logo
ಕನ್ನಡ ಸುದ್ದಿ  /  ಜೀವನಶೈಲಿ  /  ಹದಿಹರೆಯದ ಮಕ್ಕಳಿಗೆ ಅನಗತ್ಯ ಒತ್ತಡ ತರುವ 6 ಅಂಶಗಳಿವು; ಪೋಷಕರೇ ಈ ವಿಷಯಗಳ ಅರಿವು ನಿಮಗಿರಲಿ

ಹದಿಹರೆಯದ ಮಕ್ಕಳಿಗೆ ಅನಗತ್ಯ ಒತ್ತಡ ತರುವ 6 ಅಂಶಗಳಿವು; ಪೋಷಕರೇ ಈ ವಿಷಯಗಳ ಅರಿವು ನಿಮಗಿರಲಿ

Jayaraj HT Kannada

Oct 29, 2024 09:06 AM IST

google News

ಹದಿಹರೆಯದ ಮಕ್ಕಳಿಗೆ ಅನಗತ್ಯ ಒತ್ತಡ ಹೇರುವ ಅಂಶಗಳಿವು

    • ಹದಿಹರೆಯದ ಮಕ್ಕಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚು. ಒಂದಷ್ಟು ಆತಂಕ, ಮಾನಸಿಕ ಒತ್ತಡಗಳು ಅವರಿಗೆ ಅರಿವಿರದಂತೆ ಮನೆ ಮಾಡಿರುತ್ತದೆ. ಇದನ್ನು ಗುರುತಿಸುವ ಜವಾಬ್ದಾರಿ ಪೋಷಕರದ್ದು. ಹದಿಹರೆಯದ ಮಕ್ಕಳು ಎದುರಿಸುವ ಸಾಮಾನ್ಯ ಒತ್ತಡಗಳು ಏನೇನು ಎಂಬ ಮಾಹಿತಿ ಇಲ್ಲಿದೆ.
ಹದಿಹರೆಯದ ಮಕ್ಕಳಿಗೆ ಅನಗತ್ಯ ಒತ್ತಡ ಹೇರುವ ಅಂಶಗಳಿವು
ಹದಿಹರೆಯದ ಮಕ್ಕಳಿಗೆ ಅನಗತ್ಯ ಒತ್ತಡ ಹೇರುವ ಅಂಶಗಳಿವು (Pexel)

ಹದಿಹರೆಯದ ಮಕ್ಕಳೆಂದರೆ, ನೂರಾರು ಗೊಂದಲವಿರುವ ವಯಸ್ಸು. ಈ ವಯಸ್ಸಿನ ಮಕ್ಕಳು ಬಲು ಬೇಗನೆ ಒತ್ತಡ ಹಾಗೂ ಆತಂಕಕ್ಕೆ ಒಳಗಾಗುತ್ತಾರೆ. ಸಣ್ಣ ಸಣ್ಣ ಕಾರಣಕ್ಕೂ ದೀರ್ಘಕಾಲ ಯೋಚನೆಗೆ ಜಾರುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳ ವಿಚಾರವಾಗಿ ಪೋಷಕರು ಸಾಕಷ್ಟು ಜಾಗರೂಕರಾಗಿರಬೇಕು. ಮಕ್ಕಳ ನಡವಳಿಕೆಗಳನ್ನು ಗಮನಿಸುತ್ತಿರಬೇಕು. ಮಕ್ಕಳ ಶೈಕ್ಷಣಿಕ ಒತ್ತಡಗಳಿಂದ ಹಿಡಿದು ಸಮಾಜದಲ್ಲಿ ಅವರ ನಡವಳಿಕೆ ಕುರಿತು ಕಣ್ಣಿಟ್ಟಿರಬೇಕು. ಹದಿಹರೆಯದ ಮಕ್ಕಳು ಎದುರಿಸುವ ಸಾಮಾನ್ಯ ಒತ್ತಡಗಳನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕು. ಅವರಿಗೆ ಅನಗತ್ಯ ಒತ್ತಡ ಉಂಟುಮಾಡುವ ಕೆಲವೊಂದು ಸಾಮಾನ್ಯ ಅಂಶಗಳಿವೆ. ಅವುಗಳನ್ನು ಗುರುತಿಸುವ ಮೂಲಕ, ಅದನ್ನು ಪರಿಹರಿಸುವ ಕುರಿತು‌ ಹೆತ್ತವರು ಯೋಚಿಸಬೇಕು.

ಹದಿಹರೆಯದ ಮಕ್ಕಳು ಎದುರಿಸುವ ಸಾಮಾನ್ಯ ಒತ್ತಡಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಶೈಕ್ಷಣಿಕ ಒತ್ತಡ

ಹದಿಹರೆಯದವರು ತಮ್ಮ ಪೋಷಕರು, ಶಿಕ್ಷಕರು ಹಾಗೂ ಗೆಳೆಯರಿಂದ ಕೂಡಾ ಸಾಕಷ್ಟು ಶೈಕ್ಷಣಿಕ ಒತ್ತಡ ಎದುರಿಸುತ್ತಾರೆ. ಪೋಷಕರಿಗೆ ಇದರ ಅರಿವಿದ್ದರೂ ಕೆಲವೊಮ್ಮೆ ಹೆಚ್ಚುವರಿ ಒತ್ತಡ ನೀಡುತ್ತಾರೆ. ಹದಿಹರೆಯರಲ್ಲಿ ಇರುವ ಆತಂಕ ಮತ್ತು ಭಯದ ಭಾವನೆಯೇ ಒತ್ತಡವಾಗಿ ಕಾಣುತ್ತದೆ. ಪೋಷಕರು ಹಾಗೂ ಶಿಕ್ಷಕರಿಗೆ ಮಕ್ಕಳ ಮೇಲಿನ ನಿರೀಕ್ಷೆಗಳು ಈ ಒತ್ತಡ ಉಂಟು ಮಾಡುತ್ತವೆ. ಇದು ಅವರ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಮಕ್ಕಳಿಗೆ ಒತ್ತಡ ತುಂಬುವ ಬದಲು ಅವರನ್ನು ಪ್ರತಿ ಹಂತದಲ್ಲೂ ಬೆಂಬಲಿಸುವುದು ಮುಖ್ಯ.

ಸಾಮಾಜಿಕ ಒತ್ತಡದ ಬಗ್ಗೆಯೂ ಗಮವಿರಲಿ

ಸಮಾಜ ಹಾಗೂ ಜನರ ನಡುವೆ ಬೆರೆಯುವುದು, ಹೊಂದಿಕೊಳ್ಳುವುದು, ಗೆಳೆಯರ ಒತ್ತಡವನ್ನು ನಿಭಾಯಿಸುವುದು ಕೂಡಾ ಮಕ್ಕಳಿಗೆ ಸವಾಲಾಗುತ್ತದೆ. ಆಗಾಗ ಗದರುವುದು, ಬೆದರಿಸುವುದು ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಟೀನೇಜರ್‌ ಮಕ್ಕಳ ಮಾನಸಿಕ ಆರೋಗ್ಯದತ್ತ ಗಮನ ಹರಿಸುವುದು, ಅವರಿಗೆ ಬೆಂಬಲ ಸೂಚಿಸುವುದು, ಬೇರೆ ಮಕ್ಕಳೊಂದಿಗೆ ಉತ್ತಮ ಸ್ನೇಹವನ್ನು ನಿರ್ಮಿಸಲು ಅವರನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ.

ಕೌಟುಂಬಿಕ ಕಲಹಗಳು

ಮನೆಯೊಳಗಿನ ಕೌಟುಂಬಿಕ ಕಲಹಗಳು, ಭಿನ್ನಾಭಿಪ್ರಾಯಗಳು ಹದಿಹರೆಯದವರಿಗೆ ಒತ್ತಡದ ವಾತಾವರಣವನ್ನು ಸೃಷ್ಟಿಸಬಹುದು. ತಂದೆ ತಾಯಿಯ ನಡುವಣ ಜಗಳ, ಉದ್ವೇಗದ ಮಾತುಕತೆ ಮಕ್ಕಳಿಗೆ ಕಿರಕಿರಿಯಾಗಬಹುದು. ಪೋಷಕರು ಅಥವಾ ಒಡಹುಟ್ಟಿದವರ ನಡುವಿನ ಸಂಘರ್ಷದಿಂದ ಮಕ್ಕಳು ಭಾವನಾತ್ಮಕವಾಗಿ ಕುಗ್ಗಬಹುದು. ಅವರ ಒಟ್ಟಾರೆ ಯೋಗಕ್ಷೇಮದ ಇದು ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಪೋಷಕರು ತಮ್ಮ ನಡವಳಿಕೆ ಮೇಲೆ ಗಮನವಿಡಬೇಕು.

ನಿದ್ರೆಯ ಕೊರತೆ

ಹದಿಹರೆಯದವರಿಗೆ ಸಾಕಷ್ಟು ನಿದ್ರೆಯಾಗದಿದ್ದರೆ ಅವರ ಏಕಾಗ್ರತೆಗೆ ತೊಂದರೆಯಾಗುತ್ತದೆ. ತರಗತಿಗಳಲ್ಲಿ ಪಾಠ ಕೇಳುವ ಮನಸ್ಸು ಇರುವುದಿಲ್ಲ. ನಿದ್ರಾಹೀನತೆಯು ಕಿರಿಕಿರಿ, ಆತಂಕ ಮತ್ತು ಏಕಾಗ್ರತೆ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಆರೋಗ್ಯಕರ ನಿದ್ರೆಯ ದಿನಚರಿಯನ್ನು ರೂಪಿಸಿ. ಅವರಿಗೆ ನಿತ್ಯ ಅಗತ್ಯ ಪ್ರಮಾಣದ ವಿಶ್ರಾಂತಿ ಸಿಗುವುದನ್ನು ಖಚಿತಪಡಿಸಿಕೊಳ್ಳಿ. ಅದಕ್ಕೆ ಬೇಕಾದ ಅಗತ್ಯ ವಾತಾವರಣ ಸೃಷ್ಟಿಸಿ.

ಅತಿಯಾದ ಸ್ಕ್ರೀನಿಂಗ್

ಹೆಚ್ಚು ಸಮಯ ಸ್ಕ್ರೀನಿಂಗ್‌ನಲ್ಲಿ ಕಳೆಯುವುದು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆನ್‌ಲೈನ್‌ನಲ್ಲಿ ನೋಡುವ ವಿಷಯಗಳು ಅವರಿಗೆ ಗೊತ್ತಿಲ್ಲದಂತೆ ಆತಂಕ ಹೆಚ್ಚಬಹುದು. ಇದು ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಸ್ಕ್ರೀನಿಂಗ್‌ ಸಮಯದ ಮೇಲೆ ಕಣ್ಣಿಟ್ಟಿರಿ. ಮೊಬೈಲ್‌ಗಿಂತ ಆಫ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ.

ಮಿತಿಮೀರಿದ ಪಠ್ಯೇತರ ಚಟುವಟಿಕೆ ನೀಡದಿರಿ

ಹದಿಹರೆಯದ ಮಕ್ಕಳಿಗೆ ಪಠ್ಯ ಚಟುವಟಿಕೆಗಳು ಇದ್ದೇ ಇರುತ್ತದೆ. ಇದರ ನಡುವೆ ಸಂಗೀತ, ನೃತ್ಯ ಎಂದು ಹತ್ತು ಹಲವು ಹೆಚ್ಚುವರಿ ತರಗತಿಗಳಿಗೆ ಸೇರಿಸಿದರೆ ಅವರಿಗೆ ಸಹಜವಾಗಿ ಒತ್ತಡ ಹೆಚ್ಚುತ್ತದೆ. ಅವರ ಆಸಕ್ತಿಯನುಸಾರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಿಡಿ. ಅವರ ವೈಯಕ್ತಿಕ ಹಿತಾಸಕ್ತಿಗೆ ಸಮಯ ಕೊಡಿ. ಆರೋಗ್ಯದ ಮೇಲೆ ಕಾಳಜಿ ಇರಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ