logo
ಕನ್ನಡ ಸುದ್ದಿ  /  ಜೀವನಶೈಲಿ  /  ಓದಿದ್ದೆಲ್ಲಾ ಪರೀಕ್ಷೆ ವೇಳೆ ಮರೀತೀರಾ; ಏಕಾಗ್ರತೆ-ಸ್ಮರಣಶಕ್ತಿ ಸುಧಾರಿಸಲು ವಿದ್ಯಾರ್ಥಿಗಳಿಗೆ ಈ 7 ಯೋಗಾಸನಗಳು ನೆರವಾಗುತ್ತೆ

ಓದಿದ್ದೆಲ್ಲಾ ಪರೀಕ್ಷೆ ವೇಳೆ ಮರೀತೀರಾ; ಏಕಾಗ್ರತೆ-ಸ್ಮರಣಶಕ್ತಿ ಸುಧಾರಿಸಲು ವಿದ್ಯಾರ್ಥಿಗಳಿಗೆ ಈ 7 ಯೋಗಾಸನಗಳು ನೆರವಾಗುತ್ತೆ

Jayaraj HT Kannada

Nov 13, 2024 02:30 PM IST

google News

ಏಕಾಗ್ರತೆ-ಸ್ಮರಣಶಕ್ತಿ ಸುಧಾರಿಸಲು ವಿದ್ಯಾರ್ಥಿಗಳಿಗೆ ಈ 7 ಯೋಗಾಸನಗಳು ನೆರವಾಗುತ್ತೆ

    • ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಕಲಿಕೆಯಲ್ಲಿ ಏಕಾಗ್ರತೆ ವೃದ್ಧಿಸಿ ಜ್ಞಾಪಕ ಶಕ್ತಿ ಹೆಚ್ಚಿಸಲು ಯೋಗಾಸನ ಸಹಕಾರಿ. ವಿದ್ಯಾರ್ಥಿಗಳಿಗಾಗಿ ಕೆಲವೊಂದು ಸರಳ ಯೋಗಗಳು ಇಲ್ಲವೆ.
ಏಕಾಗ್ರತೆ-ಸ್ಮರಣಶಕ್ತಿ ಸುಧಾರಿಸಲು ವಿದ್ಯಾರ್ಥಿಗಳಿಗೆ ಈ 7 ಯೋಗಾಸನಗಳು ನೆರವಾಗುತ್ತೆ
ಏಕಾಗ್ರತೆ-ಸ್ಮರಣಶಕ್ತಿ ಸುಧಾರಿಸಲು ವಿದ್ಯಾರ್ಥಿಗಳಿಗೆ ಈ 7 ಯೋಗಾಸನಗಳು ನೆರವಾಗುತ್ತೆ (Pecel)

ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಆದ್ಯತೆ. ನಿತ್ಯ ಪಠ್ಯ ಚಟುವಟಿಕೆಗಳಲ್ಲಿ ಬೆರೆಯುವ ಮಕ್ಕಳು, ಪಾಠ ಪ್ರವಚನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಿತ ಪಾಠಗಳನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಸಂದರ್ಭಗಳಲ್ಲಿ ಬರೆಯಬೇಕು. ಅಷ್ಟೇ ಅಲ್ಲ ಆ ಪಾಠವು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಬೇಕು. ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿತದ್ದು ಬೇಗನೆ ಮರೆಯುತ್ತೆ ಎನ್ನುವ ಸಮಸ್ಯೆ. ಏನೇ ಮಾಡಿದರೂ ಓದಿದ್ದು ಮಾತ್ರ ನೆನಪಿನಲ್ಲಿ ಉಳಿಯಲ್ಲ ಎಂಬ ಗೋಳು. ಸ್ಮರಣಶಕ್ತಿ ವೃದ್ಧಿಸಿ, ಕಲಿಕೆಯಲ್ಲಿ ಏಕಾಗ್ರತೆ ಮೂಡುವಂತೆ ಆಗಲು ಸುಲಭ ಉಪಾಯಗಳಿವೆ. ಭಾರತದ ಪತಂಜಲಿ ಯೋಗವನ್ನು ಜಗತ್ತೇ ಒಪ್ಪಿಕೊಂಡಿದ್ದು, ಕೆಲವೊಂದು ಆಸನಗಳನ್ನು ನಿತ್ಯ ಮಾಡುವ ಮೂಲಕ ನಿಮ್ಮ ಏಕಾಗ್ರತೆ ವೃದ್ಧಿಸಬಹುದು.

ಏಕಾಗ್ರತೆ ಬರಲು ಮಾನಸಿಕ ಆರೋಗ್ಯ ಮುಖ್ಯ. ಚಿಕ್ಕ ವಯಸ್ಸಿನಲ್ಲೇ ಇದರ ಬಗ್ಗೆ ಕಾಳಜಿ ವಹಿಸಬೇಕು. ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ನಿತ್ಯ ಯೋಗಾಭ್ಯಾಸ ಮಾಡಿದರೆ ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆ ಸುಧಾರಿಸಲು ಈ ಯೋಗಗಳನ್ನು ಮಾಡಬಹುದು.

ಧ್ಯಾನ

ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಧ್ಯಾನ ಉತ್ತಮ ಮಾರ್ಗ. ವಿದ್ಯಾರ್ಥಿಗಳು ಮಾಡಬಹುದಾದ ಸುಲಭ ಯೋಗಾಭ್ಯಾಸಗಳಲ್ಲಿ ಇದು ಪ್ರಮುಖವಾದುದು. ಈ ಭಂಗಿಯಲ್ಲಿ ಕುಳಿತು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಬೇಕು. ಮನಸ್ಸಿನ ಎಲ್ಲಾ ಒತ್ತಡವನ್ನು ದೂರ ಮಾಡಿರಬೇಕು. ಧ್ಯಾನ ಮಾಡಲು ಯಾವುದೇ ನಿರ್ದಿಷ್ಟ ಹಂತ ಅಥವಾ ಭಂಗಿ ಇಲ್ಲ. ಏಕೆಂದರೆ ಇದು ದೇಹಕ್ಕಿಂತ ಹೆಚ್ಚಾಗಿ ಮನಸ್ಸಿನ ಏಕಾಗ್ರತೆಗೆ ಸಂಬಂಧಿಸಿದ ಯೋಗವಾಗಿದೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವು ಹೆಚ್ಚು ದೈಹಿಕ ಶ್ರಮವಿಲ್ಲದೆ ಮಾಡುವ ಭಂಗಿ. ಅತ್ಯಂತ ಪ್ರಸಿದ್ಧವಾದ ಯೋಗ ಇದು. ಉಸಿರಾಟದೊಂದಿಗೆ ಒಟ್ಟು ಹನ್ನೆರಡು ಭಂಗಿಗಳಿವೆ. ಈ ಭಂಗಿಯು ದೇಹದ ಶಕ್ತಿ, ಏಕಾಗ್ರತೆ, ಸಮತೋಲನ ಮತ್ತು ಒಟ್ಟಾರೆ ಚೈತನ್ಯವನ್ನು ಹೆಚ್ಚಿಸುತ್ತದೆ. ಈ ಯೋಗವನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನೇರವಾಗಿ ಸೂರ್ಯನ ಬೆಳಕು ಬೀಳುವ ತೆರೆದ ಜಾಗದಲ್ಲಿ ವಿದ್ಯಾರ್ಥಿಗಳು ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ.

ಪದ್ಮಾಸನ (ಕಮಲ ಭಂಗಿ)

ಇದು ಸರಳವಾದ ಯೋಗ ಭಂಗಿಯಾಗಿದ್ದು, ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಗಮನವನ್ನು ಸುಧಾರಿಸಲು ನೆರವಾಗುತ್ತದೆ. ಈ ಆಸನವು ವಿದ್ಯಾರ್ಥಿಗಳಿಗೆ ಖುಷಿಯ ಸ್ಥಿತಿಯನ್ನು ಉತ್ತೇಜಿಸುವ ಮೂಲಕ ಸ್ಮರಣೆ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ಭ್ರಮರಿ ಪ್ರಾಣಾಯಾಮ

ಕುಳಿತು ಮಾಡುವ ಈ ಯೋಗಭಂಗಿಯು ಮಾನಸಿಕ ಹಾಗೂ ದೈಹಿಕ ಆಯಾಸ ದೂರವಾಗಿಸುತ್ತದೆ. ಏಕಾಗ್ರತೆ ವೃದ್ಧಿಗೆ ಈ ವ್ಯಾಯಾಮ ಸಹಕಾರಿ. ಮಾನಸಿಕ ಒತ್ತಡವನ್ನು ನಿವಾರಿಸುವ ಜೊತೆಗೆ ನಿದ್ದೆಯನ್ನೂ ಸುಧಾರಿಸುತ್ತದೆ. ಇದು ಉಸಿರಾಡುವಾಗ ಗುನುಗುವ ಶಬ್ದವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳ ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಏಕಾಗ್ರತೆ, ಸ್ಮರಣಶಕ್ತಿ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ.

ವೃಕ್ಷಾಸನ (ಮರದ ಭಂಗಿ)

ನಿಯಮಿತವಾಗಿ ಈ ಆಸನ ಮಾಡುವುದರಿಂದ ಮಾನಸಿಕ ಸ್ಥಿರತೆ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ವೃಕ್ಷಾಸನ ಒಂದು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಈ ಭಂಗಿಯು ದೇಹದ ಶಕ್ತಿಯನ್ನು ಸುಧಾರಿಸುತ್ತದೆ.

ಹಲಾಸನ (ನೇಗಿಲು ಭಂಗಿ)

ಮೆದುಳಿಗೆ ಸಮತೋಲಿತ ರಕ್ತ ಪರಿಚಲನೆಗಾಗಿ ವಿದ್ಯಾರ್ಥಿಗಳು ಹಲಾಸನ ಮಾಡಬಹುದು. ಇದರಿಂದ ನರಮಂಡಲ ಸಕ್ರಿಯವಾಗುತ್ತದೆ. ಮೆದುಳಿನ ಪ್ರದೇಶದಲ್ಲಿ ಉತ್ತಮ ರಕ್ತ ಪರಿಚಲನೆಯು ಮೆದುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಆ ಮೂಲಕ ಸ್ಮರಣೆ ಶಕ್ತಿ ಬೆಳೆದು ಏಕಾಗ್ರತೆ ವೃದ್ಧಿಯಾಗುತ್ತದೆ.

ಶವಾಸನ (ಶವದ ಭಂಗಿ)

ಯೋಗದಲ್ಲಿ ಅಂತಿಮವಾಗಿ ವಿಶ್ರಾಂತಿಗಾಗಿ ಮಾಡುವ ಯೋಗ ಭಂಗಿಯಾಗಿದೆ. ಇದು ಎಲ್ಲಾ ಯೋಗಗಳ ಪ್ರಯೋಜನ ಸಿಗಲು ಸಹಾಯ ಮಾಡುತ್ತದೆ. ಈ ಭಂಗಿಯು ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ