ಈ 5 ಸಮಸ್ಯೆ ಇರುವವರು ತಪ್ಪಿಯೂ ಪಾಲಕ್ ಸೊಪ್ಪು ತಿನ್ನಬಾರದು, ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು ಎಚ್ಚರ
Oct 23, 2024 02:00 PM IST
ಪಾಲಕ್ ಸೊಪ್ಪಿನ ಅಡ್ಡಿಪರಿಣಾಮ
- ಪಾಲಕ್ ಸೊಪ್ಪು ಪೋಷಕಾಂಶಗಳ ಗಣಿ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆ ಕಾರಣಕ್ಕೆ ವೈದ್ಯರು ಕೂಡ ಪಾಲಕ್ ತಿನ್ನಲು ಸಲಹೆ ನೀಡುತ್ತಾರೆ. ಆದರೆ ಈ 5 ಆರೋಗ್ಯ ಸಮಸ್ಯೆ ಹೊಂದಿರುವವರು ಪಾಲಕ್ ಸೊಪ್ಪನ್ನು ತಿನ್ನಲೇಬಾರದು, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಭಾರತದಲ್ಲಿ ಸೊಪ್ಪು ತರಕಾರಿ ಸೇವಿಸುವವರ ಪ್ರಮಾಣ ಹೆಚ್ಚು. ಸೊಪ್ಪುಗಳಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳಿರುತ್ತವೆ. ಅದರಲ್ಲೂ ಪಾಲಕ್ ಸೊಪ್ಪಿನ ಬಳಕೆ ಹೆಚ್ಚು. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಹುತೇಕರು ಹೆಚ್ಚಾಗಿ ಪಾಲಕ್ ಸೊಪ್ಪು ತಿನ್ನುತ್ತಾರೆ. ಪಾಲಕ್ ಖಾದ್ಯಗಳು ಬಾಯಿಗೂ ರುಚಿಗೆ, ಆರೋಗ್ಯಕ್ಕೂ ಹಿತ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ನಮಗೆ ಗೊತ್ತಿಲ್ಲದೆಯೇ ಆರೋಗ್ಯಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಕಾರಿಯಾದರೂ ಕೆಲವು ಸಮಸ್ಯೆ ಇರುವವರಿಗೆ ಪಾಲಕ್ ಸೊಪ್ಪು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.
ಕಿಡ್ನಿ ಸ್ಟೋನ್, ಜೀರ್ಣಕಾರಿ ಸಮಸ್ಯೆ ಇರುವವರು
ಮೂತ್ರಪಿಂಡದ ಕಲ್ಲು, ಆಹಾರದ ಅಲರ್ಜಿ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಪಾಲಕ್ ಸೊಪ್ಪು ಸೇವಿಸುವುದನ್ನು ತಪ್ಪಿಸಬೇಕು. ಇದು ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.
ಯೂರಿಕ್ ಆಸಿಡ್ ಸಮಸ್ಯೆ
ಪಾಲಕ್ ಸೊಪ್ಪಿನಲ್ಲಿರುವ ಪ್ಯೂರಿನ್ ಎಂಬ ಅಂಶವು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಿದ್ದರೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಈಗಾಗಲೇ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಅಥವಾ ಕೀಲು ನೋವಿನಿಂದ ಬಳಲುತ್ತಿರುವವರು ಪಾಲಕ್ ಸೊಪ್ಪನ್ನು ಸೇವಿಸುವುದನ್ನು ತಪ್ಪಿಸಬೇಕು.
ರಕ್ತ ತೆಳುಗೊಳಿಸುವ ಔಷಧಗಳು
ನೀವು ಈಗಾಗಲೇ ಆಸ್ಪಿರಿನ್‌ನಂತಹ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ತಪ್ಪಾಗಿಯೂ ಸಹ ಪಾಲಕ್ ಸೊಪ್ಪನ್ನು ಸೇವಿಸಬೇಡಿ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಕೆ ರಕ್ತ ತೆಳುವಾಗಿಸುವ ಔಷಧಿಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ದೇಹಾರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ಮೂತ್ರಪಿಂಡದ ಕಲ್ಲು
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಪಾಲಕ್ ಸೊಪ್ಪನ್ನು ಸೇವಿಸುವುದನ್ನು ತಪ್ಪಿಸಬೇಕು. ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಾಲಿಕ್ ಆಸಿಡ್ ಇರುವುದರಿಂದ ಕಿಡ್ನಿ ಸ್ಟೋನ್ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ
ಪಾಲಕ್ ಮತ್ತು ಕೇಲ್‌ನಂತಹ ಹಸಿರು ತರಕಾರಿಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಆದರೆ ಅವುಗಳಲ್ಲಿ ಇರುವ ಆಕ್ಸಲೇಟ್‌ಗಳು ಕ್ಯಾಲ್ಸಿಯಂನೊಂದಿಗೆ ಬಂಧಿಸುತ್ತದೆ ಮತ್ತು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
ಅಲರ್ಜಿ
ಪಾಲಕ್ ಸೊಪ್ಪು ತಿಂದರೆ ಕೆಲವರಿಗೆ ಅಲರ್ಜಿ ಆಗಬಹುದು. ಬೇಯಿಸಿದ ಅಥವಾ ಹಸಿ ಪಾಲಕ್ ಎಲೆಗಳನ್ನು ತಿನ್ನುವುದು ಅಲರ್ಜಿಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಪಾಲಕ್ ಅಲರ್ಜಿಗಳು ಓರಲ್ ಅಲರ್ಜಿ ಸಿಂಡ್ರೋಮ್ ಅನ್ನು ಹೋಲಬಹುದು.
ಪಾಲಾಕ್ ಸೊಪ್ಪು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೆಯಾದರೂ ಈ ಸಮಸ್ಯೆ ಇರುವವರು ಪಾಲಕ್ ಸೊಪ್ಪಿನ ಸೇವನೆಗೆ ಕಡಿವಾಣ ಹಾಕುವುದು ಉತ್ತಮ.
ವಿಭಾಗ