Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

ಉಗುರುಗಳು ಕೈಗಳ ಅಂದ ಹೆಚ್ಚಿಸುವುದು ಮಾತ್ರವಲ್ಲ, ಅವುಗಳಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿದೆ. ಉಗುರುಗಳ ಬಣ್ಣ-ಆಕಾರದಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ನಿರ್ಲಕ್ಷ್ಯ ಮಾಡದಿರಿ. ಅವು ನಿಮಗೆ ಆರೋಗ್ಯ ಸಮಸ್ಯೆಗಳನ್ನು ತೋರಿಸುತ್ತವೆ. ನಿಮ್ಮಲ್ಲಿ ಯಾವುದಾದ್ರೂ ಸಮಸ್ಯೆ ಇದ್ರೆ ಉಗುರು ಬಣ್ಣ, ಆಕಾರ ಬದಲಾಗುತ್ತೆ ಎನ್ನುತ್ತಾರೆ ತಜ್ಞರು (ಬರಹ: ಪ್ರಿಯಾಂಕ ಗೌಡ)

ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ
ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ

ನೀಳ ಉಗುರುಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಉಗುರುಗಳು ಚೆನ್ನಾಗಿದ್ದರೆ ಕೈಗಳ ಅಂದವೂ ಹೆಚ್ಚುತ್ತದೆ. ಆ ಕಾರಣಕ್ಕೆ ಇಂದಿನ ಮಿಲೇನಿಯಲ್‌ ಮಂದಿ ಉಗುರಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮೆನಿಕ್ಯೂರ್‌, ಪೆಡಿಕ್ಯೂರ್‌ ಎಂದುಕೊಂಡು ಉಗುರಿನ ಅಂದ, ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡುತ್ತಾರೆ. ಆದರೆ ಈ ಉಗುರುಗಳು ಅಂದ ಹೆಚ್ಚಿಸುವ ಜೊತೆಗೆ ಆರೋಗ್ಯ ಮಾಹಿತಿಯನ್ನೂ ಕೂಡ ನೀಡುತ್ತವೆ. ಉಗುರಿನ ಬಣ್ಣ ಬದಲಾಗುವುದು, ಉಗುರಿನಲ್ಲಿ ಮೂಡುವ ರೇಖೆಗಳು ನಮ್ಮ ಆರೋಗ್ಯವನ್ನು ಸೂಚಿಸುತ್ತವೆ. ಉಗುರಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಎಚ್ಚೆತ್ತುಕೊಳ್ಳುವುದು ಉತ್ತಮ. ಆರೋಗ್ಯದ ಪ್ರತಿಬಿಂಬವೇ ಉಗುರು

ಉಗುರುಗಳು ನಮ್ಮ ಚರ್ಮದ ಭಾಗವಾಗಿದೆ. ಅವು ಪ್ರೊಟೀನ್ ಕೆರಾಟಿನ್ ಪದರಗಳಿಂದ ಮಾಡಲ್ಪಟ್ಟಿದೆ. ನಮ್ಮ ಉಗುರುಗಳು ನಮ್ಮ ಒಟ್ಟಾರೆ ಆರೋಗ್ಯದ ಮಾಹಿತಿ ತಿಳಿಸುತ್ತವೆ ಎನ್ನುತ್ತಾರೆ ತಜ್ಞರು. ಚರ್ಮದ ತೊಂದರೆ ಉಂಟಾದರೆ ಉಗುರುಗಳಲ್ಲಿನ ಬದಲಾವಣೆಗಳಿಂದಲೇ ತಿಳಿದುಕೊಳ್ಳಬಹುದು. ಕೆಲವು ಉಗುರು ಬದಲಾವಣೆಗಳು ನೈಸರ್ಗಿಕವಾಗಿರುತ್ತವೆ.

ಉಗುರಿನ ಬದಲಾವಣೆಯು ದೇಹದಲ್ಲಿನ ಒತ್ತಡದಿಂದ ಉಂಟಾಗಬಹುದು. ಉಗುರುಗಳು ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಅಥವಾ ನಿಮ್ಮ ಉಗುರುಗಳ ಮೇಲೆ ಪಟ್ಟೆಗಳು ಅಥವಾ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡರೆ ಅನಾರೋಗ್ಯಕ್ಕೊಳಗಾಗಿದ್ದೀರಿ ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ಕೈ ಬೆರಳುಗಳ ಉಗುರುಗಳು ಮಾತ್ರವಲ್ಲ ನಿಮ್ಮ ಕಾಲ್ಬೆರಳಿನ ಉಗುರುಗಳು ಕೂಡ ಆರೋಗ್ಯಕ್ಕೆ ಕಿಟಕಿಯಂತೆ ಕಾರ್ಯನಿರ್ವಹಿಸುತ್ತದೆ.

ಉಗುರು ಸೂಚಿಸುವ ಆರೋಗ್ಯ ಸಮಸ್ಯೆಗಳು 

ಯಾವೆಲ್ಲಾ ಅನಾರೋಗ್ಯ ಸಂಬಂಧಿಸಿದ ಸೂಚನೆಗಳನ್ನು ಉಗುರುಗಳು ನೀಡುತ್ತವೆ ಅನ್ನೋ ಮಾಹಿತಿ ಇಲ್ಲಿದೆ:

ಚಮಚ-ಆಕಾರದ ಉಗುರುಗಳು: ಇದು ಕಬ್ಬಿಣಾಂಶದ ಕೊರತೆಯು ರಕ್ತಹೀನತೆ, ಹಿಮೋಕ್ರೊಮಾಟೋಸಿಸ್‌ನಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ರೋಗಲಕ್ಷಣದಲ್ಲಿ ಉಗುರುಗಳು ಚಮಚದಂತೆ ತಳವನ್ನು ಅಂಟಿಕೊಂಡಿರುತ್ತದೆ. ಮಧ್ಯಭಾಗದಲ್ಲಿ ಚರ್ಮಕ್ಕೆ ಅಂಟಿದಂತೆ ಒಳಗೆ ಹೋಗಿದ್ದರೆ, ತುದಿಯಲ್ಲಿ ಮೇಲ್ಮುಖದಲ್ಲಿರುತ್ತದೆ.

ಒನಿಕೊಲಿಸಿಸ್ (ಉಗುರು ಬೇರ್ಪಡಿಸುವಂತಿರುವುದು): ಸೋರಿಯಾಸಿಸ್, ಶಿಲೀಂಧ್ರಗಳ ಸೋಂಕುಗಳು, ಹೈಪರ್ ಥೈರಾಯ್ಡ್ ಉಂಟಾಗಿದ್ದರೆ ಉಗುರುಗಳಲ್ಲಿ ಈ ರೋಗಲಕ್ಷಣ ಕಂಡುಬರುತ್ತದೆ.

ಬ್ಯೂನ ರೇಖೆಗಳು (ಟ್ರಾನ್ಸ್‌ವರ್ಸ್ ಡಿಪ್ರೆಶನ್): ಬ್ಯೂನ ರೇಖೆಗಳು ನಿಮ್ಮ ಒಂದು ಅಥವಾ ಹೆಚ್ಚಿನ ಬೆರಳಿನ ಉಗುರುಗಳು ಅಥವಾ ಕಾಲ್ಬೆರಳ ಉಗುರುಗಳಲ್ಲಿ ಸಮತಲವಾದ ರೇಖೆಗಳಲ್ಲಿ ಚಡಿಯಂತಿರುತ್ತವೆ ಅಥವಾ ಪಿನ್‌ಗಳನ್ನು ಹಾಕಿದಂತೆ ತೋರುತ್ತದೆ. ಅನಾರೋಗ್ಯ ಅಥವಾ ತೀವ್ರ ಒತ್ತಡವು ನಿಮ್ಮ ಉಗುರು ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. ಅನಾರೋಗ್ಯಕ್ಕೆ ಒಳಗಾಗಿದ್ದರೆ ಅಥವಾ ಹೆಚ್ಚಿನ ಒತ್ತಡವನ್ನು ಅನುಭವಿಸಿದರೆ ಈ ರೋಗಲಕ್ಷಣ ಕಂಡುಬರುತ್ತದೆ. ವಿಟಮಿನ್ ಅಥವಾ ಪೋಷಕಾಂಶಗಳ ಕೊರತೆಯು ನಿಮ್ಮ ಉಗುರು ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ.

ಕ್ಲಬ್ಬಿಂಗ್ (ಬೆರಳ ತುದಿಯ ಉಗುರು ಬಲ್ಬ್‌ನಂತೆ ಹಿಗ್ಗುವುದು): ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಶ್ವಾಸಕೋಶದ ಕ್ಯಾನ್ಸರ್, ಹೃದಯ ಕಾಯಿಲೆ ಅಥವಾ ಎಂಡೋಕಾರ್ಡಿಟಿಸ್‌ನಂತಹ ಹೃದಯರಕ್ತನಾಳದ ಕಾಯಿಲೆಗಳಂತಹ ಶ್ವಾಸಕೋಶದ ಕಾಯಿಲೆಗಳಿದ್ದರೆ ಉಗುರುಗಳಲ್ಲಿ ಈ ರೋಗಲಕ್ಷಣ ಕಂಡುಬರುತ್ತದೆ. ಉಗುರು ದಪ್ಪವಾಗಿ ಬಲ್ಬ್‌ನಂತೆ ಹಿಗ್ಗಿದ್ದರೆ ಈ ರೋಗ ಎಂದು ಗುರುತಿಸಬಹುದು.

ಲ್ಯುಕೋನಿಚಿಯಾ (ಉಗುರುಗಳ ಮೇಲೆ ಬಿಳಿ ಕಲೆಗಳು): ಆಘಾತ, ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನಿಂದ ಇದು ಉಂಟಾಗಬಹುದು. ಸಾಮಾನ್ಯವಾಗಿ ಬಿಳಿ ಕಲೆಗಳು ಬಹುತೇಕರ ಉಗುರುಗಳಲ್ಲಿ ಕಂಡು ಬರುತ್ತವೆ. ಇವು ಸಾಮಾನ್ಯವಾಗಿ ಹಾನಿಕಾರಕವಲ್ಲ. ಆದರೆ, ಅದು ಕಚ್ಚಿದಂತೆ ಅಥವಾ ಹೊಡೆದಾಗ ಆಗುವ ಗಾಯದಂತೆ ಹೆಚ್ಚಿಗೆ ಕಂಡುಬಂದರೆ ಅವುಗಳು ಶಿಲೀಂಧ್ರಗಳು, ಅಲರ್ಜಿಗಳು ಮುಂತಾದ ಕಾರಣಗಳನ್ನು ಹೊಂದಿರಬಹುದು.

ಹಳದಿ ಉಗುರು ಸಿಂಡ್ರೋಮ್: ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಈ ರೋಗಲಕ್ಷಣವನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಸೈನುಟಿಸ್‌ನಂತಹ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದೆ.

ಸೋರಿಯಾಟಿಕ್ ಉಗುರುಗಳು: ನಿಮ್ಮ ಉಗುರುಗಳಲ್ಲಿ ಸಣ್ಣ ಹೊಂಡದಂತಿದ್ದರೆ ಅದು ಸೋರಿಯಾಟಿಕ್ ರೋಗಲಕ್ಷಣವಾಗಿದೆ. ಇದು ಬಿಳಿ, ಹಳದಿ ಅಥವಾ ಕಂದು ಬಣ್ಣವನ್ನು ಹೊಂದಿದ್ದು, ಉಗುರುಗಳು ಮುರಿದಂತಿರುತ್ತದೆ. ಅಲ್ಲದೆ, ಇದು ಚರ್ಮದಿಂದ ಬೇರ್ಪಟ್ಟಿರುವಂತಿರುತ್ತದೆ. ಹಾಗೂ ಉಗುರಿನಡಿಯಲ್ಲಿ ರಕ್ತ ಬರುತ್ತದೆ. ಇಂಥ ರೋಗಲಕ್ಷಣ ಕಂಡು ಬಂದರೆ ಕೂಡಲೇ ಚರ್ಮರೋಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.

ಟೆರ್ರಿ ಉಗುರುಗಳು (ಉಗುರಿನ ಬುಡದಿಂದಲೇ ಬಿಳಿಯಿರುವುದು): ಟೆರ್ರಿ ಉಗುರುಗಳ ರೋಗಲಕ್ಷಣವೆಂದರೆ ಉಗುರಿನ ಬಣ್ಣವನ್ನು ಬದಲಾಯಿಸುತ್ತವೆ. ಯಕೃತ್ತಿನ ವೈಫಲ್ಯ, ಮೂತ್ರಪಿಂಡ ವೈಫಲ್ಯ, ಮಧುಮೇಹದಿಂದ ಇದು ಸಂಭವಿಸುತ್ತದೆ. ಕೆಲವೊಮ್ಮೆ, ಇದು ವಯಸ್ಸಾದ ಸಂಕೇತವೂ ಹೌದು.

ಅರ್ಧದಂತಿರುವ ಉಗುರುಗಳು: ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಹೊಂದಿರುವ ಶೇ. 20-50 ರೋಗಿಗಳಲ್ಲಿ ಈ ರೋಗಲಕ್ಷಣ ಕಂಡು ಬರುತ್ತದೆ. ಕೆಲಮೊಮ್ಮೆ ಆರೋಗ್ಯವಂತ ವ್ಯಕ್ತಿಗಳಲ್ಲೂ ಇದು ಕಾಣಿಸುತ್ತದೆ.

ಹ್ಯಾಂಗ್‌ನೈಲ್‌ಗಳನ್ನು ನಿರ್ಲಕ್ಷಿಸಬೇಡಿ: ಹ್ಯಾಂಗ್‌ನೈಲ್ ಎನ್ನುವುದು ಬೆರಳಿನ ಉಗುರು ಅಥವಾ ಕಾಲ್ಬೆರಳ ಉಗುರಿನ ಪಕ್ಕದಲ್ಲಿರುವ ಒಂದು ಸಣ್ಣ, ಹರಿದ ಚರ್ಮದ ತುಂಡಾಗಿದೆ. ಇವು ಸಾಮಾನ್ಯವಾಗಿ ಒಣ ಚರ್ಮದಿಂದ (ಡ್ರೈ ಸ್ಕಿನ್) ಉಂಟಾಗುತ್ತದೆ. ಪ್ರೊಟೀನ್ ಕೊರತೆ ಮತ್ತು ಫೋಲಿಕ್ ಆಮ್ಲ, ವಿಟಮಿನ್ ಬಿ, ವಿಟಮಿನ್ ಸಿ, ಮತ್ತು ಬಯೋಟಿನ್ ಸೇರಿದಂತೆ ಅಗತ್ಯ ಜೀವಸತ್ವಗಳ ಕೊರತೆಯಿಂದ ಈ ರೋಗಲಕ್ಷಣ ಕಂಡುಬರುತ್ತದೆ.

ಉಗುರಿನ ಆರೈಕೆ ಹೀಗಿರಲಿ 

ಆಗಾಗ್ಗೆ ಕೈ ತೊಳೆಯುವುದು, ಉಗುರುಗಳನ್ನು ತೆಗೆಯುವುದು ಅಥವಾ ಕಚ್ಚುವುದು. ಹೊರಪೊರೆಗಳನ್ನು ಕತ್ತರಿಸುವುದು ಮುಂತಾದವುಗಳನ್ನು ಮಾಡುವುದರಿಂದ ಉಗುರುಗಳ ಸುತ್ತಲಿನ ಚರ್ಮವನ್ನು ಹಾನಿಗೊಳಿಸುತ್ತವೆ. ಇದರಿಂದ ಹ್ಯಾಂಗ್‌ನೈಲ್‌ ಉಂಟಾಗುತ್ತದೆ. ಇದಕ್ಕೆ ಕೂಡಲೇ ಚಿಕಿತ್ಸೆ ನೀಡದಿದ್ದರೆ, ಇದು ಸೋಂಕು ಮತ್ತು ಬಾವು ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಉತ್ತಮ ನೈರ್ಮಲ್ಯ ಕಾಪಾಡುವುದು ಮುಖ್ಯ. ಶಿಲೀಂಧ್ರಗಳ ಸೋಂಕಿನಿಂದ ಉಗುರುಗಳನ್ನು ರಕ್ಷಿಸಲು, ಬಾತ್ ಟವೆಲ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸ್ನಾನದ ನಂತರ ಟವೆಲ್‌ ಗಳನ್ನು ಯಾವಾಗಲೂ ಚೆನ್ನಾಗಿ ಒಣಗಿಸಿ.

ಇನ್ನು, ಹೆಣ್ಮಕ್ಕಳು ಸೌಂದರ್ಯಕ್ಕಾಗಿ ಕೃತಕ ಉದ್ದನೆಯ ಉಗುರುಗಳನ್ನು ಅಳವಡಿಸುತ್ತಾರೆ. ಅವುಗಳನ್ನು ಸರಿಯಾಗಿ ಹಾಕದಿದ್ದರೆ, ಉಗುರಗಳಿಗೆ ಹಾನಿಯಾಗಬಹುದು. ಉಗುರುಗಳು ಕಾಲಾನಂತರದಲ್ಲಿ ದುರ್ಬಲಗೊಳ್ಳಬಹುದು ಅಥವಾ ಮುರಿಯಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

Whats_app_banner