ಹೊಸದಾಗಿ ಖರೀದಿಸಿದ ಕಬ್ಬಿಣದ ಬಾಣಲೆ, ಪ್ಯಾನ್ ಸ್ವಚ್ಛಗೊಳಿಸುವುದು ಹೇಗೆ: ಇಲ್ಲಿದೆ ಟ್ರಿಕ್ಸ್
Sep 24, 2024 03:34 PM IST
ಕಬ್ಬಿಣದ ಹೊಸ ಬಾಣಲೆ, ತವಾ ಕ್ಲೀನ್ ಮಾಡುವುದು ಹೇಗೆ?
- ಮನೆಯಲ್ಲಿ ದೋಸೆ, ಚಪಾತಿ, ರೊಟ್ಟಿ ಅಥವಾ ಪೂರಿ ಕರಿಯಲು ಕಬ್ಬಿಣದ ಬಾಣಲೆ, ತವಾಗಳನ್ನು ಬಳಸುತ್ತಾರೆ. ಪ್ರತಿನಿತ್ಯ ಬಳಸುವುದರಿಂದ ಬಾಣಲೆ, ತವಾಗಳು ಬಹಳ ಬೇಗನೆ ಹಾಳಾಗುತ್ತವೆ. ಹಾಗಾಗಿ ಅವುಗಳನ್ನು ಬದಲಾಯಿಸುತ್ತಿರಬೇಕಾಗುತ್ತದೆ. ಆದರೆ ಹೊಸದಾಗಿ ಖರೀದಿಸಿ ತಂದ ಕಬ್ಬಿಣದ ಬಾಣಲೆ, ಪ್ಯಾನ್‍ಗಳನ್ನು ಕ್ಲೀನ್ ಮಾಡಲು ಕಷ್ಟಪಡುತ್ತಿದ್ದರೆ, ಇಲ್ಲಿದೆ ಸುಲಭದ ಟ್ರಿಕ್.
ನಾನ್‌ಸ್ಟಿಕ್ ಬಾಣಲೆ, ತವಾಗಳು ಬರುವ ಮುನ್ನ ಜನರು ಬಳಸುತ್ತಿದ್ದದ್ದು ಕಬ್ಬಿಣದ ಬಾಣಲೆ ಅಥವಾ ಪ್ಯಾನ್ ಗಳನ್ನೇ. ಮೊದಲೆಲ್ಲಾ ಮನೆಯಲ್ಲಿರುವ ಹಿರಿಯರು ಹೊಸದಾಗಿ ಕಬ್ಬಿಣ ಬಾಣಲೆಗಳನ್ನು ಖರೀದಿಸಿ ತಂದಾಗ ಅದನ್ನು ಮೊದಲ ಬಾರಿಗೆ ಹೇಗೆ ತೊಳೆಯುವುದು ಮತ್ತು ನಂತರ ಅದನ್ನು ಉಪಯೋಗಿಸುವ ಬಗೆಯನ್ನು ಹೇಳಿಕೊಡುತ್ತಿದ್ದರು. ಕ್ರಮೇಣ ನಗರವಾಸಿ ಜನಜೀವನಕ್ಕೆ ಹೊಂದಿಕೊಂಡ ಮೇಲೆ ಕಬ್ಬಿಣದ ಬಾಣಲೆಯಲ್ಲಿ ಅಡುಗೆ ತಯಾರಿಸುವ ಕಲೆ ಕೂಡಾ ನಿಧಾನವಾಗಿ ಮರೆಯಾಗುತ್ತಾ ಬಂತು. ನಾನ್‌ಸ್ಟಿಕ್ ಪಾತ್ರೆಗಳನ್ನೇ ಹೆಚ್ಚಾಗಿ ಬಳಸಲು ಆರಂಭಿಸಿದ ಜನ ಅದರ ದುಷ್ಫರಿಣಾಮಗಳನ್ನು ಅರಿತ ಮೇಲೆ ಮತ್ತೆ ಕಬ್ಬಿಣದ ಬಾಣಲೆ, ತವಾಗಳೇ ಉತ್ತಮ ಎನ್ನುತ್ತಿದ್ದಾರೆ. ಹಾಗಾದರೆ ಉತ್ತಮ ಎಂದು ಕಬ್ಬಿಣದ ಬಾಣಲೆ ಅಥವಾ ಕಡಾಯಿ, ತವಾವನ್ನು ಖರೀದಿಸಿ ತಂದರೆ ಆಯಿತೇ? ಇಲ್ಲ, ಅದನ್ನು ಮೊದಲ ಬಾರಿಗೆ ಸ್ವಚ್ಛಗೊಳಿಸುವ ವಿಧಾನ ತಿಳಿದಿರಬೇಕು. ಇಲ್ಲವಾದರೆ ಅದರಲ್ಲಿ ಮಾಡಿದ ಅಡುಗೆ ರುಚಿ ಹಾಗೂ ಬಣ್ಣ ಎರಡನ್ನೂ ಕಳೆದುಕೊಳ್ಳುತ್ತದೆ. ಹಾಗಾದರೆ ಹೊಸ ಬಾಣಲೆಗಳನ್ನು ಬಳಸಲು ಯೋಗ್ಯವಾಗುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗೆ ಸರಳವಾದ ಟಿಪ್ಸ್ ಇಲ್ಲಿದೆ.
ಕಬ್ಬಿಣದ ಹೊಸ ಬಾಣಲೆ, ತವಾವನ್ನು ಸ್ವಚ್ಛಗೊಳಿಸುವುದು ಹೇಗೆ?
ಮೊದಲಿಗೆ ಹೊಸದಾಗಿ ಖರೀದಿಸಿ ತಂದ ಕಬ್ಬಿಣದ ಬಾಣಲೆ ಅಥವಾ ತವಾವನ್ನು ಸ್ಟೌವ್ ಮೇಲೆ ಇಟ್ಟು ಬಿಸಿ ಮಾಡಿ. ಚೆನ್ನಾಗಿ ಬಿಸಿಯಾದ ನಂತರ ಅದಕ್ಕೆ ಮೂರರಿಂದ ನಾಲ್ಕು ಚಮಚ ಸಾಸಿವೆ ಎಣ್ಣೆ ಹಾಕಿ. ಬೆಂಕಿಯನ್ನು ಕಡಿಮೆ ಮಾಡಿ. ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಮೂರರಿಂದ ನಾಲ್ಕು ಚಮಚ ಉಪ್ಪು ಹಾಕಿ. ನಂತರ ಅದನ್ನು ಒಂದು ದೊಡ್ಡ ಚಮಚದ ಸಹಾಯದಿಂದ ಪೂರ್ಣ ಬಾಣಲೆಗೆ ಸವರಿ. ಮರದ ಚಮಚದಿಂದ ಕಬ್ಬಿಣದ ಬಾಣಲೆಯನ್ನು ಐದರಿಂದ ಆರು ನಿಮಿಷದವರೆಗೆ ಎಲ್ಲಾ ಕಡೆಗೂ ಉಜ್ಜಿ. ನೀವು ಅಲ್ಯೂಮಿನಿಯಂ ಫಾಯಿಲ್ ಅನ್ನು ಸಹ ಬಳಸಬಹುದು. ಆಗ ಬಾಣಲೆಗೆ ಅಂಟಿಕೊಂಡಿರುವ ಕಪ್ಪು ಪದಾರ್ಥ ಹೊರಬರುತ್ತದೆ. ನಂತರ ಗ್ಯಾಸ್ ಆಫ್ ಮಾಡಿ. ಈಗ ಅದನ್ನು ಮೊದಲು ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ. ಪಾತ್ರೆ ತೊಳೆಯುವ ಲಿಕ್ವಿಡ್ ಅಥವಾ ಸೋಪು ಬಳಸಿ ಬಾಣಲೆಯನ್ನು ಉಜ್ಜಿ, ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಹೊಸ ಬಾಣಲೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಈಗ ಅವುಗಳನ್ನು ನಾನ್‌ಸ್ಟಿಕ್ ಪಾತ್ರೆಗಳಂತೆ ಬಳಸಬಹುದು.
ಯಾವುದು ಬೆಸ್ಟ್?
ಕಬ್ಬಿಣದ ಬಾಣಲೆ ಮತ್ತು ನಾನ್‌ಸ್ಟಿಕ್ ಬಾಣಲೆ ಇವೆರಡರಲ್ಲಿ ಯಾವುದು ಬೆಸ್ಟ್? ನಾನ್‌ಸ್ಟಿಕ್ ಪಾತ್ರೆಗಳನ್ನು ಟೆಫ್ಲಾನ್ ಫ್ಲೂ ನಿಂದ ತಯಾರಿಸಿರುತ್ತಾರೆ. ಅದು ಸಿಂಥೆಟಿಕ್ ಕೆಮಿಕಲ್ ಆಗಿದೆ. ಪಾತ್ರೆಗಳಿಗೆ ಈ ರಾಸಾಯನಿಕದ ಕೋಟಿಂಗ್ ಮಾಡಿರುತ್ತಾರೆ. ಅದನ್ನು ಅತಿಯಾಗಿ ಬಿಸಿ ಮಾಡಿದಾಗ ಅದು ಆರೋಗ್ಯಕ್ಕೆ ಉತ್ತಮವಲ್ಲ. ಕಬ್ಬಿಣದ ಬಾಣಲೆಯಲ್ಲಿ ತಯಾರಿಸಿದ ಅಡುಗೆ ಆರೋಗ್ಯಕ್ಕೆ ಉತ್ತಮ.
ವಿಭಾಗ