ಹದಿ ವಯಸ್ಸಿನ ಮಕ್ಕಳು ಪೋಷಕರ ಮುಂದೆ ಸುಳ್ಳು ಹೇಳಲು ಇವೂ ಕಾರಣವಿರಬಹುದು, ದಂಡಿಸುವ ಮುನ್ನ ಗಮನಿಸಿ– ಮನದ ಮಾತು ಅಂಕಣ
Sep 21, 2024 12:39 PM IST
ಭವ್ಯಾ ವಿಶ್ವನಾಥ್ ಅವರ ಅಂಕಣ ಮನದ ಮಾತು
- ಹದಿ ವಯಸ್ಸಿಗೆ ಬಂದ ನಂತರ ಮಕ್ಕಳು ಸುಳ್ಳು ಹೇಳಲು ಆರಂಭಿಸುತ್ತಾರೆ ಎಂಬುದು ಬಹುತೇಕ ಪೋಷಕರ ದೂರು. ಆದರೆ ಮಕ್ಕಳು ಹೇಳುವ ಸುಳ್ಳಿನ ಹಿಂದೆ ಈ ಕಾರಣಗಳೂ ಇರಬಹುದು. ಹಾಗಾಗಿ ಪೋಷಕರು ದಂಡಿಸುವ ಮುನ್ನ ಮಕ್ಕಳು ಯಾವ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಹಾಗಾದರೆ ಮಕ್ಕಳು ಯಾವೆಲ್ಲಾ ಕಾರಣಕ್ಕೆ ಸುಳ್ಳು ಹೇಳುತ್ತಾರೆ ಎಂಬ ವಿವರ ಇಲ್ಲಿದೆ.
ಪ್ರಶ್ನೆ: ನನಗೆ ಇಬ್ಬರು ಹದಿ ವಯಸ್ಸಿನ ಮಕ್ಕಳು, ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರು ಒಳ್ಳೆಯ ಮಕ್ಕಳು, ಆದರೆ ಇತ್ತೀಚೆಗೆ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಸುಳ್ಳು ಹೇಳಿದರೆ ನನಗೆ ಬಹಳ ಬೇಸರವಾಗುತ್ತದೆ, ಸಿಟ್ಟು ಕೂಡ ಬರುತ್ತದೆ, ಇದರಿಂದ ನಮ್ಮ ನಡುವೆ ಜಗಳಗಳಾಗುವುದುಂಟು. ತಾಯಿಯಾಗಿ ಸುಳ್ಳು ಹೇಳಬೇಡಿ ಎಂದು ಎಷ್ಟು ಬುದ್ಧಿ ಹೇಳಿದರೂ ನನ್ನ ಮಾತು ಕೇಳುವುದಿಲ್ಲ. ಈಗ ನಾನೇನು ಮಾಡಲು, ಅವರು ಸುಳ್ಳು ಹೇಳದಂತೆ ಮಾಡಲು ಏನು ಮಾಡಬೇಕು?
ಭಾರತಿ, ಹಾವೇರಿ
ಉತ್ತರ: ಪೋಷಕರಿಗೆ ಮಕ್ಕಳು ಸುಳ್ಳು ಹೇಳಿದಾಗ ಬೇಸರವಾಗುವುದು, ಸಿಟ್ಟು ಬರುವುದು ಸಹಜ. ಹುಟ್ಟಿನಿಂದ ಪಾಲನೆ ಪೋಷಣೆ ಮಾಡಿದ ನಮಗೆ ಮಕ್ಕಳು ಸುಳ್ಳು ಹೇಳುವುದು ನ್ಯಾಯವೇ? ಇದನ್ನು ಸಹಿಸಿಕೊಳ್ಳುವುದಾದರೂ ಹೇಗೆ ? ಎನ್ನುವುದು ಒಂದು ರೀತಿಯ ವಾದವಾದರೆ, ಇನ್ನೊಂದು ಕಡೆ ಸುಳ್ಳಿನ ಹಿಂದೆ ಎಂತಹ ತಪ್ಪು ಅಥವ ಅಪರಾಧ ನಡೆದಿದೆಯೋ ? ಮಕ್ಕಳು ತೊಂದರೆಗೆ ಸಿಕ್ಕಿ ಹಾರಿಕೊಂಡರೆ ಅನ್ನುವ ಆತಂಕ ಮತ್ತು ಕಾಳಜಿ.
ಈ ಎರಡೂ ಅಂಶಗಳೂ ಸರಿಯೇ, ಹಾಗಾದರೆ ಮಕ್ಕಳು ಸುಳ್ಳು ಹೇಳುವುದಾದರೂ ಯಾಕೇ? ಪೋಷಕರಿಗೆ ಅಗೌರವ ತೋರಿಸಲೋ ಅಥವಾ ತಮ್ಮ ಅಪರಾಧವನ್ನು ಮರೆಮಾಚುವ ಯತ್ನದಿಂದಲೋ? ಬನ್ನಿ ಇದಕ್ಕೆ ಉತ್ತರವನ್ನು ತಿಳಿದುಕೊಳ್ಳೋಣ.
ಮಕ್ಕಳು ಸುಳ್ಳು ಹೇಳುವುದು ಖಂಡಿತವಾಗಿಯೂ ತಪ್ಪು, ಪೋಷಕರು ನಿರ್ಲಕ್ಷ್ಯ ಮಾಡದೇ, ತಪ್ಪನ್ನು ತಿದ್ದಿ ಸರಿಪಡಿಸಬೇಕು. ಇಲ್ಲವಾದರೆ ಸುಳ್ಳು ಹೇಳುವುದೇ ಒಂದು ಚಟವಾಗಿ ಬಿಡುತ್ತದೆ. ಆದರೆ, ಮಕ್ಕಳು ಸುಳ್ಳು ಹೇಳಿದಾಕ್ಷಣ, ಪೋಷಕರನ್ನು ಅಗೌರವಿಸದಂತೆ ಮತ್ತು ಪ್ರೀತಿಸುವುದಿಲ್ಲ, ನಮ್ಮನ್ನು ಇಷ್ಟಪಡುವುದಿಲ್ಲ, ನಮ್ಮ ಅಗತ್ಯವಿಲ್ಲವೆಂದುಕೊಳ್ಳುವುದು ಎಷ್ಟು ಸರಿ? ಅಥವಾ ಸುಳ್ಳು ಹೇಳಿದಾಕ್ಷಣ ವಿಷಯವನ್ನು ಮರೆಮಾಚುವುದಕ್ಕೆಯೇ ಎಂದು ನಿರ್ಣಯ ಮಾಡುವುದೂ ಸರಿಯಲ್ಲ. ಕೆಲವು ಕಾರಣಗಳಿಂದಾಗಿ ಮಕ್ಕಳು ಸುಳ್ಳು ಹೇಳುತ್ತಾರೆ. ಈ ಕಾರಣಗಳನ್ನು ತಿಳಿದುಕೊಂಡರೆ ಖಂಡಿತವಾಗಿಯೂ ಸುಳ್ಳು ಹೇಳುವ ಚಟದಿಂದ ಹೊರತರಬಹುದು.
ಮಕ್ಕಳು ಪೋಷಕರ ಸುಳ್ಳು ಹೇಳಲು ಕಾರಣಗಳು
1. ಪೋಷಕರ ಪ್ರತಿಕ್ರಿಯೆ - ಮಕ್ಕಳು ಪ್ರಾಮಾಣಿಕತೆಯಿಂದ ನೇರವಾಗಿ ನಿಜ ಹೇಳಿದಾಗ ಪೋಷಕರು ವಿಪರೀತ ಕೋಪಗೊಂಡು ಕಠಿಣ ಶಿಕ್ಷೆ ನೀಡಿದರೆ, ತಿರಸ್ಕಾರ ಮಾಡಿದರೆ, ಅತಿಯಾಗಿ ನಿಂದಿಸಿದರೆ, ಹೊಡೆದರೆ ಅಥವಾ ಕೆಟ್ಟ ಹಣೆಪಟ್ಟಿ ಹಚ್ಚಿದರೆ, ಅಪಹಾಸ್ಯ ಅಥವಾ ಕುಹಕ ಮಾಡಿದರೆ ಎಂಬ ಕಾರಣಕ್ಕೆ ಮಕ್ಕಳು ಮರೆಮಾಚಲು ಪ್ರಾರಂಭಿಸುತ್ತಾರೆ. ಬಹಳಷ್ಟು ಪೋಷಕರು ಬಂಧು ಬಳಗದವರು, ಸ್ನೇಹಿತರು, ಕಂಡವರ ಬಳಿ ಮಕ್ಕಳ ಬಗ್ಗೆ ದೂರು ಹೇಳಲು ಪ್ರಾರಂಭಿಸುತ್ತಾರೆ. ಇದರಿಂದ ಮಕ್ಕಳು ಅವಮಾನ ಮತ್ತು ಬೇಸರಗೊಂಡು ಸುಳ್ಳಿನ ಮೊರೆ ಹೋಗಬಹುದು. ಮಕ್ಕಳನ್ನು ಮನೆಯಲ್ಲಿ ಕೂಡಿಹಾಕುವುದು, ಆಹಾರ ಕೊಡದೇ ಇರುವುದು, ಕತ್ತಲ್ಲಲ್ಲಿ ಒಂಟಿಯಾಗಿ ಬಿಡುವುದು, ದೇಹ ದಂಡಿಸುವುದು ಇತ್ಯಾದಿಯನ್ನು ಪೋಷಕರು ಮಾಡುತ್ತಾರೆ. ಉದಾ: ನಾನು ಕಾಲೇಜ್ ಬಂಕ್ ಮಾಡಿ ನಿನ್ನೆ ಸಿನಿಮಾ ಹೋಗಿದ್ದೆ, ಕಾಲೇಜಿನ ಪ್ರಿನ್ಸಿಪಲ್ ನನಗೆ ಬೈದರು, ಸ್ನೇಹಿತರ ಜೊತೆ ಬೈಕ್ ರೈಡಿಂಗ್ ಹೋಗಿದ್ದೆ… ಇಂತಹ ಸನ್ನಿವೇಶಗಳನ್ನು ಮಕ್ಕಳು ಪೋಷಕರ ಬಳಿ ಹಂಚಿಕೊಂಡಾಗ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ, ತಿದ್ದುವ ಉದ್ದೇಶವಿದ್ದರೂ ಕೂಡ ಉದ್ವೇಗದಿಂದ ಮಕ್ಕಳನ್ನು ವಿಪರೀತವಾಗಿ ದಂಡಿಸಿ ನಿಂದಿಸಿದಾಗ ಮಕ್ಕಳು ಇಂತಹ ವಿಷಯಗಳನ್ನು ಸುಳ್ಳು ಹೇಳಿ ಮರೆಮಾಚುತ್ತಾರೆ.
2. ಪೋಷಕರ ಒತ್ತಡ ಮತ್ತು ಟೆನಷನ್ - ಕೆಲವೊಮ್ಮೆ ಪೋಷಕರು ಮಕ್ಕಳು ತಪ್ಪು ಮಾಡಿದಾರೆಂದು ತಿಳಿದಾಗ ಒತ್ತಡ ಹಾಗೂ ಟೆನಷನ್‌ಗೆ ಒಳಗಾಗುತ್ತಾರೆ. ಸರಿಯಾಗಿ ಊಟ ನಿದ್ರೆ ಮಾಡದಿರುವುದು, ಮಕ್ಕಳ ಮುಂದೆ ಅಳುವುದು, ಮಕ್ಕಳಿಗೆ ಶಿಕ್ಷೆ ನೀಡದಿದ್ದರೂ ತಾವೇ ಚಿಂತೆಗೆ ಒಳಗಾಗುತ್ತಾರೆ. ಪೋಷಕರ ಅಂತಹ ನಡುವಳಿಕೆಯನ್ನು ಮಕ್ಕಳು ಗಮನಿಸಿದರೆ, ಪೋಷಕರಿಗೆ ಒತ್ತಡ ನೀಡಬಾರದೆಂದು ವಿಷಯಗಳನ್ನು ಮರೆಮಾಚಲು ಯತ್ನಿಸಬಹುದು.
3. ಪೋಷಕರ ಒಪ್ಪಿಗೆ ಮತ್ತು ಮನವೊಲಿಸಲು - ಮಕ್ಕಳು ಕೆಲವು ಸಲ ಪೋಷಕರ ಮೆಚ್ಚಿಸಲು, ಪ್ರಶಂಸೆ ಅಥವ ಒಪ್ಪಿಗೆ ಪಡೆಯಲು ಸಹ ಸುಳ್ಳನ್ನು ಹೇಳುತ್ತಾರೆ. ಉದಾ: ನಾನು ಸ್ಮಾರ್ಟ್ ಹುಡುಗಿ ಎಂದು ಶಾಲೆಯಲ್ಲಿ ಟೀಚರ್ ಎಲ್ಲರ ಮುಂದೆ ಹೊಗಳಿದರು, ಸ್ನೇಹಿತರ ಗುಂಪಲ್ಲಿ ನಾನು ಎಲ್ಲರ ಮೆಚ್ಚಿನ ಹುಡುಗಿ, ಗೆಳೆಯರ ಜೊತೆ ಸಿನಿಮಾ ಹೋಗುತ್ತೀನಿ, ಗೆಳತಿಯರು ಬರುವುದಿಲ್ಲ, ಧೂಮಪಾನವಾಗಲಿ, ಮಧ್ಯಪಾನ ಗೆಳೆಯರ ಜೊತೆ ಮಾಡುವುದಿಲ್ಲ ಇತ್ಯಾದಿ
4. ಪೋಷಕರ ಗಮನ ಸೆಳೆಯಲು - ಒಂದು ಪಕ್ಷ ಮಕ್ಕಳಿಗೆ ಪೋಷಕರು ಹೆಚ್ಚು ಸಮಯ ಮತ್ತು ಗಮನ ಕೊಡದಿದ್ದರೆ ಮಕ್ಕಳು ಸುಳ್ಳು ಹೇಳಿ ಬಲವಂತದಿಂದ ಗಮನ ಸೆಳೆಯಲು ಸುಳ್ಳು ಹೇಳಬಹುದು. ಉದಾ: ದಾರಿಯಲ್ಲಿ ಬರುತ್ತಿದ್ದಾಗ ಹುಡುಗರು ರೇಗಿಸಿದರು, ತಲೆ ನೋವು, ಹೊಟ್ಟೆ ನೋವು ಇತ್ಯಾದಿ
5. ಅತಿಯಾದ ಕಟ್ಟುನಿಟ್ಟು, ಶಿಸ್ತು - ಅತಿಯಾದ ನಿರ್ಬಂಧಗಳು, ಕಟ್ಟುನಿಟ್ಟುಗಳು, ನಿಯಮಗಳನ್ನು ಮಕ್ಕಳ ಮೇಲೆ ಬಲವಂತದಿಂದ ಹೇರಿದಾಗಲೂ ಸಹ ಮಕ್ಕಳು ಬೇಸತ್ತು ಸುಳ್ಳು ಹೇಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.
6. ಪೋಷಕರ ಅನುಕರಣೆ - ಕೆಲವೊಮ್ಮೆ ಪೋಷಕರು ಮಕ್ಕಳ ಬಳಿ ಪದೇ ಪದೇ ಸುಳ್ಳು ಹೇಳುತ್ತಿದ್ದರೆ ಅಥವಾ ತಮ್ಮ ಮಕ್ಕಳಿಗೆ ಕಾರಣಗಳಿಟ್ಟುಕೊಂಡು ಸುಳ್ಳು ಹೇಳಲು ಪ್ರಚೋದಿಸಿದರೆ ಮಕ್ಕಳೂ ಅದನ್ನೇ ಅಭ್ಯಾಸ ಮಾಡಿಕೊಳ್ಳಬಹುದು. ಉದಾ: ತಂದೆ ಮನೆಯಲ್ಲಿ ಇದ್ದುಕೊಂಡು, ಮನೆಗೆ ಯಾರಾದರು ಬಂದಾಗ ಮನೆಯಲ್ಲಿ ಇಲ್ಲವೆಂದು ಮಕ್ಕಳಿಗೆ ಹೇಳು ಎನ್ನುವುದು, ಮದುವೆಗೆ ಹೋಗದೇ ನಮಗೆ ಆರೋಗ್ಯ ಸರಿಯಿರಲಿಲ್ಲ ಅದಕ್ಕೆ ಬರಲಿಲ್ಲವೆಂದು ಸುಳ್ಳು ಹೇಳುವುದು, ಮಕ್ಕಳನ್ನು ಊರಿಗೆ ತರೆದುಕೊಂಡು ಹೋಗಿ ಮರುದಿನ ಶಾಲೆಯಲ್ಲಿ ಮಕ್ಕಳಿಗೆ ಅನಾರೋಗ್ಯದಿಂದ ಶಾಲೆಗೆ ರಜ ಹಾಕಿದ್ದಾರೆಂದು ಮಕ್ಕಳ ಮುಂದೆಯೇ ಸುಳ್ಳು ಹೇಳುವುದು. ಮಕ್ಕಳು ಇದನ್ನೇ ಅನುಕರಣೆ ಮಾಡುವ ಸಾಧ್ಯತೆಯಿರುತ್ತದೆ
ಆದ್ದರಿಂದ ಮಕ್ಕಳಿಗೆ ಪೋಷಕರೆೇ ಆದರ್ಶ. ಆದಷ್ಟು ಪೋಷಕರು ಮಕ್ಕಳ ಬಳಿ ಪ್ರಾಮಾಣಿಕತೆಯಿಂದ ನಡೆದುಕೊಂಡು ಮಕ್ಕಳಿಗೂ ಸಹ ಪ್ರಾಮಾಣಿಕತೆಯನ್ನು ಅನುಸರಿಸಲು ಬೆಂಬಲಿಸಬೇಕು. ಸುಳ್ಳು ಹೇಳುವುದು ಸಹ ಮಕ್ಕಳ ಬೆಳವಣಿಗೆಯ ಒಂದು ಭಾಗ ಆದರೆ ಮಿತಿಮೀರದಂತೆ ನೋಡಿಕೊಳ್ಳಬೇಕು. ಸುಳ್ಳು ಹೇಳಿದಾಗ ಕಾರಣಗಳನ್ನು ತಿಳಿದುಕೊಂಡು ತಿದ್ದಬೇಕು. ಮಕ್ಕಳ ವಿಶ್ವಾಸವನ್ನು ಕಳೆದುಕೊಂಡಿದ್ದರೆ ಪುನಃ ಗಳಿಸಬೇಕು. ಕಠಿಣ ಶಿಕ್ಷೆ ವಿಧಿಸಬಾರದು.
ಪುಟ್ಟ ಮಕ್ಕಳಿಗೆ ಬಾಲ್ಯದಲ್ಲಿ ಆದಷ್ಚು ಇಂತಹ ಕಥೆಗಳ ಮೂಲಕ ಸತ್ಯದ ಪ್ರಬಲವನ್ನು ಮಕ್ಕಳಿಗೆ ತಿಳಿಸಿಕೊಡಿ.
- " ಸತ್ಯವೇ ನಮ್ಮ ತಾಯಿ-ತಂದೆ, ಸತ್ಯವೇ ನಮ್ಮ ಬಂದು-ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು” ಪುಣ್ಯಕೋಟಿಯ ಕಥೆಯಲ್ಲಿ ಪುಣ್ಯಕೋಟಿಯ ಸತ್ಯ ಹೇಗೆ ಕ್ರೂರ
ಹುಲಿಯನ್ನು ಪರಿವರ್ತಿಸಿತು, ಸತ್ಯ ಎಷ್ಟು ಪ್ರಬಲವಾದುದು ಎಂದು ತಿಳಿಯುತ್ತದೆ.
- “ಸತ್ಯ ಹರಿಶ್ಚಂದ್ರ" ರಾಜನ ಕಥೆಯಲ್ಲಿ ಹರಿಶ್ಚಂದ್ರನು ಸತ್ಯಕ್ಕೋಸ್ಕರ ತನ್ನ ಸಾಮ್ರಾಜ್ಯ, ಪ್ರೀತಿಯ ಮಡದಿಯನ್ನು ತ್ಯಾಗ ಮಾಡಬೇಕಾಗಿ ಬಂದರೂ ಆತ ಸತ್ಯವನ್ನು ಬಿಡುವುದಿಲ್ಲ.
- “ಹುಲಿ ಬಂತು ಹುಲಿ” ಎಂಬ ಕಥೆಯಲ್ಲಿ ಒಬ್ಬ ಹುಡುಗ ಕಾಡಿಗೆ ಹೋಗಿ ಸುಮ್ಮನೆ ಹುಲಿ ಬಂತು ಕಾಪಾಡಿ ಅಂತ ಬೊಬ್ಬೆ ಹೊಡೆಯುತ್ತಾನೆ. ಎರಡು ಬಾರಿ ಅವನು ಕಿರುಚಿಕೊಂಡಾಗ ಅವನನ್ನು ರಕ್ಷಿಸಲು ಊರಿನವರೆಲ್ಲ ಓಡೋಡಿ ಬರುತ್ತಾರೆ. ಆದರೆ ಮೂರನೇ ಬಾರಿ ನಿಜವಾಗಿಯೂ ಹುಲಿ ಬಂದಿರುತ್ತದೆ. ಆದರೆ, ಅವನು ಎಷ್ಟು ಅರಚಾಡಿದರೂ ಸುಳ್ಳು ಹೇಳುತ್ತಿದ್ದಾನೆ ಅಂದುಕೊಂಡು ಅವನನ್ನು ಕಾಪಾಡಲು ಯಾರು ಬರುವುದಿಲ್ಲ. ಸುಳ್ಳನ್ನೇ ನಂಬಿಕೊಂಡಿದ್ದರೆ ನಮ್ಮ ಬದುಕು ಕೂಡ ಈ ಕಥೆಯ ಹಾಗೇ ಆಗುವುದು ಎಂಬುದನ್ನು ಕಥೆಯ ಮೂಲಕ ಮಕ್ಕಳಿಗೆ ತಿಳಿಸಬಹುದು.
ಹೀಗಾಗಿ ಯಾವ ಕಾರಣಕ್ಕೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಂತರ ಅವರಿಗೆ ಸುಳ್ಳು ಹೇಳುವುದು ಎಷ್ಟು ತಪ್ಪು ಎಂಬುದನ್ನು ಮನವರಿಕೆ ಮಾಡಿ. ನಿಮ್ಮ ಕಾರಣದಿಂದಲೇ ಅವರು ಸುಳ್ಳು ಹೇಳುತ್ತಿದ್ದರೆ, ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ