Star Fruit Benefits: ತೂಕ ಇಳಿಕೆಯಿಂದ ಹೃದಯದ ಆರೋಗ್ಯದವರೆಗೆ; ಸ್ಟಾರ್ ಫ್ರೂಟ್ ಸೇವಿಸೋದ್ರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ
Feb 14, 2024 07:15 AM IST
ತೂಕ ಇಳಿಕೆಯಿಂದ ಹೃದಯದ ಆರೋಗ್ಯದವರೆಗೆ; ಸ್ಟಾರ್ ಫ್ರೂಟ್ ಸೇವಿಸೋದ್ರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ
Star Fruit Benefits: ನಕ್ಷತ್ರದ ಆಕಾರದಲ್ಲಿ ಇರುವ ನಕ್ಷತ್ರ ಹಣ್ಣುಗಳನ್ನು ಎಂದಾದರೂ ಸವಿದಿದ್ದೀರೇ..? ಈ ಹಣ್ಣುಗಳ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯಲ್ಲಿ ಲಾಭವಿದೆ ಎಂದು ಒಮ್ಮೆ ತಿಳಿದರೆ ನೀವೆಂದಿಗೂ ಈ ಹಣ್ಣುಗಳನ್ನು ಸೇವಿಸದೇ ಇರಲಾರಿರಿ.
Star Fruit Benefits: ಕ್ಯಾರಂಬೋಲಾ ಎಂದು ಕರೆಯಲ್ಪಡುವ, ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್ ಎಂದೇ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಈ ಹಣ್ಣಿನ ಬಗ್ಗೆ ನೀವೂ ಕೇಳಿರುತ್ತೀರ, ಈ ಹಣ್ಣನ್ನು ಕತ್ತರಿಸಿದಾಗ ಥೇಟ್ ನಕ್ಷತ್ರದಂತೆ ಕಾಣುವುದರಿಂದ ಈ ಹಣ್ಣಿಗೆ ಸ್ಟಾರ್ ಫ್ರೂಟ್ ಎಂಬ ಹೆಸರು ಬಂದಿದೆ. ಇದರಲ್ಲಿರುವ ಹುಳಿ ಹಾಗೂ ಸಿಹಿ ಮಿಶ್ರಿತ ಸವಿಯು ಒಂದು ರೀತಿಯಲ್ಲಿ ಖುಷಿ ಎನಿಸುತ್ತದೆ. ಈ ಹಣ್ಣಿನ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದನ್ನು ನೀವು ಹಾಗೆಯೂ ತಿನ್ನಬಹುದು ಅಥವಾ ಜ್ಯೂಸ್ ಮಾಡಿಕೊಂಡು ಸಹ ಸೇವಿಸಬಹುದಾಗಿದೆ.
ನಕ್ಷತ್ರ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನಗಳು
ತೂಕ ಇಳಿಕೆ: ನೀವು ತೂಕ ಇಳಿಸಬೇಕು ಎಂದುಕೊಂಡಿದ್ದರೆ ಖಂಡಿತವಾಗಿ ನೀವು ಈ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿ ಇರುತ್ತದೆ. ಆದರೆ ಇದರಲ್ಲಿ ಹೆಚ್ಚು ನಾರಿನಂಶ ಇರುವ ಕಾರಣ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರಿಸುತ್ತದೆ. ಇದರಿಂದಾಗಿ ನೀವು ಅನಗತ್ಯ ತಿಂಡಿ ಸೇವಿಸುವುದನ್ನು ತಪ್ಪಿಸಬಹುದಾಗಿದೆ.
ಅಗಾಧ ಪೋಷಕಾಂಶ: ಸ್ಟಾರ್ ಹಣ್ಣುಗಳಲ್ಲಿ ಅಗಾಧ ಪ್ರಮಾಣದ ಪೋಷಕಾಂಶ ಇರುತ್ತದೆ. ವಿಟಮಿನ್ ಸಿ, ಪೊಟ್ಯಾಷಿಯಂ ಹಾಗೂ ಆಂಟಿ ಆಕ್ಸಿಡೆಂಟ್ಗಳು ಈ ಹಣ್ಣುಗಳಲ್ಲಿ ಅಗಾಧ ಪ್ರಮಾಣದಲ್ಲಿದೆ. ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಸ್ಟಾರ್ಫ್ರೂಟ್ ನೈಸರ್ಗಿಕವಾಗಿ ನಿಮಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇವುಗಳಲ್ಲಿ ಫೈಬರ್ ಅಂಶ ಅತ್ಯಧಿಕವಾಗಿದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಹಾಗೂ ಮಲಬದ್ಧತೆಯನ್ನು ತಡೆಯಲು ಈ ಹಣ್ಣು ಸಹಕಾರಿಯಾಗಿದೆ. ಈ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ನಿರ್ಜಲೀಕರಣ ತಪ್ಪಿಸುತ್ತದೆ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ದೇಹದಲ್ಲಿ ನೀರಿನಂಶ ಅಗಾಧ ಪ್ರಮಾಣದಲ್ಲಿ ಇರಬೇಕು. ಇದಕ್ಕೆ ನಿಮಗೆ ಸ್ಟಾರ್ ಫ್ರೂಟ್ ಸಹಾಯ ಮಾಡುತ್ತದೆ.ಇದರಿಂದ ನಿಮ್ಮ ಚರ್ಮದ ಆರೋಗ್ಯ ಕೂಡ ಸುಧಾರಿಸುತ್ತದೆ.
ಹೃದಯದ ಆರೋಗ್ಯ: ಸ್ಟಾರ್ ಫ್ರೂಟ್‌ಗಳಲ್ಲಿ ಇರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಪೊಟ್ಯಾಷಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡ ಹಾಗೂ ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಸಮಸ್ಯೆ ಹೊಂದಿರುವವರು ಈ ಹಣ್ಣುಗಳನ್ನು ಸೇವಿಸುವ ಮೂಲಕ ಅಪಾಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. ನಿತ್ಯ ಈ ಹಣ್ಣುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.