logo
ಕನ್ನಡ ಸುದ್ದಿ  /  ಜೀವನಶೈಲಿ  /  ಪೋಷಕರೇ, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಧನಾತ್ಮಕವಾಗಿರಿ; ಮಕ್ಕಳ ಮಾನಸಿಕ ಯೋಗಕ್ಷೇಮಕ್ಕೆ ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನವಿದು

ಪೋಷಕರೇ, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಧನಾತ್ಮಕವಾಗಿರಿ; ಮಕ್ಕಳ ಮಾನಸಿಕ ಯೋಗಕ್ಷೇಮಕ್ಕೆ ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನವಿದು

Reshma HT Kannada

Jun 07, 2024 09:28 AM IST

google News

ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನ ತಿಳಿಯಿರಿ

    • ಮಕ್ಕಳನ್ನು ಪೋಷಿಸುವುದೆಂದರೆ ಸುಲಭದ ಮಾತಲ್ಲ. ಅವರು ತಪ್ಪು ಮಾಡಿದಾಗ ತಿದ್ದಿ, ಬುದ್ಧಿ ಹೇಳುವುದು ಪೋಷಕರ ಕರ್ತವ್ಯ. ಬೈದು, ಹೊಡೆದು ಬುದ್ಧಿ ಹೇಳಿದರೆ ಅದು ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅವರ ಮಾನಸಿಕ ಆರೋಗ್ಯ ಹದಗೆಡುತ್ತದೆ. ಹಾಗಾದ್ರೆ ಧನಾತ್ಮಕ ವಿಧಾನದಲ್ಲಿ ಮಕ್ಕಳನ್ನು ಪೋಷಿಸುವುದು ಹೇಗೆ, ಇದು ಎಷ್ಟು ಅವಶ್ಯ ನೋಡಿ. (ಬರಹ: ಪ್ರಿಯಾಂಕ ಗೌಡ)
ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನ ತಿಳಿಯಿರಿ
ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನ ತಿಳಿಯಿರಿ

ಮಕ್ಕಳೆಂದರೆ ದೇವರ ಸಮಾನ ಎಂಬ ಮಾತಿದೆ. ನಾವು ನಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸುತ್ತೇವೆಯೋ ಅದೇ ರೀತಿ ಮಕ್ಕಳು ಬೆಳೆಯುತ್ತಾರೆ. ಒಳ್ಳೆ ಮಾತುಗಳನ್ನು ಮಕ್ಕಳು ಕಲಿಯುವುದಿಲ್ಲ, ಅದೇ ಕೆಟ್ಟ ಪದಗಳನ್ನು ಬೇಗ ಕಲಿಯುತ್ತಾರೆ ಎಂಬುದು ಹಲವು ಪೋಷಕರ ದೂರು. ಮಕ್ಕಳ ಎದುರಿಗೆ ಯಾವತ್ತೂ ಕೆಟ್ಟ ಪದ ಪ್ರಯೋಗ ಮಾಡುವುದು ಅಥವಾ ಜಗಳ ಮಾಡುವುದು ಮುಂತಾದವುಗಳನ್ನು ಮಾಡಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ.

ನಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಲು ನಾವು ಬಳಸುವ ಪದಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳೆದುರಿಗೆ ಸಕರಾತ್ಮಕ ಮಾತುಗಳನ್ನು ಮಾತ್ರ ಮಾತನಾಡಬೇಕು. ನಾವು ಮಕ್ಕಳಿಗೆ ಪದಗಳ ಮೂಲಕ ಅಥವಾ ಮೌಖಿಕ ಸೂಚನೆಗಳ ಮೂಲಕ ಏನು ಹೇಳುತ್ತೇವೆಯೋ ಅದು ಅವರ ಬೆಳವಣಿಗೆಯಲ್ಲಿ ರೂಪುಗೊಳ್ಳುತ್ತದೆ.

ಮಕ್ಕಳೊಂದಿಗಿನ ಸಕಾರಾತ್ಮಕ ಪ್ರತಿಕ್ರಿಯೆಯು ಅವರ ಕಲಿಕೆ ಮತ್ತು ಸಾಧನೆಯಲ್ಲಿ ನಿಜವಾದ ಸಂತೋಷವನ್ನು ತರುತ್ತದೆ. ಮಕ್ಕಳೇನಾದರೂ ಹೊಸದನ್ನು ಕಲಿತಾಗ ಅವರ ಕಲೆಯನ್ನು ಪ್ರೋತ್ಸಾಹಿಸಿ. ಪೇಂಟಿಂಗ್, ನೃತ್ಯ ಮುಂತಾದವುಗಳನ್ನು ಮಾಡಿದಾಗ, ಅವರನ್ನು ಪ್ರಶಂಸಿಸಬೇಕು. ಅಲ್ಲದೇ ಬೇರೆ ಮಕ್ಕಳೊಂದಿಗೆ ಆಟಿಕೆ ಹಂಚಿಕೊಂಡಾಗಲೂ ಸಂತೋಷದಿಂದ ಪ್ರತಿಕ್ರಿಯಿಸಬೇಕು. ಪೋಷಕರು ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟಾಗ, ಮಕ್ಕಳು ತಮ್ಮ ಭಾವನೆಗಳನ್ನು ಗುರುತಿಸಲು ಮತ್ತು ನಿರ್ವಹಿಸಲು ಕಲಿಯುತ್ತಾರೆ. ಇದು ಭಾವನಾತ್ಮಕ ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಇದು ಅವರ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಧನಾತ್ಮಕ ಪೋಷಕತ್ವ ಹಾಗೂ ಪಾಸಿಟಿವ್‌ ಪೇರೆಂಟಿಂಗ್‌ ಎನ್ನುವುದು ಮಕ್ಕಳಿಗೆ ಎಷ್ಟರಮಟ್ಟಿಗೆ ಅವಶ್ಯ, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಪಾಸಿಟಿವ್‌ ಪೇರೆಂಟಿಂಗ್‌ನ ಪ್ರಯೋಜನಗಳು

1. ಮಕ್ಕಳ ಯಶಸ್ಸಿಗೆ ಕಾರಣವಾಗುತ್ತದೆ ಸಕಾರಾತ್ಮಕ ಪೋಷಕತ್ವ: ಸಂಶೋಧಕರ ಪ್ರಕಾರ, ಧನಾತ್ಮಕ ಪಾಲನೆಯು ಮಕ್ಕಳು ಶಾಲೆಯಲ್ಲಿ ಉತ್ತಮವಾಗಿ ಕಲಿಯಲು, ನಡವಳಿಕೆಯ ಸಮಸ್ಯೆಗಳನ್ನು ಸುಧಾರಿಸಲು ಕಾರಣವಾಗುತ್ತದೆ ಹಾಗೂ ಬಲವಾದ ಮಾನಸಿಕ ಆರೋಗ್ಯವನ್ನು ಹೊಂದಲು ಕೂಡ ಸಹಾಯ ಮಾಡುತ್ತದೆ.

2. ಧನಾತ್ಮಕ ಪೋಷಕತ್ವವು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿ: ಧನಾತ್ಮಕ ಪಾಲನೆಯು, ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಅವರ ಭಾವನೆಗಳು ಮತ್ತು ಅರಿವಿನೊಂದಿಗೆ ಸಂಬಂಧಿಸಿದ ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

3. ಸಕಾರಾತ್ಮಕ ಪೋಷಕತ್ವವು ಸಂತೋಷ ಮತ್ತು ಆರೋಗ್ಯಕರ ಪ್ರೌಢಾವಸ್ಥೆಗೆ ಸಂಬಂಧಿಸಿದೆ: ಮಕ್ಕಳನ್ನು ಚೆನ್ನಾಗಿ ಪೋಷಿಸಿದರೆ ಅದು ಮಕ್ಕಳಲ್ಲಿನ ಉತ್ತಮ ಸಂಬಂಧ, ಮಾನಸಿಕ ಆರೋಗ್ಯ ಮತ್ತು ಪ್ರೌಢಾವಸ್ಥೆಯಲ್ಲಿ ಯೋಗಕ್ಷೇಮ ಸೇರಿದಂತೆ ದೀರ್ಘಾವಧಿಯ ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

4. ಮಕ್ಕಳಲ್ಲಿ ಉತ್ತಮ ನಡವಳಿಕೆಗಳನ್ನು ಉತ್ತೇಜಿಸುವುದು: ಮಕ್ಕಳಿಗೆ ಸಾಮಾಜಿಕ ಕೌಶಲಗಳನ್ನು ಕಲಿಸಲು, ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಲು, ನಡವಳಿಕೆಗಳು ಮತ್ತು ಭಾವನೆಗಳನ್ನು ನಿರ್ವಹಿಸಲು ಅವರಿಗೆ ಕೌಶಲಗಳನ್ನು ಕಲಿಸಬೇಕು.

5. ಮಕ್ಕಳೊಂದಿಗೆ ಆಟ ಆಡಲು ಸಮಯ ಮೀಸಲಿಡಿ: ದೈನಂದಿನ ಜೀವನದ ಜಂಜಾಟದಲ್ಲಿ ಬಹುತೇಕರು ಮಕ್ಕಳೊಂದಿಗೆ ಆಟವಾಡುವ ಸಮಯವನ್ನು ಮರೆತುಬಿಡುತ್ತಾರೆ. ಮಕ್ಕಳೊಂದಿಗೆ ಆಟವಾಡುವ ಮೂಲಕ ಪೋಷಕರು ಹಾಗೂ ಮಕ್ಕಳ ನಡುವೆ ಉತ್ತಮ ಸಂಪರ್ಕ ಬೆಳೆಯುತ್ತದೆ. ಪ್ರತಿನಿತ್ಯ ಐದು ನಿಮಿಷಗಳ ಕಾಲ ಆಟವಾಡಿದರೆ ಪೋಷಕರು-ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸಬಹುದು.

ನಿಮ್ಮ ಮಕ್ಕಳು ಹೇಗೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಮಕ್ಕಳ ಕೌಶಲಗಳನ್ನು ಸರಿಯಾಗಿ ಗುರುತಿಸಿ, ಅವರನ್ನು ಪ್ರೋತ್ಸಾಹಿಸಿ. ಅವರೇನಾದರೂ ತಪ್ಪು ಮಾಡಿದರೆ ಗದರಿಸದೆ, ಹೊಡೆಯದೇ ಸಮಾಧಾನವಾಗಿ ಬುದ್ಧಿ ಹೇಳಬೇಕು. ಹೊಡೆದು, ಬೈದು ಬುದ್ಧಿ ಕಲಿಸುತ್ತೇವೆ ಎಂದು ಅಂದುಕೊಂಡರೆ ಅದು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಮಕ್ಕಳಿಗೆ ಪ್ರೀತಿಯಿಂದ ಹೇಳಿಕೊಟ್ಟರೆ ಅವರು ಖಂಡಿತಾ ಪೋಷಕರ ಮಾತು ಕೇಳುತ್ತಾರೆ. ಒಟ್ಟಿನಲ್ಲಿ ನಿಮ್ಮ ಮಾರ್ಗದರ್ಶನ ನಿರ್ಣಾಯಕವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ