Summer Tips: ಮನೆಗೆ ಮೆಟಲ್ ಶೀಟ್ ಹಾಕಿಸಿರುವುದರಿಂದ ಸೆಖೆ ಜಾಸ್ತಿ ಆಗಿದ್ಯಾ; ಮನೆಯೊಳಗೆ ತಂಪಿರಲು ಹೀಗೆ ಮಾಡಿ
Mar 17, 2024 10:15 AM IST
ಮನೆಗೆ ಮೆಟಲ್ ಶೀಟ್ ಹಾಕಿಸಿರುವುದರಿಂದ ಸೆಖೆ ಜಾಸ್ತಿ ಆಗಿದ್ಯಾ; ಮನೆಯೊಳಗೆ ತಂಪಿರಲು ಹೀಗೆ ಮಾಡಿ
- ಬೇಸಿಗೆಯ ದಿನಗಳಲ್ಲಿ ಮನೆಯ ಹೊರಗಷ್ಟೇ ಅಲ್ಲ, ಒಳಗೂ ಸಹ ಅಷ್ಟೇ ಬಿಸಿಯಿರುತ್ತದೆ. ಅದರಲ್ಲೂ ಮೆಟಲ್ ಶೀಟ್ ಹಾಕಿಸಿದ್ದರಂತೂ ಬಿಸಿ ಇನ್ನಷ್ಟು ಹೆಚ್ಚು. ಮನೆಯ ಮೇಲೆ ಶೀಟ್ ಹಾಕಿಸಿದ್ದರೆ, ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಿಕೊಳ್ಳುವುದು ದೊಡ್ಡ ಸವಾಲು. ಮೆಟಲ್ ಶೀಟ್ ಇರುವ ಕಟ್ಟಡದ ಒಳಗೆ ತಂಪಾಗಿರಿಸಿಕೊಳ್ಳಲು ಸಹಾಯ ಮಾಡುವ 5 ಸಲಹೆಗಳಿವು.
ಬೇಸಿಗೆ ಬಂತೆಂದರೆ ಸಾಕು, ಭಾರತದಲ್ಲಿ ಬಿಸಿಲೋ ಬಿಸಿಲು. ಮನೆಯ ಹೊರಗೆ ಒಂದು ರೀತಿಯ ಬಿಸಿಲಾದರೆ, ಮನೆಯ ಒಳಗೆ ಬಿಸಿಲಿನ ತಾಪ ಇನ್ನಷ್ಟು ಹೆಚ್ಚುತ್ತದೆ. ಮೊದಲೆಲ್ಲಾ ಹೆಂಚು, ಮರ ಉಪಯೋಗಿಸಿ ಕಟ್ಟಿದ ಮನೆ, ಕಟ್ಟಡಗಳಿದ್ದವು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಅವುಗಳ ಜಾಗವನ್ನು ಮೆಟಲ್ ಶೀಟ್‌ಗಳು, ತಾರಸಿಗಳು ಆವರಿಸಿಕೊಂಡಿವೆ. ಮನೆ ಮತ್ತು ವಾಣಿಜ್ಯ ಮಳಿಗೆಗಳಿಗೆ ಮೆಟಲ್‌ನ ಮೇಲ್ಛಾವಣಿಗಳನ್ನು ಅಂದರೆ ಶೀಟ್‌ಗಳನ್ನು ಹಾಕುತ್ತಿದ್ದಾರೆ. ಏಕೆಂದರೆ ಅವುಗಳನ್ನು ಬಳಸಿ ಅಗ್ಗದ ದರದಲ್ಲಿ ಕಟ್ಟಡಗಳನ್ನು ನಿರ್ಮಿಸುವುದರ ಜೊತೆಗೆ ಬಾಳಿಕೆಯೂ ಬರುತ್ತದೆ ಎಂದು. ಅವುಗಳ ನಿರ್ವಹಣೆಯೂ ಸುಲಭ. ಮಿಂಚು, ಬೆಂಕಿ ನಿರೋಧಕವಾಗಿದೆ. ಹೀಗೆ ಹಲವಾರು ಪ್ರಯೋಜನಗಳಿದ್ದರೂ ಬೇಸಿಗೆಯಲ್ಲಿ ಇದರಿಂದ ಸಮಸ್ಯೆಗಳು ಉದ್ಭವವಾಗುತ್ತದೆ. ಕಾರಣ ತಾಪಮಾನ ಏರಿದಂತೆ ಮೆಟಲ್ ಬಿಸಿಯಾಗುತ್ತಾ ಹೋಗುತ್ತದೆ. ಇದರಿಂದ ಕಟ್ಟಡದ ಒಳಗೆ ಬಿಸಿಲಿನ ಝಳ ಹೆಚ್ಚುತ್ತದೆ. ನೀವೂ ನಿಮ್ಮ ಮನೆ ಅಥವಾ ವಾಣಿಜ್ಯ ಕಟ್ಟಡಗಳಿಗೆ ಮೆಟಲ್ ಮೇಲ್ಛಾವಣಿ ಮಾಡಿಸಿಕೊಂಡು ಈ ದಿನಗಳಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ. ಮೇಲ್ಛಾವಣಿಯಿಂದ ಬರುವ ಶಾಖವನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಪರಿಹಾರಗಳನ್ನು ನೀಡಿದ್ದೇವೆ. ಅದನ್ನು ಪಾಲಿಸಿದರೆ ಬಿಸಿಲಿನ ಶಾಖದಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು.
ಇನ್ಸುಲೇಷನ್ ಬಳಸಿ
ಮೆಟಲ್ ಛಾವಣಿಯಿದ್ದಾಗ ಶಾಖವನ್ನು ಕಡಿಮೆ ಮಾಡಿಕೊಳ್ಳಲು ಇರುವ ಮೊದಲ ಸುಲಭದ ಉಪಾಯವೆಂದರೆ ಇನ್ಸುಲೇಷನ್ ಬಳಸುವುದು. ಇದು ಬಿಸಿಲಿನ ದಿನಗಳಲ್ಲಿ ಸಂಭವಿಸುವ ಶಾಖವನ್ನು ತಡೆಯುತ್ತದೆ. ನೀವು ನಿಮ್ಮ ಕಟ್ಟಡಗಳಿಗೆ ಈಗಾಗಲೇ ಮೆಟಲ್ ಛಾವಣಿಗಳನ್ನು ಅಳವಡಿಸಿಕೊಂಡಿದ್ದರೆ, ಸ್ಪ್ರೇ ಫೋಮ್‌ಗಳು ಸಿಗುತ್ತವೆ. ಅವುಗಳನ್ನು ಬಳಸಿ. ಇಲ್ಲವೇ ಹೀಟ್ ಇನ್ಸುಲೇಷನ್ ಶೀಟ್‌ಗಳು ಕೂಡಾ ಉತ್ತಮವಾಗಿದೆ.
ಗಾಢ ಬಣ್ಣವನ್ನು ಆರಿಸಿಕೊಳ್ಳಬೇಡಿ
ಬಣ್ಣ ಇರದ ಮೆಟಲ್ ಶೀಟ್‌ಗಳು ನೈಸರ್ಗಿಕವಾಗಿಯೇ ಬೆಳಕನ್ನು ಪ್ರತಿಬಿಂಬಿಸುತ್ತವೆ. ಅವು ಕಟ್ಟಡದ ಒಳಗೆ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಬಣ್ಣ ಹಚ್ಚಿರದ ಮೇಲ್ಛಾವಣಿಗಳಲ್ಲಿ ಶಾಖ ಇನ್ನೂ ಹೆಚ್ಚು. ಅದನ್ನು ಕಡಿಮೆ ಮಾಡಲು ಪೇಂಟ್ ಹಚ್ಚಿಸಿ. ಮೇಲ್ಛಾವಣಿ ಅಳವಡಿಸುವಾಗಲೇ ಪೇಂಟ್ ಮಾಡಿದ ಶೀಟ್ ಆರಿಸಿಕೊಳ್ಳಬಹುದು. ಆದರೆ ಗಾಢ ಬಣ್ಣದ್ದನ್ನು ಆರಿಸಬೇಡಿ. ಅವು ಸೂರ್ಯನ ಶಾಖವನ್ನು ಹೀರಿಕೊಂಡು ಬಿಸಿ ಹೆಚ್ಚಾಗಿಸುತ್ತದೆ. ಹಾಗಾಗಿ ತಿಳಿ ಬಣ್ಣದ ಶೀಟ್ ಆರಿಸಿಕೊಳ್ಳಿ.
ದೊಡ್ಡ ಕಿಟಕಿ ಮತ್ತು ವೆಂಟಿಲೇಷನ್ ಇರಿಸಿ
ಮನೆ ಅಥವಾ ಕಟ್ಟಡದ ಸಾಕಷ್ಟು ಕಿಟಕಿ, ವೆಂಟಿಲೇಷನ್‌ಗಳಿಲ್ಲದಿದ್ದರೆ ಮನೆಯೊಳಗೆ ಶಾಖ ಅಥವಾ ಉಷ್ಣತೆ ಹೆಚ್ಚಾಗುತ್ತದೆ. ಸರಾಗವಾಗಿ ಗಾಳಿಯಾಡಿದಿರುವುದೇ ಇದಕ್ಕೆ ಕಾರಣ. ಹಾಗಾಗಿ ಸಾಕಷ್ಟು ದೊಡ್ಡ ಕಿಟಕಿಗಳನ್ನು ಅಳವಡಿಸಿಕೊಳ್ಳಿ. ಪ್ರತಿ ಕೊಠಡಿಗೂ ವೆಂಟಿಲೇಷನ್ ವ್ಯವಸ್ಥೆಯಿರಲಿ. ನಿಮ್ಮದು ವಾಣಿಜ್ಯ ಕಟ್ಟಡಗಳಿದ್ದರೆ ಅದಕ್ಕೆ ಗಾಳಿಯಾಡುವ ಟರ್ಬೈನ್ ವೆಂಟ್‌ಗಳನ್ನು ಮಾಡಿಸಿ. ಅದು ಕಟ್ಟಡದ ಒಳಗೆ ಸುಲಭವಾಗಿ ಗಾಳಿಯಾಡಲು ಸಹಾಯ ಮಾಡುತ್ತದೆ. ಇದರಿಂದ ಬಿಸಿ ಗಾಳಿ ಹೊರ ಹೋಗಿ ಮೇಲ್ಛಾವಣಿಯೂ ತಂಪಾಗುತ್ತದೆ.
ಮರಗಳನ್ನು ನೆಡಿ
ನಿಮ್ಮ ಮನೆ ಅಥವಾ ಕಟ್ಟಡದ ಸುತ್ತ ಗಿಡಗಳನ್ನು ನೆಡಿ. ಅವು ನೆರಳನ್ನು ನೀಡುತ್ತವೆ. ನಿಮ್ಮ ಕಟ್ಟಡದ ಮೆಟಲ್ ಛಾವಣಿಗೆ ನೇರವಾಗಿ ಬಿಸಿಲು ಬೀಳುವುದು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಿಮ್ಮ ಪ್ರದೇಶಕ್ಕನುಗುಣವಾಗಿ ಮರಗಳನ್ನು ನೆಡಿ. ಸಾಮಾನ್ಯವಾಗಿ ಕಹಿಬೇವಿನ ಮರ, ಗುಲ್‌ಮೊಹರ್, ಬಾದಾಮಿ ಗಿಡ ಮುಂತಾದವುಗಳನ್ನು ಆಯ್ದುಕೊಳ್ಳಬಹುದು. ದೊಡ್ಡ ಮರಗಳು ನೆರಳನ್ನು ನೀಡುತ್ತವೆ.
ಸೌರಫಲಕಗಳನ್ನು ಅಳವಡಿಸಿ
ನಿಮ್ಮ ಮನೆ ಅಥವಾ ವಾಣಿಜ್ಯ ಕಟ್ಟಡಗಳಿಗೆ ಸೌರ ಫಲಕಗಳನ್ನು (ಸೋಲಾರ್ ಪಾನಲ್) ಅಳವಡಿಸಿ. ಇದು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಪರಿಸರದ ಕಾಳಜಿಯೂ ಆಗುತ್ತದೆ. ಇದು ಸೂರ್ಯನ ಶಾಖವನ್ನು ಹೀರಿಕೊಳ್ಳುವುದರಿಂದ ಕಟ್ಟಡದ ಒಳಗೆ ಶೇಖರಣೆಯಾಗುವ ಉಷ್ಣತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ರೂಫಿಂಗ್ ವ್ಯವಸ್ಥೆಗೂ ನೆರಳು ಸಿಕ್ಕಿದಂತಾಗುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ