ನಾಲಿಗೆಯ ಬಣ್ಣದಿಂದಲೇ ತಿಳಿಯಬಹುದು ಆರೋಗ್ಯದ ರಹಸ್ಯ, ನಿಮ್ಮ ನಾಲಿಗೆ ಈ ಬಣ್ಣಕ್ಕೆ ತಿರುಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ
Oct 05, 2024 05:57 PM IST
ನಾಲಿಗೆಯ ಬಣ್ಣ ತಿಳಿಸುತ್ತೆ ಆರೋಗ್ಯ
- ನಾಲಿಗೆಯನ್ನ ಆರೋಗ್ಯದ ಕನ್ನಡಿ ಎನ್ನಬಹುದು. ನಾಲಿಗೆಯ ಬಣ್ಣದಿಂದಲೇ ನಮಗೆ ಯಾವ ಆರೋಗ್ಯ ಸಮಸ್ಯೆ ಇದೆ ಎಂಬುದನ್ನು ಕಂಡುಹಿಡಿಯಬಹದು. ಹಾಗಾದರೆ ನಿಮ್ಮ ನಾಲಿಗೆ ಬಣ್ಣ ಯಾವುದು, ನಿಮಗೆ ಏನಾದ್ರೂ ಆರೋಗ್ಯ ಸಮಸ್ಯೆಗಳಿವೆಯೇ ಎಂಬುದನ್ನು ಕಂಡುಕೊಳ್ಳಿ.
ಪ್ರತಿದಿನ ಬೆಳಗೆದ್ದು ಹಲ್ಲುಜ್ಜುವ ನಾವು ನಾಲಿಗೆಯ ಬಗ್ಗೆ ಅಷ್ಟೊಂದು ಗಮನ ಹರಿಸುವುದಿಲ್ಲ. ಬಹುತೇಕರು ನಾಲಿಗೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ನೀವು ಯಾವುದೇ ಕಾರಣಕ್ಕೆ ವೈದ್ಯರ ಬಳಿಗೆ ಹೋದರು ಅವರು ಮೊದಲು ನೋಡುವುದು ನಿಮ್ಮ ನಾಲಿಗೆಯನ್ನು. ಏಕೆಂದರೆ ನಾಲಿಗೆಯ ಸಹಾಯದಿಂದ ಸಂಪೂರ್ಣ ದೇಹದ ಸ್ಥಿತಿಯನ್ನು ತಿಳಿಯಬಹುದು.
ದೇಹವು ಆರೋಗ್ಯಕರವಾಗಿದ್ದರೆ, ನಾಲಿಗೆಯ ಬಣ್ಣವು ತಿಳಿ ಗುಲಾಬಿಯಾಗಿರುತ್ತದೆ. ದೇಹದಲ್ಲಿ ಯಾವುದೇ ರೀತಿಯ ಕಾಯಿಲೆ ಬಂದರೆ ನಾಲಿಗೆಯ ಬಣ್ಣ ಬದಲಾಗುತ್ತದೆ. ನಾಲಿಗೆಯ ಬಣ್ಣವು ಯಾವ ರೋಗವನ್ನು ಸೂಚಿಸುತ್ತದೆ ಎಂದು ತಿಳಿಯಿರಿ.
ಆರೋಗ್ಯವಂತರ ನಾಲಿಗೆ ಬಣ್ಣ ಹೇಗಿರುತ್ತೆ?
ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ವರದಿಯ ಪ್ರಕಾರ, ಸಾಮಾನ್ಯ ನಾಲಿಗೆಯ ಬಣ್ಣವು ಗುಲಾಬಿ ಬಣ್ಣದ್ದಾಗಿದೆ, ಪ್ರತಿಯೊಬ್ಬ ವ್ಯಕ್ತಿಯ ನಾಲಿಗೆಯ ಬಣ್ಣವು ತಿಳಿ ಬಣ್ಣದಿಂದ ಕಡು ಗುಲಾಬಿಯವರೆಗೆ ಇರುತ್ತದೆ. ಅದರ ಮೇಲೆ ಸಣ್ಣ ಉಬ್ಬುಗಳಿರುತ್ತವೆ. ಈ ಸಣ್ಣ ಉಬ್ಬುಗಳನ್ನು ಪಾಪಿಲ್ಲೆ ಎಂದು ಕರೆಯಲಾಗುತ್ತದೆ. ನಾಲಿಗೆಯ ಒಳ ತುದಿ ಅಂದರೆ ಗಂಟಲಿನ ಸಮೀಪದಲ್ಲಿ ಇರುತ್ತದೆ. ಇದರ ಸಹಾಯದಿಂದ ರುಚಿ ನೋಡಲು, ಮಾತನಾಡಲು ಹಾಗೂ ನುಂಗಲು ಸಾಧ್ಯವಾಗುತ್ತದೆ.
ಅನಾರೋಗ್ಯ ಸೂಚಿಸುವ ನಾಲಿಗೆಯ ಬಣ್ಣಗಳು
ಬಿಳಿ ನಾಲಿಗೆ
ನಾಲಿಗೆ ಬಣ್ಣ ಬಿಳಿಯಾಗಿದ್ದರೆ ಬಾಯಿಯಲ್ಲಿ ಫಂಗಲ್ ಸೋಂಕು ಇದೆ ಎಂದರ್ಥ. ಇದಲ್ಲದೆ, ಬಿಳಿ ಬಣ್ಣದ ನಾಲಿಗೆಯನ್ನು ಹೊಂದಿರುವುದು ಬಾಯಿಯಲ್ಲಿ ಯೀಸ್ಟ್‌ನಂತಹ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಂಕೇತವಾಗಿದೆ. ಇದರಿಂದಾಗಿ ಬಾಯಿ ಊದಿಕೊಳ್ಳಬಹುದು.
ಹಳದಿ ನಾಲಿಗೆ
ನಾಲಿಗೆಯ ಬಣ್ಣ ಹಳದಿ ಬಣ್ಣದಲ್ಲಿ ಕಾಣಿಸಿಕೊಂಡರೆ, ನಾಲಿಗೆಯಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತಿದೆ ಎಂದರ್ಥ. ಕಳಪೆ ಮೌಖಿಕ ನೈರ್ಮಲ್ಯದಿಂದಾಗಿ ಇದು ಸಂಭವಿಸುತ್ತದೆ. ದಿನನಿತ್ಯ ನಾಲಿಗೆಯನ್ನು ಸರಿಯಾಗಿ ಶುಚಿಗೊಳಿಸದೇ ಇದ್ದಾಗ ಬ್ಯಾಕ್ಟೀರಿಯಾಗಳು ನಾಲಿಗೆಯ ಮೇಲೆ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ನಾಲಿಗೆ ಹಳದಿಯಾಗಿ ಕಾಣುತ್ತದೆ. ಆದರೆ ನಾಲಿಗೆ ಹಳದಿಯಾಗಲು ಈ ಕಾರಣಗಳೂ ಕಾರಣ.
* ಧೂಮಪಾನ
* ನಿರ್ಜಲೀಕರಣ
* ಸೋರಿಯಾಸಿಸ್
* ಕಾಮಾಲೆ
* ತಂಬಾಕು ಸೇವನೆ
ಕೆಂಪು ನಾಲಿಗೆ
ನಾಲಿಗೆಯ ಬಣ್ಣವು ಸಂಪೂರ್ಣವಾಗಿ ಕೆಂಪು ಬಣ್ಣದ್ದಾಗಿದ್ದರೆ ಅದು ಕೆಲವು ಆಹಾರ ಅಥವಾ ಔಷಧಿಗಳ ಅಲರ್ಜಿಯಿಂದ ಉಂಟಾಗುತ್ತದೆ. ಇದಲ್ಲದೆ ವಿಟಮಿನ್ ಎ ಮತ್ತು ಬಿ ಕೊರತೆಯಿಂದಲೂ ಕೆಂಪು ಬಣ್ಣದ ನಾಲಿಗೆ ಉಂಟಾಗುತ್ತದೆ.
ಬೂದು ನಾಲಿಗೆ
2017 ರ ಅಧ್ಯಯನದ ಪ್ರಕಾರ, ಬೂದು ಅಥವಾ ತೆಳು ಬಣ್ಣದ ನಾಲಿಗೆಗೆ ಕಾರಣವೆಂದರೆ ಎಸ್ಜಿಮಾವನ್ನು ಸೂಚಿಸುತ್ತದೆ.
ನೀಲಿ ನಾಲಿಗೆ
ನಾಲಿಗೆಯಲ್ಲಿ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ, ಬಣ್ಣವು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ರಕ್ತದ ಅಸ್ವಸ್ಥತೆ, ರಕ್ತನಾಳದ ಕಾಯಿಲೆ ಅಥವಾ ಶ್ವಾಸಕೋಶದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾಗಬಹುದು.
ನೋಡಿದ್ರಲ್ಲ ಗುಲಾಬಿ ಬಣ್ಣ ಹೊರತು ಪಡಿಸಿ ನಿಮ್ಮ ನಾಲಿಗೆ ಬೇರೆ ಯಾವುದೇ ಬಣ್ಣವನ್ನು ಹೊಂದಿದ್ದರು ನೀವು ಅದನ್ನು ಕಡೆಗಣಿಸಬೇಡಿ. ನಾಲಿಗೆ ಬಣ್ಣ ಬದಲಿದ್ದರೆ ಕೂಡಲೇ ವೈದ್ಯರಲ್ಲಿ ತೋರಿಸಿ, ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ.
ವಿಭಾಗ