logo
ಕನ್ನಡ ಸುದ್ದಿ  /  ಜೀವನಶೈಲಿ  /  ಶಿಕ್ಷಕಿಯಾಗಬೇಕೆಂದು ಕನಸು ಕಂಡಿದ್ದ ರೈತ ಮಹಿಳೆ ಆಗಿದ್ದು ಉದಯೋನ್ಮುಖ ಉದ್ಯಮಿ; ಕೋಲಾರದ ವೇದಿಕ್ ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ

ಶಿಕ್ಷಕಿಯಾಗಬೇಕೆಂದು ಕನಸು ಕಂಡಿದ್ದ ರೈತ ಮಹಿಳೆ ಆಗಿದ್ದು ಉದಯೋನ್ಮುಖ ಉದ್ಯಮಿ; ಕೋಲಾರದ ವೇದಿಕ್ ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ

Raghavendra M Y HT Kannada

Aug 02, 2023 07:34 PM IST

google News

ಜನರ ಉತ್ತಮ ಆರೋಗ್ಯಕ್ಕೆ ನೆರವಾಗುವಂತಹ ಆಹಾರ ಉತ್ಪನ್ನಗಳನ್ನು ತಯಾರಿಸುವ ಗುರಿಯೊಂದಿಗೆ ಸಿರಿಧಾನ್ಯಗಳ ಉದ್ಯಮ ಆರಂಭಿಸಿರುವ ರೈತ ಮಹಿಳೆ ರತ್ನಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

  • Halli Baduku: ಸಿರಿಧಾನ್ಯಗಳ ಉತ್ಪನ್ನ ಉದ್ಯಮ ಆರಂಭಿಸಿರುವ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಿಲೆಟ್ ರತ್ನಮ್ಮ ಇವತ್ತು ರಾಜ್ಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಇವರು ಈ ಸ್ಥಾನಕ್ಕೆ ಬರಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಸವಾಲುಗಳನ್ನು ಎದುರಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದೊಂದಿಗೆ ರತ್ನಮ್ಮ ಮಾತನಾಡಿದ್ದಾರೆ.

ಜನರ ಉತ್ತಮ ಆರೋಗ್ಯಕ್ಕೆ ನೆರವಾಗುವಂತಹ ಆಹಾರ ಉತ್ಪನ್ನಗಳನ್ನು ತಯಾರಿಸುವ ಗುರಿಯೊಂದಿಗೆ  ಸಿರಿಧಾನ್ಯಗಳ ಉದ್ಯಮ ಆರಂಭಿಸಿರುವ ರೈತ ಮಹಿಳೆ ರತ್ನಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಜನರ ಉತ್ತಮ ಆರೋಗ್ಯಕ್ಕೆ ನೆರವಾಗುವಂತಹ ಆಹಾರ ಉತ್ಪನ್ನಗಳನ್ನು ತಯಾರಿಸುವ ಗುರಿಯೊಂದಿಗೆ ಸಿರಿಧಾನ್ಯಗಳ ಉದ್ಯಮ ಆರಂಭಿಸಿರುವ ರೈತ ಮಹಿಳೆ ರತ್ನಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

Halli Baduku: ಶಿಕ್ಷಕಿಯಾಗಬೇಕು.. ಎಷ್ಟೇ ಸವಾಲುಗಳು ಎದುರಾದರೂ ಸರಿ ಶಿಕ್ಷಕಿಯಾಗಲೇಬೇಕೆಂದು ಕನಸು ಹೊತ್ತುಕೊಂಡಿದ್ದ ಈಕೆ ಮುಗಿಸಿದ್ದು ಟಿಸಿಎಚ್‌. ಒಳ್ಳೆಯ ಅಂಕ ಪಡೆದಿದ್ದರೂ ಆ ಕನಸು ಮಾತ್ರ ನನಸಾಗಲೇ ಇಲ್ಲ. ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದ ಪತಿಗೆ ಜೊತೆಯಾಗಿ ನಿಂತ ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರ (Srinivasapura) ತಾಲೂಕಿನ ಗುಂಡಮ್ಮನತ್ತ ಗ್ರಾಮದ ರತ್ನಮ್ಮ ಕೊನೆಗೆ ಆಗಿದ್ದು ಮಾತ್ರ ಉದಯೋನ್ಮುಖ ಉದ್ಯಮಿ (Entrepreneur).

ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದ ರತ್ನಮ್ಮ ವ್ಯಾಸಂಗ ಮುಗಿಸಿದ ನಂತರ ಗುಂಡಮ್ಮನತ್ತ ಗ್ರಾಮದ ರೈತ ಜೆಎಂ ನಾರಾಯಣಸ್ವಾಮಿ ಅವರನ್ನು ಎರಡು ದಶಕಗಳ ಹಿಂದೆ ರತ್ನಮ್ಮ ಮದುವೆಯಾಗುತ್ತಾರೆ. ಬರಗಾಲದ ನಡುವೆಯೂ ಕೆಲವು ವರ್ಷಗಳ ಕಾಲ ಕೃಷಿಯಲ್ಲಿ ಮುಂದುವರೆದರೂ ಅಷ್ಟಾಗಿ ಯಶಸ್ಸು ಕಾಣುವುದಿಲ್ಲ. ಆ ಬಳಿಕ ಕೈಗಾರಿಕೋದ್ಯಮಿಯಾಗುವ ಯೋಚನೆ ಮಾಡಿದ ಈಕೆ ಕೊನೆಗೆ ಕೃಷಿ ಅಧಿಕಾರಿಗಳು ಹಾಗೂ ತಜ್ಞರ ಸಲಹೆಯ ಮೇರೆಗೆ ಸಿರಿಧಾನ್ಯಗಳ ತಿಂಡಿ ತಿನಿಸುಗಳನ್ನು (Millet Food Items) ತಯಾರಿಸಿ ಮಾರಾಟ ಮಾಡುವ ಕಾಯಕವನ್ನು ಆರಂಭಿಸುತ್ತಾರೆ. ತಮ್ಮಗಿದ್ದ ರೇಷ್ಮೆ ಮನೆಯಲ್ಲೇ ಆರಂಭಿಸಿದ್ದ ಈ ಪುಟ್ಟ ಉದ್ಯಮ ಇವತ್ತು ವೇದಿಕ್ ಎಂಟರ್‌ಪ್ರೈಸಸ್‌ ಆಗಿ ಎಲ್ಲಾ ಕಡೆ ಮನೆಮಾತಾಗುತ್ತಿದೆ.

ಆರಂಭದಲ್ಲಿ ಹಲವು ಸಾವಾಲುಗಳನ್ನು ಎದುರಿಸಿದ ಇವರು, ಊರೂರು ಸುತ್ತಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಎಲ್ಲಾ ರೀತಿಯಲ್ಲೂ ಮಾಹಿತಿ ಕಲೆಹಾಕಿ ಹಂತ ಹಂತವಾಗಿ ಇತರೆ ಉತ್ಪನ್ನಗಳನ್ನು ತಯಾರಿಸುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಉಪಯುಕ್ತವಾಗುವಂತಹ ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಟಿಕ ತನಿಸುಗಳನ್ನು ತಯಾರಿಸುತ್ತಾರೆ. ಇದಕ್ಕಾಗಿ ಹಿಟ್ಟಿನ ಗಿರಣಿ, ಪ್ಯಾಕಿಂಗ್ ಮೆಷಿನ್, ಸಿರಿಧಾನ್ಯಗಳನ್ನು ಹುರಿಯಲು ಬೇಕಾಗುವ ಬಾಣಲಿ ಮತ್ತಿತರ ಪರಿಕರಗಳನ್ನು ಖರೀಸಿದ್ದಾರೆ.

ತಮ್ಮದೇ ಹೊಲದಲ್ಲಿ ಬೆಳೆದ ಸಾಮೆ, ನವಣೆ, ಆರಕ ಸೇರಿದಂತೆ ಮತ್ತಿತರ ಸಾವಯವ ಧಾನ್ಯಗಳನ್ನು ಹುರಿದು ಹಿಟ್ಟು ಮಾಡಿಟ್ಟುಕೊಂಡು ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕ ಪದಾರ್ಥಗಳನ್ನು ತಯಾರಿಸುತ್ತಾರೆ. ಇದೇ ಹಿಟ್ಟನ್ನು ಕೂಡ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಾರೆ. ಇವಿಷ್ಟೇ ಅಲ್ಲ, ಸಾಂಬಾರು ಪುಡಿಗಳು, ಸಿರಿಧಾನ್ಯಗಳಿಂದ ತಯಾರಿಸಿದ ಸಂಡಿಗೆ, ತಮ್ಮದೇ ತೋಟದಲ್ಲಿ ಸಿಗುವ ಮಾವಿನಕಾಯಿ ಬಳಸಿ ನೈಸರ್ಗಿಕವಾಗಿ ಉಪ್ಪಿನ ಕಾಯಿ, ಜ್ಯೂಸ್ ಮಾಡುತ್ತಾರೆ.

ಸೌದೆಯ ಓಲೆಯಲ್ಲೇ ಸಿರಿಧಾನ್ಯಗಳನ್ನು ಉರಿದು ಪುಡಿ ಮಾಡಿ ಪ್ಯಾಕ್ ಮಾಡುತ್ತಾರೆ. ಖಾರದ ಪುಡಿ, ಧನಿಯಾ ಪುಡಿ ಸೇರಿದಂತೆ ವಿವಿಧ ಬಗೆಯ ಸಾಂಬಾರು ಪುಡಿಗಳನ್ನು ಮಾಡುತ್ತಾರೆ. ಈ ಎಲ್ಲಾ ಉತ್ಪನ್ನಗಳನ್ನು ಪ್ಯಾಕೆಟ್ ಮಾಡಿ ಮಾರಾಟ ಮಾಡಿ ಉತ್ತಮ ಲಾಭವನ್ನೂ ಮಾಡುತ್ತಿದ್ದಾರೆ. ರತ್ನಮ್ಮ ಅವರ ಈ ಸಾಧನೆಗೆ ಹಲವು ಪ್ರಶಸ್ತಿಗಳು ಹುಡುಕಿ ಬಂದಿವೆ. 2018ರಲ್ಲಿ ಜಿಕೆವಿಕೆಯಿಂದ ತಾಲೂಕು ಮಟ್ಟದ ಯುವ ಮಹಿಳಾ ರೈತ ಪ್ರಶಸ್ತಿ, 2020ರಲ್ಲಿ ಜಿಕೆವಿಕೆಯ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, 2021ರಲ್ಲಿ ಕೋಲಾರ ಜಿಲ್ಲೆಯ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಶಸ್ತಿ, ಕೋಲಾರ ಜಿಲ್ಲಾಡಳಿತದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಶಿಕ್ಷಕಿಯಾಗಬೇಕು ಅಂತ ಕನಸು ಕಂಡಿದ್ದೆ ಆದರೆ ಆಗಿದ್ದೇ ಬೇರೆ ಸದ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಅಂತಲೇ ಉದ್ಯಮದ ಬಗ್ಗೆ ಎಚ್‌ಟಿ ಕನ್ನಡದೊಂದಿಗೆ ಮಿಲೆಟ್ ರತ್ನಮ್ಮ ಮಾತನಾಡಿದ್ದಾರೆ. ತುಂಬಾ ಸ್ಪೂರ್ತಿದಾಯವಾಗಿರುವ ಅವರು ಮಾತುಗಳನ್ನು ಅಕ್ಷರ ರೂಪಕ್ಕೆ ತರಲಾಗಿದೆ.

ನಮ್ಮದು ಕೃಷಿ ಕುಟುಂಬ, ಐದು ಬೋರ್‌ವೆಲ್‌ಗಳನ್ನು ಕೊರಿಸಿದ್ದರೂ ಸರಿಯಾಗಿ ನೀರು ಸಿಕ್ಕಿಲ್ಲ. ಅಂತರ್ಜಲ ಮಟ್ಟ ಕುಸಿತ, ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ತೀವ್ರ ಬರಗಾಲವಿತ್ತು. ಶಿಕ್ಷಕಿಯಾಗಬೇಕೆಂಬ ಕನಸು ಹೊತ್ತು ಟಿಸಿಎಚ್‌ ಕೂಡ ಮುಗಿಸಿದ್ದೆ. ಆದರೆ ಆರ್ಥಿಕವಾಗಿ ಎದುರಾದ ಸವಾಲುಗಳು, ಕಷ್ಟಗಳ ನಡುವೆಯೇ ಬೇರೆ ಏನಾದರೂ ಮಾಡಬೇಕು, ಅದು ಜನರಿಗೂ ಅನುಕೂಲವಾಗಬೇಕು, ಉತ್ತಮ ಆರೋಗ್ಯ ಕೊಟ್ಟಂತಾಗಬೇಕೆಂದು ಯೋಚಿಸುತ್ತಿದ್ದಾಗ ಹೊಳೆದಿದ್ದೇ ಸಿರಿಧಾನ್ಯಗಳು.

ಮೂರು ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ

ಏಕಾಏಕಿ ಸಿರಿಧಾನ್ಯಗಳ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಇದನ್ನು ಆರಂಭಿಸುವುದಕ್ಕೂ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತಿದ್ದ ವಿಶೇಷ ತರಬೇತಿಯನ್ನು ಪಡೆದುಕೊಂಡೆ. ಜೊತೆಗೆ ಕೃಷಿ ಇಲಾಖೆ ಅಧಿಕಾರಿಗಳು, ತಜ್ಞರು ಮಾಹಿತಿ ನೀಡಿದರು. ನಮ್ಮಲ್ಲಿರುವ ಮೂರು ಎಕರೆಯಲ್ಲಿ ಸಮಗ್ರ ಕೃಷಿಯನ್ನು ಮಾಡಿದ್ದೇವೆ. ಮೂರು ಬಗೆಯ ಮಾವು, ರೇಷ್ಮೆ, ಬೆಟ್ಟದ ನೆಲ್ಲಿ, ಎಳ್ಳಿ ಗಿಡಿ, 300 ಗಿಡ ಕರಿಬೇವು, ವಿವಿಧ ಬಗೆಯ ಹೂವುಗಳ ಹಾಗೂ ಪಶುಗಳಿಗೆ ಮೇವು ಕೂಡ ಇದರಲ್ಲೇ ಸಿಗುತ್ತದೆ. ರೇಷ್ಮೆ ಮನೆಯಲ್ಲೇ ಸಾವಯವ ಪದಾರ್ಥಗಳನ್ನು ತಯಾರಿಸುವ ಯೂನಿಟ್‌ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

ಸಿರಿಧಾನ್ಯಗಳ ಉತ್ಪನ್ನಗಳ ಬಗ್ಗೆ ಹೇಳುವುದಾದರೆ, ತಾಲೂಕು ಮಟ್ಟದಲ್ಲಿ ರೈತರಿಗೆ ನಾವೇ ಬಿತ್ತನೆ ಬೀಜಗಳನ್ನು ಕೊಡುತ್ತೇವೆ. ಬೆಳೆಯ ಬಗ್ಗೆ ಅರಿವು ಮೂಡಿಸುತ್ತೇವೆ. ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ರಾಗಿ, ಜೋಳ ಸೇರಿದಂತೆ 9 ಬಗೆಯ ಸಿರಿಧಾನ್ಯಗಳನ್ನು ರೈತರಿಂದಲೇ ಖರೀದಿಸಿ ಅವುಗಳಿಂದ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಮಧುಮೇಹ ನಿಯಂತ್ರಿಸಲು ಸಜ್ಜೆ ಮಾಲ್ಟ್ ತುಂಬಾ ಉಪಯುಕ್ತ

ರಾಗಿ ಮಾಲ್ಟ್, ಸಜ್ಜೆ ಮಾಲ್ಟ್‌ಗೆ ಹೆಚ್ಚಿನ ಬೇಡಿಕೆ ಇದೆ. ಶುಗರ್ ಮಟ್ಟವನ್ನು ನಿಯಂತ್ರಿಸಲು ಸಜ್ಜೆಯಿಂದ ಮಾಡಿದ ಮಾಲ್ಟ್ ತುಂಬಾ ಉಪಯುಕ್ತವಾಗಿದೆ. ದಂಟಿನ ಬೀಜದಲ್ಲಿ ಪ್ರೋಟೀನ್, ಕಬ್ಬಿಣಾಂಶ ಹಾಗೂ ನಾರಿನಾಂಶ ಇರುತ್ತದೆ. ದಂಟಿನ ಬೀಜಗಳಿಂದ ಚಿಕ್ಕಿ, ಲಡ್ಡು, ಮಿಕ್ಸ್‌ಚರ್ ಮಾಡ್ತೀವಿ. ಚೆಕ್ಕುಲಿ ಕೂಡ ಮಾಡ್ತೀವಿ. ನಮ್ಮದೇ ಮಾವಿನ ಮರಗಳಿಂದ ಸಿಗುವ ಮಾವಿನ ಕಾಯಿಗಳನ್ನು ಬಳಸಿ ಉಪ್ಪಿನಕಾಯಿ, ಜ್ಯೂಸ್ ಮಾಡುತ್ತೇವೆ.

ತಾಲೂಕು, ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮಗಳಿಗೆ ನಮ್ಮ ಸಿರಿಧಾನ್ಯಗಳ ತಿನಿಸುಗಳನ್ನು ಪೂರೈಸುತ್ತೇವೆ. ಜಿಕೆವಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತೇವೆ. ಆರಂಭದಲ್ಲಿ ಸಾಲ ಪಡೆಯಲು ಸ್ವಲ್ಪ ಕಷ್ಟವಾಗಿತ್ತು. ಮೊದಲು ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ 10 ಲಕ್ಷ ಸಾಲ ತೆಗೆದುಕೊಂಡಿದ್ದೆ. ಸದ್ಯ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಪಿಕಲ್ ಯೂನಿಟ್ ಮಾಡಲು 20 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದೇನೆ ಎಂದು ಆರಂಭದಲ್ಲಿನ ಎದುರಿಸಿದ ಸವಾಲುಗಳನ್ನು ವಿವರಿಸಿದ್ದಾರೆ.

ಕಷ್ಟ ಬಂದಾಗ ಎದೆಗುಂದಲಿಲ್ಲ, ಈಗ ಶ್ರಮಕ್ಕೆ ತಕ್ಕ ಪ್ರತಿಫಲ

ಒಂದು ತಿಂಗಳಿಗೆ ಒಂದು ಟನ್ ನಷ್ಟು ಉಪ್ಪಿನಕಾಯಿ ಮಾರಾಟವಾಗುತ್ತಿದೆ. ಎರಡ್ಮೂರು ಟನ್ ನಷ್ಟು ಸಿರಿಯಾಧನ್ಯಗಳ ಉತ್ಪನ್ನಗಳನ್ನು ಸೇಲ್ ಮಾಡುತ್ತಿದ್ದು, ಉತ್ತಮ ಫಲಿತಾಂಶವಿದೆ. ಕೋಲ್ಡ್ ಸ್ಟೋರೇಜ್ ಮಾಡಿಸಲಾಗುತ್ತಿದೆ. ಸರ್ಕಾರದಿಂದ ಆಯೋಜಿಸುವ ಸಿರಿಧಾನ್ಯ ಮತ್ತು ಸಾವಯವ ಕೃಷಿ ಮೇಳಗಳಲ್ಲಿ ಭಾಗವಹಿಸುತ್ತೇವೆ. ರೈತರಿಗೆ ಸಿರಿಧಾನ್ಯಗಳ ಬೆಳೆ ಬಗ್ಗೆ, ಗ್ರಾಹಕರಿಗೆ ಸಿರಿಧಾನ್ಯಗಳ ಉತ್ಪನ್ನಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಇದರಿಂದ ನಮ್ಮ ಉತ್ಪನ್ನಗಳಿಗೂ ಮಾರುಕಟ್ಟೆ ಸಿಗುತ್ತಿದೆ.

ಸದ್ಯಕ್ಕೆ ಐವರು ಮಹಿಳೆಯರು ಕೆಲಸ ಮಾಡುತ್ತಿದ್ದು, ಕೆಲವೊಂದು ಸಲ 10 ಮಂದಿ ಕೆಲಸ ಮಾಡುವಷ್ಟು ಆರ್ಡರ್‌ಗಳು ಬರುತ್ತವೆ. ಮುಂದಿನ ದಿನಗಳಲ್ಲಿ ಕನಿಷ್ಠ 100 ಜನರಿಗೆ ಕೆಲಸ ಕೊಡುವಷ್ಟು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ. ಮೊದಲ ಎರಡು ವರ್ಷ ಉತ್ಪನ್ನಗಳು ಸ್ಟಾಕ್ ಇರುತ್ತಿದ್ದವು, ಪ್ರಸ್ತುತ ಗ್ರಾಹಕರು ಹಾಗೂ ಇತರೆ ಖರೀದಿದಾರರು ಮನೆ ಬಳಿಯೇ ಬಂದು ಉತ್ಪನ್ನಗಳನ್ನು ಖರೀದಿಸುತ್ತಾರೆ. ಹೋಲ್‌ಸೇಲ್‌ ಆಗಿಯೂ ಮಾರಾಟ ಮಾಡುತ್ತೇವೆ. ಕಷ್ಟ ಬಂದಾಗ ಎದೆಗುಂದಲಿಲ್ಲ. ಈಗ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಉತ್ತಮ ಆದಾಯವೂ ಇದೆ ಎನ್ನುತ್ತಾರೆ ಮಿಲೆಟ್ ರತ್ನಮ್ಮ.

ಸಿರಿಧಾನ್ಯಗಳ ಜೊತೆಗೆ ಸಂಬಾರ್ ಪೌಡರ್‌ಗಳನ್ನು ಮಾಡುತ್ತೇವೆ. ಬಿಡುವು ಇದ್ದಾಗ ಸಿರಿಧಾನ್ಯಗಳ ಅಪ್ಪಳ ಮಾಡುತ್ತೇವೆ. ಉಪ್ಪಿನಕಾಯಿಗೆ ಬೇಕಾಗಿರುವ ಖಾರದ ಪುಡಿಯನ್ನು ನಾವೇ ಮಾಡಿಕೊಳ್ಳುವುದರಿಂದ ಬೇರೆ ಕಡೆ ಇಂತಹ ಪದಾರ್ಥಗಳನ್ನು ಖರೀಸುವುದಿಲ್ಲ. ಆಹಾರ ಪದಾರ್ಥಗಳಾಗಿರುವುದರಿಂದ ತುಂಬಾ ಎಚ್ಚರಿಕೆಯಿಂದ ನಿರ್ವಹಿಸುತ್ತೇವೆ. ರೇಷ್ಮೆ ಮನೆಯಲ್ಲಿ ಆರಂಭವಾದ ನಮ್ಮ ಸಿರಿಧಾನ್ಯಗಳ ಉತ್ಪನ್ನಗಳನ್ನು ಇದೀಗ ದೊಡ್ಡ ಮಟ್ಟದಲ್ಲಿ ಯೂನಿಟ್ ಮಾಡುತ್ತಿದ್ದೇವೆ ಎಂದು ಪರಿಶ್ರಮದ ಹಿಂದಿನ ಖುಷಿಯನ್ನು ಹಂಚಿಕೊಂಡಿದ್ದಾರೆ. ಇವರ ಸಂಸ್ಥೆಯಲ್ಲಿ ತಯಾರಿಸುವ ಸಿರಿಧಾನ್ಯಗಳ ತಿಂಡಿ, ತನಿಸುಗಳು, ಇತರೆ ಪದಾರ್ಥಗಳು ಬೇಕಿದ್ದರೆ ರತ್ನಮ್ಮ ಅವರನ್ನು (ಮೊಬೈಲ್ ಸಂಖ್ಯೆ 88618 22142) ಸಂಪರ್ಕಿಸಬಹುದು.

ನೀವೂ ಸಲಹೆ ಕೊಡಿ

ಹಳ್ಳಿ ಬದುಕು ವಿಶೇಷ ಅಂಕಣದಲ್ಲಿ ಮುಂದಿನ ಬುಧವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗೋಣ. ನಿಮ್ಮ ಹಳ್ಳಿಯಲ್ಲಿ ನೀವು ಗಮನಿಸಿದ ಅಪರೂಪದ ವಿದ್ಯಮಾನ, ವಿಶೇಷ ಎನಿಸುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕರ್ನಾಟಕದ ಗ್ರಾಮೀಣ ಬದುಕು ಪರಿಚಯಿಸುವ ಈ ಅಂಕಣ ಬೆಳೆಸಲು ನೀವೂ ನೆರವಾಗಬಹುದು. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳಿಗೂ ಸ್ವಾಗತ. ಇಮೇಲ್: raghavendra.y@htdigital.in, ht.kannada@htdigital.in

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ

-----------------------------------------------------------------------------------

ಸಂಬಂಧಿತ ಲೇಖನ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ