ನಿಮ್ಮ ಮುದ್ದಿನ ಸಾಕು ನಾಯಿ ಆರೋಗ್ಯಕ್ಕೆ ತೆಂಗಿನಕಾಯಿ ಸುರಕ್ಷಿತವೇ? ಅದನ್ನು ಕೊಡುವ ಮುನ್ನ ಈ ಅಂಶ ನೆನಪಿನಲ್ಲಿಡಿ
Jul 24, 2024 12:08 PM IST
ನಿಮ್ಮ ಮುದ್ದಿನ ಸಾಕು ನಾಯಿಗಳು ತೆಂಗಿನಕಾಯಿ ತಿನ್ನುವುದು ಸುರಕ್ಷಿತವೇ? ಇದನ್ನು ಕೊಡುವ ಮುನ್ನ ಈ ಅಂಶ ನೆನಪಿನಲ್ಲಿಡಿ (ಸಾಂದರ್ಭಿಕ ಚಿತ್ರ)
- Pet Care Tips: ನಿಮ್ಮ ಮುದ್ದಿನ ಸಾಕು ನಾಯಿ ನೀವು ಹಾಕುವ ಎಲ್ಲಾ ಆಹಾರವನ್ನು ತಿನ್ನುತ್ತದೆ ಎಂದು ಎಲ್ಲವನ್ನೂ ಕೊಡುವ ಮುನ್ನ ಎಚ್ಚರವಿರಲಿ. ಅತಿಯಾದರೆ ಅಮೃತವೂ ವಿಷ ಎಂಬಂತೆ, ತೆಂಗಿನಕಾಯಿಯೂ ಕೂಡ ನಾಯಿಗಳಿಗೆ ಹಾನಿಕಾರಕ. ಇದನ್ನು ನಾಯಿಗಳಿಗೆ ಕೊಡುವ ಮುನ್ನ ಯೋಚಿಸಿ. ಆದಷ್ಟು ಮಿತವಾಗಿ ಕೊಡುವುದರಿಂದ ನಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದು. (ಬರಹ: ಪ್ರಿಯಾಂಕಾ ಗೌಡ)
ಬಹುತೇಕ ಮಂದಿ ಶ್ವಾನ, ಬೆಕ್ಕು, ದನ ಇತ್ಯಾದಿ ಪ್ರಾಣಿಗಳನ್ನು ಸಾಕುತ್ತಾರೆ. ಅದರಲ್ಲೂ ನಾಯಿ ಮತ್ತು ಬೆಕ್ಕು (Pet Animals) ಸಾಕುವವರು ಹೆಚ್ಚು. ಸಾಮಾನ್ಯವಾಗಿ ಬೆಕ್ಕು ಅನ್ನ, ಹಾಲು, ಮೀನು ಇತ್ಯಾದಿ ಸೀಮಿತ ಆಹಾರ ಮಾತ್ರ ತಿನ್ನುತ್ತದೆ. ಆದರೆ, ಶ್ವಾನಗಳು ಮಾತ್ರ ತನ್ನ ಮಾಲೀಕರು ಏನು ತಿನ್ನುತ್ತಾರೋ ಅವೆಲ್ಲವನ್ನೂ ತಿನ್ನಲು ಇಷ್ಟಪಡುತ್ತವೆ. ತಾವು ತಿನ್ನುತ್ತಿದ್ದಾಗ ನಾಯಿಗೂ ಆಹಾರ ಹಾಕುತ್ತಾ ತಿನ್ನುವ ರೂಢಿ ನಮ್ಮಲ್ಲಿ ಕೆಲವರಿಗಿದೆ. ಆದರೆ, ಸಾಕು ನಾಯಿಗಳು ನೀವು ಹಾಕುವ ಎಲ್ಲಾ ಆಹಾರವನ್ನು ಸೇವಿಸುವುದು ಉತ್ತಮವೇ?
ನಾಯಿಗಳಿಗೆ ಎಲ್ಲಾ ಆಹಾರಗಳನ್ನು ಹಾಕುವ ಮುನ್ನ ಅವುಗಳ ಆರೋಗ್ಯದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ. ಬಾದಾಮಿ, ಇತ್ಯಾದಿ ಬೀಜಗಳನ್ನು ಹಾಕುವುದರಿಂದ ಇದು ನಿಮ್ಮ ಪ್ರೀತಿಯ ಸಾಕುಪ್ರಾಣಿಗಳ ಹೊಟ್ಟೆಯನ್ನು ಕೆಡಿಸಬಹುದು. ಬೇಯಿಸಿದ ಅಥವಾ ಸಂಸ್ಕರಿಸಿದ ಮಾಂಸ, ಕೋಳಿ, ಮೀನು, ತರಕಾರಿಗಳು, ಅಕ್ಕಿ ಮತ್ತು ಮೊಟ್ಟೆ, ಧಾನ್ಯಗಳು ಇತ್ಯಾದಿ ನಾಯಿಗಳಿಗೆ ನೀಡಲಾಗುವ ಪ್ರಮುಖ ಆಹಾರಗಳಾಗಿವೆ. ಆದರೆ, ಕೆಲವರು ನಾಯಿಗಳಿಗೆ ತೆಂಗಿನಕಾಯಿ ತಿನ್ನಲು ಕೊಡುತ್ತಾರೆ. ಇನ್ನೂ ಕೆಲವು ನಾಯಿಗಳು ತೆಂಗಿನಕಾಯಿ ಕಡೆಗೆ ಆಕರ್ಷಿತವಾಗುತ್ತವೆ. ಅವು ತೆಂಗಿನಕಾಯಿಯನ್ನು ತಿನ್ನಲು ಬಹಳ ಹಾತೊರೆಯುತ್ತವೆ. ನಿಜವಾಗಿಯೂ ತೆಂಗಿನಕಾಯಿ ನಾಯಿಗಳಿಗೆ ಸುರಕ್ಷಿತವಾಗಿದೆಯೇ? ಅದನ್ನು ಆಹಾರದಲ್ಲಿ ಸೇರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಾಯಿಗಳಿಗೆ ತೆಂಗಿನಕಾಯಿ ತಿನ್ನಲು ಕೊಡುವುದು ಸುರಕ್ಷಿತವೇ?
ತಾಜಾ ತೆಂಗಿನಕಾಯಿಯ ಒಳಗಿನ ಬಿಳಿಪದರವು ನಾಯಿಗಳಿಗೆ ವಿಷಕಾರಿಯಲ್ಲ. ವಾಸ್ತವವಾಗಿ, ಇದು ಅವುಗಳ ಆಹಾರಕ್ರಮಕ್ಕೆ ಆರೋಗ್ಯಕರ ಸೇರ್ಪಡೆ. ತೆಂಗಿನಕಾಯಿಯು ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಮುದ್ದಿನ ಶ್ವಾನಗಳಿಗೆ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ತೆಂಗಿನಕಾಯಿಯ ಒಂದು ತುಂಡನ್ನು ನಿಮ್ಮ ನಾಯಿಗೆ ಉಪಹಾರವಾಗಿ ನೀಡುವುದರಿಂದ ಯಾವುದೇ ತೊಂದರೆಯಿಲ್ಲ.
ನಾಯಿಗಳಿಗೆ ತೆಂಗಿನಕಾಯಿ ತಿನ್ನಲು ಕೊಡುವ ಮುನ್ನ ನೆನಪಿಡಬೇಕಾದ ಅಂಶಗಳು
1. ತೆಂಗಿನಕಾಯಿಯನ್ನು ಮಿತವಾಗಿ ತಿನ್ನಬೇಕು
ತೆಂಗಿನಕಾಯಿ ಒಳಗಿನ ಬಿಳಿ ಪದರವು ನಾಯಿಗಳಿಗೆ ವಿಷಕಾರಿಯಲ್ಲದಿದ್ದರೂ, ಅದರಲ್ಲಿ ಹೆಚ್ಚಿನವು ಪ್ಯಾಂಕ್ರಿಯಾಟೈಟಿಸ್ ಮತ್ತು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಚಿಕ್ಕ ತುಂಡುಗಳನ್ನು ಮಾತ್ರ ತಿನ್ನಲು ಕೊಡಿ. ದೊಡ್ಡ ತೆಂಗಿನಕಾಯಿಯ ತುಂಡನ್ನು ಎಂದಿಗೂ ಕೊಡದಿರಿ. ತೆಂಗಿನಕಾಯಿಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕೊಬ್ಬಿನಂಶವಿದೆ. ಇದರ ಅತಿಯಾದ ಸೇವನೆಯು ಮೇದೋಜ್ಜೀರಕ ಗ್ರಂಥಿಯ ಮೇಲೆ ಗಂಭೀರ ಉರಿಯೂತಕ್ಕೆ ಕಾರಣವಾಗಬಹುದು. ಹೀಗಾಗಿ ಎಚ್ಚರವಿರಲಿ.
2. ತೆಂಗಿನಕಾಯಿ ಶ್ವಾನಕ್ಕೆ ಕೊಡುವ ಮುನ್ನ ನಿಮ್ಮ ಸಾಕುಪ್ರಾಣಿಗಳ ಪಶುವೈದ್ಯರನ್ನು ಸಂಪರ್ಕಿಸಿ
ತೆಂಗಿನಕಾಯಿಯನ್ನು ನಿಮ್ಮ ಮುದ್ದಿನ ಶ್ವಾನಕ್ಕೆ ಕೊಡುವ ಮುನ್ನ ಪಶುವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಪ್ರತಿ ನಾಯಿಯ ಆಹಾರದ ಅಗತ್ಯತೆಗಳು ಬದಲಾಗಬಹುದು. ಪಶುವೈದ್ಯರು ನಿಮ್ಮ ನಾಯಿಯ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಅಮೂಲ್ಯವಾದ ಸಲಹೆಯನ್ನು ನೀಡಬಹುದು. ಅವರು ನಿಮ್ಮ ನಾಯಿಯ ಒಟ್ಟಾರೆ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರ ಕೊಟ್ಟರೆ ಸೂಕ್ತ ಎಂಬುದು ಅವರಿಗೆ ತಿಳಿದಿರುತ್ತದೆ. ಅಲ್ಲದೆ, ನಿಮ್ಮ ಶ್ವಾನದ ತಳಿ, ತೂಕ ಮತ್ತು ಚಟುವಟಿಕೆಯ ಮಟ್ಟವನ್ನು ಆಧರಿಸಿ ತೆಂಗಿನಕಾಯಿ ಎಷ್ಟು ಕೊಡಬೇಕು ಎಂಬ ಬಗ್ಗೆ ನಿರ್ಣಯಿಸುತ್ತಾರೆ. ಯಾವ ಬಗೆಯ ತೆಂಗಿನಕಾಯಿಯನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಅನ್ನೋದನ್ನು ಪಶು ವೈದ್ಯರು ಶಿಫಾರಸು ಮಾಡಬಹುದು. ಹೀಗಾಗಿ ಅಡ್ಡಪರಿಣಾಮಗಳು ಎದುರಾಗದಂತೆ ನಿಮ್ಮ ನಾಯಿಗಳ ಆರೋಗ್ಯದ ದೃಷ್ಟಿಯಿಂದ ನೀವು ಪಶುವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
3. ತೆಂಗಿನಕಾಯಿ ನೀರನ್ನು ಕೊಡಬೇಡಿ
ದೇಹವನ್ನು ಹೈಡ್ರೇಟೆಡ್ ಆಗಿಡಲು ಶ್ವಾನಗಳು ಸಹ ನೀರನ್ನು ಸೇವಿಸುವುದು ಬಹಳ ಮುಖ್ಯ. ಕೆಲವರು ತೆಂಗಿನಕಾಯಿ ನೀರನ್ನು ನಾಯಿಗಳಿಗೆ ಕೊಡುತ್ತಾರೆ. ಆದರೆ, ಇದು ಅವುಗಳಿಗೆ ವಿಷವಾಗಿ ಬದಲಾಗಬಹುದು. ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ, ಇದು ನಾಯಿಗಳಿಗೆ ಹಾನಿಕಾರಕವಾಗಿದೆ. ಇದು ಶ್ವಾನಗಳ ಎಲೆಕ್ಟ್ರೋಲೈಟ್ ಸಮತೋಲನವನ್ನು ಅಡ್ಡಿಪಡಿಸುವುದಲ್ಲದೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಜೀರ್ಣಕ್ರಿಯೆ ಸರಿಯಾಗಿ ಆಗದೆ ತೊಂದರೆಯಾಗಬಹುದು. ಹೀಗಾಗಿ ಅವುಗಳಿಗೆ ಕುಡಿಯಲು ನೀರನ್ನು ಕೊಡಿ. ತೆಂಗಿನಕಾಯಿ ನೀರನ್ನು ಮಾತ್ರ ಎಂದಿಗೂ ಕೊಡದಿರಿ.
4. ಸಂಸ್ಕರಿಸಿದ ತೆಂಗಿನಕಾಯಿಗಿಂತ ತಾಜಾ ತೆಂಗಿನಕಾಯಿಯನ್ನು ಆಯ್ಕೆಮಾಡಿ
ಸಂಸ್ಕರಿಸಿದ ತೆಂಗಿನಕಾಯಿಗಿಂತ ತಾಜಾ ತೆಂಗಿನಕಾಯಿ ಹೆಚ್ಚು ಪೌಷ್ಟಿಕಾಂಶದ ಪ್ರಯೋಜನಗಳನ್ನು ನೀಡುತ್ತದೆ. ಇದು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ದೇಹವನ್ನು ಹೈಡ್ರೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ, ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸಂಸ್ಕರಿಸಿದ ತೆಂಗಿನಕಾಯಿಯನ್ನು ಕೊಡುವುದರಿಂದ ಇದು ಪೌಷ್ಟಿಕಾಂಶದ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ತಾಜಾ ತೆಂಗಿನಕಾಯಿಯನ್ನೇ ಕೊಡುವುದು ಉತ್ತಮ.
5. ನಾಯಿ ತೆಂಗಿನಕಾಯಿ ಚಿಪ್ಪನ್ನು ತಿನ್ನಬಾರದು
ತೆಂಗಿನಕಾಯಿಯಲ್ಲಿರುವ ಕೂದಲುಗಳಂತಿರುವ ಚಿಪ್ಪನ್ನು ತಿನ್ನುವುದರಿಂದ ಶ್ವಾನಗಳಿಗೆ ಅಪಾಯವಿದೆ. ಇದು ಉಸಿರುಗಟ್ಟಿಸುವಂತಾಗಿ ಪ್ರಾಣಹಾನಿ ಸಂಭವಿಸುವ ಅಪಾಯವೂ ಹೆಚ್ಚಿದೆ. ಹಾಗೂ ಇದು ನಾಯಿಗಳಿಗೆ ಆಂತರಿಕ ಗಾಯಗಳನ್ನು ಉಂಟುಮಾಡುತ್ತದೆ. ಒಂದು ವೇಳೆ ಇದನ್ನೇನಾದರೂ ನಿಮ್ಮ ಮುದ್ದಿನ ನಾಯಿ ನುಂಗಿದರೆ, ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ, ತೆಂಗಿನಕಾಯಿ ಚಿಪ್ಪನ್ನು ತಿನ್ನದಂತೆ ಎಚ್ಚರವಹಿಸಿ.
ಒಟ್ಟಾರೆ ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ತೆಂಗಿನಕಾಯಿಯ ರುಚಿಯನ್ನು ನಿಮ್ಮ ಪ್ರೀತಿಯ ಸಾಕುನಾಯಿಗೆ ನೀಡಬಹುದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಅವು ಪಡೆಯಬಹುದು. ನಿಮ್ಮ ನಾಯಿ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುತ್ತದೆಯೇ ಎಂಬುದನ್ನು ಗಮನಿಸಿ. ಶ್ವಾನಗಳ ಆರೋಗ್ಯ ದೃಷ್ಟಿಯಿಂದ ಆಗಾಗ್ಗೆ ಪಶುವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಬರಹ: ಪ್ರಿಯಾಂಕಾ ಗೌಡ