logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೇಬಿನ ಬೆಲೆ ಮೊದಲೇ ಜಾಸ್ತಿ, ಖರೀದಿಸಿ ತಂದ ಆಪಲ್ ಹಾಳಾಗಿದ್ಯಾ: ಹಾಗಿದ್ದರೆ ಇವಿಷ್ಟು ಗೊತ್ತಿರಬೇಕು

ಸೇಬಿನ ಬೆಲೆ ಮೊದಲೇ ಜಾಸ್ತಿ, ಖರೀದಿಸಿ ತಂದ ಆಪಲ್ ಹಾಳಾಗಿದ್ಯಾ: ಹಾಗಿದ್ದರೆ ಇವಿಷ್ಟು ಗೊತ್ತಿರಬೇಕು

Priyanka Gowda HT Kannada

Oct 01, 2024 02:20 PM IST

google News

ತಾಜಾ ಸೇಬು ಖರೀದಿಸಲು ಟಿಪ್ಸ್‌

    • ಹಣ್ಣುಗಳಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿವೆ. ಪ್ರತಿಯೊಂದು ಹಣ್ಣು ಬೇರೆಬೇರೆ ರೀತಿಯ ಪೋಷಕಾಂಶ, ನಾರಿನಂಶ, ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಹಾಗಾಗಿ ಆಹಾರದಲ್ಲಿ ಹಣ್ಣುಗಳಿರುವುದು ಅಗತ್ಯ. ಹಣ್ಣುಗಳನ್ನು ಖರೀದಿಸುವಾಗ ಕೆಲವು ಟ್ರಿಕ್‌ಗಳಿವೆ. ಸೇಬು ಖರೀದಿಸುವಾಗ ಈ ಟ್ರಿಕ್ಸ್‌ ಪಾಲಿಸಿದರೆ ಕೆಟ್ಟ ಆಪಲ್‌ ಬದಲಿಗೆ ತಾಜಾ, ಉತ್ತಮ ಆಪಲ್‌ ಮನೆಗೆ ಬರುತ್ತದೆ.
ತಾಜಾ ಸೇಬು ಖರೀದಿಸಲು ಟಿಪ್ಸ್‌
ತಾಜಾ ಸೇಬು ಖರೀದಿಸಲು ಟಿಪ್ಸ್‌ (PC: Pixabay)

ಹಣ್ಣುಗಳು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಅದು ದೇಹಕ್ಕೆ ಅಗತ್ಯವಾಗಿ ಬೇಕಾದ ಸೂಕ್ಷ್ಮ ಪೋಷಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಹಣ್ಣುಗಳು ವಿಟಮಿನ್‌, ನಾರಿನಾಂಶ, ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುತ್ತವೆ. ಅವು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಈ ಮಾತನ್ನು ನಾವು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ. ಆರೋಗ್ಯಕ್ಕೆ ಸೇಬುಹಣ್ಣು ನೀಡುವ ಕೊಡುಗೆಯಿಂದ ಈ ಮಾತನ್ನು ಹೇಳಲಾಗುತ್ತದೆ. ಸೇಬುಹಣ್ಣಿನಿಂದ ಅಗಾಧ ಪ್ರಯೋಜನಗಳನ್ನು ಸಿಗುತ್ತವೆ. ಹೀಗಾಗಿ ವೈದ್ಯರು ದಿನನಿತ್ಯ ಸೇಬನ್ನು ತಿನ್ನುವ ಸಲಹೆ ನೀಡುತ್ತಾರೆ. ಸೇಬು ಹಣ್ಣು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹಾಗಾಗಿ ಮಾರುಕಟ್ಟೆಯಿಂದ ಹಣ್ಣುಗಳನ್ನು ಕೊಂಡು ತರುವಾಗ ಸೇಬು ಇದ್ದೇ ಇರುತ್ತದೆ. ಕೆಲವೊಮ್ಮೆ ಸೇಬು ಮೇಲಿನಿಂದ ನೋಡಲು ತಾಜಾ ಇರುವಂತೆ ಕಂಡರೂ ಒಳಗೆ ಹಾಳಾಗಿರುತ್ತದೆ. ಆಗ ಬೇಜಾರಾಗುವುದಂತೂ ಖಂಡಿತ. ಏಕೆಂದರೆ ಉಳಿದ ಹಣ್ಣುಗಳಿಗೆ ಹೋಲಿಸಿದರೆ ಸೇಬು ಹಣ್ಣಿನ ದರ ಮೊದಲೇ ಜಾಸ್ತಿ, ಅದರಲ್ಲೂ ಹೆಚ್ಚಿನ ಬೆಲೆ ತೆತ್ತು ತಂದ ಹಣ್ಣು ಹಾಳಾದರೆ ಆಗ ಮತ್ತೊಂದಿಷ್ಟು ಬೇಸರ. ಅದಕ್ಕೆ ಮಾಡಬೇಕಾಗಿರುವುದು ಏನು? ಅಂಗಡಿಯಲ್ಲಿ ಖರೀದಿಸುವಾಗ ಕೆಲವು ಟಿಪ್ಸ್‌ ತಿಳಿದಿದ್ದರೆ, ಸುಲಭವಾಗಿ ತಾಜಾ ಹಾಗೂ ರಸಭರಿತ ಹಣ್ಣನ್ನು ಮನೆಗೆ ತರಬಹುದು. ಹಾಗಾದರೆ ಉತ್ತಮ ರಸಭರಿತ ಸೇಬು ಗುರುತಿಸುವುದು ಹೇಗೆ ಇಲ್ಲಿ ಓದಿ.

ಸೇಬು ಹಣ್ಣಿನ ತೂಕ

ಸೇಬು ಖರೀದಿಸುವ ಮೊದಲು ಅದನ್ನು ಕೆಲವು ಪರೀಕ್ಷೆಗೆ ಒಳಪಡಿಸಿ. ಅದರಲ್ಲಿ ಮೊದಲನೆಯದು ಹಣ್ಣಿನ ತೂಕ. ಹಣ್ಣನ್ನು ಕೈಯಲ್ಲಿ ಹಿಡಿದಾಗ ಅದು ಬಹಳ ಭಾರ ಎನಿಸಿದರೆ, ಆ ಸೇಬು ಒಳಗಿನಿಂದ ಹಾಳಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಯಾವಾಗಲೂ ಹಗುರವಾದ ಮತ್ತು ಸಾಮಾನ್ಯ ಗಾತ್ರದ ಸೇಬುಹಣ್ಣುನ್ನು ಮಾತ್ರ ಖರೀದಿಸಿ.

ಸೇಬನ್ನು ಎಲ್ಲ ಕಡೆಯಿಂದಲೂ ಚೆಕ್‌ ಮಾಡಿ

ಸೇಬು ಖರೀದಿಸುವ ಮೊದಲು ಅದನ್ನು ಕೈಯಲ್ಲಿ ಹಿಡಿದು ಎಲ್ಲಾ ಕಡೆಯಿಂದಲೂ ಪರೀಕ್ಷಿಸಿ. ಕೆಲವು ಕಡೆ ಮೆತ್ತಗಾಗಿದ್ದು ಕಂಡು ಬಂದರೆ ಅದನ್ನು ಖರೀದಿಸಬೇಡಿ. ಸೇಬು ಹಣ್ಣಿನ ಮೇಲೆ ಕಪ್ಪು ಚುಕ್ಕಿಗಳಿದ್ದರೆ ಅದನ್ನು ಆಯ್ದುಕೊಳ್ಳಬೇಡಿ. ಸೇಬು ಹಣ್ಣಿನ ಮೇಲ್ಭಾಗವು ಮೆತ್ತಗಿದ್ದರೆ ಆ ಸೇಬು ಹಣ್ಣು ಖರೀದಿಸಲು ಯೋಗ್ಯವಲ್ಲ ಎಂದೇ ತಿಳಿಯಿರಿ.

ಸೇಬು ಹಣ್ಣಿನ ಬಣ್ಣ

ಒಳ್ಳೆಯ ಸೇಬು ಹಣ್ಣನ್ನು ಅದರ ಬಣ್ಣದಿಂದಲೇ ಗುರುತಿಸಬಹುದು. ಸಾಮಾನ್ಯವಾಗಿ ಸಿಹಿಯಾದ ಸೇಬು ಹಣ್ಣಿನ ಬಣ್ಣ ಸಂಪೂರ್ಣವಾಗಿ ಕೆಂಪಾಗಿರುವುದಿಲ್ಲ. ಅದು ಕೆಂಪು ಮತ್ತು ಸ್ವಲ್ಪ ಹಸಿರು ಬಣ್ಣದ ಮಿಶ್ರಣದಲ್ಲಿರುತ್ತದೆ. ಕೆಲವೊಮ್ಮೆ ಕೆಂಪು ಮತ್ತು ಹಳದಿ ಬಣ್ಣಗಳ ಮಿಶ್ರಣದಲ್ಲಿರುವ ಸೇಬು ಕೂಡಾ ಸಿಹಿಯಾಗಿರುತ್ತದೆ. ನೀವು ಗ್ರೀನ್‌ ಆಪಲ್‌ ಅಥವಾ ಹಸಿರು ಸೇಬುವನ್ನು ಖರೀದಿಸುತ್ತಿದ್ದರೆ ಆಗಲೂ ಹಚ್ಚ ಹಸಿರಿನ ಸೇಬುವನ್ನು ಖರೀದಿಸಬೇಡಿ. ಏಕೆಂದರೆ ಅದು ಹುಳಿಯಾಗಿರುವ ಸಾಧ್ಯತೆಯಿರುತ್ತದೆ.

ವಾಸನೆಯ ಮೂಲಕ ಪರೀಕ್ಷಿಸಿ ನೋಡಿ

ಸೇಬನ್ನು ವಾಸನೆಯ ಮೂಲಕವೂ ಗುರುತಿಸಬಹುದು. ಹಣ್ಣು ತಾಜಾ ಮತ್ತು ಸಿಹಿಯಾಗಿದ್ದರೆ ಅದರಿಂದ ವಿಶಿಷ್ಟ ಸಿಹಿ ವಾಸನೆ ಬರುತ್ತದೆ. ಆಗ ನೀವು ಸುಲಭವಾಗಿ ತಾಜಾ ಹಣ್ಣನ್ನು ಗುರುತಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ