Monday motivation: ಬದುಕಿನಲ್ಲಿ ಮನುಷ್ಯನ ನಿಯಂತ್ರಣದಲ್ಲಿರುವ 14 ಅಂಶಗಳು; ಜೀವನದಲ್ಲಿ ನೆಮ್ಮದಿ ಬಯಸುವವರು ಈ ಸತ್ಯ ತಿಳಿಬೇಕು
ಭವ್ಯಾ ವಿಶ್ವನಾಥ್ ಬರಹ: ಬದುಕಿನಲ್ಲಿ ನೆಮ್ಮದಿ ಇಲ್ಲ ಎಂದು ಕೊರಗುವ ಬದಲು ನೆಮ್ಮದಿ ಹುಡುಕಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಮನುಷ್ಯ ತನ್ನ ಜೀವನದಲ್ಲಿ 14 ಅಂಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಅಂಶಗಳನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಲ್ಲವರಿಗೆ ಜೀವನದಲ್ಲಿ ಎಂದೆಂದಿಗೂ ನೋವು, ನಿರಾಸೆ, ಬೇಸರ ಕಾಡದು.
ಬದುಕಿನ ಕೆಲವು ಸನ್ನಿವೇಶಗಳಲ್ಲಿ ಅಸಹಾಯಕತೆಯು ನಮ್ಮ ಕೈಮೀರಿ ಹೋಗುತ್ತದೆ. ನನ್ನ ಕೈಯಲ್ಲಿ ಇನ್ನೇನು ಇಲ್ಲ, ನನ್ನ ಕಡೆಯಿಂದ ಮಿತಿಮೀರಿದ ಪ್ರಯತ್ನವನ್ನು ಮಾಡಿದರೂ ಸಹ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ, ಬಹಳ ಅಸಹಾಯಕತನದಿಂದ ಒದ್ದಾಡುತ್ತಿದ್ದೇನೆ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ನನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು, ಏನು ಮಾಡಲಿ ಎಂದು ಎಷ್ಟು ಯೋಚಿಸಿದರೂ ಮುಂದಿನ ದಾರಿ ಕಾಣುವುದೇ ಇಲ್ಲ. ಹೀಗೆ ಅನ್ನಿಸಲು ಕಾರಣವೇನು? ಹೀಗೆ ಅನ್ನಿಸಿದಾಗ ಏನು ಮಾಡಬೇಕು ?
ಆರೋಗ್ಯದ ವಿಚಾರದಲ್ಲಿ, ಪೋಷಕರು ಮಕ್ಕಳ ವಿಚಾರದಲ್ಲಿ, ಮಕ್ಕಳು ಪರೀಕ್ಷೆಯ ವಿಚಾರದಲ್ಲಿ, ವೈದ್ಯರು ರೋಗಿಗಳ ವಿಚಾರದಲ್ಲಿ, ಕ್ರೀಡಾಪಟುಗಳು ಕ್ರೀಡೆಯ ವಿಚಾರದಲ್ಲಿ, ಸೈನಿಕರು ದೇಶವನ್ನು ಕಾಯುವ ವಿಚಾರದಲ್ಲಿ... ಹೀಗೆ ಇನ್ನು ಉಳಿದ ಎಲ್ಲಾ ಸಂಬಂಧಗಳೂ ಕೂಡ ಎಷ್ಟೇ ಅಪಾರವಾದ ಪ್ರೀತಿ, ಆತ್ಮೀಯತೆ, ಶ್ರದ್ಧೆ, ಪರಿಶ್ರಮ, ಕರ್ತವ್ಯದಿಂದ ಕೂಡಿದ್ದರೂ ಸಹ ಪರಿಸ್ಥಿಗಳನ್ನಾಗಲಿ ಅಥವಾ ಮತ್ತೊಬ್ಬರನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿ (control) ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಪತಿಯು ತನ್ನ ಪತ್ನಿ ತಾನು ಬಯಸಿದಂತೆಯೇ ಸದಾ ಕಾಲವಿರಬೇಕು, ತಾನು ಹೇಳಿದ್ದನೆಲ್ಲಾ ಕೇಳಬೇಕು ಎಂದು ನಿರೀಕ್ಷಿಸುವುದು, ಪೋಷಕರು ತಮ್ಮ ಮಕ್ಕಳು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿರಬೇಕೆಂದು ಬಯಸುವುದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮ್ಮ ನಿರೀಕ್ಷೆಯೆಂತೆಯೇ ಫಲಿತಾಂಶ ಬರಬೇಕು ಎಂದು ಬಯಸುವುದು ಬಹುತೇಕ ಸಾಧ್ಯವಾಗದ ಮಾತು.
ನನ್ನವರು ತೊಂದರೆಯಲ್ಲಿದ್ದಾರೆ, ನನ್ನಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಕೊರಗುವುದು ವ್ಯರ್ಥ. ಯಾಕೆಂದರೆ ಪರಿಸ್ಥಿತಿಗಳು, ಫಲಿತಾಂಶಗಳು ಮತ್ತು ಮತ್ತೊಬ್ಬರ ಗುಣ ಸ್ವಭಾವಗಳು ನಿಮ್ಮ ಕೈಯಲ್ಲಿರುವುದಿಲ್ಲ, ಇವುಗಳು ನಿಮ್ಮ ನಿಯಂತ್ರಣವನ್ನು ಮೀರಿದ್ದು.
ನಮ್ಮ ಕರ್ತವ್ಯ ಪರಿಮಿತಿಗಳು ಎಷ್ಟು ಇವೆಯೋ ಅಷ್ಟೇ ಮಾಡಬಹುದು, ವಿನಃ ಅದರ ದಾಟಿ ನಮ್ಮ ಕೈಯಲ್ಲಿ ಏನು ಸಾಧ್ಯವಿಲ್ಲವೆಂದು ನಾವು ಅರ್ಥ ಮಾಡಿಕೊಂಡರೆ ವಿಪರೀತವಾದ ದುಃಖ, ನಿರಾಸೆಗಳಿಗೆ ಬಲಿಯಾಗುವುದಿಲ್ಲ.
ಮನುಷ್ಯನ ನಿಯಂತ್ರಣದಲ್ಲಿರುವ 14 ಅಂಶಗಳು
ನಿಮ್ಮ ಬದುಕಿನ ಈ ಅಂಶಗಳು ಸಂಪೂರ್ಣವಾಗಿ ನಿಮ್ಮ ನಿಯಂತ್ರಣದಲ್ಲಿರುತ್ತವೆ, ಇವುಗಳನ್ನು ಹೇಗೆ ಬಳಕೆ ಮಾಡುತ್ತೀರಿ ಎನ್ನುವುದು ನಿಮ್ಮ ಆಯ್ಕೆ.
1. ನಿಮ್ಮ ದೇಹ
2. ನಿಮ್ಮ ಆರೋಗ್ಯ
3. ನಿಮ್ಮ ಆಲೋಚನೆಗಳು
4. ನಿಮ್ಮ ಭಾವನೆಗಳು
5. ನಿಮ್ಮ ಕ್ರಿಯೆಗಳು
6. ನಿಮ್ಮ ನಿರ್ಧಾರಗಳು
7. ನಿಮ್ಮ ಅಭಿಪ್ರಾಯಗಳು
8. ನಿಮ್ಮ ಪ್ರತಿಕ್ರಿಯೆಗಳು
9. ನಿಮ್ಮ ಮಾತು ಮತ್ತು ನಡುವಳಿಕೆ
10. ನಿಮ್ಮ ಪ್ರಯತ್ನ
11. ನಿಮ್ಮ ನಂಬಿಕೆಗಳು
12. ನಿಮ್ಮ ಸಮಯ
13. ನಿಮ್ಮ ಬಯಕೆ, ಆಕಾಂಕ್ಷೆ ಮತ್ತು ಗುರಿ
14. ಹವ್ಯಾಸ, ಚಟ
ಇವೆಲ್ಲವೂ ನಿಮ್ಮ ನಿಯಂತ್ರಣದೊಳಗೆ ಬರುವಂತಹ ಅಂಶಗಳು.
ಪರಿಸ್ಥಿಗಳಿಗೆ ನೀವು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತೀರಿ, ನಿಮ್ಮ ಹವ್ಯಾಸಗಳೇನು, ನಿಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತೀರಿ, ನಿಮ್ಮ ನಿರ್ಧಾರಗಳೇನು, ಸಾಮಾಜಿಕ ಜಾಲಾತಾಣಗಳಲ್ಲಿ ನಿಮ್ಮನ್ನು ಹೇಗೆ ತೊಡಗಿಸಿಕೊಳ್ಳುತ್ತೀರಿ, ಪ್ರಶಂಸೆ, ನಿಂದನೆ ಮತ್ತು ಹೀಯಾಳಿಕೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು?… ಹೀಗೆ ಈ ಎಲ್ಲಾ ಅಂಶಗಳು ನಿಮ್ಮ ನಿಯಂತ್ರಣದಲ್ಲಿರುತ್ತವೆ.
ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ಇವುಗಳನ್ನು ನೀವು ಸುಧಾರಿಸಿಕೊಳ್ಳಬಹುದು ಮತ್ತು ಬದಲಾಯಿಸಿಕೊಳ್ಳಬಹುದು. ನಿಮ್ಮ ಗಮನ ಇವುಗಳ ಕಡೆಗೆ ಇದ್ದಷ್ಟು ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿಯಿದ್ದು, ವ್ಯಕ್ತಿತ್ವ ವಿಕಾಸವಾಗುತ್ತದೆ.
ನಿಮ್ಮ ಲೋಪ ದೋಷಗಳನ್ನು ತಿದ್ದಿಕೊಂಡು, ನಿಮ್ಮ ಕರ್ತವ್ಯದ ಹಾಗೂ ಜವಾಬ್ದಾರಿಗಳ ಕಡೆಗೆ ಗಮನ ಹರಸಿ, ಗುರಿಗಳನ್ನು ಮುಟ್ಟುವ ಸಾಧ್ಯತೆ ಹೆಚ್ಚಿದ್ದು, ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತೀರಿ. ಪರಿಸ್ಥಿತಿಯನ್ನು ಮತ್ತು ಮತ್ತೊಬ್ಬರನ್ನು ದೂಷಿಸದೆ, ನಿಮ್ಮ ಪ್ರಯತ್ನ ಮತ್ತು ಕರ್ತವ್ಯವನ್ನು ಕೇಂದ್ರಿಕೃತವಾಗಿಟ್ಟುಕೊಂಡು ಕಾಲ ಕಳೆಯುತ್ತೀರಿ.
ಅದೇ ಇನ್ನೊಬ್ಬರಲ್ಲಿರುವ ಈ ಅಂಶಗಳನ್ನು ನಮ್ಮ ಬಯಕೆಗೆ ತಕ್ಕ ಹಾಗೆ ಬದಲಾಯಿಸುವುದಕ್ಕೆ ಪ್ರಯತ್ನಿಸಿದರೆ ಆಗಲೂಬಹುದು, ಆದರೆ ಆಗದೇ ಇರುವ ಸಾಧ್ಯತೆಯೂ ಹೆಚ್ಚು. ಆಗದೇ ಇದ್ದಾಗ ಸಂಘರ್ಘಗಳು, ಮನಸ್ತಾಪಗಳು ಉಂಟಾಗುತ್ತವೆ. ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಬೇರೆಯವರ ನಡೆ, ನುಡಿ, ಆಚಾರ–ವಿಚಾರಗಳ ಮೇಲೆ ನಾವು ಪ್ರಭುತ್ವ ಸಾಧಿಸಬಹುದೇ ಹೊರತು ನಮಗೆ ಹೇಗೆ ಬೇಕೋ ಹಾಗೆ ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಥವ ಬದಲಿಸಲಿಕ್ಕೆ ಸಾಧ್ಯವಾಗದು. ಬಲವಂತದಿಂದ, ದೌರ್ಜನ್ಯದಿಂದ ನಿಯಂತ್ರಿಸಬಹುದೇ ಹೊರತು ಸುಲಭವಾಗಿ ನಿರೀಕ್ಷೆಯಂತೆ ಬದಲಾಯಿಸಲು ಸಾಧ್ಯವಿಲ್ಲ.
ಆದ್ದರಿಂದ ನಿಮ್ಮ ಸುತ್ತಮುತ್ತಲ್ಲಿರುವ ಯಾವುದೇ ವ್ಯಕ್ತಿಯಾಗಲಿ ಅವರ ಆಸಕ್ತಿ, ಆಯ್ಕೆ, ಅಭಿಪ್ರಾಯ, ನಿರ್ಧಾರಗಳು ನಿಮಗೆ ಸಮಂಜಸವೆನ್ನಿಸದಿದ್ದರೂ, ನಿಮ್ಮ ಇಷ್ಟಗಳಿಗೆ ವಿರುದ್ಧವಾಗಿದ್ದರೂ ಸಹ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಗೌರವಿಸಿ. ಒಪ್ಪಿಕೊಳ್ಳದಿದ್ದರೂ ತೊಂದರೆಯಿಲ್ಲ, ಆದರೆ ಬಲವಂತವಾಗಿ ಅವರನ್ನು ನಿಮ್ಮ ಬಯಕೆಯ ಪ್ರಕಾರ ಬದಲು ಮಾಡುವುದಕ್ಕೆ ಪ್ರಯತ್ನಿಸಬೇಡಿ. ಪ್ರಯತ್ನಿಸಿರಿ, ಒಂದು ಪಕ್ಷ ಆಗದಿದ್ದರೆ ನೊಂದು, ಬೇಸರವಾಗಿ ಮನಸ್ಥಾಪಗಳಿಗೆ ಗುರಿಯಾಗಬೇಡಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.