ವೀಕೆಂಡ್‌ನಲ್ಲಿ ತಡರಾತ್ರಿಯವರೆಗೆ ಸಿನಿಮಾ-ಪಾರ್ಟಿ ಅಂತಾ ಕೂರಬೇಡಿ; ಚಟುವಟಿಕೆಯಿಂದಿರಲು ಇಷ್ಟೆಲ್ಲಾ ಆಯ್ಕೆಗಳಿವೆ
Oct 13, 2024 04:15 PM IST
ವೀಕೆಂಡ್‌ನಲ್ಲಿ ಚಟುವಟಿಕೆಯಿಂದಿರಲು ಇಷ್ಟೆಲ್ಲಾ ಆಯ್ಕೆಗಳಿವೆ ನೋಡಿ
- ವಾರಾಂತ್ಯ ಬಂದರೆ ಅದು ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಲು, ಸಿನಿಮಾ ನೋಡಲು ಎಂದೇ ಹಲವರು ನಿರ್ಧರಿಸುತ್ತಾರೆ. ಮದ್ಯಪಾನ ಇದ್ದೇ ಇದೆ. ಇದರ ಹೊರತಾಗಿ ವೀಕೆಂಡ್ ಸದ್ಬಳಕೆ ಮಾಡಲು ಹಲವು ವಿಧಾನಗಳಿವೆ. ಆರೋಗ್ಯಕರ ದಿನಚರಿಗೆ ಈ ಸಲಹೆಗಳನ್ನು ಅನುಸರಿಸಿ.
ವೀಕೆಂಡ್ ಬಂತೆಂದರೆ ಉದ್ಯೋಗಿಗಳಿಗೆ ಭಾರಿ ಖುಷಿ. ವಾರಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ವೈಯಕ್ತಿಕ ಬದುಕಿಗೆ ಸಮಯ ಕೊಡಬೇಕು ಎಂದು ನಿರ್ಧರಿಸುತ್ತಾರೆ. ತಮ್ಮ ತಮ್ಮ ಅಭಿರುಚಿಗನುಸಾರವಾಗಿ ಈ ಸಮಯವನ್ನು ವಿನಿಯೋಗಿಸುವವರು ಹಲವರು. ಹೆಚ್ಚಿನ ಜನರು ವಾರಾಂತ್ಯದಲ್ಲಿ ಬೇಗನೆ ಮಲಗಲ್ಲ. ಅದರ ಬದಲಿಗೆ ತಡರಾತ್ರಿಯವರೆಗೂ ಚಲನಚಿತ್ರಗಳನ್ನು ನೋಡುವುದು, ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು, ಪಬ್‌ಗಳಿಗೆ ಹೋಗುವುದು ಹೀಗೆ ಸಮಯ ಕಳೆಯುತ್ತಾರೆ. ಈ ರೀತಿ ಮಧ್ಯರಾತ್ರಿಯವರೆಗೂ ನಿದ್ದೆ ಮಾಡದೆ ಎಚ್ಚರವಾಗಿರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿನಿತ್ಯ ಕೆಲಸದ ನಿಮಿತ್ತ ದಿನದ ಬಹುತೇಕ ಗಂಟೆಗಳು ಕಂಪ್ಯೂಟರ್ ಅಥವಾ ಸ್ಕ್ರೀನಿಂಗ್‌ನಲ್ಲಿ ಕಳೆಯಬೇಕಾಗುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಾರೆ. ಹೀಗಾಗಿ ವಾರಾಂತ್ಯದಲ್ಲಿ ದೇಹಕ್ಕೆ ಸರಿಯಾದ ವಿಶ್ರಾಂತಿ ಅಗತ್ಯವಿದೆ.
ದಿನಕ್ಕೆ ಎಷ್ಟು ಗಂಟೆ ಮಲಗಬೇಕು?
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಕನಿಷ್ಠ 7 ಗಂಟೆಗಳ ನಿದ್ದೆಯಾದರೂ ಬೇಕು. ಆದರೆ ಅನೇಕ ಜನರು ವಾರಾಂತ್ಯದಲ್ಲಿ ಸಿನಿಮಾ ಪಾರ್ಟಿ ಎಂದು ಎಂಜಾಯ್ ಮಾಡಿ ನಿದ್ರೆ ಕಡಿಮೆ ಮಾಡುತ್ತಾರೆ. ಇಲ್ಲವಾದಲ್ಲಿ ತಡವಾಗಿ ಮಲಗೆ ಬೆಳಗ್ಗೆ ತಡವಾಗಿ ಏಳುತ್ತಾರೆ. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಅಪಾಯವಿದೆ.
ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ದೇಹಕ್ಕೆ ಕಿರಿಕಿರಿ ಅನುಭವವಾಗುತ್ತದೆ. ಅಲ್ಲದೆ ತಲೆನೋವು ಕಾಣಿಸಿಕೊಳ್ಳಬಹುದು. ನಿದ್ರಾಹೀನ ಅಭ್ಯಾಸವನ್ನು ದೀರ್ಘಕಾಲದವರೆಗೆ ಮುಂದುವರಿಸಿದರೆ, ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಜೀವಿತಾವಧಿಯೂ ಕಡಿಮೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಸರಿಯಾಗಿ ನಿದ್ದೆ ಮಾಡದಿದ್ದರೆ ಏನಾಗುತ್ತದೆ?
ರಾತ್ರಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾದರೆ, ಹಾರ್ಮೋನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒತ್ತಡ ಮತ್ತು ಆತಂಕ ಹೆಚ್ಚಾಗಿ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಆಹಾರ ಸೇವನೆಯಲ್ಲಿ ವ್ಯತ್ಯಾಸಗಳಾಗುತ್ತದೆ. ಕಡಿಮೆ ಆಹಾರ ಸೇವನೆ ಅಥವಾ ಅತಿಯಾಗಿ ತಿನ್ನಬೇಕಾಗುತ್ತದೆ. ಇದರಿಂದ ಹಾರ್ಮೋನುಗಳ ಸಮತೋಲನಕ್ಕೆ ತೊಂದರೆಯಾಗಿ ದೇಹದ ತೂಕದಲ್ಲಿ ಭಾರಿ ವ್ಯತ್ಯಾಸಗಳಾಗಬಹುದು.
ಕೆಲವರು ವಾರಾಂತ್ಯ ಬಂತೆಂದರೆ ಮದ್ಯಪಾನಕ್ಕಾಗಿ ಮೀಸಲಿಡುತ್ತಾರೆ. ಆ ನಂತರ ಅತಿಯಾದ ನಿದ್ದೆ ಮಾಡುತ್ತಾರೆ. ತಿನ್ನುವುದು, ಕುಡಿಯುವುದು ಮತ್ತು ಮಲಗುವುದು ಮಾತ್ರವೇ ಎರಡು ದಿನಗಳ ಕೆಲಸ. ಇದು ಆರೋಗ್ಯಕ್ಕೂ ಹಾನಿಕರ ಅಭ್ಯಾಸ. ಅತಿಯಾದ ನಿದ್ರೆಯಿಂದ ಹೃದ್ರೋಗ, ಬೊಜ್ಜು, ಖಿನ್ನತೆ, ಟೈಪ್ 2 ಮಧುಮೇಹ ತಲೆನೋವು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ವಾರಾಂತ್ಯವನ್ನು ಸದುಪಯೋಗಪಡಿಸುವುದು ಹೇಗೆ?
ಅಪರೂಪಕ್ಕೆ ಮನೆಯಲ್ಲಿರುವ ಅವಕಾಶ ಸಿಕ್ಕಾಗ ಕುಟುಂಬದೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಿರಿ. ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಹೊರಗಡೆ ಸುತ್ತಾಡುವುದು ಮಾಡಿ. ಮನೆಯಲ್ಲಿ ಅವರೊಂದಿಗೆ ಸೇರಿ ಚಲನಚಿತ್ರ ನೋಡಿ, ಇಲ್ಲವಾದಲ್ಲಿ ಥಿಯೇಟರ್‌ಗೆ ಜೊತೆಯಾಗಿ ಹೋಗಿ. ಒಂದು ವೇಳೆ ಒಂಟಿಯಾಗಿದ್ದರೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು. ಜೊತೆಗೆ ಪುಸ್ತಕ ಓದುವುದು ಕೂಡಾ ಮಾಡಬಹುದು.
ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದಾದರೆ, ಹಳೆಯ ನೆನಪುಗಳನ್ನು ಮೆಲುಕು ಹಾಕಿ. ಮನೆಯಲ್ಲಿಯೇ ಇದ್ದರೆ, ಕುಟುಂಬದೊಂದಿಗೆ ಒಳಾಂಗಣ ಆಟಗಳನ್ನು ಆಡುವುದು, ಮನೆಗೆಲಸದಲ್ಲಿ ಸಂಗಾತಿಗೆ ನೆರವಾಗುವುದು ಮಾಡಬಹುದು. ಹೊರಗಡೆಯೂ ಆಟವಾಡಬಹುದು. ಬೋರಿಂಗ್ ದಿನಚರಿಗಿಂತ ಸಕ್ರಿಯ ಚಟುವಟಿಕೆಗಳಲ್ಲಿ ಭಾಗಿಯಾದರೆ, ಮತ್ತೆ ಕಚೇರಿ ಕೆಲಸಕ್ಕೆ ಹೋಗುವಾಗ ತಾಜಾತನದಿಂದ ಹೋಗಬಹುದು.