logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ, ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ, ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

Reshma HT Kannada

Dec 02, 2024 09:30 AM IST

google News

ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಕಾರಣ

    • ಚಳಿಗಾಲದಲ್ಲಿ ಜಾಸ್ತಿಯಾಗುವ ಸಮಸ್ಯೆಗಳಲ್ಲಿ ಕೀಲುನೋವು ಕೂಡ ಒಂದು. ಶೀತ ವಾತಾವರಣದಲ್ಲಿ ಕೀಲುನೋವು ಹೆಚ್ಚಲು ಕಾರಣಗಳು ಹಲವಿವೆ. ನಿಮ್ಮ ಕೀಲು ನೋವಿಗೆ ಕಾರಣ ಏನು ಎಂಬುದನ್ನು ಅರ್ಥ ಮಾಡಿಕೊಂಡು ಇದಕ್ಕೆ ಸರಿಯಾದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು. ಆ ಮೂಲಕ ಚಳಿಗಾಲದಲ್ಲಿ ಕೀಲುನೋವನ್ನು ತಡೆಯಬಹುದು.
ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಕಾರಣ
ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಕಾರಣ (PC: Canva)

ಚಳಿಯ ವಾತಾವರಣವು ಶೀತ, ಕೆಮ್ಮು, ನೆಗಡಿ ಮಾತ್ರವಲ್ಲ ಕೀಲು, ಮೈಕೈನೋವಿಗೂ ಕಾರಣವಾಗುತ್ತದೆ. ಸಂಧಿವಾತದ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ನೋವು ಹೆಚ್ಚಾಗುತ್ತದೆ. ತಂಪಾಗಿ ಬೀಸುವ ಗಾಳಿ, ತಂಪಾದ ವಾತಾವರಣ ಅವರಿಗೆ ಹಿತ ಎನ್ನಿಸುವುದಿಲ್ಲ. ಚಳಿಗಾಲದಲ್ಲಿ ಕೀಲುನೋವು ಸೇರಿದಂತೆ ದೇಹದ ಇತರ ಭಾಗಗಳಲ್ಲಿ ನೋವು ಉಂಟಾಗಲು ಕಾರಣಗಳು ಹಲವು. ಆ ಕಾರಣಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ, ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ಯೋಚಿಸಬೇಕು.

ಚಳಿಗಾಲದಲ್ಲಿ ಹೆಚ್ಚಾಗುವ ಕೀಲುನೋವಿಗೆ ಕಾರಣವಾಗುವ ಪ್ರಮುಖ ಅಂಶಗಳೇನು, ಅವುಗಳನ್ನು ತಡೆಗಟ್ಟಲು ಇರುವ ಮಾರ್ಗವೇನು ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಲು ಕಾರಣ

ತಾಪಮಾನದಲ್ಲಿನ ಕುಸಿತ, ಬದಲಾದ ಹವಾಮಾನ, ದೈಹಿಕ ಚಟುವಟಿಕೆ ಕಡಿಮೆಯಾಗುವುದು, ವಾತಾವರಣದಲ್ಲಿ ಹೆಚ್ಚಿದ ಶೀತದ ಒತ್ತಡ, ಕಡಿಮೆಯಾದ ರೋಗನಿರೋಧಕ ಶಕ್ತಿ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆಯಿಂದ ಚಳಿಗಾಲದ ಕೀಲು ನೋವು ಉಲ್ಬಣಗೊಳ್ಳುತ್ತದೆ. ಮಿಟವಿನ್ ಡಿ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಚಳಿಗಾಲದಲ್ಲಿ ದಿನಗಳಲ್ಲಿ ವಿಟಮಿನ್ ಡಿ ಕೊರತೆ ನೀಗಿಸಿ ಕೀಲುನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ನೋಡಿ.

ಚಳಿಗಾಲದ ಕೀಲುನೋವಿನ ಸಮಸ್ಯೆಗೆ ಪರಿಹಾರ 

ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು

ಚಳಿಗಾಲದಲ್ಲಿ ದೇಹ ಬೆಚ್ಚಗಿರುವುದರಿಂದ ನಿಮಗೆ ಆರಾಮ ಸಿಗುವುದು ಮಾತ್ರವಲ್ಲ, ಕೀಲುನೋವಿಗೂ ಪರಿಹಾರ ಸಿಗುತ್ತದೆ. ಬೆಚ್ಚಗಿನ ಉಡುಗೆ ಧರಿಸಿ. ನಿಮ್ಮ ಕೈಕಾಲು, ಮೊಣಕಾಲು, ಸೊಂಟದ ಭಾಗಗಳು ಸೇರಿದಂತೆ ಸಂಪೂರ್ಣ ದೇಹವನ್ನು ಬೆಚ್ಚಗಿರಿಸುವುದು ಮುಖ್ಯ. ಏಕೆಂದರೆ ಈ ಪ್ರದೇಶದಲ್ಲಿ ನೋವು ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ, ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಬೆಚ್ಚಗಿನ ದೇಹದಲ್ಲಿ ಪರಿಚಲನೆಯು ಸಾಮಾನ್ಯವಾಗಿರುತ್ತದೆ. ಈ ರೀತಿಯಾಗಿ, ಸಾಕಷ್ಟು ಪೋಷಣೆ ಮತ್ತು ಆಮ್ಲಜನಕವು ದೇಹದ ಎಲ್ಲಾ ಅಂಗಗಳನ್ನು ತಲುಪುತ್ತದೆ. ಇದರಿಂದಾಗಿ ದೇಹವು ಭಾರ ಮತ್ತು ನೋವನ್ನು ಅನುಭವಿಸುವುದಿಲ್ಲ.

ವಿಟಮಿನ್ ಡಿ ಮಟ್ಟ ಕಾಪಾಡಿಕೊಳ್ಳಿ

ವಿಟಮಿನ್ ಡಿ ಕೊರತೆಯು ಸಂಧಿವಾತ ನೋವಿನ ಸಂವೇದನೆಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ, ಜನರು ಬಿಸಿಲಿನಲ್ಲಿ ಹೊರಾಂಗಣದಲ್ಲಿ ಕಡಿಮೆ ಸಮಯವನ್ನು ಕಳೆಯುವುದರಿಂದ ಅಗತ್ಯವಾದ ವಿಟಮಿನ್ ಡಿ ವಿಟಮಿನ್ ಮಟ್ಟವು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕತ್ತಲಾಗುವುದು ಬೇಗ. ಇದರಿಂದ ನಿಮ್ಮ ದೇಹವು ವಿಟಮಿನ್ ಡಿ ಕೊರತೆಯನ್ನು ಎದುರಿಸಬಹುದು. ಅಂತಹ ಸಂದರ್ಭಗಳಲ್ಲಿ, ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಿ ಮತ್ತು ನೀವು ಪೂರಕಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು. ಆದಾಗ್ಯೂ, ಯಾವುದೇ ವಿಟಮಿನ್‌ ಪೂರಕಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯ.

ಆ್ಯಂಟಿಆಕ್ಸಿಡೆಂಟ್ ಅಂಶ ಇರುವ ಆಹಾರಗಳ ಸೇವನೆ

ಚಳಿಗಾಲದಲ್ಲಿ ಕೀಲು ನೋವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಮಾಡಬೇಕಾಗಿರುವುದು ಆ್ಯಂಟಿ ಆಕ್ಸಿಡೆಂಟ್ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದು. ಆವಕಾಡೊ, ಡ್ರೈಫೂಟ್ಸ್‌, ನಟ್ಸ್‌ ಮತ್ತು ಕೊಬ್ಬಿನ ಮೀನುಗಳಂತಹ ಆಹಾರಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಮೀನು ಅಥವಾ ಕ್ರಿಲ್ ಎಣ್ಣೆಯ ಪೂರಕಗಳು ಕೀಲು ನೋವನ್ನು ನಿವಾರಿಸಲು ಸಹ ಸಹಾಯ ಮಾಡುತ್ತವೆ. ಕೆಳಗಿನ ಆಹಾರಗಳು ಇದಕ್ಕೆ ಪ್ರಯೋಜನಕಾರಿಯಾಗಬಹುದು: ಅರಿಶಿನ, ಬೆಳ್ಳುಳ್ಳಿ, ಈರುಳ್ಳಿ, ಗ್ರೀನ್ ಟೀ, ದ್ರಾಕ್ಷಿ, ಬೆರ್ರಿಹಣ್ಣುಗಳು, ಪ್ರೊಬಯೋಟಿಕ್ ಅಂಶ ಇರುವ ಮೊಸರಿನಂತಹ ಆಹಾರಗಳು, ಇದರೊಂದಿಗೆ ಸೊಪ್ಪು ತರಕಾರಿಗಳ ಸೇವನೆಗೂ ಒತ್ತು ನೀಡಿ.

ವಾಕಿಂಗ್‌

ನಿಯಮಿತ ವಾಕಿಂಗ್ ನಿಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಚಲಿಸುವಂತೆ ಮಾಡುತ್ತದೆ. ವಾಕಿಂಗ್ ಮಾಡುವುದರಿಂದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಸ್ನಾಯುಗಳನ್ನು ಬಲಪಡಿಸುವುದರಿಂದ ನಿಮ್ಮ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಚಳಿಗಾಲದಲ್ಲಿ, ಹೊರಗಿನ ಚಳಿಯು ನಡೆಯಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಮನೆಯೊಳಗೆ ಚುರುಕಾಗಿ ನಡೆಯಿರಿ. ವೇಗದ ನಡಿಗೆಯಿಂದ ಮೈ ಬೆವರುತ್ತದೆ ಹಾಗೂ ದೇಹವು ಶಾಖವನ್ನು ಉತ್ಪಾದಿಸುತ್ತದೆ. ಇದು ಕೂಡ ನೋವು ನಿವಾರಿಸಲು ಸಹಕಾರಿ.

ಹೈಡ್ರೇಟ್ ಆಗಿರುವುದು

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ನೀರು ಕುಡಿಯದೇ ಇರಬೇಡಿ. ಶೀತ ವಾತಾವರಣದಲ್ಲಿ ಹೈಡ್ರೇಟ್ ಆಗಿರುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ದೇಹವು ನಿರ್ಜಲೀಕರಣಗೊಂಡಾಗ ಕೀಲುಗಳು ಮತ್ತು ಸ್ನಾಯುಗಳಲ್ಲಿನ ನೋವಿನ ಸಂವೇದನೆ ಹೆಚ್ಚಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮನ್ನು ಹೈಡ್ರೀಕರಿಸಲು ಪ್ರಯತ್ನಿಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ