Parenting Tips: ನಿಮಗೆ ಹೆಣ್ಮಗುನಾ? ಹೆಣ್ಣುಮಕ್ಕಳು ಭಯವಿಲ್ಲದೇ ಸ್ವಾವಲಂಬಿಯಾಗಿ ಬದುಕಲು ಪೋಷಕರು ಕಲಿಸಬೇಕಾದ ಪಾಠಗಳಿವು-parenting tips child care how to take care of girl child how to teach courage to daughter how to rise girl child rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ನಿಮಗೆ ಹೆಣ್ಮಗುನಾ? ಹೆಣ್ಣುಮಕ್ಕಳು ಭಯವಿಲ್ಲದೇ ಸ್ವಾವಲಂಬಿಯಾಗಿ ಬದುಕಲು ಪೋಷಕರು ಕಲಿಸಬೇಕಾದ ಪಾಠಗಳಿವು

Parenting Tips: ನಿಮಗೆ ಹೆಣ್ಮಗುನಾ? ಹೆಣ್ಣುಮಕ್ಕಳು ಭಯವಿಲ್ಲದೇ ಸ್ವಾವಲಂಬಿಯಾಗಿ ಬದುಕಲು ಪೋಷಕರು ಕಲಿಸಬೇಕಾದ ಪಾಠಗಳಿವು

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಧೈರ್ಯದಿಂದ ಓಡಾಡಲು ಹಿಂಜರಿಯುತ್ತಿದ್ದಾರೆ. ಅದಕ್ಕೆ ಕಾರಣ ಸಮಾಜದಲ್ಲಿ ನಡೆಯುತ್ತಿರುವ ಸಂಗತಿಗಳು. ಕೆಲವರಿಗೆ ಹೆಣ್ಣುಮಕ್ಕಳನ್ನು ಕೀಳಾಗಿ ನೋಡುವ ಅಭ್ಯಾಸವೂ ಇದೆ. ಆದರೆ ಇವೆಲ್ಲವನ್ನೂ ಮೆಟ್ಟಿ ನಿಂತು ಬದುಕನ್ನು ಗೆಲ್ಲಲ್ಲು ಪೋಷಕರು ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಧೈರ್ಯ ತುಂಬಬೇಕು.

ಹೆಣ್ಣುಮಕ್ಕಳು ಭಯವಿಲ್ಲದೇ ಸ್ವಾವಲಂಬಿಯಾಗಿ ಬದುಕಲು ಪೋಷಕರು ಕಲಿಸಬೇಕಾದ ಪಾಠಗಳಿವು
ಹೆಣ್ಣುಮಕ್ಕಳು ಭಯವಿಲ್ಲದೇ ಸ್ವಾವಲಂಬಿಯಾಗಿ ಬದುಕಲು ಪೋಷಕರು ಕಲಿಸಬೇಕಾದ ಪಾಠಗಳಿವು

ಹೆಣ್ಣು ಹೆತ್ತ ಪೋಷಕರು ತಮ್ಮ ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು, ಈಗಲೂ ಅದು ಮುಂದುವರಿದಿದೆ. ಒಂದು ಕಾಲದಲ್ಲಿ ಹೆಣ್ಣು ಹೆತ್ತರೆ ಮಗಳ ಮದುವೆಯ ವಿಚಾರವಾಗಿ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ಇಂದು ಮಗಳ ಶಿಕ್ಷಣ, ಭದ್ರತೆ, ಸ್ವಾವಲಂಬನೆಯ ಚಿಂತೆ ಕಾಡುತ್ತಿದೆ. ಹೆಣ್ಣು ಮಗು ಜನಿಸಿತು ಎಂದಾಕ್ಷಣ ಹಲವರು ಚಿಂತೆ ಮಾಡಲು ಆರಂಭಿಸುತ್ತಾರೆ. ಅದಕ್ಕೆ ಮುಖ್ಯ ಕಾರಣ ಅಸುರಕ್ಷತೆ. ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣುಮಕ್ಕಳು ಸಮಾಜದಲ್ಲಿ ಸುರಕ್ಷಿತ ವಾತಾವರಣದಲ್ಲಿ ಬದುಕಬೇಕೆಂದು ಬಯಸುತ್ತಾರೆ. ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉನ್ನತ ಶಿಕ್ಷಣ ನೀಡುತ್ತಿದ್ದಾರೆ.

ಆದರೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಮಗಳು ಹೆತ್ತವರಿಂದ ದೂರ ಇರಬೇಕಾಗುತ್ತದೆ. ಓದಲು ಮನೆ ಬಿಟ್ಟು ಹೋಗಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯವು ಹಲವು ಪೋಷಕರು ಮಗಳ ಬಗ್ಗೆ ಚಿಂತಿತರಾಗುವಂತೆ ಮಾಡಿದೆ. ಆದರೆ ಚಿಂತೆ ಮಾಡುವ ಬದಲು ಮಗಳಿಗೆ ಧೈರ್ಯ ಕೊಟ್ಟು ಬದುಕುವಂತೆ ಮಾಡಬೇಕು. ಸುರಕ್ಷಿತವಾಗಿ ಬದುಕುವುದು ಹೇಗೆ ಎಂಬುದನ್ನು ಮಗಳಿಗೆ ಕಲಿಸಬೇಕು. ಹೆಣ್ಣುಮಕ್ಕಳಲ್ಲಿ ಧೈರ್ಯ ಬರಲು ಪೋಷಕರು ಮಗಳನ್ನು ಹೀಗೆ ಬೆಳೆಸಬೇಕು.

ತಮ್ಮಷ್ಟಕ್ಕೆ ಬೆಳೆಯಲು ಬಿಡಿ

ಮಕ್ಕಳನ್ನು ನೋಡಿಕೊಳ್ಳಲು ಪೋಷಕರು ಯಾವಾಗಲೂ ಜೊತೆಗೆ ಇರಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಕಾಳಜಿ ವಹಿಸಲು ಕಲಿಯಬೇಕು ಎಂದು ಅವರಿಗೆ ಅರಿವು ಮೂಡಿಸಬೇಕು. ಇತರರ ಸಹಾಯವಿಲ್ಲದೆ ತಮ್ಮನ್ನು ತಾವು ಹೇಗೆ ಕಾಳಜಿ ಮಾಡಿಕೊಳ್ಳಬೇಕು ಎಂಬುದನ್ನು ಕಲಿಸಬೇಕು. ಸಮಾಜದಲ್ಲಿ ಹೇಗೆ ಬದುಕಬೇಕು, ನಿಮಗಾಗಿ ಹೇಗೆ ಬದುಕಬೇಕು, ಉತ್ತಮ ಭವಿಷ್ಯಕ್ಕಾಗಿ ಏನು ಮಾಡಬೇಕು ಎಂಬೆಲ್ಲಾ ವಿಚಾರಗಳನ್ನು ಬಿಡಿಸಿ ಹೇಳಬೇಕು.

ಅಭಿಪ್ರಾಯಗಳಿಗೆ ಅವಕಾಶ ನೀಡಿ

ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಕಲಿಸಬೇಕು. ಅದಕ್ಕಾಗಿ, ನಿಮ್ಮ ಹೆಣ್ಣುಮಕ್ಕಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡಿ. ಚಿಕ್ಕ ವಯಸ್ಸಿನಿಂದಲೇ ನಿಮ್ಮ ಮಗಳ ಅಭಿಪ್ರಾಯವನ್ನು ಸ್ವೀಕರಿಸಿ. ಅವಳಿಗೆ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿ. ಬೇರೆಯವರ ಮೇಲೆ ಅವಲಂಬಿತರಾಗದೆ ಭವಿಷ್ಯದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಸಿ.

ಅವಳ ಹಕ್ಕುಗಳ ಬಗ್ಗೆ ತಿಳಿಸಿ ಹೇಳಿ

ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ತಾರತಮ್ಯ ಇರುವುದು ನಿಜ. ಆದರೆ ನಿಮ್ಮ ಮಗಳು ಆ ತಾರತಮ್ಯವನ್ನು ಎದುರಿಸಲು ಬಿಡದಿರಲು ಪ್ರಯತ್ನಿಸಿ. ಇದಕ್ಕಾಗಿ ಅವಳ ಹಕ್ಕುಗಳೇನು ಎಂದು ಅವರಿಗೆ ಕಲಿಸಿ. ಬಾಲ್ಯದಿಂದಲೇ ಅವಳ ಹಕ್ಕುಗಳಿಗಾಗಿ ಧ್ವನಿ ಎತ್ತುವುದನ್ನು ಕಲಿಸಬೇಕು.

ಸರಿ-ತಪ್ಪು ನಿರ್ಧಾರಗಳ ಬಗ್ಗೆ ತಿಳಿಸಿ

ಸರಿ ಮತ್ತು ತಪ್ಪು ನಿರ್ಧಾರಗಳ ಬಗ್ಗೆ ಮಗಳಿಗೆ ವಿವರಿಸಿ. ಅವರು ಸರಿಯಾದ ಮಾರ್ಗದಲ್ಲಿದ್ದರೆ ಹೇಗೆ ಗುರುತಿಸಬೇಕೆಂದು ವಿವರಿಸಿ. ಎಲ್ಲವನ್ನೂ ಎಚ್ಚರಿಕೆಯಿಂದ ಗಮನಿಸಲು ಹೇಳಿ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸರಿ-ತಪ್ಪು ಯಾವುದು ಎಂಬುದನ್ನು ವಿವೇಚಿಸಿ ನಿರ್ಧಾರ ತೆಗೆದುಕೊಳ್ಳುವುದನ್ನು ಬಾಲ್ಯದಿಂದಲೇ ಕಲಿಸಿ.

ಜವಾಬ್ದಾರಿ ಕಲಿಸಿ

ಇಂದಿನ ಯುವಜನತೆಗೆ ಜವಾಬ್ದಾರಿ ಕಡಿಮೆಯಾಗಿದೆ. ಇಂದಿನ ಪೀಳಿಗೆಯವರು ತಮ್ಮ ದುಸ್ಥಿತಿಗೆ ಇತರರನ್ನು ದೂಷಿಸಲು ಹಿಂಜರಿಯುವುದಿಲ್ಲ. ಅವರ ತಪ್ಪುಗಳ ಜವಾಬ್ದಾರಿಯನ್ನು ಅವರೇ ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿ. ಅವರ ಸಮಸ್ಯೆಗಳ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ಪ್ರೇರೇಪಿಸಿ.

ಸ್ವಾತಂತ್ರ್ಯ ನೀಡಿ

ಮಕ್ಕಳಿಗೆ ಬಾಲ್ಯದಿಂದಲೂ ಸ್ವಾತಂತ್ರ್ಯ ಕಲಿಸಿ. ಎಲ್ಲಾದರೂ ಹೋಗಬೇಕು ಎಂದುಕೊಂಡರೆ ಒಬ್ಬರೇ ಹೋಗಲು ಪ್ರೇರೇಪಿಸಿ, ತಮ್ಮ ಕೆಲಸಗಳನ್ನು ತಾವೇ ಸ್ವತಂತ್ರ್ಯವಾಗಿ ಮಾಡಲು ಕಲಿಸಿ. ಸ್ವಾತಂತ್ರ್ಯ ಅತಿಯಾಗದಂತೆಯೂ ಎಚ್ಚರ ವಹಿಸಿ. ಯಾಕೆಂದರೆ ಅತಿಯಾದ ಸ್ವಾತಂತ್ರ್ಯವು ಮಕ್ಕಳಲ್ಲಿ ಸ್ವೇಚ್ಛೆಗೆ ಕಾರಣವಾಗಬಹುದು. ಸ್ವಾತಂತ್ರ ನೀಡುವುದರಿಂದ ಮಕ್ಕಳು ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಸಕಾರಾತ್ಮಕ ಮನೋಭಾವ

ಪ್ರತಿಯೊಬ್ಬರ ಜೀವನವು ಒಳ್ಳೆಯ ಮತ್ತು ಕೆಟ್ಟ ಅನುಭವಗಳ ಮಿಶ್ರಣವಾಗಿದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಬಹಳ ಕಷ್ಟಕರವಾದ ಹಂತಗಳನ್ನು ದಾಟಬಹುದು. ಮಕ್ಕಳನ್ನು ಧನಾತ್ಮಕವಾಗಿ ನೋಡಲು ತರಬೇತಿ ನೀಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ಬದುಕನ್ನು ಕಾಪಾಡುವುದು ಭರವಸೆ ಎಂದು ಅವರಿಗೆ ಕಲಿಸಿ. ಜೀವನದಲ್ಲಿ ಸಣ್ಣ ವಿಷಯಗಳನ್ನು ಆನಂದಿಸಲು ಅವರನ್ನು ಪ್ರೋತ್ಸಾಹಿಸಿ.

ಒಳ್ಳೆಯ ನಡವಳಿಕೆ

ಯಾವುದೇ ಮಗುವಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಒಳ್ಳೆಯ ನಡವಳಿಕೆ. ಪಾಲಕರು ತಮ್ಮ ಮಕ್ಕಳಿಗೆ ಅಂತಹ ಮೌಲ್ಯಗಳನ್ನು ಮತ್ತು ಶಿಕ್ಷಣವನ್ನು ನೀಡಬೇಕು. ಇದರಿಂದ ಅವರು ಭವಿಷ್ಯದಲ್ಲಿ ಹಠಮಾರಿಗಳಾಗುವುದಿಲ್ಲ. ಹೆಣ್ಣು ಮಕ್ಕಳಿಗೆ ಹಿರಿಯರನ್ನು ಗೌರವಿಸಲು, ಹಿರಿಯರೊಂದಿಗೆ ಗೌರವದಿಂದ ಮಾತನಾಡಲು ಮತ್ತು ಕಿರಿಯರನ್ನು ಪ್ರೀತಿಸಲು ಕಲಿಸಬೇಕು.

ಈ ಎಲ್ಲಾ ಅಂಶಗಳನ್ನು ಪೋಷಕರು ಹೆಣ್ಣು ಮಕ್ಕಳಿಗೆ ನೀಡುವ ಮೂಲಕ ಅವರನ್ನು ಸ್ವಾತಂತ್ರ್ಯರನ್ನಾಗಿ ಬೆಳೆಸಬಹುದು. ಜೊತೆಗೆ ಸಮಾಜದಲ್ಲಿ ಅವರು ಧೈರ್ಯದಿಂದ ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಬಹುದು.