ಪೋಷಕರೇ, ಮಕ್ಕಳ ಮುಂದೆ ಮಾತನಾಡುವಾಗ ಇರಲಿ ಎಚ್ಚರ: ಎಂದಿಗೂ ಈ ರೀತಿ ವರ್ತಿಸದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪೋಷಕರೇ, ಮಕ್ಕಳ ಮುಂದೆ ಮಾತನಾಡುವಾಗ ಇರಲಿ ಎಚ್ಚರ: ಎಂದಿಗೂ ಈ ರೀತಿ ವರ್ತಿಸದಿರಿ

ಪೋಷಕರೇ, ಮಕ್ಕಳ ಮುಂದೆ ಮಾತನಾಡುವಾಗ ಇರಲಿ ಎಚ್ಚರ: ಎಂದಿಗೂ ಈ ರೀತಿ ವರ್ತಿಸದಿರಿ

ಮಕ್ಕಳ ಮುಂದೆ ಏನು ಹೇಳಬೇಕು?ಯಾವುದರ ಬಗ್ಗೆ ಮಾತನಾಡಬಾರದು?ಇದು ಇನ್ನೂ ಕೆಲವು ಪೋಷಕರಿಗೆ ತಿಳಿದಿಲ್ಲ. ಸಂಬಂಧಿಕರನ್ನೋ, ಅಥವಾ ಬೇರೆ ಯಾರನ್ನೋ ಕೆಟ್ಟದಾಗಿ ಬೈಯುತ್ತಲೋ, ಅಥವಾ ವ್ಯಂಗ್ಯ ಮಾಡಿದರೆ ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಕ್ಕಳ ಮುಂದೆ ಪಾಲಕರು ಈ ರೀತಿ ಮಾಡಬಾರದು.
ಮಕ್ಕಳ ಮುಂದೆ ಪಾಲಕರು ಈ ರೀತಿ ಮಾಡಬಾರದು. (PC: Canva)

ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ಗಾದೆ ಮಾತಿದೆ. ಮಾತಿಗೆ ಪೂರಕವೆಂಬಂತೆ ಪೋಷಕರು ಯಾವ ರೀತಿ ವರ್ತಿಸುತ್ತಾರೆ ಎಂಬ ಬಗ್ಗೆ ಮಕ್ಕಳು ಬಹಳ ಗಮನವಿಡುತ್ತಾರೆ. ಮನೆಯಲ್ಲಿ ಮನೆಯಲ್ಲಿ ಪೋಷಕರು ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ. ಕೆಲವೊಮ್ಮೆ ಹಿರಿಯರು ತಾಳ್ಮೆಯಿಂದ ಅಥವಾ ಉದ್ದೇಶಪೂರ್ವಕವಾಗಿ ಏನೇನೋ ಮಾತನಾಡಿದರೆ ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಎಷ್ಟೋ ಸಲ ಹೆತ್ತವರು ತಮ್ಮ ಮಕ್ಕಳ ಮುಂದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನುಚಿತವಾಗಿ ವರ್ತಿಸುತ್ತಾರೆ. ಪೋಷಕರ ನಡೆ, ನುಡಿ ಮತ್ತು ನಡವಳಿಕೆಗಳು ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಇದರಿಂದ ಮಕ್ಕಳು ಕುಗ್ಗುವುದು ಅಥವಾ ದುರ್ವರ್ತನೆ ತೋರುವುದು ಇತ್ಯಾದಿ ಪರಿಣಾಮಗಳಿಗೆ ಒಳಗಾಗಬಹುದು. ಮಕ್ಕಳಿರುವ ಮನೆಯಲ್ಲಿ ಪೋಷಕರು ಬಹಳ ಜಾಗ್ರತೆ ವಹಿಸುವುದು ಅತ್ಯಗತ್ಯ. ಹಾಗಿದ್ದರೆ ಯಾವೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುದು ಇಲ್ಲಿದೆ.

ಮಕ್ಕಳ ಮುಂದೆ ಈ ರೀತಿ ಮುಂಜಾಗ್ರತಾ ಕ್ರಮ ವಹಿಸಿ

ವೈಯಕ್ತಿಕ ವಿಷಯಗಳು ಗೌಪ್ಯವಾಗಿರಲಿ: ಅನೇಕ ಪೋಷಕರು ತಮ್ಮ ಮಕ್ಕಳ ಮುಂದೆ ವೈಯಕ್ತಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುತ್ತಾರೆ. ಮಗುವಿಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಹಾಗಾಗಿ ಅವರ ಮುಂದೆ ವೈಯಕ್ತಿಕ ವಿಷಯಗಳನ್ನು ಚರ್ಚಿಸುವಾಗ ಎಚ್ಚರದಿಂದಿರಿ. ನಿಮ್ಮ ಕಷ್ಟಗಳು ಮತ್ತು ದುಃಖಗಳ ಬಗ್ಗೆ ಮಕ್ಕಳು ಕೇಳಿದರೆ ಅವರು ಗೊಂದಲಕ್ಕೊಳಗಾಗುವ ಅಥವಾ ಅಸಮಾಧಾನಗೊಳ್ಳುವ ಅಪಾಯವಿದೆ.

ಜಗಳ ಮಾಡಬೇಡಿ: ಮನೆಯಲ್ಲಿ ಪೋಷಕರು ಜಗಳವಾಡಿದಾಗ ಮಕ್ಕಳು ಸಾಮಾನ್ಯವಾಗಿ ಹೆದರುತ್ತಾರೆ. ಕೆಲವರು ಜಗಳದ ಸಮಯದಲ್ಲಿ ತಾಳ್ಮೆ ಕಳೆದುಕೊಂಡು ತಮ್ಮ ಸಂಗಾತಿಯ ಮೇಲೆ ಉದ್ಧಟತನ ತೋರುತ್ತಾರೆ. ಇದು ನಿಮ್ಮ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ನಡವಳಿಕೆಯನ್ನು ನಿಮ್ಮ ಮಕ್ಕಳು ನಕಲಿಸುವ ಸಾಧ್ಯತೆಯಿದೆ. ಅವರು ಸ್ನೇಹಿತರೊಂದಿಗೆ ಮಾತ್ರವಲ್ಲದೆ ನಿಮ್ಮೊಂದಿಗೂ ವಾದಿಸಬಹುದು. ಹೊಡೆಯುವುದು, ಶಾಪ ಹಾಕುವುದು, ವಾದ ಮಾಡುವುದು ತಪ್ಪಲ್ಲ ಎಂಬ ಭ್ರಮೆಗೆ ಒಳಗಾಗುತ್ತಾರೆ. ಹಾಗಾಗಿ ಪೋಷಕರು ಎಚ್ಚರಿಕೆ ವಹಿಸಬೇಕು.

ಗೌರವ ಕಡಿಮೆಯಾಗಬಹುದು: ಮನೆಯಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಟೀಕಿಸುವುದು, ಆರೋಪ-ಪ್ರತ್ಯಾರೋಪ ಮಾಡುವುದು ಸಹಜ. ಆದರೆ, ಮಕ್ಕಳ ಮುಂದೆ ಬೈಯುತ್ತಾ ಸಂಗಾತಿಯನ್ನು ಟೀಕಿಸುವುದು ತಪ್ಪು. ನೀವು ಒಬ್ಬರನ್ನೊಬ್ಬರು ಕೆಟ್ಟದಾಗಿ ಮಾತನಾಡಿದರೆ ಅಥವಾ ಬೈದರೆ ಮಕ್ಕಳು ನಿಮ್ಮ ಮೇಲಿನ ಗೌರವವನ್ನು ಕಳೆದುಕೊಳ್ಳಬಹುದು. ನಿಮ್ಮ ಮಾತುಗಳಿಂದ ಪ್ರಭಾವಿತರಾಗಿ ಅವರು ಕೂಡ ನಕಾರಾತ್ಮಕ ವಿಷಯಗಳನ್ನು ಹೇಳಲು ಬಳಸುತ್ತಾರೆ.

ಪ್ರೀತಿಯಿಂದ ವರ್ತಿಸಿ: ಮನೆಯಲ್ಲಿ ನಿಮ್ಮ ಮಕ್ಕಳ ಮುಂದೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ವರ್ತಿಸಿ. ಇದು ನಿಮ್ಮ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಮಕ್ಕಳು ಸಹ ನಿಮ್ಮನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ ಮತ್ತು ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ನೀವು ನಿಮ್ಮ ಸಂಗಾತಿಯ ಬಗ್ಗೆ ಅನುಚಿತವಾಗಿ ಮತ್ತು ಅಸಮಾಧಾನದಿಂದ ವರ್ತಿಸಿದರೆ, ಮಕ್ಕಳು ಸಹ ಅದೇ ಅಭ್ಯಾಸವನ್ನು ಅಳವಡಿಸಿಕೊಳ್ಳುತ್ತಾರೆ.

ಸಂಬಂಧಿಕರ ಬಗ್ಗೆ ಎಚ್ಚರದಿಂದಿರಿ: ಎಷ್ಟೋ ಪಾಲಕರು ತಮ್ಮ ಮಕ್ಕಳ ಮುಂದೆಯೇ ತಮ್ಮ ಸಂಬಂಧಿಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ, ಆ ಸಂಬಂಧಿಕರು ನಿಮ್ಮ ಮನೆಗೆ ಬಂದಾಗ ನಿಮ್ಮ ಮಕ್ಕಳು ಅವರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ. ನಿಮ್ಮ ಸಂಬಂಧಿಕರಿಗೆ ಕಾರಣ ತಿಳಿದರೆ, ನಿಮ್ಮ ಸಂಬಂಧವು ಹಾಳಾಗುತ್ತದೆ. ಮಕ್ಕಳಲ್ಲಿ ಈ ಪರಿಕಲ್ಪನೆಯು ತುಂಬಾ ಅಪಾಯಕಾರಿ, ಹೀಗಾಗಿ ಮಕ್ಕಳ ಮುಂದೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು.

ಭಯವನ್ನು ತೋರಿಸಬೇಡಿ: ತಮ್ಮ ಪೋಷಕರು ತುಂಬಾ ಧೈರ್ಯಶಾಲಿ ಮತ್ತು ಬಲಶಾಲಿ ಎಂದು ಮಕ್ಕಳು ಭಾವಿಸುತ್ತಾರೆ. ಮಕ್ಕಳ ಮುಂದೆ ನೀವು ಭಯ ಅಥವಾ ಗೊಂದಲದಲ್ಲಿ ಕಾಣಿಸಿಕೊಂಡರೆ, ಅವರು ಗೊಂದಲಕ್ಕೊಳಗಾಗಲು ಪ್ರಾರಂಭಿಸುತ್ತಾರೆ. ಮಕ್ಕಳು ನಿಮ್ಮ ಬಗ್ಗೆ ಭಯಪಟ್ಟರೆ, ಅದು ಫೋಬಿಯಾ ಆಗಿ ಬದಲಾಗಬಹುದು.

ಒಟ್ಟಿನಲ್ಲಿ ಮಕ್ಕಳು ತಮ್ಮ ಪೋಷಕರನ್ನೇ ನೋಡುತ್ತಾ ಬೆಳೆಯುವುದರಿಂದ ಅವರ ಮುಂದೆ ಮಾತನಾಡುವಾಗ ಅಥವಾ ವರ್ತಿಸುವಾಗ ಬಹಳ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಅವರ ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಮಕ್ಕಳಿಗೆ ಅರ್ಥವಾಗುವ ವಿಷಯವಾಗಿದ್ದರೆ ಅವರಿಗೆ ಅರ್ಥವಾಗುವಂತೆ ವಿವರಿಸಿ. ಅವರಿಗೆ ಅರ್ಥವಾಗದಿದ್ದರೆ, ಅದನ್ನು ಮರೆಮಾಡಿ. ಸಂಗಾತಿಯ ಮುಂದೆ ಚರ್ಚಿಸಿ ಮಕ್ಕಳಲ್ಲಿ ಅನುಮಾನ, ಭಯ ಹುಟ್ಟಿಸಬೇಡಿ.

Whats_app_banner