logo
ಕನ್ನಡ ಸುದ್ದಿ  /  ಜೀವನಶೈಲಿ  /  ಹಳದಿ ಹಲ್ಲಿನ ಸಮಸ್ಯೆಯಿಂದ ಮುಜುಗರ ಆಗ್ತಿದ್ಯಾ, ಕೆಲವೇ ದಿನಗಳಲ್ಲಿ ಹಲ್ಲು ಹಾಲು ಬಿಳುಪಿನ ಬಣ್ಣಕ್ಕೆ ತಿರುಗಲು ಈ ಮನೆಮದ್ದು ಟ್ರೈ ಮಾಡಿ

ಹಳದಿ ಹಲ್ಲಿನ ಸಮಸ್ಯೆಯಿಂದ ಮುಜುಗರ ಆಗ್ತಿದ್ಯಾ, ಕೆಲವೇ ದಿನಗಳಲ್ಲಿ ಹಲ್ಲು ಹಾಲು ಬಿಳುಪಿನ ಬಣ್ಣಕ್ಕೆ ತಿರುಗಲು ಈ ಮನೆಮದ್ದು ಟ್ರೈ ಮಾಡಿ

Reshma HT Kannada

Oct 10, 2024 07:11 PM IST

google News

ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ

    • ಕೆಲವರ ಹಲ್ಲು ಹಾಲಿನಂತೆ ಬಿಳುಪಾಗಿದ್ರೆ ಇನ್ನೂ ಕೆಲವರದ್ದು ಹಳದಿಗಟ್ಟಿರುತ್ತದೆ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿದ್ರೂ, ಮೌತ್ ಫ್ರೆಶನರ್ ಬಳಸಿದ್ರೂ ಹಲ್ಲಿನ ಬಣ್ಣ ಬದಲಾಗುತ್ತಿಲ್ಲ ಏನಪ್ಪಾ ಮಾಡೋದು ಅಂತ ಚಿಂತೆ ಮಾಡ್ಬೇಡಿ, ಈ ಮನೆಮದ್ದು ಟ್ರೈ ಮಾಡಿ. ನಿಮ್ಮ ಹಲ್ಲುಗಳು ಹಾಲು ಬಿಳುಪಿನ ನಕ್ಷತ್ರಗಳಂತೆ ಪಳಪಳ ಹೊಳೆಯುತ್ತವೆ.
ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ
ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ (PC: Canva)

ನಮ್ಮಲ್ಲಿ ಹಲವರಿಗೆ ಹಳದಿ ಹಲ್ಲಿನ ಸಮಸ್ಯೆ ಇದೆ. ಸರಿಯಾಗಿ ಬ್ರಷ್ ಮಾಡದೇ ಇರುವುದು ಮಾತ್ರವಲ್ಲ ಇನ್ನೂ ಕೆಲವು ಕಾರಣಗಳಿಂದ ಹಲ್ಲು ಹಳದಿಯಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇದ್ದರೂ ಕೂಡ ಹಲ್ಲು ಅರಿಸಿನ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ಸೋಡಿಯಂ ಕ್ಲೋರೈಡ್ ಅಂಶ ಹೆಚ್ಚಿರುವ ನೀರಿನ ಬಳಕೆಯೂ ಕೂಡ ಹಳದಿ ಹಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ.

ಹಲ್ಲು ಹಳದಿಯಾದ್ರೆ ಅಸಹ್ಯ ಕಾಣಿಸುತ್ತದೆ. ಇದರಿಂದ ನಗುವುದಕ್ಕೂ ಹಿಂದೆ ಮುಂದೆ ನೋಡಬೇಕಾಗುತ್ತದೆ. ಆ ಕಾರಣಕ್ಕೆ ದಿನಕ್ಕೆರಡು ಬಾರಿ ಬ್ರಷ್ ಮಾಡುವುದು, ಮೌತ್ ಫ್ರೆಶನರ್ ಬಳಸುವುದು ಮುಂತಾದ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಈ ಯಾವುದರಿಂದಲೂ ಹಲ್ಲಿನ ಬಣ್ಣ ಬಿಳಿಯಾಗುವುದಿಲ್ಲ. ಹಾಗಂತ ನೀವು ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಕೆಲವು ಸರಳ ಮನೆಮದ್ದುಗಳನ್ನ ಬಳಸಿದ್ರೆ ಸಾಕು ಹಲ್ಲಿನ ಬಣ್ಣ ಹಾಲಿನಂತೆ ಬಿಳುಪಾಗುತ್ತದೆ.

ಹಳದಿ ಹಲ್ಲಿನ ಸಮಸ್ಯೆ ನಿವಾರಿಸುವ ಮನೆಮದ್ದುಗಳು

ಆಯಿಲ್ ಪುಲ್ಲಿಂಗ್‌: ಆಯಿಲ್ ಪುಲ್ಲಿಂಗ್ ವಿಧಾನದಿಂದ ಹಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರಿಂದ ಹಲ್ಲು ಹಾಗೂ ವಸಡಿನಲ್ಲಿರುವ ಕೊಳೆ, ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಆಯಿಲ್ ಪುಲ್ಲಿಂಗ್ ಎಂದರೆ ಎಣ್ಣೆಯಿಂದ ಬಾಯಿಯನ್ನು ಸ್ವಚ್ಛ ಮಾಡುವುದು ಎಂದರ್ಥ. ಕೆಲವು ಹನಿ ಎಣ್ಣೆಯನ್ನು ಬಾಯಿಗೆ ಹಾಕಿ, ಬಾಯಿ ಮುಕ್ಕಳಿಸುವ ವಿಧಾನವು ಹಲ್ಲು ಬಿಳಿಯಾಗಲು ಸಹಾಯ ಮಾಡುತ್ತದೆ. ಅಮೆರಿಕನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ ಆಯಿಲ್ ಪುಲ್ಲಿಂಗ್ ವಿಧಾನವು ದಂತಕುಳಿಗಳನ್ನು ಕಡಿಮೆ ಮಾಡುತ್ತದೆ. ಹಲ್ಲುಗಳನ್ನು ಬಿಳಿ ಮಾಡಿ, ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ನೀವು ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ಎಳ್ಳೆಣ್ಣೆ ಬಳಸಬಹುದು.

ಬೇಕಿಂಗ್ ಸೋಡಾ ಬಳಕೆ: ಬೇಕಿಂಗ್ ಸೋಡಾವು ಕ್ಲೀನಿಂಗ್ ಏಜೆಂಟ್ ಎನ್ನುವುದು ಹಲವರಿಗೆ ತಿಳಿದಿದೆ. ಅಡುಗೆ ಸೋಡಾದ ಬಳಕೆಯು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಫ್ಲೇಕ್ ಅನ್ನು ಕಡಿಮೆ ಮಾಡುತ್ತದೆ. ಹಲ್ಲಿನ ಮೇಲಿನ ಕೊಳೆಯನ್ನು ನಿವಾರಿಸುತ್ತದೆ. ಬ್ರಷ್ ಮಾಡುವಾಗ ಟೂತ್‌ಪೇ‌ಸ್ಟ್ ಜೊತೆ ಬೇಕಿಂಗ್ ಸೋಡಾ ಬೆರೆಸಿ ನಂತರ ಹಲ್ಲುಜ್ಜಿ. ಇದರಿಂದ ಹಲ್ಲುಗಳು ಪಳಪಳ ಹೊಳೆಯುತ್ತವೆ. ಆದರೆ ಬೇಕಿಂಗ್ ಸೋಡಾ ಅತಿಯಾಗಿ ಬಳಸಿದ್ರೆ ಬಾಯಿ ಸುಟ್ಟು ಹೋಗಬಹುದು ಎಚ್ಚರ.

ಕಿತ್ತಳೆ ಸಿಪ್ಪೆ: ಕಿತ್ತಳೆ ಸಿಪ್ಪೆಯಲ್ಲಿ ಸಿಟ್ರಸ್ ಅಂಶವಿದೆ. ಇದು ನೈಸರ್ಗಿಕವಾಗಿ ಹಲ್ಲನ್ನು ಸ್ವಚ್ಛ ಮಾಡುತ್ತದೆ. ಅಲ್ಲದೇ ಸಿಟ್ರಸ್ ಅಂಶವು ಹಳದಿ ಹಲ್ಲನ್ನು ಸ್ವಚ್ಛ ಮಾಡಿ ಬಿಳಿಯಾಗಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ನೇರವಾಗಿ ಹಲ್ಲಿನ ಮೇಲೆ ಉಜ್ಜಬೇಕು. ಈ ರೀತಿ ಒಂದಿಷ್ಟು ದಿನಗಳವರೆಗೆ ಮಾಡುವುದರಿಂದ ಹಲ್ಲಿನ ಆರೋಗ್ಯ ಸುಧಾರಿಸುತ್ತದೆ.

ಹೈಡ್ರೋಜನ್ ಪೆರಾಕ್ಸೈಡ್: ಹೈಡ್ರೋಜನ್ ಪೆರಾಕ್ಸೈಡ್ ಕೂಡ ಉತ್ತಮ ಕ್ಲೀನಿಂಗ್ ಏಜೆಂಟ್‌. ಇದು ಹಲ್ಲಿನ ಮೇಲಿರುವ ಫ್ಲೇಕ್ಸ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ದಿನಕ್ಕೆ ಎರಡು ಬಾರಿ ಪೇಸ್ಟ್ ಜೊತೆ ಹೈಡ್ರೋಜೆನ್ ಪೆರಾಕ್ಸೈಡ್ ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ. ಆದರೆ ಇದರ ನಿರಂತರ ಬಳಕೆಯು ಹಲ್ಲುಗಳನ್ನು ಸೂಕ್ಷ್ಮವಾಗಿಸುತ್ತದೆ. ಈಗಾಗಲೇ ಹಲ್ಲು, ವಸಡಿನ ಸಮಸ್ಯೆ ಇರುವವರು ಇದನ್ನು ಬಳಸದೇ ಇರುವುದು ಉತ್ತಮ.

ಆಹಾರ ಕ್ರಮದಲ್ಲಿ ಬದಲಾವಣೆ: ಕೆಲವೊಂದು ಆಹಾರಗಳು ಕೂಡ ಹಲ್ಲಿನ ಬಣ್ಣ ಹಳದಿಗಟ್ಟಲು ಕಾರಣವಾಗುತ್ತವೆ. ಅಂತಹ ಆಹಾರಗಳನ್ನು ಗುರುತಿಸಿ, ಅವುಗಳ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ವೈನ್ ಹಾಗೂ ಚಹಾದಂತಹ ಟ್ಯಾನಿನ್‌ಗಳನ್ನು ಹೊಂದಿರುವ ಆಹಾರಗಳು ಮತ್ತು ಪಾನೀಯಗಳು ಹಲ್ಲಿನ ಮೇಲೆ ಹಳದಿ ಕಲೆ ಅಥವಾ ಪಾಚಿ ಕಟ್ಟಿದಂತಾಗಲು ಕಾರಣವಾಗಬಹುದು. ಧೂಮಪಾನ ಅಥವಾ ತಂಬಾಕು ಉತ್ಪನ್ನಗಳನ್ನು ತ್ಯಜಿಸುವುದರಿಂದ ನಿಕೋಟಿನ್ ಕಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದು ದಂತಕ್ಷಯ ಮತ್ತು ವಸಡು ರೋಗವನ್ನು ತಡೆಗಟ್ಟಬಹುದು, ಇವೆರಡೂ ದಂತಕವಚವನ್ನು ಹಾನಿಗೊಳಿಸಬಹುದು ಮತ್ತು ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಇದನ್ನು ತ್ಯಜಿಸುವುದು ಉತ್ತಮ.

ನಾರಿನಾಂಶ ಇರುವ ಹಣ್ಣು, ತರಕಾರಿಗಳನ್ನು ಜಗಿಯುವುದು: ನಾರಿನಾಂಶ ಇರುವ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಅಗಿಯುವುದು ಬಾಯಿಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸಲು ಮತ್ತು ಹಲ್ಲುಗಳ ಮೇಲಿನ ದಂತಕವಚವನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಬೀನ್ಸ್ ಅಥವಾ ಪಾಲಕದಂತಹ ಎಲೆಗಳ ಸೊಪ್ಪುಗಳು ಬಾಯಿಯನ್ನು ಹೆಚ್ಚು ಲಾಲಾರಸವನ್ನು ಉತ್ಪಾದಿಸಲು ಪ್ರಚೋದಿಸುತ್ತದೆ, ಇದು ಆಮ್ಲದಿಂದ ಬಾಯಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಕಬ್ಬನ್ನು ಜಗಿಯುವುದರಿಂದ ಕೂಡ ಹಲ್ಲು ಬಿಳಿಯಾಗುತ್ತದೆ ಎಂದು ಹೇಳಲಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ