Fan Cleaning: ಬೇಸಿಗೆ ಬಂತು ಫ್ಯಾನ್ ಕ್ಲೀನ್ ಮಾಡೋದು ಹೇಗೆ ಅನ್ನೋ ಚಿಂತೆ ಇದ್ರೆ, ನಿಮಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್
Mar 10, 2024 07:00 AM IST
ಬೇಸಿಗೆ ಬಂತು ಫ್ಯಾನ್ ಕ್ಲೀನ್ ಮಾಡೋದು ಹೇಗೆ? ನಿಮಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್
- ಬಿಸಿಲ ಧಗೆ ಜೋರಾಗಿದೆ. ಮನೆಯ ಒಳಗೆ ಫ್ಯಾನ್ ಇಲ್ಲದೆ ಕುಳಿತುಕೊಳ್ಳುವುದು ಕಷ್ಟ. ಆದರೆ ಫ್ಯಾನ್ ಮೇಲಿನ ಧೂಳು ಅಲರ್ಜಿ ಉಂಟು ಮಾಡುತ್ತದೆ. ಅಲ್ಲದೇ ಫ್ಯಾನ್ ಮೇಲೆ ಅಲ್ಲಲ್ಲಿ ಕಲೆ, ಜಿಡ್ಡು ಕೂಡ ಅಂಟಿ ಹಳೆಯದರಂತೆ ಕಾಣಿಸಬಹುದು. ಫ್ಯಾನ್ ರೆಕ್ಕೆಗಳು ಹೊಸರಂತೆ ಪಳ ಪಳ ಹೊಳೆಯಬೇಕು ಎಂದರೆ ಹೀಗೆ ಸ್ವಚ್ಛ ಮಾಡಿ.
ಬೇಸಿಗೆ ಬಂದಾಕ್ಷಣ ಪ್ರತಿಯೊಬ್ಬರಿಗೂ ಫ್ಯಾನ್ ಬೇಕೇ ಬೇಕು. ಮನೆಯ ಒಳಗೆ ಫ್ಯಾನ್ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ದೂಳಿನ ಕಾರಣದಿಂದ ಅಲರ್ಜಿ, ಕೆಮ್ಮಿನಂತಹ ಸಮಸ್ಯೆಗಳು ಎದುರಾಗುತ್ತದೆ. ಅದಕ್ಕಾಗಿ ಆಗಾಗ ಫ್ಯಾನ್ ಕ್ಲೀನ್ ಮಾಡಬೇಕು. ಸೀಲಿಂಗ್ ಫ್ಯಾನ್‌ಗಳನ್ನು ಸ್ವಚ್ಛ ಮಾಡುವುದು ಒಂಥರಾ ಸವಾಲು. ಇದರಲ್ಲಿ ಹಿಡಿದಿರುವ ದೂಳನ್ನು ಸುಲಭವಾಗಿ ತೆಗೆಯುವುದು ಕಷ್ಟ. ಆದ್ರೆ ಚಿಂತೆ ಮಾಡಬೇಡಿ, ಹೆಚ್ಚು ಕಷ್ಟಪಡದೆ ಸೀಲಿಂಗ್ ಫ್ಯಾನ್ ಸ್ವಚ್ಛ ಮಾಡಲು ನಾವು ನಿಮಗೆ ಐಡಿಯಾ ಹೇಳಿ ಕೊಡ್ತೀವಿ. ಇದರಿಂದ ಫ್ಯಾನ್ ಮೇಲಿನ ದೂಳು, ಕಲೆ ಎಲ್ಲವೂ ಸ್ವಚ್ಛವಾಗುತ್ತವೆ. ಅಡುಗೆಮನೆಯಲ್ಲೇ ಸಿಗುವ ಈ ವಸ್ತುಗಳನ್ನು ಬಳಸಿ ನಿಮ್ಮ ಮನೆಯ ಫ್ಯಾನ್ ಅನ್ನು ಪಳಪಳ ಹೊಳೆಯುವಂತೆ ಮಾಡಬಹುದು.
ವಿನೆಗರ್ ಬೇಕಿಂಗ್ ಸೋಡಾ
ಯಾವುದೇ ವಸ್ತುವನ್ನು ಸ್ವಚ್ಛ ಮಾಡುವ ವಿಚಾರ ಬಂದಾಗ ವಿನೆಗರ್ ಹಾಗೂ ಅಡಿಗೆ ಸೋಡಾ ಮಾಂತ್ರಿಕ ಪದಾರ್ಥಗಳಂತೆ ಕಕೆಲಸ ಮಾಡುತ್ತವೆ. ಇವನ್ನು ಬಳಸುವುದರಿಂದ ಸುಲಭವಾಗಿ ಫ್ಯಾನ್ ಸ್ವಚ್ಛ ಮಾಡಬಹುದು. ಕೊಳಕು, ದೂಳಿನ ಕಣಗಳನ್ನು ಇದು ಸುಲಭವಾಗಿ ತೆಗೆದುಹಾಕುತ್ತದೆ.
ಅಡುಗೆ ಸೋಡಾ ಹಾಗೂ ವಿನೆಗರ್ ಅನ್ನು ಮಿಶ್ರಣ ಮಾಡಿ, ಅದನ್ನು ಸೀಲಿಂಗ್ ಫ್ಯಾನ್‌ನ ರೆಕ್ಕೆಗಳ ಮೇಲೆ ಬಟ್ಟೆಯ ಸಹಾಯದಿಂದ ಉಜ್ಜಿ. ಇದನ್ನು ಒಂದಿಷ್ಟು ಹೊತ್ತು ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. ನಿಮ್ಮ ಫ್ಯಾನ್ ರೆಕ್ಕೆಗಳು ಪಳ ಪಳ ಹೊಳೆಯುತ್ತವೆ. ಇದನ್ನು ಸ್ವಚ್ಛ ಮಾಡಲು ಟೂತ್‌ಬ್ರಷ್ ಕೂಡ ಬಳಸಬಹುದು.
ವಿನೆಗರ್ ಅಥವಾ ಡಿಶ್‌ವಾಶರ್
ಬೇಕಿಂಗ್ ಸೋಡಾ ಹಾಗೂ ಡಿಶ್ ವಾಶರ್ ಮಿಶ್ರಣದಿಂದ ಸೀಲಿಂಗ್ ಫ್ಯಾನ್ ಅನ್ನು ಕೊಂಚವು ದೂಳು, ಕಲೆಯಿಲ್ಲದಂತೆ ಸ್ವಚ್ಛ ಮಾಡಬಹುದು. ಸ್ಪ್ರೇ ಬಾಟಲ್‌ನಲ್ಲಿ ವಿನೆಗರ್, ನೀರು ಮಿಶ್ರಣ ಮಾಡಿ. ಇದಕ್ಕೆ 3 ರಿಂದ 4 ಹನಿ ಡಿಶ್ ವಾಶರ್ ಸೇರಿಸಿ. ಚೆನ್ನಾಗಿ ಅಲುಗಾಡಿಸಿ. ಮೊದಲು ಬಟ್ಟೆ ಅಥವಾ ಬ್ರಷ್ ಸಹಾಯದಿಂದ ಸೀಲಿಂಗ್ ಫ್ಯಾನ್ ರೆಕ್ಕೆಯ ಮೇಲಿರುವ ದೂಳು ಸ್ವಚ್ಛ ಮಾಡಿ. ನಂತರ ಮಿಶ್ರಣ ಮಾಡಿಟ್ಟುಕೊಂಡ ನೀರನ್ನು ಫ್ಯಾನ್ ರೆಕ್ಕೆಗಳ ಮೇಲೆ ಸ್ಪ್ರೇ ಮಾಡಿ. ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. ಇದರಿಂದ ನಿಮ್ಮ ಫ್ಯಾನ್‌ನಲ್ಲಿ ಎಷ್ಟೇ ದೂಳು ಹಿಡಿದಿದ್ದರೂ ಅದೆಲ್ಲವೂ ಸ್ವಚ್ಛವಾಗಿ ಹೊಸರಂತೆ ಕಾಣುತ್ತದೆ.
ವಿನೆಗರ್ ಮತ್ತು ನೀರು
ವಿನೆಗರ್ ಹಾಗೂ ನೀರಿನ ಮಿಶ್ರಣವು ಫ್ಯಾನ್ ಕ್ಲೀನ್ ಮಾಡಲು ಹೇಳಿ ಮಾಡಿಸಿದ್ದು. ವಿನೆಗರ್ ಹಾಗೂ ನೀರನ್ನು ಮಿಶ್ರಣ ಮಾಡಿ ಆ ನೀರಿನಲ್ಲಿ ಬಟ್ಟೆಯನ್ನು ಅದ್ದಿ, ಅದರಿಂದ ಫ್ಯಾನ್ ಒರೆಸಿ. ಈಗ ನಿಮ್ಮ ಫ್ಯಾನ್ ಪಳ ಪಳ ಹೊಳೆಯುವುದರಲ್ಲಿ ಎರಡು ಮಾತಿಲ್ಲ.
ಫ್ಯಾನ್ ಗ್ಲೋಬ್ ಅನ್ನು ಹೀಗೆ ಸ್ವಚ್ಛ ಮಾಡಿ
ಫ್ಯಾನ್ ಸ್ವಚ್ಛ ಮಾಡುವುದು ಎಂದರೆ ಬರೀ ರೆಕ್ಕೆಗಳನ್ನು ಮಾತ್ರ ಸ್ವಚ್ಛ ಮಾಡುವುದಲ್ಲ. ಬ್ಲೇಡ್‌ಗಳ ಜೊತೆಗೆ ಗ್ಲೋಬ್ ಅನ್ನು ಕೂಡ ಸ್ವಚ್ಛ ಮಾಡಬೇಕು. ಅದಕ್ಕಾಗಿ ನೀರು ಹಾಗೂ ಡಿಶ್ ವಾಶರ್ ಹನಿಗಳನ್ನು ಮಿಶ್ರಣ ಮಾಡಿ. ಒಣ ಬಟ್ಟೆಯಿಂದ ಗ್ಲೋಬ್ ಅನ್ನು ಒರೆಸಿ. ನಂತರ ಈ ಮಿಶ್ರಣವನ್ನು ಸಿಂಪಡಿಸಿ ಅಥವಾ ಈ ನೀರಿನಲ್ಲಿ ಸ್ವಚ್ಛವಾಗಿರುವ ಬಟ್ಟೆ ಅದ್ದಿ ಅದರಿಂದ ಫ್ಯಾನ್ ಗ್ಲೋಬ್ ಒರೆಸಿ.
ಬೇಸಿಗೆಯಲ್ಲಿ ಫ್ಯಾನ್ ಕ್ಲೀನ್ ಮಾಡುವುದು ಅವಶ್ಯ ಸರಿ, ಆದರೆ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬೇಡಿ. ಕರೆಂಟ್ ಹೋಗಿದ್ದು ತಿಳಿಯದೇ ಸ್ವಿಚ್ ಆನ್ ಮಾಡಿಕೊಂಡು ಫ್ಯಾನ್ ಒರೆಸುವುದು, ತುದಿಗಾಲಿನಲ್ಲಿ ನಿಂತು ಫ್ಯಾನ್ ಒರೆಸುವುದು ಇಂತಹದ್ದನ್ನೆಲ್ಲಾ ಮಾಡಬೇಡಿ. ಇದರಿಂದ ಅಪಾಯ ಖಚಿತ.
(This copy first appeared in Hindustan Times Kannada website. To read more like this please logon to kannada.hindustantimes.com)