Puliyogare Masala Recipe: ಪುಳಿಯೊಗರೆ ನಿಮಗಿಷ್ಟವೇ? ಅಂಗಡಿ ಮಸಾಲೆ ಬಿಟ್ಟು ಹೋಮ್ ಮೇಡ್ ಮಸಾಲಾ ನೀವೇ ರೆಡಿ ಮಾಡಿ.. ಇಲ್ಲಿದೆ ಸರಳ ವಿಧಾನ
Apr 09, 2023 05:30 PM IST
ಪುಳಿಯೊಗರೆ ನಿಮಗಿಷ್ಟವೇ? ಅಂಗಡಿ ಮಸಾಲೆ ಬಿಟ್ಟು ಹೋಮ್ ಮೇಡ್ ಮಸಾಲಾ ನೀವೇ ರೆಡಿ ಮಾಡಿ.. ಇಲ್ಲಿದೆ ಸರಳ ವಿಧಾನ (Photo/info/poojaga_food)
- ಅಂಗಡಿ ಮಸಾಲಾ ಬದಿಗಿಟ್ಟು ನೀವೇ ನಿಮ್ಮ ಮನೆಯಲ್ಲಿಯೇ ಹೋಮ್‌ಮೇಡ್ ಪುಳಿಯೊಗರೆ ಮಸಾಲಾ ರೆಡಿ ಮಾಡಬಹುದು. ಇಲ್ಲಿದೆ ನೋಡಿ ಸರಳ ವಿಧಾನ..
Puliyogare Masala Recipe: ನೀವು ಪುಳಿಯೊಗರೆ ಪ್ರಿಯರಾ? ಪದೇ ಪದೇ ಅಂಗಡಿಯ ಪುಳಿಯೊಗರೆ ಮಸಾಲಾ ತಂದು ಅದನ್ನೇ ಅನ್ನದ ಜತೆ ಸೇರಿಸಿ ತಿಂದು ಬೇಸರ ಅನಿಸಿದೆಯೇ? ಹಾಗಿದ್ದರೆ, ಇನ್ಮೇಲೆ ಅಂಗಡಿ ಮಸಾಲಾ ಬದಿಗಿಟ್ಟು ನೀವೇ ನಿಮ್ಮ ಮನೆಯಲ್ಲಿಯೇ ಪುಳಿಯೊಗರೆ ಮಸಾಲಾ ರೆಡಿ ಮಾಡಬಹುದು. ಹೋಮ್‌ಮೇಡ್ ಪೌಡರ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಹೋಮ್ ಮೇಡ್ ಪುಳಿಯೊಗರೆ ಪೌಡರ್ ಮಾಡಲು ಬೇಕಾಗುವ ಸಾಮಗ್ರಿ
- ಏಳೆಂಟು ಕೆಂಪು ಒಣ ಮೆಣಸಿನಕಾಯಿ
ಐದಾರು ಗುಂಟೂರು ಒಣ ಮೆಣಸಿನಕಾಯಿ
ಕರಿಬೇವಿನ ಎಲೆ
ಒಂದು ಬೆರಳುದ್ದದ ಹುಣಸೆಹಣ್ಣು
ಎರಡು ಸ್ಪೂನ್ ಕಡಲೆ ಬೇಳೆ
ಎರಡು ಸ್ಪೂನ್ ಉದ್ದಿನ ಬೇಳೆ
ಎರಡು ಸ್ಪೂನ್ ಧನಿಯಾ ಕಾಳು
ಒಂದು ಸ್ಪೂನ್ ಜೀರಿಗೆ
ಒಂದು ಸ್ಪೂನ್ ಕಾಳು ಮೆಣಸು
ಕಾಲು ಸ್ಪೂನ್ ಮೆಂತ್ಯೆ
ಕಾಲು ಸ್ಪೂನ್ ಸಾಸಿವೆ
ಒಂದು ಸ್ಪೂನ್ ಕಪ್ಪು ಎಳ್ಳು
ಐದು ಸ್ಪೂನ್ ತುರಿದ ಒಣ ಕೊಬ್ಬರಿ
ಕಾಲು ಸ್ಪೂನ್ ಅರಿಶಿನ ಪುಡಿ
ಚೂರು ಇಂಗು
ಪುಳಿಯೊಗರೆ ಪೌಡರ್ ಮಾಡುವ ವಿಧಾನ
ಮೊದಲಿಗೆ ಸ್ಟೋವ್ ಆನ್ ಮಾಡಿ, ಅದರ ಮೇಲೆ ಬಾಣಲಿ ಇಟ್ಟು ಕೆಂಪು ಮೆಣಸಿನಕಾಯಿ ಮತ್ತು ಗುಂಟೂರು ಮೆಣಸಿನಕಾಯಿ, ಕರಿಬೇವಿನ ಎಲೆ, ಹುಣಸೆ ಹಣ್ಣು ಹಾಕಿ.
ಈ ಎಲ್ಲವನ್ನು ಚೂರು ಬಿಸಿ ಆಗುವವರೆಗೂ ತವೆ ಮೇಲೆ ಬಾಡಿಸಿ, ಬಿಸಿಯಾದ ಬಳಿಕ ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.
ಬಳಿಕ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಬಿಸಿ ಆಗುವವರೆಗೂ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಧನಿಯಾ ಕಾಳು, ಜೀರಿಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ.
ಒಂದು ಸ್ಪೂನ್ ಕಾಳು ಮೆಣಸು, ಕಾಲು ಸ್ಪೂನ್ ಮೆಂತ್ಯೆ, ಕಾಲ್ ಸ್ಪೂನ್ ಸಾಸಿವೆ ಹಾಕಿ ಮತ್ತೆ ಬಿಸಿ ಮಾಡುವುದನ್ನು ಮುಂದುವರಿಸಿ.
ಒಂದು ಚಮಚ ಕರಿ ಎಳ್ಳು, ಐದು ಸ್ಪೂನ್ ತುರಿದ ಒಣ ಕೊಬ್ಬರಿ ಸೇರಿಸಿ ಬಿಸಿ ಮಾಡಿ. ಸ್ಟೋವ್ ಆಫ್ ಮಾಡಿ.
ಹೀಗೆ ಈ ಎಲ್ಲ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ. ಆಗ ಚೂರು ಅರಿಶಿನ ಪುಡಿ ಮತ್ತು ಚೂರು ಇಂಗು ಹಾಕಿ, ಚೆನ್ನಾಗಿ ಮಿಕ್ಸರ್‌ನಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
ಈಗ ರುಚಿಯಾದ ಹೋಮ್ ಮೇಡ್ ಪುಳಿಯೊಗರೆ ಪೌಡರ್ ರೆಡಿ. ನೀವಿದನ್ನು ಎಂದಿನಂತೆ ಎಣ್ಣೆಯೊಂದಿಗೆ ಒಗ್ಗರಣೆ ಕೊಟ್ಟ ಬಳಿಕ ಪುಳಿಯೊಗರೇ ಪೌಡರ್ ಸೇರಿಸಿ ಅನ್ನದೊಂದಿಗೆ ಸವಿಯಬಹುದು.