logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಗಾತಿಗೆ ಸಂಬಂಧಿಸಿದ ಈ 5 ವಿಷಯ ಸೋಷಿಯಲ್ ಮೀಡಿಯಾದವರೆಗೂ ತರಬೇಡಿ; ಮಧುರ ಬಾಂಧವ್ಯ ಜೋಪಾನವಾಗಿಡಿ

ಸಂಗಾತಿಗೆ ಸಂಬಂಧಿಸಿದ ಈ 5 ವಿಷಯ ಸೋಷಿಯಲ್ ಮೀಡಿಯಾದವರೆಗೂ ತರಬೇಡಿ; ಮಧುರ ಬಾಂಧವ್ಯ ಜೋಪಾನವಾಗಿಡಿ

Jayaraj HT Kannada

Oct 10, 2024 04:05 PM IST

google News

ಸಂಗಾತಿಗೆ ಸಂಬಂಧಿಸಿದ ಈ 5 ವಿಷಯ ಸೋಷಿಯಲ್ ಮೀಡಿಯಾದವರೆಗೂ ತರಬೇಡಿ

    • ದಾಂಪತ್ಯ ಜೀವನ ಗಟ್ಟಿಯಾಗಿರಲು ತುಂಬಾ ಜಾಗರೂಕರಾಗಿರಬೇಕು. ಸಾಮಾಜಿಕ ಮಾಧ್ಯಮದಲ್ಲಿ ವಿವಾಹಿತ ಜೀವನ ಅಥವಾ ಪ್ರೇಮ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಸೋಷಿಯಲ್‌ ಮೀಡಿಯಾ ಹಂಚಿಕೊಳ್ಳುವಾಗ ಎಚ್ಚರ ಮುಖ್ಯ. ಮಧುರ ಸಂಬಂಧಕ್ಕೆ ಹಾನಿಯಾಗುವಂಥಾ ಅಂಶಗಳನ್ನು ಎಲ್ಲೂ ಶೇರ್‌ ಮಾಡದಿರಿ.
ಸಂಗಾತಿಗೆ ಸಂಬಂಧಿಸಿದ ಈ 5 ವಿಷಯ ಸೋಷಿಯಲ್ ಮೀಡಿಯಾದವರೆಗೂ ತರಬೇಡಿ
ಸಂಗಾತಿಗೆ ಸಂಬಂಧಿಸಿದ ಈ 5 ವಿಷಯ ಸೋಷಿಯಲ್ ಮೀಡಿಯಾದವರೆಗೂ ತರಬೇಡಿ

ಆಧುನಿಕ ಯುಗದಲ್ಲಿ ಜನರು ಸ್ಕ್ರೀನಿಂಗ್‌ಗೆ ಸಮಯ ಕೊಡುವಷ್ಟು ಮನುಷ್ಯರೊಂದಿಗೆ ಬೆರೆಯಲು ಕೊಡುತ್ತಿಲ್ಲ. ಮೊಬೈಲ್‌ ಫೋನ್‌, ಸಾಮಾಜಿಕ ಮಾಧ್ಯಮಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಹಲವರಿಗೆ ಕಷ್ಟವಾಗಬಹುದು. ನಿತ್ಯ ಬದುಕಿನಲ್ಲಿ ಏನೇ ಬೆಳವಣಿಗೆ ನಡೆದರೂ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬೇಕು ಎಂಬುದು ಕೆಲವೊಬ್ಬರ ತುಡಿತ. ಸ್ಟೇಟಸ್‌ ಅಥವಾ ಸ್ಟೋರಿ ಹಾಕದೆ ಬೆಳಗ್ಗೆ ಏಳಲು ಸಾಧ್ಯ ಇಲ್ಲ, ರಾತ್ರಿ ನಿದ್ದೆ ಬರಲ್ಲ. ಸಣ್ಣ ವಿಷಯಗಳಿಂದ ಹಿಡಿದು ಕೆಲವೊಂದು ದೊಡ್ಡ ಬೆಳವಣಿಗೆಗಳಿಗೂ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸುವವರಿದ್ದಾರೆ. ಸ್ನೇಹಿತರು ಅಥವಾ ಮನೆಯವರಿಗಿಂತ ಜಾಸ್ತಿ ಸೋಷಿಯಲ್‌ ಮೀಡಿಯಾವೇ ದೊಡ್ಡದು ಎಂಬು ಭಾವ ಹಲವರದ್ದು.

ಜೀವನದ ಪ್ರತಿಯೊಂದು ಪ್ರಮುಖ ಘಟನೆಗಳು ಹಾಗೂ ಕೆಲವೊಂದು ಅನಗತ್ಯ ವಿಷಯವನ್ನು ಸ್ವಲ್ಪವೂ ಯೋಚಿಸದೆ ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಜನರಿದ್ದಾರೆ. ಇಂಥಾ ವಿಚಾರದಲ್ಲಿ ವಿವಾಹಿತರು ತುಂಬಾ ಜೋಪಾನವಾಗಿರಬೇಕು. ಪತಿ ಪತ್ನಿಯರ ನಡುವೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೆ, ಮುಂದೆ ನಿಮ್ಮ ಸಂಬಂಧಕ್ಕೆ ಧಕ್ಕೆ ತರಬಹುದು. ಹೀಗಾಗಿ ಆರೋಗ್ಯಕರ ಮತ್ತು ನೂರ್ಕಾಲ ಸದೃಢ ಸಂಬಂಧವನ್ನು ಕಾಪಾಡಿಕೊಳ್ಳಲು, ನೀವು ತುಂಬಾ ಜಾಗರೂಕರಾಗಿರಬೇಕು.

ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಿವಾಹಿತ ಅಥವಾ ಪ್ರೇಮ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುವಾಗ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಫೋಟೋ ಹಂಚಿಕೊಳ್ಳುವಾಗ ಎಚ್ಚರ

ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡುವ ಮೂಲಕ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ನಿಮ್ಮ ಸಂಗಾತಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವಾಗ, ಮೊದಲು ನೀವು ಆ ಬಗ್ಗೆ ನಿಮ್ಮ ಸಂಗಾತಿಗೆ ಹೇಳಬೇಕು. ಸಂಗಾತಿಯ ಒಪ್ಪಿಗೆ ಪಡೆದ ನಂತರವೇ, ನಿಮ್ಮ ಫೋಟೋ ಅಥವಾ ಯಾವುದೇ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರೊಂದಿಗೆ ಹಂಚಿಕೊಳ್ಳಿ.

ಸ್ಕ್ರೀನ್‌ ಶಾಟ್‌ ಹಂಚಿಕೊಳ್ಳುವಾಗ ಎಚ್ಚರ

ಸಂಬಂಧದಲ್ಲಿರುವ ಅನೇಕರು ತಮ್ಮ ವೈಯಕ್ತಿಕ ಚಾಟ್‌ನ ಸ್ಕ್ರೀನ್‌ಶಾಟ್‌ ಅಥವಾ ಫೋಟೋಗಳನ್ನು ತಮ್ಮ ಸ್ನೇಹಿತರಿಗೆ ಕಳುಹಿಸುತ್ತಾರೆ. ಸಂಗಾತಿಯ ಅನುಮತಿ ಇದ್ದರೆ ಇದು ತೊಂದರೆಯಾಗುದಿಲ್ಲ. ಆದರೆ ಅವರಿಗೆ ತಿಳಿಯದಂತೆ ಖಾಸಗಿ ಚಾಟ್‌ಗಳನ್ನು ಬಹಿರಂಗ ಮಾಡುವುದು ನಿಮಗೆ ಸಮಸ್ಯೆಯಾಗಬಹುದು. ಏಕೆಂದರೆ ಸೋಷಿಯಲ್‌ ಮೀಡಿಯಾ ಎಷ್ಟು ವೇಗವಾಗಿದೆ ಎಂಬುದು ನಿಮಗೆ ಅರಿವಿದೆ. ಕ್ಷಣಮಾತ್ರದಲ್ಲಿ ಅದು ಬೇರೆಯವರ ಫೋನ್‌ ಸೇರಬಹುದು. ಅದು ದುರ್ಬಳಕೆಯೂ ಆಗಬಹುದು.

ಎಲ್ಲಾ ಭಾವನೆಯನ್ನು ಹಂಚಿಕೊಳ್ಳಬೇಡಿ

ಕೆಲವೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ತುಂಬಾ ರೋಮ್ಯಾಂಟಿಕ್ ಆಗಿ ತೋರಬಹುದು. ಆದರೆ, ಇದು ನಿಮ್ಮ ಸಂಗಾತಿಗೂ ಇಷ್ಟವಾಗಬೇಕು. ಕೆಲವೊಮ್ಮೆ ನಿಮ್ಮ ಪ್ರತಿಯೊಂದು ಭಾವನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವುದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಸಂಗಾತಿಗೆ ಇಷ್ಟವಾಗದಿದ್ದರೆ ಅವರು ಅಸಮಾಧಾನ ವ್ಯಕ್ತಪಡಿಸಬಹುದು. ಅದಕ್ಕೆ ಅವಕಾಶ ಕೊಡದಿರಿ. ನಿಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ಬೆಳವಣಿಗೆಯನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಿ.

ಬ್ರೇಕಪ್‌ ಬಗ್ಗೆ ಹೇಳುವಾಗ ಯೋಚಿಸಿ

ಒಂದು ವೇಳೆ ನಿಮ್ಮ ಸಂಬಂಧದಲ್ಲಿ ಬ್ರೇಕಪ್ ಆದರೆ, ಭಾವುಕರಾಗಿ ಆ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಹೋಗಬೇಡಿ. ಇದನ್ನು ನಿಮ್ಮ ಆತ್ಮೀಯರೊಂದಿಗೆ ಮಾತ್ರವೇ ವೈಯಕ್ತಿಕವಾಗಿ ಹೇಳಿಕೊಳ್ಳಿ. ಸಾಮಾಜಿಕವಾಗಿ ಹೇಳಿದರೆ, ಜನರ ಪ್ರತಿಕ್ರಿಯೆ ಬೇರೆ ರೀತಿಯಲ್ಲಿ ಬರಬಹುದು.

ಲೈವ್‌ ಲೊಕೇಶನ್

ನೀವು ರಿಲೇಶನ್‌ಶಿಪ್‌ನಲ್ಲಿರುವಾಗ ಸೋಷಿಯಲ್‌ ಮೀಡಿಯಾದಲ್ಲಿ ನಿಮ್ಮ ಲೈವ್ ಲೊಕೇಶನ್ ಆನ್ ಮಾಡುವ ತಪ್ಪನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ನೀವು ಅಥವಾ ನಿಮ್ಮ ಸಂಗಾತಿ ತೊಂದರೆಗೆ ಸಿಲುಕಬಹುದು. ನಿಮ್ಮ ಲೊಕೇಶನ್‌ ಬೇರೆ ವ್ಯಕ್ತಿಗಳು ಟ್ರ್ಯಾಕ್‌ ಮಾಡಬಹುದು. ಇದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಅಗತ್ಯ ಇರುವವರಿಗೆ ಮಾತ್ರವೇ ಲೊಕೇಶನ್‌ ವೈಯಕ್ತಿಕವಾಗಿ ಶೇರ್‌ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ