ಮಗುವಿಗೆ 5 ವರ್ಷ ತುಂಬುವ ಮೊದಲೇ ತಂದೆ–ತಾಯಿಗಳು ತಪ್ಪದೇ ಕಲಿಸಬೇಕಾದ 8 ಪಾಠಗಳಿವು, ಇದು ಭವಿಷ್ಯಕ್ಕೆ ಮುನ್ನುಡಿ
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಮಾತಿದೆ. ಇದು ಮಕ್ಕಳಿಗೆ ಹೆಚ್ಚು ಅನ್ವಯವಾಗುತ್ತದೆ. ಮಕ್ಕಳು ಬಾಲ್ಯದಲ್ಲಿರುವಾಗಲೇ ಉತ್ತಮ ಗುಣಗಳನ್ನು ಬೆಳೆಸಬೇಕು. ಇಲ್ಲದಿದ್ದರೆ ದೊಡ್ಡವರಾದ ಅವರನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ. ಮಗುವಿಗೆ 5 ವರ್ಷ ತುಂಬುವ ಮೊದಲೇ ಪೋಷಕರು ಕಲಿಸಬೇಕಾದ ಪಾಠಗಳಿವು.
ಮಕ್ಕಳನ್ನು ಬೆಳೆಸುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಬಾಲ್ಯದಿಂದಲೇ ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸಿಲ್ಲ ಎಂದರೆ ಪೋಷಕರಿಗೆ ಮುಂದೆ ತೊಂದರೆ ಖಚಿತ. ಮಾತ್ರವಲ್ಲ ಮಕ್ಕಳ ಭವಿಷ್ಯಕ್ಕೂ ಇದು ಮಾರಕ. ಇತ್ತೀಚಿನ ದಿನಗಳಲ್ಲಂತೂ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರು ಸೋಲುತ್ತಿದ್ದಾರೆ ಎಂಬ ಮಾತುಗಳೇ ಹೆಚ್ಚಿಗೆ ಕೇಳಿ ಬರುತ್ತಿದೆ. ಆ ಕಾರಣಕ್ಕೆ ಬಾಲ್ಯದಿಂದಲೇ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು, ಅವರು ಬೆಳೆದು ದೊಡ್ಡವರಾದ ಮೇಲೆ ಅವರನ್ನು ಬಗ್ಗಿಸಲೂ ಸಾಧ್ಯವಿಲ್ಲ.
ಮಗುವಿನ ಜೀವನದ ಆರಂಭಿಕ ವರ್ಷಗಳು ಬೆಳವಣಿಗೆಗೆ ನಿರ್ಣಾಯಕವಾಗಿವೆ. ಏಕೆಂದರೆ ಅವು ಭವಿಷ್ಯದ ಕಲಿಕೆ, ನಡವಳಿಕೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಅಡಿಪಾಯ ಹಾಕುತ್ತವೆ. ಮಕ್ಕಳು 5ನೇ ವಯಸ್ಸು ದಾಟುತ್ತಿದ್ದಂತೆ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ವೇಗವಾಗಿ ಬೆಳೆಯುತ್ತಾರೆ. ಆ ಕಾರಣಕ್ಕೆ ಮಕ್ಕಳ ಬದುಕಿಗೆ ಅಮೂಲ್ಯ ಎನ್ನಿಸುವ ಪಾಠವನ್ನು 5 ವರ್ಷಗಳು ತುಂಬುವ ಮೊದಲೇ ಮಾಡಬೇಕು. ಇದರಿಂದ ಅವರ ಭವಿಷ್ಯ ಚೆನ್ನಾಗಿರುತ್ತದೆ. ಹಾಗಾದರೆ 5 ವರ್ಷ ತುಂಬವ ಮೊದಲೇ ಪೋಷಕರು ಮಕ್ಕಳಿಗೆ ಕಲಿಸಬೇಕಾದ 8 ಅಗತ್ಯ ವಿಚಾರಗಳು ಯಾವುವು ನೋಡಿ.
ಸಭ್ಯತೆ ಮತ್ತು ಗೌರವ ನೀಡುವುದು
ಸಭ್ಯವಾಗಿರುವುದು ಹಾಗೂ ಬೇರೆಯವರಿಗೆ ಗೌರವ ನೀಡುವುದು ಹೇಗೆ ಎಂಬುದನ್ನು ಮಕ್ಕಳಿಗೆ 5 ವರ್ಷ ತುಂಬುವ ಮೊದಲೇ ಪೋಷಕರು ಕಲಿಸಬೇಕು. ಇದು ಆರಂಭಿಕ ಹಂತದಲ್ಲಿ ಕಲಿಸುವ ಮೊದಲ ಪಾಠವಾಗಿದೆ. ದಯವಿಟ್ಟು, ಧನ್ಯವಾದ ಹಾಗೂ ಕ್ಷಮಿಸಿ ಇಂತಹ ಪದಗಳು ಮಕ್ಕಳ ಬಾಯಲ್ಲಿ ಬರುವಂತೆ ಮಾಡಬೇಕು. ತಾನು ಮಾಡಿದ್ದೇ ಸರಿ ಎನ್ನುವ ಮನೋಭಾವ ಹೊಂದಿದ್ದರೆ ಅದನ್ನು ಅಳಿಸಬೇಕು. ಹಿರಿಯರು ಹಾಗೂ ಗೆಳೆಯರನ್ನು ಹಾಗೂ ಇತರರನ್ನು ಗೌರವಿಸುವುದನ್ನು ಹೇಳಿಕೊಡಬೇಕು. ಇದರಿಂದ ದಯೆ, ಸಹಾನುಭೂತಿಯ ಮೌಲ್ಯ ಕಲಿಯಲು ಸಾಧ್ಯವಾಗುತ್ತದೆ.
ಹಂಚಿಕೊಳ್ಳುವುದರ ಪ್ರಾಮುಖ್ಯ
ಹಂಚಿಕೆ ಅಥವಾ ಶೇರಿಂಗ್ ಎನ್ನುವುದು ಮೂಲಭೂತ ಸಾಮಾಜಿಕ ಕೌಶಲವಾಗಿದ್ದು, ಇದು ಮಕ್ಕಳಲ್ಲಿ ಸ್ನೇಹ ಬಂಧವನ್ನು ಗಟ್ಟಿಗೊಳಿಸಲು ಕಾರಣವಾಗುತ್ತದೆ ಮತ್ತು ಸಾಮಾಜಿಕ ಸನ್ನಿವೇಶವನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಆಟಿಕೆಗಳು, ತಿಂಡಿಗಳು ಹಾಗೂ ಪೆನ್ನು–ಪುಸ್ತಕ ಇಂತಹ ವಸ್ತುಗಳನ್ನು ಹಂಚಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು. ಈ ರೀತಿ ಮನೋಭಾವವನ್ನು ಪೋಷಕರು ಪ್ರೋತ್ಸಾಹಿಸಬೇಕು. ಶೇರಿಂಗ್ ಮಾಡಿಕೊಳ್ಳುವುದರಿಂದ ಸಿಗುವ ಖುಷಿ ಏನು ಎಂಬುದು ಮಕ್ಕಳಿಗೆ 5 ವರ್ಷದೊಳಗೆ ಅರ್ಥ ಮಾಡಿಸಬೇಕು.
ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ
ಮಕ್ಕಳು ತಮ್ಮ ಭಾವನೆಗಳನ್ನು ಗುರುತಿಸಲು ಮತ್ತು ವ್ಯಕ್ತಪಡಿಸಲು ಸಹಾಯ ಮಾಡುವುದು ಭಾವನಾತ್ಮಕ ಬುದ್ಧಿವಂತಿಕೆಗೆ ನಿರ್ಣಾಯಕವಾಗಿದೆ. ಸಂತೋಷ, ದುಃಖ ಮತ್ತು ಹತಾಶೆಯಂತಹ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳನ್ನು ಬಳಸಲು ನಿಮ್ಮ ಮಗುವಿಗೆ ಕಲಿಸಿ. ಭಾವನೆಗಳಿಗೆ ತಕ್ಕಂತೆ ಥಟ್ಟಂತೆ ವರ್ತನೆ ತೋರುವ ಬದಲು ಮಾತನಾಡಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಎಲ್ಲಾ ರೀತಿಯ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ಅವರಿಗೆ ಅರಿವಾಗುತ್ತದೆ.
ಉತ್ತಮ ನೈರ್ಮಲ್ಯ ಅಭ್ಯಾಸಗಳು
ಮಕ್ಕಳಿಗೆ 5 ವರ್ಷ ತುಂಬುವ ಮೊದಲೇ ಸ್ವಚ್ಛತೆಯ ಬಗ್ಗೆ ಪಾಠ ಮಾಡಬೇಕು. ಮನೆಯಲ್ಲಿ, ಶಾಲೆಯಲ್ಲಿ, ಹೊರಗೆ ಇದ್ದಾಗ ಯಾವ ರೀತಿ ಸ್ವಚ್ಛತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಊಟಕ್ಕೂ ಮೊದಲು, ಬಾತ್‌ರೂಮ್ ಬಳಕೆಯ ನಂತರ, ಹೊರಗೆ ಆಟವಾಡಿ ಬಂದ ನಂತರ ಕೈ ತೊಳೆಯುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ಅರ್ಥ ಮಾಡಿಸಬೇಕು. ಪ್ರತಿ ಹಲ್ಲುಜ್ಜುವುದು, ಹೊರಗಡೆಯಿಂದ ಬಂದಾಗ ಕೈ–ಕಾಲು ತೊಳೆಯುವುದು, ಪ್ರತಿದಿನ ಸ್ನಾನ ಮಾಡುವುದು ಈ ರೀತಿಯ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಗುವಿನಲ್ಲಿ ಅರಿವು ಮೂಡಿಸಬೇಕು. ಈ ಮೂಲಭೂತ ಅಭ್ಯಾಸಗಳು ಮಕ್ಕಳಲ್ಲಿ ಜೀವನಪರ್ಯಂತ ಉತ್ತಮ ಆರೋಗ್ಯವನ್ನು ಉತ್ತೇಜಿಸುವ ಅಭ್ಯಾಸಗಳಾಗಿವೆ.
ಸೂಚನೆಗಳನ್ನು ಅನುಸರಿಸುವುದು ಹೇಗೆ
ಸೂಚನೆಗಳನ್ನು ಕೇಳಲು ಹಾಗೂ ಅನುಸರಿಸಲು ನಿಮ್ಮ ಮಗುವಿಗೆ ಕಲಿಸುವುದು ಶಾಲೆ ಹಾಗೂ ಸಾಮಾಜಿಕ ವ್ಯವಸ್ಥೆಗೆ ಮಗುವನ್ನು ಸಿದ್ಧಪಡಿಸುತ್ತದೆ. ಆಟಿಕೆಗಳನ್ನು ಎತ್ತಿಕೊಳ್ಳುವುದು ಅಥವಾ ಟೇಬಲ್ ಸೆಟ್ಟಿಂಗ್‌ಗೆ ಸಹಾಯ ಮಾಡುವುದು ಇಂತಹ ಸರಳ ಕಾರ್ಯಗಳನ್ನು ಮಕ್ಕಳಿಗೆ ಕಲಿಸಿ, ಅದರಂತೆ ಮಾಡಲು ಸೂಚಿಸಿ. ಈ ಕೆಲಸ ಮಾಡಿದಾಗ ಅವರನ್ನು ಹೊಗಳಿ. ಇದರಿಂದ ಮಗುವಿನಲ್ಲಿ ಜವಾಬ್ದಾರಿಯ ಪ್ರಜ್ಞೆ ಬೆಳೆಯುತ್ತದೆ. ನಿಯಮಗಳು ಹಾಗೂ ದಿನಚರಿಯನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಕಲಿಯಲು ಇದು ಸಹಾಯ ಮಾಡುತ್ತದೆ.
ಸಮಸ್ಯೆ ಪರಿಹರಿಸುವ ಕೌಶಲ
ಚಿಕ್ಕ ವಯಸ್ಸಿನಿಂದಲೇ ಸಮಸ್ಯೆ ಪರಿಹರಿಸುವ ಕೌಶಲವನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆಯ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು ಮುಖ್ಯವಾಗುತ್ತದೆ. ಸಣ್ಣಪುಟ್ಟ ಸಮಸ್ಯೆ ಇದ್ದಾಗ ಅದರಿಂದ ಹೊರ ಬರುವ ದಾರಿಯನ್ನು ಅವರೇ ಕಂಡುಕೊಳ್ಳುವಂತೆ ಮಾಡಿ, ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ತಾಳ್ಮೆ ಮತ್ತು ಪ್ರಯತ್ನದಿಂದ ಗೆಲುವು ಸಾಧ್ಯ ಎಂಬುದು ಅವರಿಗೆ ಅರ್ಥವಾಗುತ್ತದೆ.
ಸಮಯದ ಮೌಲ್ಯ
ಐದು ವರ್ಷದ ಒಳಗಿನ ಮಕ್ಕಳಿಗೆ ಸಮಯದ ಪರಿಕಲ್ಪನೆ ತಿಳಿದಿರಬೇಕು. ಗಂಟೆಗಳು ಹಾಗೂ ನಿಮಿಷಗಳ ಪರಿಕಲ್ಪನೆ ಗ್ರಹಿಸಲು ಸಾಧ್ಯವಾಗಿಲ್ಲ ಎಂದರೂ ದಿನಚರಿ, ದಿನದ ಆಗುಹೋಗುಗಳ ಬಗ್ಗೆ ಅವರಿಗೆ ತಿಳುವಳಿಕೆ ಇರಬೇಕು. ಊಟ ನಂತರ, ಮಲಗುವ ಮೊದಲು, ಐದು ನಿಮಿಷ ನಂತರ ಸಮಯ ಪರಿಕಲ್ಪನೆಯನ್ನು ಅರ್ಥ ಮಾಡಿಸಬೇಕು.
ಕುತೂಹಲ ಮತ್ತು ಕಲಿಕೆಯ ಮೌಲ್ಯ
ನಿಮ್ಮ ಮಗುವಿನಲ್ಲಿ ಕುತೂಹಲದ ಭಾವನೆಗಳನ್ನು ಬೆಳೆಸುವುದು ಅವರ ಬೌದ್ಧಿಕ ಬೆಳವಣಿಗೆಗೆ ಅತ್ಯಗತ್ಯ. ಪ್ರಶ್ನೆ ಕೇಳಲು ಅನ್ವೇಷಿಸುವುದು, ಹೊಸ ಚಟುವಟಿಕೆಗಳೊಂದಿಗೆ ಪ್ರಯೋಗ ಮಾಡಲು ಅವರನ್ನು ಪ್ರೋತ್ಸಾಹಿಸಿ. ಪುಸ್ತಕಗಳನ್ನು ಓದುವುದು, ಪ್ರಶ್ನೆಗಳನ್ನು ಕೇಳುವುದು, ಹೊಸ ಚಟುವಟಿಕೆಗಳೊಂದಿಗೆ ತೊಡಗುವುದಕ್ಕೆ ಪ್ರೋತ್ಸಾಹಿಸಿ. ಇದು ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಈ ಎಲ್ಲಾ ಕೌಶಲಗಳನ್ನು ಬಾಲ್ಯದಲ್ಲೇ ಮಕ್ಕಳಿಗೆ ಕಲಿಸುವ ಮೂಲಕ ಅವರ ಭವಿಷ್ಯ ಉಜ್ವಲವಾಗಿರುವಂತೆ ಮಾಡಬಹುದು. ಒಂದೇ ಮಗು ಎಂಬ ಕಾರಣಕ್ಕೆ ಬಾಲ್ಯದಲ್ಲಿ ಮಗುವಿಗೆ ಈ ಗುಣಗಳನ್ನು ಕಲಿಸಿಲ್ಲ ಎಂದರೆ ಭವಿಷ್ಯದಲ್ಲಿ ತೊಂದರೆ ಎದುರಾಗುವುದು ಖಚಿತ.
ವಿಭಾಗ