ಮನಸ್ಸಿನೊಂದಿಗೆ ಆಟ ಆಡುವ ಶೋಷಕರು: ಲವ್‌ಬಾಂಬಿಂಗ್ ಟು ಗ್ಯಾಸ್‌ಲೈಟಿಂಗ್ ಸಂಬಂಧದ ನೆಪದಲ್ಲಿ ಕಾಡುವ ತಂತ್ರಗಾರರನ್ನು ಗುರುತಿಸಿ -ಮನದ ಮಾತು
ಭವ್ಯಾ ವಿಶ್ವನಾಥ್: ಒಬ್ಬ ವ್ಯಕ್ತಿಯು ತನ್ನ ಅನುಕೂಲ ಅಥವಾ ಹಿತಾಸಕ್ತಿಗೆ ತಕ್ಕಂತೆ ನಡೆದಿರುವ ಸಂಗತಿ, ಸತ್ಯವನ್ನು ಬದಲಿಸುತ್ತಾನೆ. ಇಂಥವರನ್ನೇ ‘ಸಂಬಂಧಗಳ ತಂತ್ರಗಾರರು’ ಎನ್ನುವುದು ಸದಾ ಎದುರಿಗೆ ಇರುವವರದೇ ತಪ್ಪು ಎನ್ನುವಂತೆ ವರ್ತಿಸುವ ಇಂಥವರನ್ನು ಗುರುತಿಸುವುದು ಹೇಗೆ? ಈ ಬರಹದಲ್ಲಿದೆ ಉತ್ತರ.
ಒಬ್ಬ ವ್ಯಕ್ತಿ ಸಂಬಂಧದಲ್ಲಿ ತಂತ್ರಗಳನ್ನು (Manipulation) ಬಳಸಿ ಅಧಿಕಾರ (ಮೇಲುಗೈ) ಅಥವಾ ನಿಯಂತ್ರಣ ಪಡೆಯುಬಹುದು. ಇಂತಹ ವ್ಯಕ್ತಿಯನ್ನು ತಂತ್ರಗಾರನೆಂದು (ಮ್ಯಾನಿಪುಲೇಟರ್) ಎಂದು ಕರೆಯಲಾಗುತ್ತದೆ. ಇಂತಹ ಮ್ಯಾನಿಪುಲೇಷನ್ ಎಲ್ಲಾ ತರಹದ ಸಂಬಧಗಳಲ್ಲೂ ಉದ್ಭವಿಸಬಹುದು. ಹೀಗೆ ಮಾಡುವವರು ಪುರುಷರಷ್ಟೇ ಅಲ್ಲ; ಮಹಿಳೆಯರೂ ಆಗಿರಬಹುದು. ಉದ್ಯೋಗ, ವ್ಯಾಪಾರ, ಸ್ನೇಹ, ರೊಮಾಂಟಿಕ್ ಸಂಬಂಧಗಳಲ್ಲಿ, ಪೋಷಕರು ಮತ್ತು ಮಕ್ಕಳ ನಡುವೆಯೂ ಸಹ ಮ್ಯಾನಿಪುಲೇಷನ್ ಆಗುವ ಇರುವ ಸಾಧ್ಯತೆಯಿದೆ.
ಒಬ್ಬ ವ್ಯಕ್ತಿಯು ತನ್ನ ಅನುಕೂಲ ಅಥವಾ ಹಿತಾಸಕ್ತಿಗೆ ತಕ್ಕಂತೆ ನಡೆದಿರುವ ಸಂಗತಿ ಅಥವಾ ಸತ್ಯವನ್ನು ಬದಲಾಯಿಸುತ್ತಾನೆ. ತಾನು ತಪ್ಪಿಸ್ಥತನ್ನಲ್ಲವೆಂದು ಸಾಬಿತುಮಾಡಿಕೊಳ್ಳಲು, ತನ್ನನ್ನು ರಕ್ಷಿಸಿಕೊಳ್ಳಲು ತಂತ್ರ ಬಳಸುತ್ತಾನೆ. ತನ್ನ ಯೋಜನೆ ಅಥವಾ ಮನಸ್ಸಿನಲ್ಲಿರುವುದನ್ನು ನೇರವಾಗಿ ವ್ಯಕ್ತಪಡಿಸುವುದಿಲ್ಲ.
ಕೆಲವು ಸಮಯಗಳಲ್ಲಿ ತಾನು ಸಿಕ್ಕಿಹಾಕಿಕೊಳ್ಳಬಾರದೆಂಬ ಉದ್ದೇಶದಿಂದಲೂ ಹೀಗೆ ಮಾಡಬಹುದು ಅಥವಾ ಬೇರೆಯವರನ್ನು ಸಿಕ್ಕಿಹಾಕಿಸಲು ಸಹ ಮ್ಯಾನಿಪುಲೇಟ್ ಮಾಡಬಹುದು. ಮ್ಯಾನಿಪುಲೇಟರ್ ಮಾನಸಿಕ ಶೋಷಣೆಯ ಮೂಲಕ ಇತರರ ಮೇಲೆ ತನ್ನ ಪ್ರಬಲವಾದ ಪ್ರಭಾವ ಬೀರುತ್ತಾನೆ. ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ.
ತಮ್ಮಲ್ಲಿರುವ ಚಾಣಾಕ್ಷತನವನ್ನು ಬಳಸಿ ಇರುವ ವಿಷಯವನ್ನು ತಿರುಚುವುದು, ಮೇಲೆ ಕೆಳಗೆ ಮಾಡುವುದು, ಸುತ್ತಿ ಬಳಸಿ ವ್ಯಕ್ತಪಡಿಸುವುದು, ಮರೆಮಾಚುವುದು, ನೆಪ ಕೊಡುವುದು, ತಪ್ಪಿಸಿಕೊಳ್ಳುವುದು ಇತ್ಯಾದಿ ಸ್ವಭಾವಗಳು ಇವರದ್ದಾಗಿರುತ್ತದೆ. ಸಮಸ್ಯೆಯ ಕುರಿತು ಮುಕ್ತವಾಗಿ ಚಚಿ೯ಸಲು ಬೇರೆಯವರು ಇವರ ಬಳಿ ಬಂದಾಗ ಕೂಗಾಡುವುದು, ಜಗಳವಾಡುವುದು, ಅಸಭ್ಯ ಬೈಗುಳ ಮತ್ತು ದೈಹಿಕವಾಗಿ ನಿಂದಿಸುವುದು ಇತ್ಯಾದಿಗಳು ಇವರ ವರ್ತನೆಯಾಗಿರುತ್ತದೆ. ತಾನು ಬಯಸಿದ್ದನ್ನು ಪಡೆಯಲು ಮತ್ತು ಇತರರ ಮೇಲೆ ಅಧಿಕಾರ ಮತ್ತು ನಿಯಂತ್ರಣವನ್ನು ಸದಾ ಹೊಂದಿರಬೇಕು ಎನ್ನುವುದು ಇವರ ಉದ್ದೇಶವಾಗಿರುತ್ತದೆ.
ಸಂಬಂಧಗಳಲ್ಲಿ ಈ ರೀತಿಯ ಮ್ಯಾನಿಪುಲೇಷನ್ ಆಫೀಸ್ ಸಹೋದ್ಯೋಗಿಗಳು, ಸ್ನೇಹಿತರು, ಬಾಳಸಂಗಾತಿ, ಮಕ್ಕಳು ಹೀಗೆ ಯಾವ ಸಂಬಂಧದಲ್ಲಾದರೂ ಆಗಬಹುದು. ಯಾರಾದರೂ ನಿಮ್ಮನ್ನು ನಿರಂತರವಾಗಿ ಭಾವನಾತ್ಮಕವಾಗಿ ಹಿಂಸಿಸುತ್ತಿದ್ದಾರೆ, ಖಾಲಿತನವನ್ನು ಅನುಭವಿಸುವಂತೆ ಮಾಡುತ್ತಿದ್ದರೆ, ಅವರಿಂದ ನಿಮ್ಮಲ್ಲಿ ಆತಂಕ, ಭಯ ಉಂಟು ಮಾಡುತ್ತಿದ್ದರೆ ಅಂಥವರ ಬಗ್ಗೆ ಎಚ್ಚರದಿಂದ ಇರಿ. ಅಷ್ಟೇ ಅಲ್ಲ, ಅವರ ಹಿತಾಸಕ್ತಿಯ ಎದುರು ನಿಮ್ಮ ಸ್ವಂತ ಅಗತ್ಯ, ಆಲೋಚನೆಗಳು ಮತ್ತು ಭಾವನೆಗಳು ಮೌಲ್ಯವೇ ಇಲ್ಲದವು ಎನ್ನುವಂತೆ ಸಂಶಯ ವ್ಯಕ್ತಪಡಿಸುತ್ತಿದ್ದರೆ ನೀವು ಸಹ ಮ್ಯಾನಿಪುಲೇಷನ್‌ಗೆ ಒಳಗಾಗಿರಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
ಈ ಕೆಳಕಂಡ 4 ವಿಧದ ಮ್ಯಾನಿಪುಲೇಷನ್ ಬಗ್ಗೆ ತಿಳಿಯಿರಿ
1) ಗಾಸ್ ಲೈಟಿಂಗ್ (Gas Ligting): ಈ ತಂತ್ರದಲ್ಲಿ ವ್ಯಕ್ಕಿಯು (ಮ್ಯಾನಿಪುಲೇಟರ್) ವಾಸ್ತವದಲ್ಲಿರುವ ಸತ್ಯವನ್ನು ತನ್ನ ಅನುಕೂಲಕ್ಕೊಸ್ಕರ ಬದಲಿಸುತ್ತಾನೆ. ನಿಜಾಂಶವನ್ನು ವಿಕೃತಗೊಳಿಸುತ್ತಾನೆ. ತನ್ನದೇ ಆದ ವ್ಯಾಖ್ಯಾನ ನೀಡುತ್ತಾನೆ. ಇದರಿಂದ ಸಂತ್ರಸ್ತ ವ್ಯಕ್ತಿಯು ತಬ್ಬಿಬ್ಬಾಗಿ ಗೊಂದಲಕ್ಕೀಡಾಗಬಹುದು. ಯಾವುದು ನಿಜ ಎಂದು ವಿವರಿಸಲು, ಅಥವಾ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಸುಮ್ಮನೆ ಒಪ್ಪಿಕೊಳ್ಳಬಹುದು. ಇದು ಹೀಗೆಯೇ ಮುಂದುವರಿದರೆ, ಮ್ಯಾನಿಪುಲೇಟರ್ ಇದನ್ನು ಸಂತ್ರಸ್ತ ವ್ಯಕ್ತಿಯ ದೌರ್ಬಲ್ಯ ಎಂದು ತಿಳಿದು ತನ್ನ ತಂತ್ರವನ್ನು ಮುಂದುವರೆಸಿ ಹೆಚ್ಚಿನ ದುರುಪಯೋಗ ಮಾಡಿಕೊಳ್ಳಬಹುದು.
2) ಸ್ಟೋನ್ ವಾಲಿಂಗ್ (Stone Walling): ಇಲ್ಲಿ ಮ್ಯಾನಿಪುಲೇಟರ್ ತನ್ನ ತಪ್ಪು ಏನು ಎಂದು ತಿಳಿದು, ಉತ್ತರ ಕೊಡುವುದನ್ನು ತಡೆಯುವುದಕ್ಕೆ ಮೌನವಾಗಿ ದೂರ ಸರಿಯುತ್ತಾನೆ. ಹೀಗೆ ದೂರ ಸರಿದರೆ, ಇನ್ನೊಂದು ವ್ಯಕ್ತಿಗೆ ಕಳೆದುಕೊಳ್ಳುವ ಭಯ ಮತ್ತು ಆತಂಕದಿಂದ ಸುಮ್ಮನಾಗಿಬಿಡಬಹುದು. ಯಾವುದೇ ಕಾರಣಕ್ಕೂ ನಾನು ಸಿಕ್ಕಿ ಹಾಕ್ಕೊಳಬಾರದೆಂಬ ಉದ್ದೇಶದಿಂದಲೂ ಸಹ ಹೀಗೆ ವರ್ತಿಸಬಹುದು. ಪ್ರೀತಿ ಪ್ರೇಮ ಸಂಬಧಗಳಲ್ಲಿ ಈ ರೀತಿಯ ಮ್ಯಾನಿಪುಲೇಷನ್ ಹೆಚ್ಚಾಗಿರುತ್ತದೆ
3) ಬ್ರೆಡ್ ಕ್ರಂಬಿಂಗ್ (Bread Crumbing): ಇಲ್ಲಿ ವ್ಯಕ್ತಿಯು ಉದ್ದೇಶಪೂರ್ವಕ ಅಥವಾ ಉದ್ದೇಶರಹಿತವಾಗಿಯೋ ಇನ್ನೊಬ್ಬ ವ್ಯಕ್ತಿಯಲ್ಲಿ ಆಸಕ್ತಿ ಹೊಂದಿ, ಸಂಬಂಧ ಬೆಳೆಸುತ್ತಾನೆ. ಆದರೆ ಸಂಬಂಧವನ್ನು ಧೃಢೀಕರಿಸುವುದಿಲ್ಲ. ಇನ್ನೊಬ್ಬ ವ್ಯಕ್ತಿಯು ಸಂಬಂಧವನ್ನು ಖಚಿತಪಡಿಸಲು ಅಪೇಕ್ಷಿಸಿದರೆ, ಹಿಂಜರಿಯುತ್ತಾನೆ. ಒಬ್ಬ ಸಂಗಾತಿ ಅಥವ ಸಂಬಂಧದ ಗೈರು ಹಾಜರಿಯಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧದಲ್ಲಿರುವ ಸಾಧ್ಯತೆ ಹೆಚ್ಚು. ಪ್ರೀತಿ, ಪ್ರೇಮದ ವಿಚಾರದಲ್ಲಿ ಈ ರೀತಿಯ ಮ್ಯಾನಿಪುಲೇಷನ್ ಹೆಚ್ಚು. ಯಾರಾದರೂ ಬ್ರೆಡ್‌ಕ್ರಂಬ್ ಮಾಡಿದರೆ ಅದರ ಪರಿಣಾಮವು ನಂಬಲಾಗದಷ್ಟು ಹಾನಿಕಾರಕವಾಗಿರುತ್ತದೆ. ವಿಶೇಷವಾಗಿ ಇದು ದೀಘ೯ ಕಾಲದವರೆಗೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
4) ಲವ್ ಬಾಂಬಿಂಗ್ (Love Bombing): ಇಂಥವರು ಮತ್ತೊಬ್ಬ ವ್ಯಕ್ತಿಯ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸುತ್ತಾರೆ. ಮಿತಿಮೀರೀದ ಪ್ರೀತಿ, ವಿಪರೀತ ಗಮನ ಕೊಡುವುದು, ಪ್ರಶಂಸಿಸುವುದು, ಉಡುಗೊರೆ ನೀಡುವುದು, ಅನಗತ್ಯ ಕಾಲಜಿ ತೋರಿಸುವುದು ಕಂಡುಬರುತ್ತದೆ ಮತ್ತು ಇದರ ಹಿಂದೆ ಮತ್ತೊಬ್ಬರ ಮೇಲೆ ನಿಯಂತ್ರಣ ಅಥವಾ ಪ್ರಭಾವವನ್ನು ಪಡೆಯುವ ಉದ್ದೇಶವಿರುತ್ತದೆ. ಒಮೊಮ್ಮೆ ಬಹಳ ಅಸಹಜವಾಗಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಸಂಬಂಧದ ಆರಂಭದಲ್ಲಿ ಸಂಭವಿಸುತ್ತದೆ ಮತ್ತು ಸ್ವೀಕರಿಸುವವರಿಗೆ ಭಾವನಾತ್ಮಕವಾಗಿ ಅವಲಂಬಿತರಾಗಲು ಕಾರಣವಾಗಬಹುದು.
ಈ ಲೇಖನದ ಮೂಲಕ ಓದುಗರಿಗೆ ಒಂದು ಅಂಶವನ್ನು ನಾನು ದಾಟಿಸಲು ಪ್ರಯತ್ನಿಸುತ್ತಿದ್ದೇನೆ. ಸಂಬಂಧಗಳು ಸಹಜವಾಗಿರಬೇಕು. ಒಬ್ಬರು ಮತ್ತೊಬ್ಬರನ್ನು ಅಸಹಜವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಅದರಲ್ಲಿ ಏನೋ ಸಮಸ್ಯೆಯಿದೆ ಎಂದೇ ಅರ್ಥ. ಅದನ್ನು ಆರಂಭದಲ್ಲಿಯೇ ಗಮನಿಸಿ ಸರಿಪಡಿಸಿಕೊಳ್ಳುವುದು ಒಳ್ಳೆಯದು. ತಮ್ಮನ್ನು ತಾವು ಬುದ್ಧಿವಂತರು ಎಂದುಕೊಂಡಿರುವ ಕೆಲವರು ಮೇಲ್ಕಂಡ ಮ್ಯಾನಿಪುಲೇಷನ್ (ತಂತ್ರಗಳು) ಮೂಲಕ ಸಂಬಂಧಗಳನ್ನು ನಿಯಂತ್ರಿಸಲು, ಅಧಿಕಾರ ಚಲಾಯಿಸಲು ಮತ್ತು ಸ್ವಯಂ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಾರೆ. ನೆನಪಿರಲಿ, ಎಲ್ಲ ಸಂದರ್ಭದಲ್ಲಿಯೂ ಇಂಥ ವರ್ತನೆಯನ್ನು ಇನ್ನೊಬ್ಬರು ಒಪ್ಪಬೇಕಿಲ್ಲ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.