ಮಳೆಗಾಲದಲ್ಲಿ ನಿಮ್ಮ ಮುದ್ದುನಾಯಿಯ ಆರೋಗ್ಯ ಕಾಪಾಡಲು ಹೀಗೆ ಮಾಡಿ: ಈ ಟಿಪ್ಸ್ ಫಾಲೊ ಮಾಡಿದ್ರೆ ಮಳೆ ನಾಯಿಗೆ ಏನೂ ಮಾಡಲ್ಲ
ಮಳೆಗಾಲದಲ್ಲಿ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಹಲವು ಸಮಸ್ಯೆಗಳು ಬಾಧಿಸುತ್ತವೆ. ನಿಮ್ಮ ಮುದ್ದಿನ ನಾಯಿಮರಿಗೂ ಮಾನ್ಸೂನ್ ಶಾಪವಾಗಬಹುದು. ಮಳೆಗಾಲದಲ್ಲಿ ನಾಯಿಗಳನ್ನು ಆರೈಕೆ ಮಾಡಲು ನೀವು ಕೆಲವು ಕ್ರಮಗಳನ್ನು ಅನುಸರಿಸಲೇಬೇಕು. ಈ ಕೆಳಗೆ ಹೇಳಿರುವ ಟಿಪ್ಸ್‌ಗಳ ಮೂಲಕ ಮಳೆಗಾಲದಲ್ಲಿ ನಾಯಿಯ ಆರೈಕೆ ಮಾಡಬಹುದು.
ಮಳೆಗಾಲ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಿರುತ್ತೆ, ಕಾದ ಭೂಮಿಗಿಂತ ತಂಪೆರುವ ಮಳೆ ಹಿತ ಎನ್ನಿಸುತ್ತದೆ. ಆದರೆ ಈ ಸಮಯದಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅಲರ್ಜಿ, ಸೋಂಕು, ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಬಾಧಿಸುತ್ತವೆ. ಈ ತೊಂದರೆಗಳು ಕೇವಲ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಕಾಡುತ್ತದೆ.
ಹೆಚ್ಚಿದ ಆರ್ದ್ರತೆ ಹಾಗೂ ತೇವಾಂಶವು ನಾಯಿಗಳ ಚರ್ಮದ ಮೇಲೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಸಲು ಪ್ರೋತ್ಸಾಹ ನೀಡುತ್ತವೆ. ಹೆಚ್ಚುವರಿಯಾಗಿ, ನಿಶ್ಚಲವಾದ ನೀರು ಮತ್ತು ಒದ್ದೆಯಾದ ಪರಿಸರಗಳು ಉಣ್ಣಿ ಮತ್ತು ಚಿಗಟಗಳಂತಹ ಪರಾವಲಂಬಿಗಳಿಗೆ ಕಾರಣವಾಗಬಹುದು, ಇವು ಸಾಕುಪ್ರಾಣಿಗಳಿಗೆ ತೊಂದರೆ ಉಂಟು ಮಾಡಬಹುದು ಎಂದು ಪಶುವೈದ್ಯರು ಹೇಳುತ್ತಾರೆ.
ಮಳೆಗಾಲದಲ್ಲಿ ನಾಯಿಮರಿಗಳಿಗೆ ಎದುರಾಗುವ ಸಾಮಾನ್ಯ ಸಮಸ್ಯೆಗಳು
* ಚರ್ಮದ ಅಲರ್ಜಿ ಹಾಗೂ ಸೋಂಕು
* ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು
* ನೀರಿನಿಂದ ಹರಡುವ ಕಾಯಿಲೆಗಳು
* ಕೀಲು ನೋವು ಹಾಗೂ ಅರ್ಥರೈಟಿಸ್
ಮಳೆಗಾಲದಲ್ಲಿ ನಾಯಿಮರಿಗಳ ಆರೈಕೆಗೆ ಪಾಲಿಸಬೇಕಾದ ಕ್ರಮಗಳು
ಸಮತೋಲಿತ ಆಹಾರ: ಮಳೆಗಾಲದಲ್ಲಿ ಮನುಷ್ಯರಿಗೆ ಮಾತ್ರವಲ್ಲ ನಾಯಿಗಳಿಗೂ ಸಮತೋಲಿತ ಆಹಾರ ನೀಡುವುದು ಬಹಳ ಮುಖ್ಯವಾಗುತ್ತದೆ. ವಿಟಿಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಇರುವ ನಾಯಿಗಳ ಆಹಾರವನ್ನು ನೀಡಬೇಕು. ನಾಯಿಗಳಿಗೆ ನೀಡುವ ಆಹಾರವು ಪ್ರತಿರಕ್ಷಣಾ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವಂತಿರಬೇಕು. ಕರುಳಿನ ಆರೋಗ್ಯ ಸುಧಾರಣೆಗೆ ಪ್ರೊಬಯೋಟಿಕ್ ಸಮೃದ್ಧ ಆಹಾರಗಳನ್ನು ನೀಡಬೇಕು.
ಹೈಡೇಟ್ ಆಗಿರುವುದು: ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಿತ ಇತರ ಕಾಯಿಲೆಗಳಿಂದ ರಕ್ಷಿಸಲು ಸಾಕುಪ್ರಾಣಿಗಳಿಗೆ ಶುದ್ಧ ಕುಡಿಯುವ ನೀರು ನೀಡುವುದು ಮುಖ್ಯವಾಗುತ್ತದೆ. ಮಾಲಿನ್ಯವನ್ನು ತಪ್ಪಿಸಲು ನೀರಿಗೆ ಮುಚ್ಚಿಡಿ. ದಿನಕ್ಕೆ ಎರಡು ಬಾರಿ ತಟ್ಟೆಯಲ್ಲಿರುವ ನೀರು ಬದಲಿಸಿ.
ನೈಸರ್ಗಿಕ ಪರಿಹಾರಗಳನ್ನು ಪಾಲಿಸಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಲು ನಿಮ್ಮ ನಾಯಿಯ ಆಹಾರದಲ್ಲಿ ಅರಿಶಿನದಂತಹ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ. ಸಾಕುಪ್ರಾಣಿಗಳಿಗೆ ಉತ್ತಮ ಎನ್ನಿಸುವ ನೈಸರ್ಗಿಕ ಪದಾರ್ಥಗಳು ಯಾವುದು ಎಂದು ಪಶುವೈದ್ಯರ ಬಳಿ ಮಾತನಾಡಿ.
ಪಶುವೈದ್ಯರನ್ನು ಭೇಟಿ ಮಾಡಿ: ಸಾಕುಪ್ರಾಣಿಗಳು ಆರೋಗ್ಯದ ಬಗ್ಗೆ ನಮ್ಮಿಂದ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ, ಅದಕ್ಕಾಗಿ ನೀವು ಆಗಾಗ ಪಶುವೈದ್ಯರ ಬಳಿ ನಾಯಿಯನ್ನು ತೋರಿಸುವುದು ಮುಖ್ಯವಾಗುತ್ತದೆ.
ಹೊರಗಡೆ ಆಹಾರ ಕೊಡದಿರಿ: ಮನುಷ್ಯರಂತೆ ಪ್ರಾಣಿಗಳಿಗೂ ಆರೋಗ್ಯ ಸಮಸ್ಯೆಗಳು ಕಾಡುವ ಕಾರಣ ಹೊರಗಡೆ ಆಹಾರವನ್ನು ಕೊಡದೇ ಇರುವುದು ಉತ್ತಮ. ಮನೆಯಲ್ಲೇ ಮಾಡಿದ ಬಿಸಿ ಬಿಸಿ ಆಹಾರಗಳನ್ನು ನೀಡಿ. ಹೊರಗಿನ ಆಹಾರವು ಕಲುಷಿತವಾಗಬಹುದು ಮತ್ತು ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಒಳಗೆ ಇರಿಸಿ: ಮನೆಯ ಹೊರಗಡೆ ಸಾಕುಪ್ರಾಣಿಗಳನ್ನು ಇರಿಸುವುದರಿಂದ ಹಿಮದ ವಾತಾವರಣಕ್ಕೆ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಮನೆಯ ಒಳಗಡೆ ಅಥವಾ ಕೋಣೆಯಂತಹ ವಾತಾವರಣದಲ್ಲಿ ನಾಯಿಮರಿಗಳನ್ನು ಕಟ್ಟಿಹಾಕಿ.
ಮಳೆಗಾಲದಲ್ಲಿ ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನಾಯಿಮರಿಗಳನ್ನು ಕಾಳಜಿ ಮಾಡಬಹುದು. ಇದರಿಂದ ಅವುಗಳಿಗೆ ಆರೋಗ್ಯ ಸಮಸ್ಯೆ ಬಾರದಂತೆ ನೋಡಿಕೊಳ್ಳಬಹುದು.