Angry AI Girlfriend: ಹೆಂಡತಿ ಜೊತೆ ಜಗಳ ನಿಭಾಯಿಸೋದು ಕಷ್ಟ ಆಗ್ತೀದಿಯಾ; ಪುರುಷರ ನೆರವಿಗೆ ಬರ್ತೀದೆ ಎಐ
Apr 26, 2024 05:14 PM IST
ಹೆಂಡತಿ ಜೊತೆ ಜಗಳ ನಿಭಾಯಿಸೋದು ಹೇಗೆ ಅಂತ ಪುರುಷರಿಗೆ ಪಾಠ ಮಾಡುವ ಉದ್ದೇಶವನ್ನು ಎಐ ಹೊಂದಿದೆ.
- ಜಗಳಗಂಟಿ ಹೆಂಡ್ತಿಯನ್ನು ನಿಭಾಯಿಸೋದು ಹೇಗೆ ಅಂತ ಯೋಚನೆ ಮಾಡುತ್ತಿರುವ ಪುರುಷರಿಗೆ ಸಿಹಿ ಸುದ್ದಿ ಇದೆ. ಪತ್ನಿ ಅಥವಾ ಗೆಳತಿಯೊಂದಿಗೆ ಜಗಳ ಅಥವಾ ಗಲಾಟೆಯನ್ನು ನಿಭಾಯಿಸೋದು ಹೇಗೆ ಅಂತ ಪುರುಷರಿಗೆ ಪಾಠ ಮಾಡಲು ಎಐ ಮುಂದಾಗಿದೆ.
ಒಂದಿಲ್ಲೊಂದು ವಿಚಾರವನ್ನು ಇಟ್ಟುಕೊಂಡು ಪ್ರತಿ ದಿನ ಪತಿಯೊಂದಿಗೆ ಪತ್ನಿ ಜಗಳ (Husband and Wife Conflict) ಮಾಡುವ ಸಾಕಷ್ಟು ಸಾಕಷ್ಟು ಪ್ರಕರಣಗಳು ಸಿಗುತ್ತವೆ. ಪತ್ನಿ ಜೊತೆ ಜಗಳವನ್ನು ಹೇಗಪ್ಪಾ ನಿಭಾಯಿಸೋದು ಅಂತ ಯೋಚಿಸುವ ಪುರುಷರು ನಮ್ಮ ನಡುವೆಯೇ ಇದ್ದಾರೆ. ಇದೀಗ ಇವರ ನೆರವಿಗೆ ಎಐ (Artificial Intelligence) ಬರುತ್ತಿದೆ. ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿರುವ ಎಐ ನಿಜ ಜೀವನದಲ್ಲಿ ಮನುಷ್ಯ ಅನುಭವಿಸುವ ಕಷ್ಟಕ್ಕೂ ಸ್ಪಂದಿಸಲು ಮುಂಗಾದಿದೆ.
ಎಐ ಚಾಟ್ಬಾಟ್‌ಗಳು (AI ChatBot) ಪ್ರಸ್ತುತ ಅಸಾಮಾನ್ಯವೇನಲ್ಲ. ಕೆಲವೊಂದು ಆ್ಯಪ್‌ಗಳು ಮನುಷ್ಯರೇ ಅಚ್ಚರಿಗೊಳಗಾಗುವ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದಕ್ಕೆ ಬೆಸ್ಟ್ ಉದಾಹಣೆ ಎಂದರೆ ಆಂಗ್ರಿಜಿಫ್ (angryGF App). ಈ ಅಪ್ಲಿಕೇಶನ್ ಮೂಲಕ ಗರ್ಲ್‌ಫ್ರೆಂಡ್ ಕೋಪಗೊಂಡರೆ ಅಥವಾ ಹೆಂಡತಿಯೊಂದಿಗೆ ಸಂಘರ್ಷವನ್ನು ಹೇಗೆ ನಿಭಾಯಿಸಬೇಕೆಂದು ಎಐ ಪುರುಷರಿಗೆ ಕಲಿಸುವ ಗುರಿಯನ್ನು ಹಾಕಿಕೊಂಡಿದೆ.
ವಿಶೇಷವಾಗಿ ಗೆಳತಿ ಅಥವಾ ಹೆಂಡತಿಯೊಂದಿಗಿನ ಸಂಬಂಧ ಸಂಘರ್ಷಗಳನ್ನು ನಿರ್ವಹಿಸಲು ಸಹಾಯ ಮಾಡಲು ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಆಂಗ್ರಿಜಿಎಫ್ ಆ್ಯಪ್ ಸಹ-ಸಂಸ್ಥಾಪಕ ಎಮಿಲಿಯಾ ಅವಿಲ್ಸ್ ಹೇಳಿದ್ದಾರೆ. ಮಹಿಳೆ ಕೋಪಗೊಂಡ ಸನ್ನಿವೇಶಗಳನ್ನು ಅಪ್ಲಿಕೇಶನ್ ಅನುಕರಿಸುತ್ತದೆ ಎಂದು ಅವರು ಹೇಳಿದರು.
ಎಐ ಚಾಟ್‌ಬಾಟ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಡೇಜ್ಡ್ ವರದಿಯ ಪ್ರಕಾರ, ಎಐಗೆ ವಿಭಿನ್ನ ಸನ್ನಿವೇಶಗಳು ಹಾಗೂ "ಕ್ಷಮೆಯ ಮಟ್ಟ" ವನ್ನು ಜೋಡಿಸಲಾಗುತ್ತದೆ. ಕೋಪಗೊಂಡ ಪತ್ನಿಯನ್ನು ಶಾಂತಗೊಳಿಸುವುದು ಮತ್ತು ಕ್ಷಮೆಯ ಮಟ್ಟವನ್ನು 100 ಕ್ಕೆ ತಲುಪಿಸುವುದು ಇದರ ಉದ್ದೇಶವಾಗಿದೆ. "ವಿಭಿನ್ನ ಪ್ರಯತ್ನಗಳು ಮತ್ತು ಪದಗಳು ಜಗಳ ಮಾಡುವ ಮಹಿಳೆಯರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಸೂಕ್ತ ಪದಗಳು ಆಕೆಯ ಮನಸ್ಥಿತಿಯನ್ನು ಸುಧಾರಿಸಬಹುದು ಮತ್ತು ಕ್ಷಮೆಯ ಮಟ್ಟವನ್ನು ಹೆಚ್ಚಿಸಬಹುದು. ಆದರೆ ಅನುಚಿತ ಪದಗಳು ಅವಳ ಮನಸ್ಥಿತಿಯನ್ನು ಹದಗೆಡಿಸಬಹುದು ಮತ್ತು ಕ್ಷಮೆಯ ಮಟ್ಟವನ್ನು ಕಡಿಮೆ ಮಾಡಬಹುದು" ಎಂದು ಡೇಜ್ಡ್‌ಗೆ ಅವಿಲ್ಸ್ ತಿಳಿಸಿದ್ದಾರೆ.
"ಈ ಗೇಮಿಫೈಡ್ ವಿಧಾನದ ಮೂಲಕ, ಆಂಗ್ರಿಜಿಎಫ್ ಬಳಕೆದಾರರಿಗೆ ಅಗತ್ಯ ಸಂಬಂಧ ಕೌಶಲ್ಯಗಳನ್ನು ಕ್ರಿಯಾತ್ಮಕ ಮತ್ತು ಆಕರ್ಷಕ ರೀತಿಯಲ್ಲಿ ಕಲಿಯಲು ಮತ್ತು ಪರಿಷ್ಕರಿಸಲು ಅಧಿಕಾರ ನೀಡುತ್ತದೆ" ಎಂದು ವಿವರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹೊಸ ಎಐ ಚಾಟ್‌ಬಾಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇದರ ಅಸ್ತಿತ್ವದ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
"ಆಂಗ್ರಿ ಜಿಎಫ್ ಎಐ ಅಪ್ಲಿಕೇಶನ್ (ಆಂಗ್ರಿ ಗರ್ಲ್ಫ್ರೆಂಡ್) ಇದೆ! ಇದು ನನಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಇದು ಮಹಿಳೆಯರೊಂದಿಗಿನ ಸಂಬಂಧದಲ್ಲಿ ನಿಮ್ಮನ್ನು ಉತ್ತಮಗೊಳಿಸುತ್ತದೆಯೇ?" ಎಂದು ಜಾಲತಾಣ ಎಕ್ಸ್‌ನಲ್ಲಿ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
"ಇದು ಉದ್ದೇಶಿತ ಫಲಿತಾಂಶಕ್ಕೆ ವಿರುದ್ಧವಾಗಿ ನೀಡುವ ಸಾಧ್ಯತೆಯಿದೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ."ನಿಜವಾದ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ನಾವು ಏಕೆ ಬಯಸುತ್ತೇವೆ?" ಎಂದು ಮೂರನೆಯವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ."ನಿಜವಾಗಿಯೂ ಇದು ತುಂಬಾ ವಿಲಕ್ಷಣವಾಗಿದೆ" ಎಂದು ನಾಲ್ಕನೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪ ರಾಜ, ಮಗ ಯುವರಾಜ; ಕೊಹ್ಲಿ-ಅಕಾಯ್ ಎಐ ಫೋಟೋಸ್
ಆಂಗ್ರಿಜಿಎಫ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಇದು ಬಳಕೆದಾರರಿಗೆ "ನಿಜ ಜೀವನದಲ್ಲಿ ಬಲವಾದ ಸಂಬಂಧದ ಬಂಧಗಳಿಗಾಗಿ ಎಐ ಸಂಗಾತಿಯನ್ನು ಸಮಾಧಾನಪಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು" ಸಹಾಯ ಮಾಡುವ ಅಪ್ಲಿಕೇಶನ್ ಆಗಿದೆ. ಇದು ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ತಮ್ಮ ಗೆಳತಿಯರು, ಹೆಂಡತಿಯರು ಅಥವಾ ಪಾಟ್ನರ್ ಜೊತೆಗಿನ ಸಂಘರ್ಷವನ್ನು ಹೇಗೆ ನಿಭಾಯಿಸಬೇಕೆಂದು ಜನರಿಗೆ ಕಲಿಸುವ ಗುರಿಯನ್ನು ಹೊಂದಿದೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದು ಕಾರ್ಯರೂಪಕ್ಕೆ ಬಂದ ನಂತರ ಗೊತ್ತಾಗಲಿದೆ.