ಅಂಬೆಗಾಲಿಡುವ ಮಗು ನಿಮ್ಮ ಮನೇಲಿದ್ಯಾ: 2 ವರ್ಷದ ಒಳಗಿನ ಕಂದಮ್ಮಗಳಿಗೆ ನೀಡಲೇಬೇಕಾದ ಈ ಲಸಿಕೆಗಳ ಬಗ್ಗೆ ತಿಳಿದುಕೊಳ್ಳಿ
ಪುಟ್ಟ ಮಕ್ಕಳಿಗೆ ಲಸಿಕೆಗಳನ್ನು ನೀಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಲಸಿಕೆಗಳನ್ನು ಕಾಲಕಾಲಕ್ಕೆ ನೀಡುವುದು ಅಷ್ಟೇ ಮುಖ್ಯವಾಗಿದೆ. 1 ರಿಂದ 2 ವರ್ಷದ ಒಳಗಿನ ಮಕ್ಕಳಿಗೆ ಈ 7 ಲಸಿಕೆಗಳನ್ನು ನೀಡುವುದು ನಿಮ್ಮ ಮುದ್ದು ಕಂದಮ್ಮಗಳನ್ನು ಗಂಭೀರ ಸೋಂಕುಗಳಿಂದ ರಕ್ಷಣೆಯನ್ನು ಒದಗಿಸುವುದಾಗಿದೆ. ಆ ಲಸಿಕೆಗಳು ಯಾವುವು ಮತ್ತು ಯಾವಾಗ ನೀಡಬೇಕು ಇಲ್ಲಿದೆ ಮಾಹಿತಿ.
ಮಗು ಹುಟ್ಟಿದ ತಕ್ಷಣ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡಲು ಲಸಿಕೆಗಳನ್ನು (ವ್ಯಾಕ್ಸಿನೇಷನ್) ಹಾಕುವುದು ಅತಿ ಅವಶ್ಯಕವಾಗಿದೆ. ಮಗುವಿಗೆ ಒಂದು ವರ್ಷವಾಗುವವರೆಗೆ ಮಾತ್ರ ಲಸಿಕೆ ನೀಡಿದರೆ ಸಾಕು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಕೆಲವು ಲಸಿಕೆಗಳನ್ನು 1 ಮತ್ತು 2 ವರ್ಷಗಳ ನಡುವೆ ಮಗುವಿಗೆ ನೀಡುವುದು ಅತಿ ಅಗತ್ಯ. ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬೆಳವಣಿಗೆಯ ಹಂತದಲ್ಲಿರುತ್ತದೆ. ಆಗ ಮಗುವು ವಿವಿಧ ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುವ ಸಂಭವವಿರುತ್ತದೆ. ಹಾಗಾಗಿ ಈ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಸಹಾಯವಾಗುತ್ತದೆ. ಮಕ್ಕಳನ್ನು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಮಗುವಿಗೆ 1 ರಿಂದ 2 ವರ್ಷಗಳ ಅವಧಿಯಲ್ಲಿ ಕಡ್ಡಾಯವಾಗಿ 7 ಪ್ರಮುಖ ಲಸಿಕೆಗಳನ್ನು ಹಾಕಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಅಂಬೆಗಾಲಿಡಲು ಪ್ರಾರಂಭಿಸಿರುವ ಪುಟ್ಟ ಮಕ್ಕಳನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಈ ಲಸಿಕೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾದರೆ ಆ ಏಳು ಪ್ರಮುಖ ಲಸಿಕೆಗಳು ಯಾವುವು? ಅವು ಯಾವ ರೋಗಗಳಿಂದ ನಿಮ್ಮ ಮಗುವನ್ನು ರಕ್ಷಿಸಬಲ್ಲವು ಮತ್ತು ಯಾವ ಸಮಯದಲ್ಲಿ ನೀಡಬೇಕು ಇಲ್ಲಿದೆ ಓದಿ.
1 ರಿಂದ 2 ವರ್ಷದ ಒಳಗಿನ ಮಗುವಿಗೆ ನೀಡಲೇಬೇಕಾದ 7 ಪ್ರಮುಖ ಲಸಿಕೆಗಳು
- ಹೆಪಿಟೈಟಿಸ್ ಎ (ಮಗುವಿಗೆ 12 ತಿಂಗಳವಾದಾಗ): ನಿಮ್ಮ ಮಗು ಮೊದಲ ಜನ್ಮದಿನವನ್ನು ಆಚರಿಸಿಕೊಂಡ ನಂತರ ಮೊದಲಿಗೆ ಹಾಕಿಸಬೇಕಾದ ಲಸಿಕೆಯೆಂದರೆ ಅದು ಹೆಪಿಟೈಟಿಸ್ ಎ. ಈ ಲಸಿಕೆ ಪಿತ್ತಜನಾಕಾಂಗದ ಕಾಯಿಲೆಯ ವಿರುದ್ಧ ಹೋರಾಡುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುವ ಈ ಸಾಂಕ್ರಾಮಿಕ ರೋಗ ಮಗುವನ್ನು ತೀವ್ರ ಭಾದೆಗೆ ಒಳಪಡಿಸುತ್ತದೆ. ಹೆಪಿಟೈಟಿಸ್ ಎ ಲಸಿಕೆ ನೀಡುವುದರಿಂದ ಮಗುವಿನಲ್ಲಿ ಪ್ರಾರಂಭದಲ್ಲೇ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ. ಇದು ಯಕೃತ್ತಿನ ಆರೋಗ್ಯ ಕಾಪಾಡಲು ಮತ್ತು ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಲಸಿಕೆಯ ಎರಡನೇ ಡೋಸ್ ಅನ್ನು 18 ರಿಂದ 19 ತಿಂಗಳ ನಡುವೆ ನೀಡುವುದು ಮುಖ್ಯವಾಗಿದೆ. ಅದು ಹೆಪಿಟೈಟಿಸ್ ಎ ವಿರುದ್ಧ ಸೂಕ್ತ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿರುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.
- ವರಿಸೆಲ್ಲಾ ಚಿಕನ್‌ಪಾಕ್ಸ್ (12 ರಿಂದ 15 ತಿಂಗಳುಗಳ ಅವಧಿಯಲ್ಲಿ): ವರಿಸೆಲ್ಲಾ ಲಸಿಕೆಯು ಚಿಕನ್‌ಪಾಕ್ಸ್ ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುವ ಚರ್ಮದ ಸೋಂಕುಗಳು, ನ್ಯುಮೋನಿಯಾ ಮತ್ತು ಎನ್ಸೆಫಾಲಿಟಿಸ್ ನಂತಹ ತೀವ್ರ ಪ್ರಮಾಣದ ಸಾಂಕ್ರಾಮಿಕ ರೋಗಗಳ ವಿರುದ್ಧ ಸೂಕ್ತ ರಕ್ಷಣೆ ನೀಡುತ್ತದೆ. ಚಿಕನ್‌ಪಾಕ್ಸ್ ಕೆಲವೊಮ್ಮೆ ಮಕ್ಕಳಲ್ಲಿ ಆಸ್ಪತ್ರೆಗೆ ಸೇರಿಸುವಷ್ಟು ತೀವ್ರ ಪರಿಣಾಮ ಬೀರಬಹುದು. ಹಾಗಾಗಿ ಈ ಲಸಿಕೆಯನ್ನು 12 ರಿಂದ 15 ತಿಂಗಳುಗಳ ಅವಧಿಯಲ್ಲಿ ಹಾಕಿಸಬೇಕು. ಇದರ ಎರಡನೇ ಡೋಸ್ ಅನ್ನು 18 ರಿಂದ 19 ತಿಂಗಳ ವಯಸ್ಸಿನಲ್ಲಿ ನೀಡುವುದು ಮುಖ್ಯವಾಗಿದೆ.
- ಮಂಪ್ಸ್, ದಡಾರು, ರುಬೆಲ್ಲಾ (MMR) (15 ತಿಂಗಳು): MMRನ ಎರಡನೇ ಡೋಸ್ ಅನ್ನು ಮಗುವಿಗೆ 15 ತಿಂಗಳುಗಳಿರುವಾಗ ನೀಡಲಾಗುತ್ತದೆ. ಇದು ಮಂಪ್ಸ್, ದಡಾರ ಮತ್ತು ರುಬೆಲ್ಲಾ ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಇವು ತೀವ್ರ ಪರಿಣಾಮವನ್ನು ಬೀರುವ ಸಾಂಕ್ರಾಮಿಕ ರೋಗಗಳು. ದಡಾರವು ನ್ಯುಮೋನಿಯಾ, ಮೆದುಳಿನ ಉರಿಯೂತ ಮತ್ತು ಮರಣಕ್ಕೂ ಕಾರಣವಾಗಬಹುದು. ಮಂಪ್ಸ್ ಮೆನಿಂಜೈಟಿಸ್ ಮತ್ತು ಶಾಶ್ವತ ಶ್ರವಣ ದೋಷವನ್ನುಂಟು ಮಾಡಬಹುದು. ರುಬೆಲ್ಲಾದಿಂದ ಕಿವುಡುತನ ಮತ್ತು ಹೃದಯದ ಕಾಯಿಲೆ ಬರಬಹುದು.
- PCV ಬೂಸ್ಟರ್ (15 ತಿಂಗಳು): ಬೂಸ್ಟರ್ ಲಸಿಕೆಯನ್ನು ಮಗುವಿನ ಮೊದಲ ವರ್ಷದ ಅವಧಿಯಲ್ಲಿ ಮೂರು ಬಾರಿ ನೀಡಲಾಗುತ್ತದೆ. ಮಗುವಿಗೆ 15 ತಿಂಗಳಿನಲ್ಲಿ ನೀಡುವ ಪಿಸಿವಿ ಬೂಸ್ಟರ್ ಲಸಿಕೆ ನಿರ್ಣಾಯಕವಾಗಿದೆ. ಈ ಲಸಿಕೆಯು ನ್ಯುಮೋನಿಯಾದ ವಿರುದ್ಧ ಮಗುವಿಗೆ ರಕ್ಷಾಕವಚ ಒದಗಿಸುತ್ತದೆ. 2 ವರ್ಷಗಳ ಒಳಗಿನ ಮಕ್ಕಳು ಬಹಳ ಸೂಕ್ಷ್ಮವಾಗಿರುತ್ತಾರೆ. ನ್ಯುಮೋನಿಯಾಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ರೋಗವು ಉಲ್ಭಣಗೊಂಡು ತೀವ್ರ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಪಿಸಿವಿ ಬೂಸ್ಟರ್ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಅತ್ಯಂತ ಉಪಯುಕ್ತವಾಗಿದೆ.
5) ಡಿಫ್ತೀರಿಯಾ, ಟೆಟನಸ್ ಮತ್ತು ಪೆರ್ಟುಸಿಸ್ (DTP Booster) (16–18 ತಿಂಗಳುಗಳು): DTaP/DTwp ಈ ಲಸಿಕೆಯನ್ನು ಬ್ಯಾಕ್ಟೀರಿಯಾದಿಂದ ಉಂಟಾಗುವ ಮೂರು ಗಂಭೀರ ಸೋಂಕುಗಳಿಂದ ರಕ್ಷಣೆಯನ್ನು ಒದಗಿಸಲು ಮಕ್ಕಳಿಗೆ ನೀಡಲಾಗುತ್ತದೆ. ಡಿಫ್ತೀರಿಯಾ, ಟೆಟನಸ್ ಮತ್ತು ಪೆರ್ಟುಸಿಸ್ (ವೂಪಿಂಗ್ ಕೆಮ್ಮು) ಇವೇ ಆ ಮೂರು ಸೋಂಕುಗಳು. ಡಿಫ್ತೀರಿಯಾವು ಗಂಟಲು ಭಾಗದಲ್ಲಿ ತೊಂದರೆಯನ್ನುಂಟು ಮಾಡಿ, ಉಸಿರಾಟವನ್ನು ತಡೆಯುತ್ತದೆ. ಟೆಟನಸ್ ಇದು ಧನುರ್ವಾಯು ಮತ್ತು ಪಾರ್ಶವಾಯುವನ್ನು ಪ್ರಚೋದಿಸುತ್ತದೆ. ಪೆರ್ಟುಸಿಸ್ ತೀವ್ರ ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನುಂಟು ಮಾಡುತ್ತದೆ. ರೋಗ ಉಲ್ಭಣವಾದರೆ ಸಾವಿಗೆ ಕಾರಣವಾಗಬಹುದು. ಹಾಗಾಗಿ ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು 16 ರಿಂದ 18 ತಿಂಗಳುಗಳ ಅವಧಿಯಲ್ಲಿ ಈ ಬೂಸ್ಟರ್ ಲಸಿಕೆ ಹಾಕಿಸುವುದು ಅಗತ್ಯವಾಗಿದೆ.
- ಹಿಬ್ ಬೂಸ್ಟರ್ (16–18 ತಿಂಗಳುಗಳು): ಮೆನಿಂಜೈಟಿಸ್ ಅಥವಾ ಮೆದುಳಿನ ಉರಿಯೂತದಂತಹ ಗಂಭೀರ ಸೋಂಕುಗಳಿಂದ ರಕ್ಷಣೆ ಒದಗಿಸಲು ಪುಟ್ಟ ಮಕ್ಕಳಿಗೆ ಹಿಬ್ ಬೂಸ್ಟರ್ ಲಸಿಕೆ ನೀಡುವುದು ಅಗತ್ಯವಾಗಿದೆ. ಇದು ಮೆದುಳಿನ ಹಾನಿ ಮತ್ತು ಶ್ರವಣ ದೋಷದಂತಹ ತೀವ್ರ ತೊಂದರೆಗಳಿಂದ ರಕ್ಷಿಸುತ್ತದೆ. ಇದನ್ನು 16 ರಿಂದ 18 ತಿಂಗಳುಗಳ ನಡುವೆ ನೀಡಲಾಗುತ್ತದೆ.
- ಪೋಲಿಯೊ (IPV ಬೂಸ್ಟರ್) (16–18 ತಿಂಗಳುಗಳು): ಪೋಲಿಯೊದಿಂದ ರಕ್ಷಣೆ ಒದಗಿಸಲು ಈ ಬೂಸ್ಟರ್ ಲಸಿಕೆಯನ್ನು ನೀಡುವುದು ನಿರ್ಣಾಯಕವಾಗಿದೆ. ಪೋಲಿಯೊ ಇದು ಒಂದು ಗಂಭೀರ ಕಾಯಿಲೆಯಾಗಿದೆ. ಈ ಲಸಿಕೆಯು ಪೋಲಿಯೊದಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ವೈರಸ್‌ನಿಂದ ರಕ್ಷಣೆ ಒದಗಿಸುತ್ತದೆ. ಅಂಬೆಗಾಲಿಡುವ ಪುಟ್ಟ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವುದು ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಾಗಿದೆ.
(ವಿಷಯ ಸೂಚನೆ: ಈ ಮಾಹಿತಿಗಳನ್ನು ಸಾಮಾನ್ಯ ಜ್ಞಾನಕ್ಕಾಗಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಮಕ್ಕಳ ವೈದ್ಯರನ್ನು ಭೇಟಿಯಾಗಿ, ಸಲಹೆ ಅಥವಾ ಮಾರ್ಗದರ್ಶನ ಪಡೆಯುವುದು ಸೂಕ್ತ. ಯಾವುದೇ ಲಸಿಕೆ ಕೊಡುವ ಮುನ್ನ ತಜ್ಞ ವೈದ್ಯರ ಜತೆ ಸಮಾಲೋಚನೆ ನಡೆಸುವುದು ಅತ್ಯಗತ್ಯ.)