ಚಿವುಟದಿರಿ ಚಿಗುರುಗಳ: ಹದಿಹರೆಯದ ಮಕ್ಕಳಿಗೆ ರೇಗುವುದೇ ಪರಿಹಾರವಲ್ಲ; ಪೋಷಕರೇ, ಮಕ್ಕಳ ಭಾವನೆಗಳನ್ನೂ ಗೌರವಿಸಿ
Sep 25, 2024 06:45 PM IST
ಹದಿಹರೆಯದ ಮಕ್ಕಳಿಗೆ ರೇಗುವುದೇ ಪರಿಹಾರವಲ್ಲ; ಪೋಷಕರೇ, ಮಕ್ಕಳ ಭಾವನೆಗಳನ್ನೂ ಗೌರವಿಸಿ
- ಹದಿಹರೆಯದ ಮಕ್ಕಳನ್ನು ಸಂಭಾಳಿಸುವುದು ಪೋಷಕರಿಗೆ ತುಸು ಕಠಿಣವಾಗಬಹುದು. ನಿಮ್ಮ ಮಕ್ಕಳು ಕೂಡಾ ಮಾತು ಕೇಳುತ್ತಿಲ್ಲ ಎಂದು ನಿಮಗೆ ಅನಿಸಿದರೆ, ಅವರೊಂದಿಗೆ ನಿಮ್ಮ ಬಂಧವನ್ನು ಬಲಪಡಿಸಲು ಸಲಹೆಗಳು ಇಲ್ಲಿವೆ.
ಹದಿಹರೆಯದ ಮಕ್ಕಳನ್ನು ನಾಜೂಕಾಗಿ ನಿಭಾಯಿಸಬೇಕು. ಹೆತ್ತವರು ಹಾಗೂ ಮಕ್ಕಳ ನಡುವೆ ಭಾವನಾತ್ಮಕ ಸಂಬಂಧ ಬೆಳೆಯಬೇಕು. ಎರಡೂ ಕಡೆಯಿಂದ ಗೌರವಯುತ ಸಂಪರ್ಕ ಬೆಳೆಸಲು ಸ್ಪಷ್ಟ ಸಂವಹನ, ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯಲ್ಲಿ ಸಮತೋಲನ ಕಾಪಾಡಬೇಕಾಗುತ್ತದೆ. ಹದಿಹರೆಯ ಎಂಬುದು ವ್ಯಕ್ತಿ ಜೀವನದ ಪ್ರಮುಖ ಪರಿವರ್ತನೆಯ ಹಂತ. ಮಕ್ಕಳೂ ಅಲ್ಲದ, ವಯಸ್ಕರೂ ಅಲ್ಲದ ಹಂತವಿದು. ದೈಹಿಕ ಹಾಗೂ ಮಾನಸಿಕವಾಗಿ ಮನಸ್ಸು ಜಾಗೃತವಾಗುವ ಹಂತದಲ್ಲಿ ಮಕ್ಕಳು ಸ್ವಾತಂತ್ರ್ಯವನ್ನು ಅನ್ವೇಷಿಸುತ್ತಾರೆ. ಆಗ ಪೋಷಕರು ಹಾಗೂ ಮಕ್ಕಳ ನಡುವೆ ತಪ್ಪಾದ ಸಂವಹನ ನಡೆದು ಕೆಲವೊಮ್ಮೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಂಥಾ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕಾದವರು ಪೋಷಕರು. ಹದಿಹರೆಯದವರ ಮುಂದೆ ದಿಢೀರ್ ತೀರ್ಪು ನೀಡದೆ ಮುಕ್ತ ಸಂವಹನವನ್ನು ನಡೆಸುವುದು ಮುಖ್ಯ.
ಪೋಷಕರು ಮತ್ತು ಹದಿಹರೆಯದ ಮಕ್ಕಳ ನಡುವೆ ಮುಖ್ಯವಾಗಿ ಪರಸ್ಪರ ಗೌರವ ಬೆಳೆಸಿಕೊಳ್ಳಬೇಕು. ಈ ಕುರಿತು ಟಿಕಿಟೊರೊ ಸಂಸ್ಥಾಪಕ ಹಾಗೂ ಪೇರೆಂಟ್ ಎಜುಕೇಟರ್ ಪ್ರಸನ್ನ ವಾಸನಾಡು ಅವರು ಎಚ್‌ಟಿ ಲೈಫ್‌ಸ್ಟೈಲ್‌ನೊಂದಿಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಮಕ್ಕಳನ್ನು ಟೀಕಿಸಬೇಡಿ, ನಾಜೂಕಾಗಿ ತಿದ್ದಿರಿ
ಹದಿಹರೆಯದ ಮಕ್ಕಳು ತಮ್ಮ ಬಗ್ಗೆ ಇತರ ಜನರ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಬೇಗನೆ ಗ್ರಹಿಸುತ್ತಾರೆ. ಅದನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ. ಪ್ರೌಢಾವಸ್ಥೆಯಲ್ಲಿ ಸಂಭವಿಸುವ ಮೆದುಳಿನ ಲಿಂಬಿಕ್ ವ್ಯವಸ್ಥೆಯಲ್ಲಿನ ಬದಲಾವಣೆಗಳಿಂದಾಗಿ ಹದಿಹರೆಯದವರು ಅವರಿಗಿಂತ ವಯಸ್ಕರು ಅಥವಾ ಶಾಲಾ ವಯಸ್ಸಿನ ಮಕ್ಕಳಿಗಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತಾರೆ. ಅವರಿಗೇನಾದರೂ ಕುಟುಂಬದ ಸದಸ್ಯರು ಟೀಕಿಸಿದರೆ, ಭಾವನಾತ್ಮಕ ಪರಿಣಾಮ ಉಂಟಾಗುತ್ತದೆ. ಸಾಮಾಜಿಕ ಗ್ರಹಿಕೆ ಮತ್ತು ತರ್ಕಕ್ಕೆ ಸಂಬಂಧಿಸಿದ ಮೆದುಳಿನ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಅವರಿಗೆ ಸರಿಯಾಗಿ ಪ್ರತಿಕ್ರಿಯಿಸಲು ಅಥವಾ ಅವರ ಪೋಷಕರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿಸುತ್ತದೆ. ಇದರಿಂದ ಸಂವಹನ ಹಾಳಾಗುತ್ತದೆ.
ಶಾಂತವಾಗಿ ವರ್ತಿಸಿ
ಮಕ್ಕಳೊಂದಿಗೆ ಶಾಂತವಾಗಿರಿ. ಹದಿಹರೆಯದ ಮಕ್ಕಳು ತಪ್ಪಾಗಿ ಅಥವಾ ಅಸಭ್ಯವಾಗಿ ವರ್ತಿಸಿದಾಗ ಕೆಲವೊಮ್ಮೆ ನಿಮಗೆ ಕಿರಿಕಿರಿಯಾಗಬಹುದು. ಹಾಗಂತಾ ತಾಳ್ಮೆಗೆಟ್ಟು ರೇಗುವುದು ಪರಿಹಾರವಲ್ಲ. ನಿಮ್ಮ ಮಗು ಏನು ಹೇಳಲು ಪ್ರಯತ್ನಿಸುತ್ತಿರಬಹುದು ಎಂಬುದನ್ನು ಆದ್ಯತೆಯಾಗಿ ಪರಿಗಣಿಸಿ. ಅವರ ಯಶಸ್ವಿ ಸಂವಹನಕ್ಕೆ ಸಹಾಯ ಮಾಡುವ ತಂತ್ರಗಳನ್ನು ಪರಿಗಣಿಸಿ. ಒಂದು ವೇಳೆ ಆ ಸಮಯದಲ್ಲಿ ನಿಮ್ಮಿಂದ ಸಂಯಮ ಕಾಪಾಡಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ಮೌನವಾಗಿರಿ. ಬಿಡುವಾದಾಗ ಮಕ್ಕಳೊಂದಿಗೆ ಮೃದುವಾಗಿ ಮಾತನಾಡಲು ಆರಂಭಿಸಿ.
ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ
ಬೇರೆ ಬೇರೆ ಕೆಲಸಕ್ಕೆ ಪ್ರಾಮುಖ್ಯತೆ ನೀಡಿ ಮಕ್ಕಳೊಂದಿಗೆ ಸಮಯ ಕಳೆಯಲು ಪೋಷಕರಿಗೆ ಸಮಯವೇ ಇರುವುದಿಲ್ಲ. ಇದು ಸರಿಯಲ್ಲ. ಹದಿಹರೆಯದವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮುಖ್ಯ. ನೀವು ಎಷ್ಟು ಹೊತ್ತು ಅವರೊಂದಿಗೆ ಮಾತನಾಡುತ್ತೀರಿ ಬೆರೆಯುತ್ತೀರಿ ಎನ್ನುವುದಕ್ಕಿಂತ ಅದರಲ್ಲಿ ಗುಣಮಟ್ಟದ ಸಮಯ ಎಷ್ಟಿತ್ತು ಎಂಬುದು ಮುಖ್ಯ. ಮಕ್ಕಳೊಂದಿಗೆ ಕುಳಿತು ಊಟ, ಆಟ, ಪ್ರವಾಸ ನಿಗದಿಪಡಿಸುವುದು, ಚಟುವಟಿಕೆಯಲ್ಲಿ ತೊಡಗುವುದು ಉತ್ತಮ ಬೆಳವಣಿಗೆ.
ಮಕ್ಕಳ ಗೌಪ್ಯತೆಯನ್ನೂ ಗೌರವಿಸಿ
ಪ್ರತಿಯೊಬ್ಬರೂ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹದಿಹರೆಯದವರು ವಯಸ್ಸಾದಂತೆ ತಮ್ಮ ಜೀವನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಬಯಸುತ್ತಾರೆ. ಅದು ಸ್ನೇಹವಿರಲಿ, ಹವ್ಯಾಸಗಳಿರಲಿ ಅಥವಾ ದೈನಂದಿನ ವೇಳಾಪಟ್ಟಿಗಳ ವಿಷಯವೇ ಆಗಿರಬಹುದು. ಹದಿಹರೆಯದ ಮಕ್ಕಳಿಗೆ ನಿರ್ದೇಶನ ನೀಡುವಾಗ, ಪೋಷಕರು ಮಕ್ಕಳಿಗೆ ಅವರದೇ ಆದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಬೆಳೆಯುವ ಮಕ್ಕಳಿಗೆ ಇಂತಹ ಸ್ವಾತಂತ್ರ್ಯ ಅಗತ್ಯ. ಅವರ ಖಾಸಗಿತನವನ್ನು ಪೋಷಕರು ಗೌರವಿಸಬೇಕು.
ಇನ್ನಷ್ಟು ರಿಲೇಷನ್ಶಿಪ್ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Love vs Arrange Marriage: ಲವ್ ಮ್ಯಾರೇಜ್ ಮಾಡಿಕೊಳ್ಳೋದಾ ಅಥವಾ ಅರೇಂಜಾ ಎಂದು ಆಲೋಚನೆ ಮಾಡ್ತಿದ್ದೀರಾ? ಯಾವ ಮದುವೆ ಹಿತಕರ
ವಿಭಾಗ