ಬೆಂಗಳೂರಿಂದ ಊಟಿ, ವಯನಾಡು ಟ್ರಿಪ್ ಹೋಗ್ಬೇಕು ಅಂದ್ಕೊಂಡ್ ಇದೀರಾ, ಕೆಎಸ್‌ಟಿಡಿಸಿಯ 5 ದಿನಗಳ ಟೂರ್ ಪ್ಯಾಕೇಜ್ ವಿವರ ಇಲ್ಲಿದೆ, ಗಮನಿಸಿ
ಊಟಿ, ವಯನಾಡಿನಂತಹ ಸುಂದರ ತಾಣಗಳಿಗೆ ಟ್ರಿಪ್ ಹೋಗುವ ಕನಸು ಯಾರಿಗಿಲ್ಲ ಹೇಳಿ. ಅದರಲ್ಲೂ ಈಗ ಚಳಿಗಾಲ, ಈ ಸಮಯದಲ್ಲಿ ಊಟಿ, ವಯನಾಡು ಸ್ವರ್ಗದಂತೆ ಭಾಸವಾಗುವುದು ಸುಳ್ಳಲ್ಲ. ನಿಮಗೂ ಇಲ್ಲಿಗೆ ಟ್ರಿಪ್ ಹೋಗುವ ಆಸೆ ಇದ್ದರೆ ಕೆಎಸ್‌ಟಿಡಿಸಿಯ ಬಸ್ ಟೂರ್ ಪ್ಯಾಕೇಜ್ ಗಮನಿಸಿ. ನೀವು ಬೆಂಗಳೂರಿನಲ್ಲಿದ್ರೆ 5 ದಿನಗಳ ಈ ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಭೂಲೋಕದ ಸ್ವರ್ಗದಂತಿರುವ ವಯನಾಡು ಅದ್ಭುತ ಪ್ರಕೃತಿ ಸೌಂದರ್ಯ, ಸುಂದರ ಕಾಫಿ ತೋಟಗಳನ್ನ ಹೊಂದಿರುವ ತಾಣ. ಬೆಟ್ಟ–ಗುಡ್ಡಗಳು, ಸದಾ ಮಂಜು ಮುಸುಕಿರುವ ವಾತಾವರಣ, ಚಾಕೊಲೇಟ್‌ನ ಸವಿಯೊಂದಿಗೆ ಚಹಾ, ಕಾಫಿಯ ಘಮಲು ಸವಿಯುವುದು ನಿಮಗೆ ಇಷ್ಟ ಎಂದರೆ ನೀವು ಊಟಿಗೆ ಭೇಟಿ ನೀಡಬೇಕು. ಚಳಿಗಾಲದಲ್ಲಿ ಊಟಿ ಕಾಶ್ಮೀರದಂತೆ ಭಾಸವಾಗುವುದು ಸುಳ್ಳಲ್ಲ. ಇನ್ನೂ ಪರ್ವತ ಶ್ರೇಣಿಗಳನ್ನು ತನ್ನೊಡಲೊಳಗೆ ಇರಿಸಿಕೊಂಡಿರುವ ಕನೂರು ಹಿಮ ಹಾಸಿದ ಛಾವಣಿಯಂತೆ ಕಾಣುತ್ತದೆ. ಚಳಿಗಾಲದ ಪ್ರವಾಸಕ್ಕೆ ಈ ಜಾಗವೂ ಕೂಡ ಹೇಳಿ ಮಾಡಿಸಿದ್ದು.
ಈ ಎಲ್ಲಾ ತಾಣಗಳನ್ನು ನೋಡುವ ಬಯಕೆ ಅಥವಾ ಈ ಜಾಗಗಳಿಗೆ ಟ್ರಿಪ್ ಮಾಡುವ ಕನಸು ನಿಮಗೂ ಇದ್ದರೆ ನೀವು ಕೆಎಸ್‌ಟಿಡಿಯ ಟೂರ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಈ ಟೂರ್ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇರುತ್ತೆ, ಎಷ್ಟು ದಿನಗಳು, ಯಾವೆಲ್ಲಾ ಸ್ಥಳಗಳನ್ನು ನೋಡಿ ಬರಬಹುದು, ದರ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.
ಬೆಂಗಳೂರು ಊಟಿ ವಯನಾಡು ಟೂರ್ ಪ್ಯಾಕೇಜ್
ಬೆಂಗಳೂರು ವಯನಾಡು, ಕೂನೂರು, ಊಟಿ ಟೂರ್ ಪ್ಯಾಕೇಜ್ 5 ದಿನಗಳದ್ದಾಗಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ನೀವು ಈ 3 ತಾಣಗಳ ಸುತ್ತಲಿನ ಹಲವು ಜಾಗಗಳನ್ನು ನೋಡಿ ಬರಬಹುದು. ಇದರಲ್ಲಿ ಯಾವ ಸ್ಥಳಗಳನ್ನು ನೋಡಬಹುದು, ಹೋಗುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.
ದಿನ 1: ರಾತ್ರಿ 10 ಗಂಟೆಗೆ ಯಶವಂತಪುರದಿಂದ ಹೊರಡುವುದು
ದಿನ 2: 4 ಗಂಟೆಗೆ ಮೆಟ್ಟುಪಾಳ್ಯಂ ತಲುಪಿ ಇಲ್ಲಿ ಫ್ರೆಶ್ ಆಗುವುದು. 7 ರಿಂದ 9 ಗಂಟೆವರೆಗೆ ಬೆಳಗಿನ ಉಪಾಹಾರ ಮುಗಿಸಿ, ಸಿಮ್ಸ್ ಪಾರ್ಕ್‌ಗೆ ಭೇಟಿ ನೀಡುವುದು. 10 ರಿಂದ 11 ಗಂಟೆ ದೊಡ್ಡಬೆಟ್ಟ ಭೇಟಿ. 11 ರಿಂದ 12.30 ಊಟಿ ಬಟಾಕಿನಲ್ ಗಾರ್ಡನ್ ವೀಕ್ಷಣೆ. 1 ರಿಂದ 3 ಊಟದ ಸಮಯ. 3.30 ರಿಂದ 5 ಊಟಿ ಲೇಕ್ ವೀಕ್ಷಣೆ, ರಾತ್ರಿ ಊಟಿನಲ್ಲಿ ಉಳಿದುಕೊಳ್ಳುವುದು.
ದಿನ 3: ಬೆಳಿಗ್ಗೆ 8 ಗಂಟೆಗೆ ತಿಂಡಿ ಮುಗಿಸಿ, 9 ಗಂಟೆಗೆ ಶೂಟಿಂಗ್ ಪಾಯಿಂಟ್‌ಗೆ ತೆರಳುವುದು. 11 ರಿಂದ 11.30 ನೀಡಲ್ ರಾಕ್‌ಗೆ ಭೇಟಿ. 2 ಗಂಟೆಗೆ ವಯನಾಡ್‌ಗೆ ತೆರಳುವುದು. ಮಧ್ಯಾಹ್ನ 2 ಗಂಟೆಗೆ ಎಡಕಲ್ಲು ಗುಹೆ ನೋಡಿ ರಾತ್ರಿ ವೈತಿರಿಯಲ್ಲಿ ಉಳಿದುಕೊಳ್ಳುವುದು.
ದಿನ 4: ಬೆಳಿಗ್ಗೆ 8.30ಕ್ಕೆ ಉಪಾಹಾರ ಮುಗಿಸಿ ಅಲ್ಲಿಂದ ಹೊರಡುವುದು. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಕ್ಕಿಡಿ ವ್ಯೂ ಪಾಯಿಂಟ್ ಪೂಕೊಡೆ ಕೆರೆಯಿಂದ ಗಾಜಿನ ಸೇತುವೆಗೆ ಭೇಟಿ ನೀಡುವುದು. ಮಧ್ಯಾಹ್ನ ಊಟ ಮುಗಿಸಿದ ನಂತರ 2.30 ರಿಂದ 6ರವರೆಗೆ ಬಾಣಾಸುರ ಅಣೆಕಟ್ಟು/ಕಾಂತಪರ ಜಲಪಾತಕ್ಕೆ ಭೇಟಿ ನೀಡುವುದು.
ದಿನ 5: ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ತಲುಪುವುದು.
ಊಟಿ–ವಯನಾಡು ಪ್ಯಾಕೇಜ್ ದರ, ಸಂಪರ್ಕ ಸಂಖ್ಯೆ
ಈ ಟೂರ್ ಪ್ಯಾಕೇಜ್ ಪ್ರತಿದಿನ ಸೋಮವಾರ ಹಾಗೂ ಗುರುವಾರ ಇರುತ್ತದೆ. 5 ದಿನಗಳ ಈ ಟೂರ್ ಪ್ಯಾಕೇಜ್ ಆರಂಭವಾಗುವುದು ಬೆಂಗಳೂರಿನ ಯಶವಂತಪುರದಲ್ಲಿರುವ ಕೆಎಸ್‌ಟಿಡಿಸಿ ಮುಖ್ಯ ಕಚೇರಿಯಿಂದ. ಈ ಪ್ಯಾಕೇಜ್ ಒಬ್ಬರಿಗಾದರೆ ರೂ. 14130, ಇಬ್ಬರಿಗಾದರೆ ರೂ. 10650 ಹಾಗೂ ಮೂವರಿಗಾದರೆ ರೂ. 10050. ಇದರಲ್ಲಿ ಬಸ್, ಊಟ, ವಸತಿ ಎಲ್ಲವೂ ಸೇರಿರುತ್ತದೆ.
ಚಳಿಗಾಲದಲ್ಲಿ ಈ ತಾಣಗಳಿಗೆ ಪ್ರವಾಸಕ್ಕೆ ತೆರಳುವುದು ನಿಜಕ್ಕೂ ನಿಮಗೆ ಅದ್ಭುತ ಅನುಭವ ನೀಡುತ್ತದೆ. ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗುವಾಗ ಒಂದಿಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಖಂಡಿತ ನೀವು ಈ ಟ್ರಿಪ್ ಅನ್ನು ಎಂಜಾಯ್ ಮಾಡ್ತೀರಿ.