logo
ಕನ್ನಡ ಸುದ್ದಿ  /  ಜೀವನಶೈಲಿ  /  ಪೋಷಕರು ಮತ್ತು ಮಕ್ಕಳ ಬಾಂಧವ್ಯಕ್ಕೆ ಸಂವಹನವೇ ಸೇತುವೆ; ಮಕ್ಕಳೊಂದಿಗೆ ಮಾತನಾಡುವಾಗ ಸೂಕ್ಷ್ಮವಾಗಿರಿ

ಪೋಷಕರು ಮತ್ತು ಮಕ್ಕಳ ಬಾಂಧವ್ಯಕ್ಕೆ ಸಂವಹನವೇ ಸೇತುವೆ; ಮಕ್ಕಳೊಂದಿಗೆ ಮಾತನಾಡುವಾಗ ಸೂಕ್ಷ್ಮವಾಗಿರಿ

Jayaraj HT Kannada

Sep 14, 2024 09:32 PM IST

google News

ಪೋಷಕರು-ಮಕ್ಕಳ ಬಾಂಧವ್ಯಕ್ಕೆ ಸಂವಹನವೇ ಸೇತುವೆ

    • Relationships Tips: ಮಕ್ಕಳ ಮನಸ್ಸು ಸೂಕ್ಷ್ಮ. ಬಾಲ್ಯದಿಂದಲೇ ಮಕ್ಕಳ ಮಾತುಗಳನ್ನು ಆಲಿಸಲು ಪೋಷಕರು ಸಮಯ ಕೊಡಬೇಕು. ಹೆತ್ತವರು ಹಾಗೂ ಮಕ್ಕಳ ನಡುವೆ ಬಾಂಧವ್ಯ ವೃದ್ಧಿಸಲು ಸಂವಹನವೇ ಪ್ರಮುಖವಾದುದು. ಪರಿಣಾಮಕಾರಿ ಸಂವಹನಕ್ಕೆ ಈ ಸಲಹೆಗಳು ನಿಮಗೆ ನೆರವಾಗಬಹುದು.
 ಪೋಷಕರು-ಮಕ್ಕಳ ಬಾಂಧವ್ಯಕ್ಕೆ ಸಂವಹನವೇ ಸೇತುವೆ
ಪೋಷಕರು-ಮಕ್ಕಳ ಬಾಂಧವ್ಯಕ್ಕೆ ಸಂವಹನವೇ ಸೇತುವೆ (Pixabay)

ಸಂಬಂಧ ಗಟ್ಟಿಯಾಗಿ ಬೆಳೆಯಲು ಸಂವಹನವೇ ಸೇತುವೆ. ಇದು ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯಕ್ಕೂ ಅನ್ವಯಿಸುತ್ತದೆ. ಹೆತ್ತವರು ಹಾಗೂ ಮಕ್ಕಳ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಲು ಪರಿಣಾಮಕಾರಿ ಸಂವಹನ ಅಗತ್ಯ. ಬಾಲ್ಯದಿಂದಲೇ ಮುಕ್ತ ಸಂವಾದ, ಮೃದು ಮಾತುಕತೆ, ಪರಸ್ಪರ ಗೌರವವನ್ನು ಬೆಳೆಸುವ ಮೂಲಕ ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು ಮಧುರ ಬಾಂಧವ್ಯ ಬೆಳೆಸಿಕೊಳ್ಳಬೇಕು. ಪರಿಣಾಮಕಾರಿ ಮಾತುಕತೆಯ ಮೂಲಕವೇ ತಿಳುವಳಿಕೆಯನ್ನು ಮೂಡಿಸಿ ಅವರಿಗೆ ಬೆಂಬಲದ ವಾತಾವರಣ ನಿರ್ಮಿಸಬಹುದು.

ಮಕ್ಕಳೊಂದಿಗೆ ಭಾವನಾತ್ಮಕ ನಂಟನ್ನು ಉಳಿಸಲು ಸಂವಹನ ಬೇಕು. ಈ ಸಂವಹನವನ್ನು ಸುಧಾರಿಸಲು ತಾಳ್ಮೆ ಅಗತ್ಯ. ಮಕ್ಕಳ ಮಾತನ್ನು ನಿರಂತರವಾಗಿ ಆಲಿಸಬೇಕು. ಹೀಗಾಗಿ ಸ್ಥಿರ ಮತ್ತು ಅರ್ಥಪೂರ್ಣ ಸಂವಹನಕ್ಕೆ ಬದ್ಧತೆ ಯಅಗತ್ಯವಿದೆ. ಹಾಗಿದ್ದರೆ, ಮಕ್ಕಳ ನಡುವೆ ಉತ್ತಮ ಸಂಬಂಧ ಬೆಳೆಸುವಲ್ಲಿ ಪೋಷಕರಲ್ಲಿ ಪರಿಣಾಮಕಾರಿ ಸಂವಹನ ಹೇಗಿರಬೇಕು ಎಂಬುದನ್ನು ನೋಡೋಣ.

ತಾಳ್ಮೆ ಮುಖ್ಯ

ಮಕ್ಕಳನ್ನು ಬೆಳೆಸುವ ವಿಷಯಯದಲ್ಲಿ ತಾಳ್ಮೆ ಅತ್ಯಗತ್ಯ. ಸಂವಹನದ ವಿಷಯಕ್ಕೂ ಇದು ಅನ್ವಯಿಸುತ್ತದೆ. ಪೋಷಕರು ಎಲ್ಲಾ ವಿಷಯಗಳಿಗೆ ಮಿತಿಗಿಂತ ಹೆಚ್ಚು ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು. ಇದು ಮುಂದೆ ಮಕ್ಕಳ ಸಂವಹನದ ಆಸಕ್ತಿಯನ್ನೇ ಕುಂಠಿತಗೊಳಿಸಬಹುದು. ಹೀಗಾಗಿ ಮಕ್ಕಳ ದೃಷ್ಟಿಕೋನಕ್ಕೆ ಅಡ್ಡಿಪಡಿಸದೆ, ಅವರ ಮಾತಿನ ಮಧ್ಯೆ ಅಡ್ಡಿಪಡಿಸದೆ ಪೂರ್ತಿಯಾಗಿ ಆಲಿಸಿ. ಜೊತೆಗೆ ಅವರ ಅಭಿಪ್ರಾಯಕ್ಕೆ ನಿಮ್ಮ ಚಿಂತನಾಶೀಲ ಅನಿಸಿಕೆಯನ್ನು ವ್ಯಕ್ತಪಡಿಸಿ. ಈ ವಿಧಾನವು ಗೊಂದಲವನ್ನು ಬಗೆಹರಿಸಿ ಹೆತ್ತವರು ಮತ್ತು ಮಕ್ಕಳ ಬಾಂಧವ್ಯವನ್ನು ವೃದ್ಧಿಸುತ್ತದೆ.

ಆಲಿಸುವಿಕೆ ಅಭ್ಯಾಸ ಮಾಡಿ

ಆಲಿಸುವುದು ಅಥವಾ ಕೇಳುವುದು ಪರಿಣಾಮಕಾರಿ ಸಂವಹನದ ಮೂಲ ಅಂಶ. ಮಕ್ಕಳು ಅತಿಯಾಗಿ ಮಾತನಾಡುತ್ತಾರೆ. ಪ್ರಶ್ನೆಗಳು ಹಾಗೂ ಗೊಂದಲಗಳನ್ನು ವ್ಯಕ್ತಪಡಿಸುತ್ತಾರೆ. ನೀವು ಅವರ ಮಾತನ್ನು ಒಪ್ಪದಿದ್ದರೂ, ಅವರ ಭಾವನೆಗಳನ್ನು ಆಲಿಸಿ. ಮಕ್ಕಳು ಪದಗಳಲ್ಲಿ ಹೇಳುವ ಮಾತನ್ನು ಮೀರಿ ಅವರ ಆಂಗಿಕ ಭಾಷೆ, ಮುಖದ ಅಭಿವ್ಯಕ್ತಿಗಳ ಬಗ್ಗೆ ಗಮನ ಇರಲಿ. ಈ ಮೌಖಿಕ ಸೂಚನೆಗಳು ನಿಮ್ಮ ಮಗು ನಿಮ್ಮ ಸಂದೇಶವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಆಳವಾಗಿ ಪರಿಣಾಮ ಬೀರಬಹುದು.

ಭಾವನೆಗಳನ್ನು ಅರ್ಥಮಾಡಿಕೊಳ್ಳಿ, ಭಾವನಾತ್ಮಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಿ

ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಹಸ ಮಾಡುತ್ತಾರೆ. ಎಲ್ಲವನ್ನೂ ಪದಗಳಲ್ಲಿ ತಿಳಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಆಗ ಅವರ ಭಾವನಾತ್ಮಕ ಅಭಿವ್ಯಕ್ತಿಗೆ ಸಹಾಯ ಮಾಡುವುದು ಸಂವಹನದ ಮತ್ತೊಂದು ಪ್ರಮುಖ ಅಂಶ. ಪೋಷಕರು ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸಲು ಹೆಣಗಾಡುವುದು ಸಾಮಾನ್ಯ. ಅದನ್ನು ಅರ್ಥಮಾಡಿಕೊಳ್ಳುವ ಮೂಲಕ ಭಾವನಾತ್ಮಕ ಯೋಗಕ್ಷೇಮ ಮತ್ತು ಸಂವಹನ ಕೌಶಲ್ಯಗಳನ್ನು ಸುಧಾರಿಸಬಹುದು. ಮಕ್ಕಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದು ಹಿರಿಯರ ಕರ್ತವ್ಯ.

ಗುಣಮಟ್ಟದ ಸಮಯ ಕಳೆಯಿರಿ

ಸಂಬಂಧ ಗಟ್ಟಿಯಾಗಲು ಪರಸ್ಪರ ಗುಣಮಟ್ಟದ ಸಮಯ ಕಳೆಯುವುದು ಅಗತ್ಯ. ಪೋಷಕರು ಮತ್ತು ಮಕ್ಕಳು ಆನಂದದಾಯಕ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಆಟ ಆಡುವುದು, ಅಡುಗೆ ಮಾಡುವುದು ಅಥವಾ ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದು ಮಾಡಬೇಕು. ಇವೆಲ್ಲಾ ಸಂವಹನವನ್ನು ಬಲಪಡಿಸುವ ಅವಕಾಶಗಳು. ವೈಯಕ್ತಿಕವಾಗಿ ಸಂವಹನ ನಡೆಸುವುದು ಮಕ್ಕಳ ಸ್ವಾಭಿಮಾನವನ್ನು ಹೆಚ್ಚಿಸಬಹುದು.

ಆಗಾಗ ಪ್ರಶಂಸೆ ವ್ಯಕ್ತಪಡಿಸುತ್ತಿರಿ

ಮಕ್ಕಳ ಸಣ್ಣ ಸಣ್ಣ ಪ್ರಯತ್ನಗಳನ್ನು ಶ್ಲಾಘಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಭವಿಷ್ಯದ ಸಂಭಾಷಣೆಗಳಲ್ಲಿ ಹೆಚ್ಚು ಮುಕ್ತವಾಗಿರಲು ಪ್ರೋತ್ಸಾಹಿಸುತ್ತದೆ. ಇದು ಮಕ್ಕಳು ತಮ್ಮ ಅನುಭವಗಳನ್ನು ಮತ್ತು ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶ ನೀಡುತ್ತದೆ.

ಸ್ಪಷ್ಟವಾಗಿರಿ ಮತ್ತು ಸ್ಥಿರವಾಗಿರಿ

ಸಂವಹನದಲ್ಲಿ ಪೋಷಕರು ಸ್ಥಿರತೆ ಸಾಧಿಸುವುದು ಮುಖ್ಯ. ಗೊಂದಲದಲ್ಲಿರುವ ಮಕ್ಕಳಿಗೆ ಮತ್ತಷ್ಟು ಗೊಂದಲ ಮೂಡಿಸುವುದಲ್ಲ. ಹೀಗಾಗಿ ಮಿಶ್ರ ಸಂದೇಶ ಕಳುಹಿಸುವುದನ್ನು ತಪ್ಪಿಸಿ. ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಮೂಲಕ, ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಸುರಕ್ಷಿತವಾಗಿರಲು ಸಹಾಯ ಮಾಡಬಹುದು. ಇದು ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ