logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷವನ್ನು ಸಮುದ್ರ ತೀರದಲ್ಲಿ ಸ್ವಾಗತಿಸಬೇಕಾ? ಭಾರತದ ಮಾರಿಷಸ್‌, ಮಹಾರಾಷ್ಟ್ರದ ತಿಳಿ ನೀರಿನ ತಾರಕರ್ಲಿ ಬೀಚ್‌ಗೆ ಭೇಟಿ ಕೊಡಿ

ಹೊಸ ವರ್ಷವನ್ನು ಸಮುದ್ರ ತೀರದಲ್ಲಿ ಸ್ವಾಗತಿಸಬೇಕಾ? ಭಾರತದ ಮಾರಿಷಸ್‌, ಮಹಾರಾಷ್ಟ್ರದ ತಿಳಿ ನೀರಿನ ತಾರಕರ್ಲಿ ಬೀಚ್‌ಗೆ ಭೇಟಿ ಕೊಡಿ

Rakshitha Sowmya HT Kannada

Dec 22, 2024 02:57 PM IST

google News

ಭಾರತದ ಮಾರಿಷಸ್‌ ಎಂದೇ ಹೆಸರಾಗಿರುವ ಮಹಾರಾಷ್ಟ್ರದ ತಿಳಿ ನೀರಿನ ತಾರಕರ್ಲಿ ಬೀಚ್‌

  • ಹೊಸ ವರ್ಷಾಚರಣೆಗೆ ಕಡಲ ತೀರಗಳಿಗೆ ಪ್ರವಾಸಕ್ಕೆ ಹೋಗುವುದೆಂದರೆ ಕೆಲವರಿಗೆ ಬಹಳ ಇಷ್ಟ. ನೀವೂ ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವ ಪ್ಲಾನ್‌ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಸುಂದರ ತಿಳಿ ನೀರಿನ ಬೀಚ್‌. ಇದೇ ಭಾರತದ ಮಾರಿಷಸ್. ಹೊಸ ವರ್ಷಾಚರಣೆಗೆ ಮಹಾರಾಷ್ಟ್ರದ ತಾರಕರ್ಲಿ ಬೀಚ್ ಉತ್ತಮವಾಗಿದೆ. (ಬರಹ: ಅರ್ಚನಾ ವಿ ಭಟ್‌)

ಭಾರತದ ಮಾರಿಷಸ್‌ ಎಂದೇ ಹೆಸರಾಗಿರುವ ಮಹಾರಾಷ್ಟ್ರದ ತಿಳಿ ನೀರಿನ ತಾರಕರ್ಲಿ ಬೀಚ್‌
ಭಾರತದ ಮಾರಿಷಸ್‌ ಎಂದೇ ಹೆಸರಾಗಿರುವ ಮಹಾರಾಷ್ಟ್ರದ ತಿಳಿ ನೀರಿನ ತಾರಕರ್ಲಿ ಬೀಚ್‌ (PC: Stormfree Adventures & Tourism, Devendra Fadnavis Facebook)

ಮಹಾರಾಷ್ಟ್ರ: ಹೊಸ ವರ್ಷ ಆಚರಿಸಲು ಸಮುದ್ರ ತೀರಗಳಿಗೆ ಹೋಗುವುದು ಈಗಿನ ಟ್ರೆಂಡ್. ಅದಕ್ಕಾಗಿವಾರದ ಮೊದಲೇ, ಸುಂದರ ಬೀಚ್‌ಗಳು ಎಲ್ಲಿವೆ ಎಂದು ಹುಡುಕಾಡಿ, ಪ್ಲಾನ್‌ ಮಾಡುತ್ತಾರೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಂದಿಷ್ಟು ಮೋಜು, ಮಸ್ತಿಗಳೊಂದಿಗೆ 2025ನೇ ಇಸವಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕೆ ಪೂರಕವಾಗಿ ಕ್ರಿಸ್‌ಮಸ್‌ ರಜಾ ಮತ್ತು ವರ್ಷಾಂತ್ಯದ ಜೊತೆಗೆ ಒಂದಿಷ್ಟು ರಜಾದಿನಗಳು ಇರುವುದರಿಂದ ಪ್ರವಾಸಕ್ಕೆ ಹೋಗಲು ಉತ್ತಮ ಅವಕಾಶ ಇದಾಗಿದೆ. ನೀವು ನಿಮ್ಮ ಕುಟುಂಬದವರೊಂದಿಗೆ ಸುಂದರ ತಿಳಿ ನೀರಿನ ಸಮುದ್ರ ತಟಗಳಿಗೆ ಭೇಟಿ ನೀಡಬೇಕೆಂದಿದ್ದರೆ ಅದಕ್ಕೆ ಹೊರ ದೇಶಗಳಿಗೆ ಹೋಗಬೇಕೆಂದಿಲ್ಲ. ಭಾರತದ ಮಾರಿಷಸ್‌ಗೆ ಭೇಟಿ ಕೊಡಬಹುದು.

ಹೌದು, ಭಾರತದ ಮಾರಿಷಸ್‌ ಎಂದರೆ ಮಹಾರಾಷ್ಟ್ರದ ತಾರಕರ್ಲಿ ಬೀಚ್. ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ತಾರಕರ್ಲಿ ಬೀಚ್‌ ಬಹಳ ಪ್ರಸಿದ್ಧವಾದ ಬೀಚ್‌ ಆಗಿದೆ. ಇದು ಅತ್ಯಂತ ಶುದ್ಧವಾದ ತಿಳಿ ನೀರಿನಿಂದ ಜನಪ್ರಿಯವಾಗಿದೆ. ಇಲ್ಲಿನ ಸ್ಪಟಿಕದಂತಹ ತಿಳಿ ನೀರನ್ನು ನೋಡಲು, ಸ್ಕೂಬಾ ಡೈವಿಂಗ್‌ನಂತಹ ಜಲಕ್ರೀಡೆಯ ಆನಂದ ಪಡೆಯಲು ವಿದೇಶದಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ತಿಳಿ ನೀರಿನಲ್ಲಿ ಸಮುದ್ರದ ಆಳದಲ್ಲಿ ಈಜುವುದು ರೋಮಾಂಚನ ನೀಡುತ್ತದೆ. ಹಾಗೆಯೇ ಇದು ಕರಾವಳಿಯ ತೀರವಾದ್ದರಿಂದ ಬಗೆ ಬಗೆಯ ರುಚಿಯಾದ ಸಮುದ್ರಾಹಾರಗಳನ್ನು ಸವಿಯಬಹುದು. ಹೊಸ ವರ್ಷಕ್ಕೆ ನೀವು ಪ್ರವಾಸಕ್ಕೆ ಪ್ಲ್ಯಾನ್‌ ಮಾಡುತ್ತಿದ್ದರೆ, ನಾವು ಇಲ್ಲಿ ನಿಮಗೆ ಮರೆಯಲಾಗದ ಅನುಭವ ನೀಡುವ ಟೂರ್‌ ಪ್ಲಾನ್‌ ನೀಡುತ್ತಿದ್ದೇವೆ. ತಾರಕರ್ಲಿಗೆ ಹೇಗೆ ತಲುವುದು ಮತ್ತು ಅಲ್ಲಿ ಏನೇನು ಮಾಡಬಹುದು ಎಂದು ತಿಳಿಯೋಣ.

ತಾರಕರ್ಲಿಗೆ ತಲುಪುವುದು ಹೇಗೆ?

ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ತಾರಕರ್ಲಿ ತಲುಪಲು ಮೊದಲು ನೀವು ಸಿಂಧುದುರ್ಗ ಅಥವಾ ಕುಡಾಲ್‌ಗೆ ಹೋಗಬೇಕು. ಅಲ್ಲಿಂದ ಬಸ್‌ ಮೂಲಕ ಮಾಲವಾಣ ತಲುಪಬಹುದು. ಮಾಲವಾಣದಿಂದ ಮುಂದೆ 7 ಕಿಲೋಮೀಟರ್‌ ದೂರದಲ್ಲಿರುವುದೇ ಭಾರತದ ಮಾರಿಷಸ್‌ ಎಂದು ಕರೆಯುವ ತಾರಕರ್ಲಿ ಬೀಚ್‌. ಮಾಲವಾಣದಿಂದ ಸಾಕಷ್ಟು ರಿಕ್ಷಾ, ಖಾಸಗಿ ವಾಹನಗಳು ದೊರಕುತ್ತವೆ. ನೀವು ಮಾಲವಾಣದಲ್ಲೇ ತಂಗಬಹುದು. ಇಲ್ಲವೇ ತಾರಕರ್ಲಿಯಲ್ಲೂ ತಂಗಬಹುದು. ತಾರಕರ್ಲಿಯಲ್ಲಿ ಸಾಕಷ್ಟು ಬೀಚ್‌ ರೆಸಾರ್ಟ್‌ಗಳಿವೆ. ಆದರೆ ಈಗ ಜನದಟ್ಟಣೆಯಿಂದ ತುಂಬಿರುವ ಕಾರಣ ನೀವು ಮೊದಲೇ ಬುಕಿಂಗ್‌ ಮಾಡಿಕೊಳ್ಳಬೇಕಾಗುತ್ತದೆ. ಮೊದಲೇ ಹೋಟೆಲ್‌ ಬುಕ್‌ ಮಾಡಿಕೊಂಡರೆ ನಿಮ್ಮ ಸಮಯ ಉಳಿತಾಯವಾಗುತ್ತದೆ.

ತಾರಕರ್ಲಿಯಲ್ಲಿ ನೀವು ಏನೇನು ನೋಡಬಹುದು?

 

ಸಂಗಮ್ ಪಾಯಿಂಟ್: ತಾರಕರ್ಲಿ ನದಿ ಮತ್ತು ಅರಬ್ಬೀ ಸಮುದ್ರವು ಸಂಗಮವಾಗುವ ಜಾಗ. ಇದನ್ನು ಸಂಗಮ್ ಪಾಯಿಂಟ್ ಎಂದು ಹೆಸರಿಡಲಾಗಿದೆ. ಶಾಂತವಾಗಿ ಹರಿಯುವ ನದಿಯ ನೀರು ಭೋರ್ಗರೆವ ಸಮುದ್ರದ ಅಲೆಗಳೊಂದಿಗೆ ಸೇರುವ ವಿಭಿನ್ನವಾದ ರೋಮಾಂಚನಕಾರಿ ಅನುಭವ ಪಡೆಯಬಹುದಾಗಿದೆ.

ಡಾಲ್ಫಿನ್ ಪಾಯಿಂಟ್: ತಾರಕರ್ಲಿ ಸಮುದ್ರದಲ್ಲಿ ತೀರದಲ್ಲಿ ಡಾಲ್ಫಿನ್‌ಗಳು ವಿಶೇಷ ಆಕರ್ಷಣೆಯಾಗಿದೆ.ಇಲ್ಲಿ ಡಾಲ್ಫಿನ್‌ಗಳನ್ನು ನೋಡಲೆಂದೇ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಲ್ಲಿ 1-2 ಡಾಲ್ಫಿನ್‌ಗಳಲ್ಲ ಹತ್ತು ಹದಿನೈದು ಡಾಲ್ಫಿನ್‌ಗಳನ್ನು ಒಟ್ಟಿಗೆ ನೋಡಬಹುದು.

ಗೋಲ್ಡನ್ ರಾಕ್ ಪಾಯಿಂಟ್ : ಮುಂದೆ ಗೋಲ್ಡನ್ ರಾಕ್ ಪಾಯಿಂಟ್‌ಗೆ ಭೇಟಿ ಕೊಡಬಹುದು. ಇದು ಸಮುದ್ರದ ಮಧ್ಯದಲ್ಲಿರುವ ಬಂಡೆಯ ಮೇಲೆ ಸೂರ್ಯನು ಬೆಳಕು ಬಿದ್ದಾಗ ಅದು ಚಿನ್ನದಂತೆ ಹೊಳೆಯುತ್ತದೆ. ಆದ್ದರಿಂದ ಇದನ್ನು ಗೋಲ್ಡನ್ ರಾಕ್ ಎಂದು ಕರೆಯಲಾಗುತ್ತದೆ.

ಸುನಾಮಿ ಐಲ್ಯಾಂಡ್ ಪಾಯಿಂಟ್: ಗೋಲ್ಡನ್ ರಾಕ್ ಅನ್ನು ನೋಡಿದ ನಂತರ, ಹಿಂದಿರುಗುವ ಪ್ರಯಾಣದಲ್ಲಿ ನೀವು ಸುನಾಮಿ ದ್ವೀಪವನ್ನು ನೋಡಬಹುದಾಗಿದೆ. 2004 ರಲ್ಲಿ ಸುನಾಮಿಯಿಂದಾಗಿ ಈ ದ್ವೀಪ ರೂಪುಗೊಂಡಿತು ಎಂದು ಹೇಳಲಾಗುತ್ತದೆ. ಈ ಸಣ್ಣ ದ್ವೀಪದಲ್ಲಿ ಪ್ರವಾಸಿಗರಿಗೆ ದೋಣಿಗಳಿಂದ ವಾಟರ್‌ ಗೇಮ್‌ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿಯೇ ನೀವು ಸ್ಕೂಬಾ ಡೈವಿಂಗ್‌ ಆನಂದಿಸಬಹುದು. ಅಲ್ಲದೆ, ಇಲ್ಲಿನ ಕೆಲವು ಸ್ಟಾಲ್‌ಗಳಲ್ಲಿ ಐಸ್‌ಕ್ರೀಂ, ಪಾನಕ, ಮಹಾರಾಷ್ಟ್ರದ ಫೇಮಸ್‌ ಪೋಹ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ತಿಂಡಿ ಗಾವಣೆ (ಅಂಬೋಲಿ) ಸವಿಯಬಹುದು. ಆದರೆ ಈ ದ್ವೀಪಕ್ಕೆ ನೀವು ಸಮುದ್ರದ ಅಲೆಗಳು ಕಡಿಮೆ ಇರವಾಗ ಮಾತ್ರ ಭೇಟಿ ನೀಡಬಹುದು. ಏಕೆಂದರೆ ಅಲೆಗಳ ಅಬ್ಬರವಿದ್ದಾಗ ಇಲ್ಲಿಗೆ ಹೋಗಲು ಅವಕಾಶವಿರುವುದಿಲ್ಲ.

ಈ ಮುಂಬರುವ ಹೊಸ ವರ್ಷಾಚರಣೆಗೆ ನಿಮ್ಮ ಕುಟುಂಬದವರೊಂದಿಗೆ ಸಮುದ್ರ ತೀರಗಳಿಗೆ ಭೇಟಿ ನೀಡಬೇಕೆಂದಿದ್ದರೆ ತಾರಕರ್ಲಿ ಬೀಚ್‌ ಬೆಸ್ಟ್‌ ಜಾಗವಾಗಿದೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಹಿಂದೂಡಿ, ಸುಂದರ ನೆನಪುಗಳೊಂದಿಗೆ ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಳ್ಳಬಹುದಾಗಿದೆ.

(ಬರಹ: ಅರ್ಚನಾ ವಿ ಭಟ್‌)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ