ಬೆಂಗಳೂರಿನಂತಹ ಮಹಾನಗರಿಯಲ್ಲಿ ಪಿಜಿ ಹುಡುಕುವ ಮುನ್ನ ಮರೆಯದೇ ಗಮನಿಸಬೇಕಾದ ಅಂಶಗಳಿವು, ಹೆಣ್ಣುಮಕ್ಕಳಿಗಿದು ಹೆಚ್ಚು ಅನ್ವಯ
Sep 23, 2024 12:05 PM IST
ಪಿಜಿ ಹುಡುಕುವ ಮುನ್ನ ಮರೆಯದೇ ಗಮನಿಸಬೇಕಾದ ಅಂಶಗಳಿವು (ಸಾಂಕೇತಿಕ ಚಿತ್ರ)
- ಓದು, ಉದ್ಯೋಗ ಹೀಗೆ ವಿವಿಧ ಉದ್ದೇಶಗಳಿಂದ ಹುಟ್ಟಿದ ಊರು ಬಿಟ್ಟು ಬೆಂಗಳೂರಿನಂತಹ ಮಹಾನಗರಗಳಿಗೆ ಬರುವವರಿಗೆ ಆಸರೆಯ ತಾಣವಾಗುವುದು ಪಿಜಿ ಅಥವಾ ಹಾಸ್ಟೆಲ್. ನೀವು ಯಾವುದೇ ಉದ್ದೇಶದಿಂದ ಮಹಾನಗರಿಗೆ ಬಂದು ಪಿಜಿ ಹುಡುಕುತ್ತಿದ್ದರೆ, ಪಿಜಿ ಅಥವಾ ಹಾಸ್ಟೆಲ್ ಆಯ್ಕೆ ಮಾಡುವ ಮುನ್ನ ಈ ಅಂಶಗಳನ್ನ ಗಮನಿಸಲೇಬೇಕು. ಇದು ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಹೆಚ್ಚು ಅನ್ವಯ.
ಓದುವ ಸಲುವಾಗಿಯೋ ಉದ್ಯೋಗಕ್ಕಾಗಿಯೋ ಅಥವಾ ಕೋರ್ಸ್ ಮಾಡುವ ಸಲುವಾಗಿಯೋ ಬಹುತೇಕರು ಹುಟ್ಟಿದ ಊರು ಬಿಟ್ಟು ಬೆಂಗಳೂರು, ಮಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಿಗಳಿಗೆ ಹೋಗುತ್ತಾರೆ. ಬೇರೆ ಊರುಗಳಿಗೆ ಹೋದಾಗ ಬಹುತೇಕರು ಆರಂಭದಲ್ಲಿ ಸಂಬಂಧಿಕರ ಮನೆಯಲ್ಲಿ ಅಥವಾ ಸ್ನೇಹಿತರ ಜೊತೆ ಉಳಿಯುತ್ತಾರೆ. ನಂತರ ಪಿಜಿ ಅಥವಾ ಯೂತ್ ಹಾಸ್ಟೆಲ್‌ಗಳನ್ನು ಹುಡುಕುತ್ತಾರೆ. ಕೆಲವರು ನೇರವಾಗಿ ಪಿಜಿ ಹುಡುಕುತ್ತಾರೆ. ಹೇಗೆ ಇರಲಿ ಪರವೂರಿಗೆ ಬಂದಾಗ ಬಹುತೇಕರಿಗೆ ಅನ್ನ, ಆಶ್ರಯ ಕೊಟ್ಟೆ ಆಸರೆಯಾಗುವುದು ಇಂತಹ ಪಿಜಿ ಅಥವಾ ಹಾಸ್ಟೆಲ್‌ಗಳು.
ಆದರೆ ಮಹಾನಗರಿಯಲ್ಲಿ ಪಿಜಿ ಅಥವಾ ಹಾಸ್ಟೆಲ್ ಹುಡುಕುವಾಗ ನೀವು ಕೆಲವೊಂದು ವಿಚಾರಗಳನ್ನು ಮರೆಯದೇ ಗಮನಿಸಬೇಕು, ಅದರಲ್ಲೂ ಹೆಣ್ಣುಮಕ್ಕಳಾಗಿದ್ದರೆ ನೀವು ಈ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಬೇಕು. ಹಾಗಾದರೆ ಪಿಜಿ ಹುಡುಕುವ ಮುನ್ನ ಯಾವೆಲ್ಲಾ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ನೋಡಿ.
ಮೆಟ್ರೋ ನಿಲ್ದಾಣದ ಸಮೀಪ
ನೀವು ಬೆಂಗಳೂರು, ಹೈದರಾಬಾದ್, ಮುಂಬೈನಂತಹ ಮೆಟ್ರೊ ಸಿಟಿಗಳಲ್ಲಿ ಪಿಜಿ ಹುಡುಕುತ್ತಿದ್ದರೆ ಮೆಟ್ರೊ ನಿಲ್ದಾಣದ ಸಮೀಪ ಅಂದರೆ ಕಾಲ್ನಡಿಗೆಯ ದೂರದಲ್ಲಿ ಇರುವ ಪಿಜಿ ಅಥವಾ ಹಾಸ್ಟೆಲ್ ಹುಡುಕುವುದು ಉತ್ತಮ. ಇದು ಸುರಕ್ಷತೆಯ ದೃಷ್ಟಿಯಿಂದ ಕೂಡ ಉತ್ತಮ.
ಬಸ್ ನಿಲ್ದಾಣ ಹತ್ತಿರವಿರಲಿ
ಯಾವುದೇ ನಗರದಲ್ಲಿ ನೀವು ಪಿಜಿ ಹುಡುಕುತ್ತಿದ್ದರು ಬಸ್ ನಿಲ್ದಾಣ ಸಮೀಪದಲ್ಲಿ ಇರುವಂತೆ ನೋಡಿಕೊಳ್ಳಿ. ಇದರಿಂದ ಕಚೇರಿ ಅಥವಾ ಕಾಲೇಜಿಗೆ ಹೋಗುವಾಗ ನಿಮಗೆ ಸುಲಭವಾಗುತ್ತದೆ. ಅಲ್ಲದೇ ಕೊಂಚ ತಡವಾಯ್ತು ಎಂದರೂ ಬರಲು ಸಮಸ್ಯೆ ಇರುವುದಿಲ್ಲ. ಕಾಲ್ನಡಿಗೆಯ ದೂರದಲ್ಲಿ ಬಸ್ ನಿಲ್ದಾಣ ಇರುವಂತೆ ಪಿಜಿ ಹುಡುಕಿ. ಇದರಿಂದ ಆಟೊ, ಕ್ಯಾಬ್ ಅಂತೆಲ್ಲಾ ಹಣ ಕೊಡುವುದು ಉಳಿಯುತ್ತದೆ, ಖರ್ಚು ಕೂಡ ಕಡಿಮೆಯಾಗುತ್ತದೆ.
ಕ್ಯಾಬ್ ಬರುವ ವ್ಯವಸ್ಥೆ
ಬಹುತೇಕ ಪಿಜಿಗಳು ಒಳಭಾಗದಲ್ಲಿ ಇರುತ್ತವೆ. ಸಂಧಿರಸ್ತೆಯಲ್ಲಿರುವ ಪಿಜಿಗಳಿಗೆ ಕ್ಯಾಬ್‌ಗಳು ಹೋಗುವುದಿಲ್ಲ. ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿ ಪಾಳಿ ಅಥವಾ ಸಂಜೆ ಹೊತ್ತಿಗೆ ಬರುವವರಾದರೆ ತಪ್ಪದೇ ಆಫೀಸ್ ಕ್ಯಾಬ್ ನಿಮ್ಮ ಪಿಜಿ ಅಥವಾ ಹಾಸ್ಟೆಲ್ ಎದುರಿನವರೆಗೆ ಬರುವ ಹಾಗಿದೆಯೇ ಎಂಬುದನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲದೇ ಹೋದಲ್ಲಿ ಅರ್ಧ ದಾರಿಯಲ್ಲಿ ಇಳಿದು ನಡೆದುಕೊಂಡು ಹೋಗಬೇಕಾಗುತ್ತದೆ. ಹೆಣ್ಣುಮಕ್ಕಳಿಗಂತೂ ಸುರಕ್ಷತೆಯ ದೃಷ್ಟಿಯಿಂದ ಇದು ಖಂಡಿತ ಒಳ್ಳೆಯದಲ್ಲ.
ಪಿಜಿ ಅಥವಾ ಹಾಸ್ಟೆಲ್ ಸುತ್ತಲಿನ ವಾತಾವರಣ
ಪಿಜಿ ಅಥವಾ ಹಾಸ್ಟೆಲ್ ಹುಡುಕುವಾಗ ಕಟ್ಟಡದ ಅಕ್ಕಪಕ್ಕದ ಬಿಲ್ಡಿಂಗ್‌ಗಳು, ಸುತ್ತಲಿನ ವಾತಾವರಣ ಈ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಅಕ್ಕಪಕ್ಕದ ಕಟ್ಟಡಗಳಿಂದ ಸುಲಭವಾಗಿ ಯಾರೂ ದಾಟಿ ಬರುವಂತೆ ಇರಬಾರದು. ಅಲ್ಲದೇ ಅಕ್ಕಪಕ್ಕದ ಕಟ್ಟಡಗಳಲ್ಲಿ ಬಾರ್ ಅಥವಾ ಹೋಟೆಲ್‌ನಂತಹ ವ್ಯವಹಾರಿಕ ಕಟ್ಟಡಗಳು ಇಲ್ಲದೇ ಇರುವ ಜಾಗ ನೋಡುವುದು ಉತ್ತಮ.
ಸುರಕ್ಷತೆ
ಪಿಜಿಯಲ್ಲಿ ಕೂಡ ಸುರಕ್ಷತೆಯನ್ನು ಗಮನಿಸುವುದು ಬಹಳ ಮುಖ್ಯ. ನೀವು ಹೋಗಬೇಕು ಎಂದುಕೊಂಡಿರುವ ಪಿಜಿಗೆ ಪ್ರತ್ಯೇಕವಾಗಿ ಸೆಕ್ಯೂರಿಟಿ ಇದ್ದಾರಾ, ಪಿಜಿಯಲ್ಲಿ ಸಿಸಿ ಕ್ಯಾಮೆರಾಗಳು ಇವೆಯೇ, ಅವು ಕೆಲಸ ಮಾಡುತ್ತಿವೆಯೇ, ಪಿಜಿಗೆ ಯಾರೆಲ್ಲಾ ಬರಬಹುದು ಇದು ಕೂಡ ಗಮನಿಸುವುದು ಬಹಳ ಮುಖ್ಯವಾಗುತ್ತದೆ.
ಸಮಯದ ಮಿತಿ
ಬಹುತೇಕ ಪಿಜಿಗಳಲ್ಲಿ ರಾತ್ರಿ ಹೊತ್ತು ನಿರ್ದಿಷ್ಟ ಸಮಯದ ಒಳಗೆ ಬರಬೇಕು, ಬೆಳಗಿನ ಇಂತಿಷ್ಟು ಗಂಟೆಯ ನಂತರವೇ ಹೊರ ಹೋಗಬೇಕು ಎನ್ನುವ ಪಾಲಿಸಿಗಳಿವೆ. ಇದು ಸುರಕ್ಷತೆಯ ದೃಷ್ಟಿಯಿಂದ ಬಹಳ ಮುಖ್ಯ. ಆದರೆ ಈ ಸಮಯದ ಪರಿಧಿಯು ನಿಮ್ಮ ಕಚೇರಿ ಅಥವಾ ಕಾಲೇಜಿನ ಸಮಯಕ್ಕೆ ನಿರ್ಬಂಧ ಮಾಡುವಂತಿದೆಯೇ ಎಂಬುದನ್ನು ಕೂಡ ಗಮನಿಸಿಕೊಳ್ಳಿ.
ಆಹಾರದ ರುಚಿ, ಶುಚಿತ್ವ
ಬಹುತೇಕ ಪಿಜಿಗಳಲ್ಲಿ ದೂರು ಎಂದರೆ ಆಹಾರ ಚೆನ್ನಾಗಿಲ್ಲ ಎನ್ನುವುದು. ನೀವು ಹೋಗಬೇಕು ಎಂದುಕೊಂಡಿರುವ ಪಿಜಿಯಲ್ಲಿ ಆಹಾರದ ರುಚಿ ಹಾಗೂ ಶುಚಿತ್ವ ಹೇಗಿದೆ ಎಂಬುದನ್ನು ಅಲ್ಲಿ ಮೊದಲೇ ಇರುವವರ ಬಳಿ ಕೇಳಿ ತಿಳಿದುಕೊಳ್ಳಿ. ಮೆನು ಹೇಗಿದೆ ಎಂಬುದನ್ನೂ ವಿಚಾರಿಸಲು ಮರೆಯದಿರಿ. ನಂತರ ನಿಮಗೆ ಹಿಡಿಸಿದರೆ ಆ ಪಿಜಿ ಆಯ್ಕೆ ಮಾಡಿಕೊಳ್ಳಿ.
ಬಿಸಿ ನೀರು, ಬಟ್ಟೆ ವಾಶ್ ಮಾಡುವ ಸ್ಥಳ
ನೀವು ಹೋಗಬೇಕು ಎಂದುಕೊಂಡಿರುವ ಪಿಜಿಯಲ್ಲಿ 24 ಗಂಟೆ ಬಿಸಿ ನೀರು ದೊರೆಯುತ್ತದಾ, ಬಟ್ಟೆ ವಾಶ್ ಮಾಡಿಕೊಳ್ಳಲು ವಾಷಿಂಗ್ ಮಷಿನ್ ಇದ್ಯಾ ಅಥವಾ ಬಟ್ಟೆ ಒಗೆಯುವ ಕಲ್ಲಿನ ವ್ಯವಸ್ಥೆಯ ಇದೆಯೇ ಎಂಬುದನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಅಲ್ಲದೇ ಬಾತ್‌ರೂಮ್, ಟಾಯ್ಲೆಟ್‌ಗಳನ್ನ ತೊಳೆಯಲು ಜನ ಇದ್ದಾರಾ, ಎಷ್ಟು ದಿನಕ್ಕೊಮ್ಮೆ ಕ್ಲೀನ್ ಮಾಡ್ತಾರೆ, ರೂಮ್ ಕ್ಲೀನ್ ಮಾಡುವವರು ಹೇಗಿದ್ದಾರೆ ಈ ಅಂಶಗಳನ್ನೂ ಗಮನಿಸಬೇಕು.
ವೈಫೈ, ಇಂಟರ್‌ನೆಟ್ ಸೌಲಭ್ಯ
ನೀವು ಹುಡುಕುವ ಪಿಜಿಯಲ್ಲಿ ಇಂಟರ್‌ನೆಟ್ ವ್ಯವಸ್ಥೆ ಹೇಗಿದೆ ಗಮನಿಸಿ. ವೈಫೈ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿ. ಈಗಿನ ಕಾಲಕ್ಕೆ ಇದು ಕೂಡ ಬಹಳ ಮುಖ್ಯ.
ಪಿಜಿಯ ದರ
ಈ ಎಲ್ಲವನ್ನೂ ಗಮನಿಸುವುದರ ಜೊತೆಗೆ ಪಿಜಿಗೆ ತಿಂಗಳಿಗೆ ಎಷ್ಟು ಹಣ ಕೊಡಬೇಕು ಎಂಬುದನ್ನು ಕೂಡ ಗಮನಿಸಿ. ದರ ಹೆಚ್ಚು ಎನ್ನಿಸಿದರೆ ಮತ್ತೆ ಹೇಳುತ್ತೇನೆ ಎಂದು ಹೇಳಿ ಬಂದು ಸಮೀಪದಲ್ಲೇ ಇರುವ ಇನ್ನೊಂದಿಷ್ಟು ಪಿಜಿಗಳನ್ನು ನೋಡಿ. ಅದರಲ್ಲಿ ನಿಮಗೆ ಯಾವುದು ಬೆಸ್ಟ್ ಎನ್ನಿಸುತ್ತದೆ ಅದನ್ನು ಆಯ್ಕೆ ಮಾಡಿ.
ಈ ಅಂಶಗಳ ಜೊತೆಗೆ ಟೂ ವೀಲರ್ ಪಾರ್ಕಿಂಗ್ ಇದ್ಯಾ, ಹತ್ತಿರದಲ್ಲಿ ಹಾಸ್ಪಿಟಲ್, ಮೆಡಿಕಲ್ ಇದ್ಯಾ, ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ಇವೆಯೇ ಎಂಬುದನ್ನು ಗಮನಿಸುವುದು ಕೂಡ ಮುಖ್ಯವಾಗುತ್ತದೆ.
ವಿಭಾಗ