Covid Variants: ಜಗತ್ತಿನ ಹಲವೆಡೆ ಕೋವಿಡ್ ರೂಪಾಂತರಿಗಳ ನರ್ತನ; ಎರಿಸ್ vs ಬಿಎ 2.86, ಯಾವುದು ಹೆಚ್ಚು ಅಪಾಯಕಾರಿ; ರೋಗಲಕ್ಷಣಗಳು ಹೀಗಿವೆ
Aug 22, 2023 06:48 AM IST
ಜಗತ್ತಿನಾದ್ಯಂತ ಕೋವಿಡ್ ರೂಪಾಂತರಿಗಳ
- New Covid Variants: ಎರಿಸ್ ವಸರ್ಸ್ ಬಿಎ 2.86 ಈ ಎರಡೂ ಓಮಿಕ್ರಾನ್ ವಂಶಸ್ಥರಾದ ಎಕ್ಸ್‌ಬಿಬಿ ತಳಿಯ ರೂಪಾಂತರಿಗಳಾಗಿವೆ. ಇತ್ತೀಚೆಗೆ ವಿಶ್ವದ ಹಲವೆಡೆ ಈ ಕೋವಿಡ್ ರೂಪಾಂತರಿಗಳು ಗದ್ದಲ ಎಬ್ಬಿಸಿವೆ. ಇವುಗಳ ರೋಗಲಕ್ಷಣಗಳು ಹರಡುವಿಕೆಯ ಕುರಿತ ಮಾಹಿತಿ ಇಲ್ಲಿದೆ.
ಮೂರು ವರ್ಷಗಳ ಕಾಲ ಜಗತ್ತನ್ನು ನಡುಗಿಸಿದ್ದ ಕೋವಿಡ್ ಇತ್ತೀಚೆಗೆ ಕೊಂಚ ತಣ್ಣಗಾಗಿತ್ತು. ಆದರೆ ಈಗ ಮತ್ತೆ ಸದ್ದು ಮಾಡುತ್ತಿದೆ. ಕೋವಿಡ್ 19 ವೈರಸ್ ವಿಕಸನಗೊಳ್ಳುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಎರಿಸ್ ಅಥವಾ ಇಜಿ.5 ಮತ್ತು ಬಿಎ 2.86 ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ಇತರ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ರೂಪಾಂತರಿಗಳ ಕೋವಿಡ್ ರೋಗಲಕ್ಷಣಗಳು ಸದ್ಯ ಸೌಮ್ಯ ಸ್ವರೂಪವನ್ನು ಹೊಂದಿವೆ. ಆದರೆ ಇವು ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತಿವೆ, ಅಲ್ಲದೆ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿವೆ. ಬಿಎ 2.86 ಹೆಚ್ಚು ರೂಪಾಂತರಿತವಾಗಿದೆ ಎಂದು ಹೇಳಲಾಗುತ್ತದೆ ಮತ್ತು ಈ ನಿರ್ದಿಷ್ಟ ತಳಿಯು ಕೆಲವು ಹೊಸ ಲಕ್ಷಣಗಳನ್ನು ಹೊಂದಿದೆ ಎಂದು ರೋಟರಿ ಕ್ಲಬ್ ಆಫ್ ಮದ್ರಾಸ್ ನೆಕ್ಸ್ಟ್‌ಜೆನ್‌ನ ಕರೋನಾ-ವೈರಾಲಜಿಸ್ಟ್ ಮತ್ತು ಕೋವಿಡ್ ಜಾಗೃತಿ ತಜ್ಞ ಡಾ.ಪವಿತ್ರಾ ವೆಂಕಟಗೋಪಾಲನ್ ಹಿಂದೂಸ್ತಾನ್ ಟೈಮ್ಸ್ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೋವಿಡ್ 19ನ ಹೊಸ ರೂಪಾಂತರಿಗಳು ವಿಕಸನಗೊಳ್ಳಲು ಕಾರಣ
ಕೋವಿಡ್ 19ಗೆ ಕಾರಣವಾಗುವ ವೈರಸ್ ಅನ್ನು ಡಿಸೆಂಬರ್ 2019 ರಲ್ಲಿ ಗುರುತಿಸಲಾಗಿತ್ತು. ಆ ಸಮಯದಿಂದ ಅದಯ ವಿಕಸನಗೊಳ್ಳುತ್ತಲೇ ಇದೆ. ಈ ಕಳೆದ ಮೂರು, ಮೂರುವರೆ ವರ್ಷಗಳಲ್ಲಿ ನಾವು ಹಲವಾರು ವಿಭಿನ್ನ ರೂಪಾಂತರಿಗಳು ಬಂದು ಹೋಗಿದ್ದನ್ನು ನೋಡಿದ್ದೇವೆ. ಇದರಲ್ಲಿ ಹಲವು ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿವೆ. ಇದು ಕೆಮ್ಮು, ಸೀನು ಹೀಗೆ ಸೋಂಕಿತರ ದೇಹದ ಒಂದು ಹನಿ ತಾಕುವುದರಿಂದ ಹರಡುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಾವು ಈಗಾಗಲೇ ಬೀಟಾ, ಗಾಮಾ, ಡೆಲ್ಟಾ ಮತ್ತು ಓವಿಕ್ರಾನ್ ರೂಪಾಂತರಿಗಳನ್ನು ನೋಡಿದ್ದೇವೆ. ಈ ಎಲ್ಲಾ ರೂಪಾಂತರಿಗಳು ಕೋವಿಡ್ 19ಗೆ ಕಾರಣವಾಗುತ್ತವೆ. ಇದರಲ್ಲಿ ಕೋವಿಡ್‌ನ ವಿವಿಧ ರೋಗಲಕ್ಷಣಗಳು ಕಂಡು ಬಂದಾಗ, ಅವರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆ ಮೂಲಕ ಕೋವಿಡ್ ಎಂದು ಗುರುತಿಸಲಾಗುತ್ತದೆ. ಈ ಪ್ರತಿಯೊಂದು ರೂಪಾಂತರಿಗಳು ವಿಭಿನ್ನವಾಗಿ ವರ್ತಿಸುತ್ತವೆ. ಏಕೆಂದರೆ ಅವುಗಳ ವಿಭಿನ್ನವಾದ ಅನುವಂಶಿಕ ಬದಲಾವಣೆಗಳನ್ನು ಹೊಂದಿವೆʼ ಎಂದು ಡಾ. ಪವಿತ್ರ ಹೇಳುತ್ತಾರೆ.
ಎರಿಸ್ ಮತ್ತು ಬಿಎ 2.86 ಈ ಎರಡು ರೂಪಾಂತರಿಗಳು ಈಗ ಹೆಚ್ಚು ಸುದ್ದಿ ಮಾಡುತ್ತಿವೆ, ಏಕೆಂದರೆ ಅವುಗಳು ಬಹಳ ವೇಗವಾಗಿ ಹರಡುತ್ತಿವೆ. ಆದರೆ ವ್ಯಾಕ್ಸಿನೇಷನ್‌ನಿಂದ ಇವುಗಳು ಹರಡುವಿಕೆಯನ್ನು ನಿಯಂತ್ರಿಸಬಹುದುʼ ಎನ್ನುತ್ತಾರೆ ಡಾ. ಪವಿತ್ರಾ.
ಎರಿಸ್ (ಇಜಿ.5) ಮತ್ತು ಬಿಎ 2.86 ನಡುವಿನ ವ್ಯತ್ಯಾಸ
ಈಗ ಈ ಎರಡು ಹೊಸ ರೂಪಾಂತಾರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ವರ್ಗೀಕರಿಸಿದೆ. ಎರಿಸ್ ಅನ್ನು ʼವೇರಿಯಂಟ್ ಆಫ್ ಇಂಟರೆಸ್ಟ್ʼ ಎಂದು ಕರೆದರೆ ಬಿಎ 2.86 ಅನ್ನು ʼವೆರಿಯೆಂಟ್ ಅಂಡರ್ ಮಾನಿಟರಿಂಗ್ʼ ಎಂದು ಕರೆದಿದೆ. ಇವೆರಡೂ ಒಮಿಕ್ರಾನ್‌ನ ವಂಶಸ್ಥರಾದ ಎಕ್ಸ್‌ಬಿಬಿ ವಂಶದ ರೂಪಾಂತರಗಳಾಗಿವೆ. ಈ ಎರಡರ ನಡುವಿನ ವ್ಯತ್ಯಾಸವೆಂದರೆ ಪ್ರಪಂಚದಾದ್ಯಂತ ಏರಿಸ್ ಸೋಂಕಿನ ಪ್ರಸರಣದ ಪ್ರಮಾಣ ಹೆಚ್ಚಿದೆ. ಬಿಎ 2.86 ಹರಡುವಿಕೆಯ ಪ್ರಮಾಣವನ್ನು ಇನ್ನಷ್ಟೇ ಗುರುತಿಸಬೇಕುʼ ಎಂದು ವೈದ್ಯರು ಹೇಳುತ್ತಾರೆ.
ಹೊಸ ಕೋವಿಡ್ ತಳಿ ಬಿಎ 2.86 ರೋಗಲಕ್ಷಣಗಳು
ಡಾ. ಪವಿತ್ರಾ ಅವರು ಹೇಳುವ ಪ್ರಕಾರ ಬಿಎ 2.86 ಕೆಲವೊಂದು ಹೊಸ ಹಾಗೂ ಹೆಚ್ಚುವರಿ ರೋಗಲಕ್ಷಣಗಳನ್ನು ಹೊಂದಿದೆ. ಇದು ಭಿನ್ನ ಸೋಂಕಿಗೆ ಸಂಬಂಧಿಸಿದೆ ಎಂದು ತೋರುತ್ತದೆʼ ಎನ್ನುತ್ತಾರೆ.
ಈ ಸೋಂಕು ಬಾಧಿಸಿದವರಲ್ಲಿ ಮೈಯಲ್ಲಿ ದದ್ದು ಉಂಟಾಗುವುದು, ಕಣ್ಣುಗಳು ಸ್ವಲ್ಪ ಕೆಂಪಾಗುವುದು ಹಾಗೂ ಕೆಲವು ಪ್ರಕರಣಗಳಲ್ಲಿ ಅತಿಸಾರ ಉಂಟಾಗುವುದನ್ನು ಕಾಣಬಹುದು.
ಏರಿಸ್ ರೂಪಾಂತರಿ ಸೋಂಕು ಕಾಣಿಸಿಕೊಂಡವರಲ್ಲಿ ಜ್ವರ, ಕೆಮ್ಮು, ಉಸಿರಾಟ ತೊಂದರೆ, ಆಯಾಸ, ಸ್ನಾಯುಗಳ ಸೆಳೆತ, ತಲೆನೋವು, ರುಚಿ ಮತ್ತು ವಾಸನೆ ಅರಿವಾಗದೇ ಇರುವುದು ಮತ್ತು ಗಂಟಲು ನೋವು ಇಂತಹ ರೋಗಲಕ್ಷಣಗಳು ಕಾಣಿಸುತ್ತಿವೆ.
ಹೊಸ ರೂಪಾಂತರಿಗಳ ವಿರುದ್ಧ ಹೊಸ ಲಸಿಕೆಗಳು
ಬಿಎ 2.86 36 ಹೊಸ ರೂಪಾಂತರಿಗಳನ್ನು ಹೊಂದಿದೆ. ಅದು ಈಗಾಗಲೇ ನಮ್ಮ ದೇಹದಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ಅಮೆರಿಕ ಮತ್ತು ಜರ್ಮನಿಯಲ್ಲಿ ಹೊಸ ತಳಿಗಳ ವಿರುದ್ಧ ಹೋರಾಡಲು ಅನುವಾಗುವಂತೆ ವ್ಯಾಕ್ಸಿನ್‌ಗಳನ್ನು ನವೀಕರಿಸುತ್ತಿದ್ದಾರೆ. ಇದರ ಅರ್ಥ ಈಗಾಗಲೇ ನಾವು ತೆಗೆದುಕೊಂಡ ವ್ಯಾಕ್ಸಿನ್ ಪರಿಣಾಮಕಾರಿಯಾಗಿಲ್ಲ ಎಂದಲ್ಲ. ಆದರೆ ಅವುಗಳ ಪರಿಣಾಮ ಹೊಸ ತಳಿಗಳ ವಿರುದ್ಧ ಹೋರಾಡುವಷ್ಟು ಶಕ್ತವಾಗಿಲ್ಲದೇ ಇರಬಹುದು. ವೈರಸ್‌ಗಳು ವಿಕಸನಗೊಳ್ಳುತ್ತಿದ್ದಂತೆ ನಿರಂತರವಾಗಿ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ವೈರಸ್ ನಡುವಿನ ಯುದ್ಧ ನಡೆಯುತ್ತಲೇ ಇರುತ್ತದೆ. ಆ ಕಾರಣಕ್ಕೆ ಲಸಿಕೆ ಪಡೆಯುವುದು ಅವಶ್ಯ. ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಲೇ ಬೇಕುʼ ಎನ್ನುತ್ತಾರೆ ಡಾ. ಪವಿತ್ರಾ.