸಿದ ನವಜೋತ್ ಸಿಂಗ್‌; ಆಹಾರದ ಮೂಲಕ ಕ್ಯಾನ್ಸರ್‌ ಗೆಲ್ಲಬಹುದಾ? ಹೀಗಿದೆ ವೈದ್ಯರ ಸ್ಪಷ್ಟನೆ

ಕ್ಯಾನ್ಸರ್‌ ಗೆದ್ದ ಪತ್ನಿಯ ಡಯೆಟ್‌ ಕ್ರಮ ವಿವರಿಸಿದ ನವಜೋತ್ ಸಿಂಗ್‌; ಆಹಾರದ ಮೂಲಕ ಕ್ಯಾನ್ಸರ್‌ ಗೆಲ್ಲಬಹುದಾ? ಹೀಗಿದೆ ವೈದ್ಯರ ಸ್ಪಷ್ಟನೆ

Reshma HT Kannada

Nov 27, 2024 11:55 AM IST

google News

ಕ್ಯಾನ್ಸರ್‌ ಗೆದ್ದ ಪತ್ನಿಯ ಡಯೆಟ್‌ ಕ್ರಮ ವಿವರಿಸಿದ ನವಜೋತ್ ಸಿಂಗ್‌

    • ಖ್ಯಾತ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ತಮ್ಮ ಪತ್ನಿ ಮನೆಮದ್ದು ಹಾಗೂ ಆಹಾರಗಳ ಮೂಲಕ ಕ್ಯಾನ್ಸರ್‌ ಗೆದ್ದ ಕಥೆಯನ್ನು ಹಂಚಿಕೊಂಡಿದ್ದರು. ಇವರು ಹೇಳಿದ್ದ ಕ್ಯಾನ್ಸರ್ ವಿರೋಧಿ ಆಹಾರಗಳ ಬಗ್ಗೆ ವೈದ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ನವಜೋತ್ ಸಿಂಗ್ ಕ್ಯಾನ್ಸರ್ ಸೋಲಿಸಲು ತಮ್ಮ ಪತ್ನಿ ಅನುಸರಿಸಿದ್ದ ಆಹಾರ ಕ್ರಮದ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್‌ ಗೆದ್ದ ಪತ್ನಿಯ ಡಯೆಟ್‌ ಕ್ರಮ ವಿವರಿಸಿದ ನವಜೋತ್ ಸಿಂಗ್‌
ಕ್ಯಾನ್ಸರ್‌ ಗೆದ್ದ ಪತ್ನಿಯ ಡಯೆಟ್‌ ಕ್ರಮ ವಿವರಿಸಿದ ನವಜೋತ್ ಸಿಂಗ್‌

ಕ್ರಿಕೆಟರ್ ನವಜೋತ್ ಸಿಂಗ್ ಸಿಧು ನವೆಂಬರ್ 21 ರಂದು ಪತ್ರಿಕಾಗೋಷ್ಟಿ ನಡೆಸಿ ತಮ್ಮ ಪತ್ನಿ ಕ್ಯಾನ್ಸರ್‌ ಮುಕ್ತರಾಗಿದ್ದಾರೆ ಎಂದು ಹೇಳಿಕೊಂಡಿದ್ದರು. 4ನೇ ಹಂತದ ಕ್ಯಾನ್ಸರ್‌ ಅನ್ನು ಆಕೆ ಹೇಗೆ ಸೋಲಿಸಿದ್ದರು ಹಾಗೂ ಕ್ಯಾನ್ಸರ್‌ ಚೇತರಿಕೆಯಲ್ಲಿ ಅವರ ಆಹಾರಕ್ರಮ ಹಾಗೂ ಜೀವನಶೈಲಿಯ ಬದಲಾವಣೆಯ ಪಾತ್ರವನ್ನು ಅವರು ಒತ್ತಿ ಹೇಳಿದ್ದರು.

ಆದರೆ ಅಂಕಾಲಜಿಸ್ಟ್‌ಗಳು ನವಜೋತ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು, ಮಾತ್ರವಲ್ಲ 4ನೇ ಹಂತದ ಕ್ಯಾನ್ಸರ್ ಅನ್ನು ಕೇವಲ ಆಹಾರಕ್ರಮ ಹಾಗೂ ಜೀವನಶೈಲಿಯ ಮೂಲಕ ಸೋಲಿಸಲು ಸಾಧ್ಯವಿಲ್ಲ ಎಂದಿದ್ದರು. ಕ್ಯಾನ್ಸರ್ ತಜ್ಞರ ಮಾತಿಗೆ ಪ್ರತಿಕ್ರಿಯೆ ನೀಡಿದ ನವಜೋತ್ ಸಿಂಗ್ ತಮ್ಮ ಪತ್ನಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರವಷ್ಟೇ ಡಯೆಟ್ ಕ್ರಮಗಳನ್ನು ಪಾಲಿಸಿದ್ದರು. ಅಲ್ಲದೇ ಡಯೆಟ್ ಪ್ಲಾನ್ ಹಾಗೂ ಜೀವನಶೈಲಿಯನ್ನು ಚಿಕಿತ್ಸೆಗೆ ಅನುಕೂಲ ಎಂಬ ರೀತಿ ಮಾತ್ರ ಪರಿಗಣಿಸಬೇಕು ಎಂದಿದ್ದಾರೆ.

ಸೋಮವಾರ ಎಕ್ಸ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ನವಜೋತ್ ಸಿಂಗ್ ‘ವೈದ್ಯರು ನನಗೆ ದೇವರಿದ್ದಂತೆ ಎಂದು ಹೇಳಲು ನಾನು ಬಯಸುತ್ತೇನೆ. ನಾನು ಯಾವಾಗಲೂ ವೈದ್ಯರೇ ನನ್ನ ಮೊದಲ ಆದ್ಯತೆ ಎಂದು ಹೇಳಲು ಬಯಸುತ್ತೇನೆ. ನನ್ನ ಮನೆಯಲ್ಲೂ ಡಾಕ್ಟರ್ ಇದ್ದಾರೆ. ನಾವು ಏನೇ ಮಾಡಿದ್ರೂ ವೈದ್ಯರೊಂದಿಗೆ ಸಮಾಲೋಚನೆ ನಡೆಸಿಯೇ ಮುಂದಿನ ಪ್ರಕ್ರಿಯೆ ಮಾಡಿದ್ದೇವೆ‘ ಎಂದು ಹೇಳಿದ್ದಾರೆ.

ಆದರೆ ವೈದ್ಯರ ಪ್ರಕಾರ ಕ್ಯಾನ್ಸರ್ ರೋಗಿಗಳು ವೈದ್ಯರ ಸಲಹೆಯಿಲ್ಲದೆ ಯಾವುದೇ ಕ್ರಮಗಳನ್ನು ಪಾಲಿಸುವಂತಿಲ್ಲ. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಆಂಕೊಲಾಜಿಸ್ಟ್‌ಗಳು ಕ್ಯಾನ್ಸರ್ ರೋಗಿಗಳು ಸಾಬೀತಾಗದ ಪರಿಹಾರಗಳನ್ನು ಅನುಸರಿಸಿ ತಮ್ಮ ಚಿಕಿತ್ಸೆಯನ್ನು ವಿಳಂಬ ಮಾಡಬಾರದು ಅಥವಾ ನಿಲ್ಲಿಸಬಾರದು ಎಂದು ಎಚ್ಚರಿಸಿದ್ದಾರೆ.

ಈ ನಡುವೆ ನವಜೋತ್ ಸಿಂಗ್ ಸಿಧು ತಮ್ಮ ಪತ್ನಿ ಕ್ಯಾನ್ಸರ್ ಗೆದ್ದಿರುವ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಪತ್ನಿಯ ಕ್ಯಾನ್ಸರ್ ಪಯಣ ಸುಲಭವಾಗಿರಲಿಲ್ಲ. ಇದರಲ್ಲಿ ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ಹಾರ್ಮೊನ್ ಅಂಡ್ ಟಾರ್ಗೆಟೆಡ್ ಥೆರಪಿ, ಧನಾತ್ಮಕತೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಕಲ್ಪವನ್ನು ಒಳಗೊಂಡಿತ್ತು. ಭಾರತೀಯ ಆಯುರ್ವೇದ ಪದ್ಧತಿಯಿಂದ ಸ್ಫೂರ್ತಿ ಪಡೆದ ಕಟ್ಟುನಿಟ್ಟಿನ ಡಯೆಟ್ ಕ್ರಮವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ ಎಂದಿದ್ದಾರೆ.

ನವಜೋತ್ ಸಿಂಗ್ ಪತ್ನಿ ಅನುಸರಿಸಿದ ಡಯೆಟ್ ಹೀಗಿತ್ತು

ತಮ್ಮ ಪತ್ನಿ ಅನುಸರಿಸಿದ್ದ ಡಯೆಟ್ ಪ್ಲಾನ್ ಬಗೆ ವಿವರಿಸಿರುವ ನವಜೋತ್ ಸಿಂಗ್ ‘ಆಕೆಯ ಡಯೆಟ್‌ ಚಾರ್ಟ್‌ನಲ್ಲಿ ನಿಂಬೆ ನೀರು, ಅರಿಸಿನ, ಆ್ಯಪಲ್ ಸೈಡರ್ ವಿನಗೇರ್‌, ವಾಲ್‌ನಟ್‌, ಬೀಟೂರೂಟ್‌, ಕ್ಯಾರೆಟ್ ಮತ್ತು ನೆಲ್ಲಿಕಾಯಿಯಿಂದ ತಯಾರಿಸಿದ ಜ್ಯೂಸ್ ಇತರ ವಸ್ತುಗಳನ್ನು ಒಳಗೊಂಡಿತ್ತು. ಇದರೊಂದಿಗೆ ಆಕೆ ಬೇವಿನ ಎಲೆಗಳನ್ನು ಕೂಡ ಸೇವಿಸಿದ್ದಳು. ಸಕ್ಕರೆ, ಡೇರಿ ಉತ್ಪನ್ನಗಳು ಹಾಗೂ ಗೋಧಿಯಿಂದ ಆಕೆ ದೂರ ಉಳಿದಿದ್ದಳು. ನವಜೋತ್ ಅವರ ಪತ್ನಿ ತಮ್ಮ ಪಿಎಚ್‌ ಲೆವೆಲ್‌ ಏಳಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕಾಗಿ ಈ ಕೆಲವು ಪಾನೀಯಗಳನ್ನು ಕುಡಿಯುತ್ತಿದ್ದರು.

21ರಂದು ಪತ್ರಿಕಾಗೋಷ್ಟಿ ನಡೆಸಿದ್ದ ಸಿಧು ಅವರ ವಿಡಿಯೊವನ್ನು ಪೋಸ್ಟ್ ಮಾಡಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎಸ್ ಪ್ರಮೇಶ್ ಅವರು ‘ಡೇರಿ ಉತ್ಪನ್ನಗಳು ಮತ್ತು ಸಕ್ಕರೆ ಸೇವನೆಗೆ ಕಡಿವಾಣ ಹಾಕುವ ಮೂಲಕ ಮತ್ತು ಅರಿಸಿನ ಮತ್ತು ಬೇವಿನ ಸೇವನೆಯಿಂದ ಕ್ಯಾನ್ಸರ್ ಹಸಿವಿನಿಂದ ಬಳಲುತ್ತಿದೆ ಎಂದು ವೀಡಿಯೊದ ಭಾಗಗಳು ಸೂಚಿಸುತ್ತವೆ. , ಅವಳ 'ಗುಣಪಡಿಸಲಾಗದ' ಕ್ಯಾನ್ಸರ್ ಅನ್ನು ಗುಣಪಡಿಸಲು ಸಹಾಯ ಮಾಡಿದೆ. ಇದು ಗುಣಪಡಿಸಲಾಗದ ಕ್ಯಾನ್ಸರ್ ಅನ್ನೂ ಗುಣಪಡಿಸಿದೆ ಎಂದು ನವಜೋತ್ ಹೇಳಿಕೊಂಡಿದ್ದಾರೆ. ಆದರೆ ಇದು ಅಸಂಬದ್ಧ ಎಂಬ ರೀತಿ ಮಾತಾನಾಡಿದ್ದಾರೆ.

ವೈದ್ಯರ ಸ್ಪಷ್ಟನೆ ಹೀಗಿದೆ

‘ದಯವಿಟ್ಟು ಈ ಹೇಳಿಕೆಗಳನ್ನು ಯಾರೂ ನಂಬಬೇಡಿ. ಇದರಿಂದ ನೀವು ಮೂರ್ಖರಾಗುತ್ತೀರಿ. ಈ ರೀತಿ ಸಲಹೆಗಳು ಯಾರಿಂದ ಬಂದಿದ್ದರೂ ಅದು ಸಹ ಅದು ನಂಬಲಾರ್ಹವಾದ ವಿಷಯವಲ್ಲ. ಇವು ಅವೈಜ್ಞಾನಿಕ ಮತ್ತು ಆಧಾರರಹಿತ ಶಿಫಾರಸುಗಳಾಗಿವೆ. ಇದು ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ, ಸಾಕ್ಷ್ಯಾಧಾರಿತ ಚಿಕಿತ್ಸೆಗಳು ನವಜೋತ್ ಅವರ ಪತ್ನಿಯನ್ನು ಗುಣಪಡಿಸಿದ್ದೇ ಹೊರತು ಹಳದಿ, ಅರಿಸಿನ, ಬೇವು ಇಂತಹ ಪರ್ಯಾಯಗಳಲ್ಲ.

ನವಜೋತ್ ಅವರ ಮೊದಲ ವಿಡಿಯೊದ ನಂತರ ಹಲವು ವೈದ್ಯರು ಆಹಾರ ಅಥವಾ ಡಯೆಟ್ ಕ್ರಮ ಪಾಲಿಸುವ ಮೂಲಕ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು ಎಂಬುದನ್ನು ವಿರೋಧಿಸಿದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಆಹಾರದ ಸುತ್ತ ಇರುವ ಮಿಥ್ಯೆಗಳ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದರು. ಕ್ಯಾನ್ಸರ್‌ಗೆ ಸರಿಯಾದ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಯಾವುದೇ ವೈಜ್ಞಾನಿಕ ಸಂಶೋಧನೆಯು ಕ್ಯಾನ್ಸರ್ ಅನ್ನು ಗುಣಪಡಿಸಲು ಆಹಾರದ ಪಾತ್ರವನ್ನು ಸಾಬೀತುಪಡಿಸಿಲ್ಲ ಎಂಬುದು ವೈದ್ಯರ ಸಲಹೆಯಾಗಿದೆ.

(ಗಮನಿಸಿ: ಕ್ಯಾನ್ಸರ್ ಎಂಬುದು ಮಾರಕ ರೋಗ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ವೈದ್ಯರ ಸಲಹೆ ಇಲ್ಲದೇ ಔಷಧಿ, ಚಿಕಿತ್ಸೆ ನಿಲ್ಲಿಸದಿರಿ. ಯಾವುದೇ ಮನೆಮದ್ದು, ಆಹಾರ ಪಾಲಿಸುವ ಮುನ್ನ ವೈದ್ಯರ ಸಲಹೆ ಪಡೆಯಲು ಮರೆಯದಿರಿ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ