Haemophilia: ಅಪರೂಪದ ಕಾಯಿಲೆ ಹಿಮೋಫಿಲಿಯಾದ ಬಗ್ಗೆ ಬೇಕಿದೆ ಜಾಗೃತಿ, ರೋಗಲಕ್ಷಣಗಳನ್ನು ಕಡೆಗಣಿಸದಿರಿ
Dec 18, 2024 12:37 PM IST
ಹಿಮೋಫಿಲಿಯಾ
- ಜಗತ್ತಿನಲ್ಲಿ ಹಲವು ಅಪರೂಪದ ಕಾಯಿಲೆಗಳಿವೆ. ಅಂತಹ ಕಾಯಿಲೆಗಳ ಸಾಲಿಗೆ ಸೇರುವುದು ‘ಹಿಮೋಫಿಲಿಯಾ‘. ಇದು ರಕ್ತಸಂಬಂಧಿ ಕಾಯಿಲೆಯಾಗಿದ್ದು, ಇದರ ಬಗ್ಗೆ ಹಲವರಿಗೆ ಅರಿವಿಲ್ಲ. ʻಹಿಮೋಫಿಲಿಯಾ‘ ಹೊಂದಿರುವ ರೋಗಿಗಳು ಅನಿಯಂತ್ರಿತ ರಕ್ತಸ್ರಾವದ ಅಪಾಯದಲ್ಲೇ ಬದುಕುತ್ತಾರೆ. ಈ ಕಾಯಿಲೆ ಹರಡುವ ವಿಧಾನ, ಚಿಕಿತ್ಸೆ, ನಿರ್ವಹಣೆ ಹೇಗೆ ಎಂಬ ವಿವರ ಇಲ್ಲಿದೆ.
140 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದ ಆರೋಗ್ಯ ಕ್ಷೇತ್ರವು ದೇಶದ ಜನರಷ್ಟೇ ವೈವಿಧ್ಯಮಯವಾಗಿದೆ. ಇಲ್ಲಿ ಹಲವಾರು ರೋಗಗಳು ವ್ಯಾಪಕ ಮಟ್ಟದಲ್ಲಿ ಗಮನ ಸೆಳೆಯುತ್ತವೆ. ಆದಾಗ್ಯೂ, ಅನೇಕ ಅಪರೂಪದ ರೋಗಗಳು ಸಾಕಷ್ಟು ಬಾರಿ ಗಮನಕ್ಕೆ ಬಾರದೇ ಸಾವಿರಾರು ರೋಗಿಗಳ ಜೀವನ ಹಾಗೂ ಜೀವದ ಮೇಲೆ ಪರಿಣಾಮ ಬೀರುತ್ತವೆ. ಅಂತಹ ರೋಗಗಳಲ್ಲಿ ಒಂದು ‘ಹಿಮೋಫಿಲಿಯಾ‘. ಇದೊಂದು ಅಪರೂಪದ ರಕ್ತ ಸಂಬಂಧಿ ಕಾಯಿಲೆಯಾಗಿದೆ.
ʻಹಿಮೋಫಿಲಿಯಾ‘ ಹೊಂದಿರುವ ರೋಗಿಗಳು ಅನಿಯಂತ್ರಿತ ರಕ್ತಸ್ರಾವದ ಅಪಾಯದಲ್ಲೇ ಬದುಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಂಗವೈಕಲ್ಯ ಅಥವಾ ಸಾವಿಗೆ ಸಹ ಇದು ಕಾರಣವಾಗಬಹುದು. ಈ ಸ್ಥಿತಿಯನ್ನು ಗುಣಪಡಿಸಲಾಗದ ಕಾರಣ, ಅಂತಹ ರೋಗಿಗಳ ಮಾನಸಿಕ ಆರೋಗ್ಯದ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ.
ಕಳೆದ ಕೆಲವು ದಶಕಗಳಲ್ಲಿ, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಅಕಾರಣವಾಗಿ, ತನ್ನಿಂತಾನೆ ರಕ್ತಸ್ರಾವವಾಗುವುದು ಮತ್ತು ಇತರೆ ಹಲವಾರು ತೊಡಕುಗಳನ್ನು ತಡೆಯುವ ನಿಟ್ಟಿನಲ್ಲಿ ನಿರ್ವಹಣಾ ಆಯ್ಕೆಗಳನ್ನು ಮಾಡಲು ಅನುವಾಗಿದೆ. ಪೂರ್ವಭಾವಿಯಾಗಿ ʻರೋಗತಡೆʼಯು (ಪ್ರೊಫಿಲಾಕ್ಸಿಸ್) ಈ ಬೆಳವಣಿಗೆಯ ಫಲವಾಗಿದ್ದು, ʻಹಿಮೋಫಿಲಿಯಾʼ ನಿರ್ವಹಣೆಯ ಪ್ರಮುಖ ಅಂಶವಾಗಿದೆ.
ದೀರ್ಘಕಾಲೀನ ರೋಗತಡೆʼಯು ರೋಗಿಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಕೆಲಸದಲ್ಲಿ ಗೈರುಹಾಜರಿಯಿಂದಾಗಿ ಆಗುವ ಆದಾಯದ ನಷ್ಟವನ್ನು ತಡೆಯುತ್ತದೆ ಅಥವಾ ತೊಡಕುಗಳ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಶಸ್ತ್ರಚಿಕಿತ್ಸೆಗಳ ಪರಿಣಾಮವಾಗಿ ಉಂಟಾಗುವ ವೆಚ್ಚಗಳನ್ನು ತಡೆಯುತ್ತದೆ. ಆದಾಗ್ಯೂ, ಭಾರತದಲ್ಲಿ, ʻರೋಗತಡೆʼ ಅನುಕೂಲವು ಹಲವಾರು ಸವಾಲುಗಳಿಂದ ಎಲ್ಲರಿಗೂ ಲಭ್ಯವಿಲ್ಲ. ಆದ್ದರಿಂದ, ಈ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ರೋಗಿಗಳ ಜೀವನವನ್ನು ಸುಧಾರಿಸಲು ʻರೋಗತಡೆʼ ಪ್ರಕ್ರಿಯೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಮಾರ್ಗಸೂಚಿಗಳನ್ನು ರೂಪಿಸಬೇಕು, ಆ ಮೂಲಕ ಆರೋಗ್ಯ ವೆಚ್ಚಗಳು ಮತ್ತು ಅಂಗವೈಕಲ್ಯದ ಹೊರೆಯನ್ನು ಕಡಿಮೆ ಮಾಡಬಹುದು.
ʻಹಿಮೋಫಿಲಿಯಾ ಹರಡುವಿಕೆ
ರಕ್ತಹೆಪ್ಪುಗಟ್ಟುವ ಅಂಶಗಳ ಕೊರತೆಯಿಂದಾಗಿ ʻಹಿಮೋಫಿಲಿಯಾʼ ಉಂಟಾಗುತ್ತದೆ, ಇದು ಅನಿಯಂತ್ರಿತ ರಕ್ತಸ್ರಾವಕ್ಕೆ ಕಾರಣವಾಗುತ್ತದೆ, ಇದು ಕೀಲುಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂಗವೈಕಲ್ಯಕ್ಕೂ ಕಾರಣವಾಗಬಹುದು. 2023ರಲ್ಲಿ, ಜಾಗತಿಕವಾಗಿ ಎರಡು ಲಕ್ಷಕ್ಕೂ ಹೆಚ್ಚು ಜನರು ‘ಹಿಮೋಫಿಲಿಯಾ‘ಕ್ಕೆ ತುತ್ತಾಗಿದ್ದರು, ಅದರಲ್ಲಿ ಶೇ 90ರಷ್ಟು ಮಂದಿ ಪುರುಷರು. ಅದೇ ವರ್ಷದಲ್ಲಿ ಭಾರತವು ಅತಿ ಹೆಚ್ಚು ಪ್ರಕರಣಗಳು (26,352) ವರದಿಯಾಗಿವೆ.
ಭಾರತದಲ್ಲಿ ‘ಹಿಮೋಫಿಲಿಯಾ‘ ನಿರ್ವಹಣೆಯ ಮೇಲೆ ಚಿಕಿತ್ಸಾ ವೆಚ್ಚ, ಸುಸಜ್ಜಿತ ರೋಗನಿರ್ಣಯ, ಚಿಕಿತ್ಸಾ ಕೇಂದ್ರಗಳ ಕೊರತೆ ಮತ್ತು ಜಾಗೃತಿಯ ಕೊರತೆಯಂತಹ ಹಲವಾರು ಸವಾಲುಗಳು ಪರಿಣಾಮ ಬೀರಿವೆ. ಇದಲ್ಲದೆ, ʻರೋಗತಡೆʼ ಪ್ರಕ್ರಿಯೆಗಳ ಅಳವಡಿಕೆಯು ಸಹ ಸಾಕಷ್ಟು ಕಡಿಮೆ ಇದೆ. ಆದ್ದರಿಂದ, ʻರೋಗತಡೆʼ ಕ್ರಮಗಳ ವ್ಯಾಪಕ ಅಳವಡಿಕೆಯನ್ನು ಪ್ರೋತ್ಸಾಹಿಸುವ ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ಆ ಮೂಲಕ ರೋಗಿಗಳಿಗೆ ಅವರ ಜೀವನ ಗುಣಮಟ್ಟ ಮತ್ತು ಉತ್ಪಾದಕತೆ ಹೆಚ್ಚಿಸಲು ಸಮಗ್ರ ರೀತಿಯಲ್ಲಿ ಬೆಂಬಲ ಒದಗಿಸುವುದು ಅವಶ್ಯವಾಗಿದೆ.
ಹಿಮೋಫಿಲಿಯಾ ನಿರ್ವಹಣೆಯಲ್ಲಿ ಕರ್ನಾಟಕದ ಪಾತ್ರ
ಕರ್ನಾಟಕ ರಾಜ್ಯವು, ದೃಢವಾದ ಮಾರ್ಗಸೂಚಿಗಳ ಮೂಲಕ ಈ ಆರೋಗ್ಯ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಸ್ತುತ, ರಾಜ್ಯವು ಎಲ್ಲಾ ಜಿಲ್ಲೆಗಳಲ್ಲಿ ʻಹಿಮೋಫಿಲಿಯಾʼ ಮತ್ತು ʻಹಿಮೋಗ್ಲೋಬಿನೋಪತಿʼಗಳಿಗಾಗಿ 36 ಸಮಗ್ರ ʻದೈನಂದಿನ ಆರೈಕೆ ಕೇಂದ್ರʼಗಳನ್ನು (ಡೇ ಕೇರ್) ಹೊಂದಿದೆ. ಈ ಕೇಂದ್ರಗಳು ಬಹುವಿಭಾಗದ ಸಿಬ್ಬಂದಿಯನ್ನು ಒಳಗೊಂಡಿದ್ದು, ಅವರು ಉಚಿತ ʻಫಿಸಿಯೋಥೆರಪಿʼ, ಸಮಾಲೋಚನೆ ಮತ್ತು ಪುನರ್ವಸತಿಯಂತಹ ಬೆಂಬಲ ಸೇವೆಗಳನ್ನು ಒದಗಿಸುತ್ತಾರೆ. ಜೀವಿತಾವಧಿಯನ್ನು ಹೆಚ್ಚಿಸಲು, ಅಂಗವೈಕಲ್ಯವನ್ನು ತಡೆಗಟ್ಟಲು ಮತ್ತು ಆರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರೋಗತಡೆ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.
ಕೊಪ್ಪಳ ಮತ್ತು ಕಲ್ಬುರ್ಗಿ ವೈದ್ಯಕೀಯ ಕಾಲೇಜುಗಳಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಎರಡು ಸಮಗ್ರ ಕೇಂದ್ರಗಳನ್ನು (ಐಸಿಡಿಟಿ) ಸ್ಥಾಪಿಸಲು ಸರ್ಕಾರ ಪ್ರಸ್ತಾಪಿಸಿದೆ. ʻರೋಗತಡೆʼ ಕ್ರಮಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಈ ಕೇಂದ್ರಗಳ 2024-2025ನೇ ಸಾಲಿನ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಕಳೆದ ವರ್ಷದಲ್ಲಿ ಸುಮಾರು 200 ರೋಗಿಗಳು ರೋಗತಡೆ ಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಇದಲ್ಲದೆ, ರಕ್ತದ ಅಸ್ವಸ್ಥತೆಗಳ ತಪಾಸಣೆ ಹಾಗೂ ವೈದ್ಯಕೀಯ ಅಧಿಕಾರಿಗಳು ಮತ್ತು ಲ್ಯಾಬ್ ತಂತ್ರಜ್ಞರಿಗೆ ಪುನರ್ವಸತಿ ಕುರಿತು ಕಾರ್ಯಾಗಾರಗಳನ್ನು ನಡೆಸುವ ಯೋಜನೆಗಳೂ ಇವೆ. ರಾಜ್ಯ ಸರ್ಕಾರದ ಇಂತಹ ಕ್ರಮಗಳು ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ʻಹಿಮೋಫಿಲಿಯಾʼ ನಿರ್ವಹಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಮಕ್ಕಳು ಮತ್ತು ವಯಸ್ಕರಿಗೆ ರೋಗತಡೆಯನ್ನು ಕಡ್ಡಾಯಗೊಳಿಸುವುದು, ಆರಂಭಿಕ ಮಧ್ಯಸ್ಥಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ದೀರ್ಘಕಾಲೀನ ತೊಡಕುಗಳನ್ನು ಕಡಿಮೆ ಮಾಡುವುದು ಇದರ ಗುರಿಯಾಗಿದೆ.
ಇದನ್ನೂ ಓದಿ: ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆಹಾರಗಳು
ಹಿಮೋಫಿಲಿಯಾ ತಡೆಗೆ ಈ ಕ್ರಮ ಅಗತ್ಯ
ರೋಗತಡೆಗೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಹಲವಾರು ತಪ್ಪು ಕಲ್ಪನೆಗಳಿಂದಾಗಿ ರೋಗಿಗಳು ಕಳಂಕ ಮತ್ತು ತಾರತಮ್ಯದ ರೂಪದಲ್ಲಿ ಎದುರಿಸುತ್ತಿರುವ ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನು ಪರಿಹರಿಸುವುದು ಸಹ ಅಗತ್ಯವಾಗಿದೆ. ಈ ಸವಾಲುಗಳನ್ನು ಎದುರಿಸುವಲ್ಲಿ ಸಮಾಲೋಚನೆಯು ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಬಂಧ ಕೆಲವು ಮಾರ್ಗೋಪಾಯಗಳು ಇಲ್ಲಿವೆ:
• ಅನುವಂಶಿಕ (ಜೆನೆಟಿಕ್) ಸಮಾಲೋಚನೆಯು ಸಮಯೋಚಿತ ರೋಗಪತ್ತೆ ಮತ್ತು ಚಿಕಿತ್ಸೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ
• ಕುಟುಂಬ ಶಿಕ್ಷಣ ಕಾರ್ಯಕ್ರಮಗಳು ಮಿಥ್ಯೆಗಳನ್ನು ನಿವಾರಿಸುವುದರ ಜೊತೆಗೆ ರೋಗಿಗಳು ಮತ್ತು ಅವರ ಆರೈಕೆದಾರರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಬಲ್ಲವು
• ಈ ಸೇವೆಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಮಾಲೋಚನೆ ಮತ್ತು ತಪಾಸಣೆಗಾಗಿ ಪ್ರಮಾಣೀಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಅವಶ್ಯಕ
ಅನುಕೂಲಕರ ನೀತಿಗಳನ್ನು ರೂಪಿಸುವುದು
ಕರ್ನಾಟಕವು ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅಂತೆಯೇ, ದೇಶಾದ್ಯಂತ ಅನುಕೂಲಕರ ನೀತಿಗಳೊಂದಿಗೆ ಈ ನಿಟ್ಟಿನಲ್ಲಿ ಪ್ರಗತಿಗೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ:
• ರೋಗ ಪತ್ತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಕ್ತದ ಕಾಯಿಲೆಗಳ ವಿಚಾರದಲ್ಲಿ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡುವುದು
• ರೋಗತಡೆ ವ್ಯಾಪ್ತಿಯನ್ನು ಹೆಚ್ಚಿಸಲು ಬಜೆಟ್ ಹಂಚಿಕೆಯನ್ನು ಹೆಚ್ಚಿಸುವುದು
• ಹೆಚ್ಚುವರಿ ʻಐಸಿಡಿಟಿʼಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು
• ರೋಗಿಗಳ ಚಲನವಲನ ಉಳಿಸಿಕೊಳ್ಳಲು ಮತ್ತು ಅಂಗವೈಕಲ್ಯಗಳನ್ನು ತಡೆಗಟ್ಟಲು ಸಹಾಯ ಮಾಡುವ ನಿಟ್ಟಿನಲ್ಲಿ ಪುನರ್ವಸತಿಯ ಮೇಲೆ ಗಮನವನ್ನು ವಿಸ್ತರಿಸುವುದು
ʻಹಿಮೋಫಿಲಿಯಾ‘ವು ರೋಗಿಗಳ ಪಾಲಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರತಿದಿನದ ದೊಡ್ಡ ಯುದ್ಧವಾಗಿದೆ. ಆದಾಗ್ಯೂ, ಸರಿಯಾದ ನೆರವಿನೊಂದಿಗೆ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. ಚಿಕಿತ್ಸೆಯ ಪ್ರಮುಖ ಭಾಗವಾಗಿ ‘ರೋಗತಡೆ‘ಗೆ ಆದ್ಯತೆ ನೀಡುವ ಮತ್ತು ಸಮಗ್ರ ಬೆಂಬಲ ಆರೈಕೆಯನ್ನು ಒದಗಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರೂಪಿಸುವುದು ನಿರ್ಣಾಯಕವಾಗಿದೆ. ರೋಗಿಗಳು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಆರೈಕೆಯ ಲಭ್ಯತೆಯನ್ನು ಸುಧಾರಿಸುವಂತಹ ನೀತಿಗಳನ್ನು ರಚಿಸುವ ಮೂಲಕ, ಭಾರತವು ʻಹಿಮೋಫಿಲಿಯಾʼ ರೋಗಿಗಳ ಜೀವನವನ್ನು ಬದಲಾಯಿಸುವ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ.
ಹಿಮೋಫಿಲಿಯಾದ ಸಂಕೇತಗಳು ಹಾಗೂ ರೋಗಲಕ್ಷಣಗಳು
ಅತಿಯಾದ ರಕ್ತಸ್ರಾವ, ಮೂಗೇಟುಗಳಲ್ಲಿನ ರಕ್ತಸ್ರಾವದ ಹೊರತಾಗಿಯೂ ಹಿಮೋಫಿಲಿಯಾದ ಇತರ ಚಿಹ್ನೆಗಳು ಮತ್ತು ಲಕ್ಷಣಗಳು ಹೀಗಿವೆ;
ದೀರ್ಘಕಾಲದ ರಕ್ತಸ್ರಾವ: ಹಿಮೋಫಿಲಿಯಾ ಸಮಸ್ಯೆ ಇರುವವರಲ್ಲಿ ಶಸ್ತ್ರಚಿಕಿತ್ಸೆ, ಹಲ್ಲಿಗೆ ಸಂಬಂಧಿಸಿದ ಚಿಕಿತ್ಸೆ, ಸಣ್ಣ ಗಾಯ ಹಾಗೂ ಗೀರು ಉಂಟಾದರೂ ದೀರ್ಘಕಾಲದವರೆಗೆ ರಕ್ತಸ್ರಾವವಿರುತ್ತದೆ.
ಕೀಲು ನೋವು ಮತ್ತು ಊತ: ಕೀಲುಗಳಲ್ಲಿ ಪದೇ ಪದೇ ರಕ್ತಸ್ರಾವ ಉಂಟಾಗುವುದು ನೋವು, ಊತ ಹಾಗೂ ಬಿಗಿ ಹಿಡಿದಂತಹ ಅನುಭವ ಇದರ ರೋಲಕ್ಷಣಗಳಾಗಿರಬಹುದು. ವಿಶೇಷವಾಗಿ ಮೊಣಕಾಲು, ಮೊಣಕೈ ಹಾಗೂ ಕಣಕಾಲಿನಲ್ಲಿ ಈ ತೊಂದರೆಗಳು ಕಾಣಿಸಬಹುದು.
ಮೂಗಿನಲ್ಲಿ ರಕ್ತಸ್ರಾವ: ಆಗಾಗ್ಗೆ ಅಥವಾ ದೀರ್ಘಕಾಲದ ಮೂಗಿನ ರಕ್ತಸ್ರಾವವು ಹಿಮೋಫಿಲಿಯಾದ ಚಿಹ್ನೆಯಾಗಿರಬಹುದು. ವಿಶೇಷವಾಗಿ ಇದು ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತದೆ.
ಮೂತ್ರ ಅಥವಾ ಮಲದಲ್ಲಿ ರಕ್ತ ಕಾಣಿಸುವುದು: ಹಿಮೋಫಿಲಿಯಾ ಹೊಂದಿರುವ ವ್ಯಕ್ತಿಗಳಲ್ಲಿ ಜಠರಗರುಳು ಅಥವಾ ಮೂತ್ರನಾಳದಲ್ಲಿ ರಕ್ತಸ್ರಾವವು ಕಾಣಿಸಬಹುದು. ಇದರಿಂದ ಮಲ, ಮೂತ್ರ ವಿಸರ್ಜನೆಯ ವೇಳೆ ರಕ್ತ ಕಾಣಿಸಬಹುದು.
ಮೂಗೇಟು: ಆಳವಾದ ಮೂಗೇಟಿನಿಂದ ಅತಿಯಾದ ರಕ್ತಸ್ರಾವ ಉಂಟಾದರೆ ಇದು ಹಿಮೋಫಿಲಿಯಾದ ಹಾಲ್‌ಮಾರ್ಕ್ ಅಥವಾ ಪ್ರಮುಖ ಲಕ್ಷಣವಾಗಿದೆ. ಈ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಸುಲಭವಾಗಿ ಅಥವಾ ಆಗಾಗ್ಗೆ ಮೂಗೇಟಿಗೆ ಒಳಗಾಗಬಹುದು.
(ಬರಹ: ಡಾ. ಶಕೀಲಾ ಎನ್, ಉಪ ನಿರ್ದೇಶಕರು, ಕರ್ನಾಟಕದ ರಾಜ್ಯ ರಕ್ತ ಘಟಕ)
ವಿಭಾಗ