ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ai Videos: ಎಐ ಆ್ಯಂಕರ್‌ ಸೌಂದರ್ಯಳನ್ನು ಪವರ್‌ ಟಿವಿ ಸೃಷ್ಟಿಸಿದ್ದು ಹೇಗೆ? ಕನ್ನಡ ಸುದ್ದಿ ಚಾನೆಲ್‌ನ ಸೌಂದರ್ಯಳ ಗುಟ್ಟುರಟ್ಟು

AI videos: ಎಐ ಆ್ಯಂಕರ್‌ ಸೌಂದರ್ಯಳನ್ನು ಪವರ್‌ ಟಿವಿ ಸೃಷ್ಟಿಸಿದ್ದು ಹೇಗೆ? ಕನ್ನಡ ಸುದ್ದಿ ಚಾನೆಲ್‌ನ ಸೌಂದರ್ಯಳ ಗುಟ್ಟುರಟ್ಟು

AI News Anchor: ಕನ್ನಡ ಸುದ್ದಿವಾಹಿನಿ ಪವರ್‌ ಟಿವಿಯು ಸೌಂದರ್ಯ ಎಂಬ ಎಐ ಆ್ಯಂಕರ್‌ಳನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಆದರೆ, ಇವಳು ಪೂರ್ಣಪ್ರಮಾಣದ ಎಐ ಸುದ್ದಿವಾಚಕಿಯಲ್ಲ. ಎಐ ತಂತ್ರಜ್ಞಾನ ಮತ್ತು ಹೊಸ ಸಾಧ್ಯತೆಗಳ ಕುರಿತು ಕನ್ನಡಿಗರ ಗಮನ ಸೆಳೆಯುವಂತಹ ಮತ್ತು ಅರಿವು ಮೂಡಿಸುವಂತಹ ಪ್ರಯತ್ನವನ್ನು ಪವರ್‌ ಟಿವಿ ಮಾಡಿದೆ.

AI videos: ಎಐ ಆ್ಯಂಕರ್‌ ಸೌಂದರ್ಯಳನ್ನು ಪವರ್‌ ಟಿವಿ ಸೃಷ್ಟಿಸಿದ್ದು ಹೇಗೆ
AI videos: ಎಐ ಆ್ಯಂಕರ್‌ ಸೌಂದರ್ಯಳನ್ನು ಪವರ್‌ ಟಿವಿ ಸೃಷ್ಟಿಸಿದ್ದು ಹೇಗೆ

ಬೆಂಗಳೂರು: ಕನ್ನಡ ಸುದ್ದಿ ವಾಹಿನಿಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪವರ್‌ ಟಿವಿಯು ಕೃತಕ ಬುದ್ಧಿಮತ್ತೆ ಬಳಸಿ ಸುದ್ದಿ ನಿರೂಪಣೆ ಮಾಡುವ ಪ್ರಯತ್ನ ಮಾಡಿದೆ. ಈ ಕುರಿತು ಸಾಕಷ್ಟು ಮೆಚ್ಚುಗೆಯ ಮಾತುಗಳು ಟೀಕೆಗಳು ಕೇಳಿಬರುತ್ತಿವೆ. ಪವರ್‌ ಟಿವಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಭಿವೃದ್ಧಿಪಡಿಸುವಂತಹ ಶಕ್ತಿ ಇರುವುದೇ, ಅದಕ್ಕೆ ಬೇಕಾದ ತಂತ್ರಜ್ಞರನ್ನು, ಪರಿಣಿತರನ್ನು ಅದು ಹೊಂದಿರುವುದೇ ಎಂಬ ಅನುಮಾನಗಳು ಬಹುತೇಕರಲ್ಲಿ ಮೂಡಿದ್ದವು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕನ್ನಡದ ಮೊದಲ ಎಐ ಆ್ಯಂಕರ್‌ ಕುರಿತು ಲೇಖನ ಪ್ರಕಟಿಸುವ ಸಂದರ್ಭದಲ್ಲಿ ಈ ಕುರಿತು ಪವರ್‌ ಟಿವಿ ತಂತ್ರಜ್ಞರನ್ನು ಮಾತನಾಡಿಸಿತ್ತು. ಈ ಸಂದರ್ಭದಲ್ಲಿ ಪವರ್‌ ಟಿವಿಯು ಯಾವುದೇ ಸುಳ್ಳು ಹೇಳದೆ "ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಟೂಲ್‌ ಬಳಸಿ ನಿರ್ಮಿಸಲಾದ ಆ್ಯಂಕರ್‌" ಎಂದು ಸ್ಪಷ್ಟಪಡಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಡೀಪ್‌ಬ್ರೇನ್‌ ಎಂಬ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೀಡುವ ಟೂಲ್‌ ಬಳಸಿ ಈ ಆ್ಯಂಕರ್‌ಳನ್ನು ನಿರ್ಮಿಸಲಾಗಿದೆ ಎಂದು ಪವರ್‌ ಟಿವಿ ಸ್ಪಷ್ಟಪಡಿಸಿದೆ. ವಿಶೇಷವೆಂದರೆ, ಈ ಟೂಲ್‌ ಬಳಸಿ ಯಾರು ಬೇಕಾದರೂ ಉಚಿತವಾಗಿ (ಪಾವತಿ ಸೇವೆಯೂ ಇದೆ) ಈ ರೀತಿಯ ಎಐ ಆಂಕರ್‌ಳನ್ನು ನಿರ್ಮಿಸಿಕೊಳ್ಳಬಹುದು. ಅಂದಹಾಗೆ, ಪವರ್‌ ಟಿವಿ ಚಾನೆಲ್‌ ಬಳಸಿದ ಸೌಂದರ್ಯಳ ಮುಖವು ಈ ಟೂಲ್‌ನ ಡಿಫಾಲ್ಟ್‌ ಅವತಾರ. ಇಂತಹ ಎಐ ಟೂಲ್‌ ಬಳಸಿ ಕನ್ನಡಿಗರಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಷೇತ್ರದ ಕುರಿತು ಮಾಹಿತಿ ನೀಡುವ ಕೆಲಸವನ್ನು ಪವರ್‌ ಟಿವಿ ಮಾಡಿದೆ. ಈ ಮೂಲಕ ಹೊಸ ತಂತ್ರಜ್ಞಾನಲ್ಲಿ "ವಾಹ್‌, ಏನಿದು?ʼ ಎಂಬ ಕುತೂಹಲ ಮೂಡಿಸಿದೆ.

ಉಚಿತವಾಗಿ ನೀವೂ ಬಳಸಬಹುದು

ಪವರ್‌ಟಿವಿ ಬಳಸಿರುವ ತಂತ್ರಜ್ಞಾನವನ್ನು ಯಾರೂ ಬೇಕಾದರೂ ಬಳಸಬಹುದು. www.deepbrain.io ಎಂಬ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಕ್ರಿಯೆಟ್‌ ಆಯ್ಕೆಯ ಮೂಲಕ ನೀವು ನಿಮ್ಮ ಎಐ ವಿಡಿಯೋ ರಚಿಸಿಕೊಳ್ಳಬಹುದು. ಇದರ ಮೂಲಕ ಅಕ್ಷರಗಳನ್ನು ವಿಡಿಯೋ ಧ್ವನಿಯಾಗಿ, ಅಥವಾ ಹಿನ್ನೆಲೆ ಧ್ವನಿಯನ್ನು ನೀಡುವ ಮೂಲಕ ಸುದ್ದಿ ವಾಚನ ಮಾಡಿಸಬಹುದು. ಮಾರ್ಕೆಟಿಂಗ್‌ ಇತ್ಯಾದಿ ವಿಡಿಯೋಗಳನ್ನು ರಚಿಸಿಕೊಳ್ಳಲು ಇದು ಉಪಯೋಗವಾಗಬಹುದು.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಪವರ್‌ ಟಿವಿಯ ಟೆಕ್‌ ವಿಭಾಗವನ್ನು ನಿನ್ನೆ ಸಂಪರ್ಕಿಸಿತ್ತು. ಇದು ಡೀಪ್‌ ಬ್ರೇನ್‌ ಎಂಬ ಎಐ ಟೂಲ್‌ ಬಳಸಿ ನಿರ್ಮಿಸಿದ ವಿಡಿಯೋವಾಗಿದೆ. ನಮ್ಮ ಆಂಕರ್‌ಗಳೇ ಇದಕ್ಕೆ ಧ್ವನಿ ನೀಡಿದ್ದಾರೆ. ಇದು ಜನರಲ್ಲಿ ಎಐ ಕುರಿತು ಅರಿವು ಮೂಡಿಸುವ ಒಂದು ಪ್ರಯತ್ನ" ಎಂದು ಮಾಹಿತಿ ನೀಡಿತ್ತು. ನಿನ್ನೆ ಸಂಜೆ ನಡೆದ ಸುದ್ದಿ ಕಾರ್ಯಕ್ರಮದಲ್ಲಿಯೂ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ವಿಡಿಯೋ ಟೂಲ್‌ಗಳನ್ನು ಬಳಸಿ ಯಾವ ರೀತಿ ವಿಡಿಯೋ ರಚಿಸಬಹುದು, ಯಾವೆಲ್ಲ ವೆಬ್‌ಗಳು ಲಭ್ಯ ಇವೆ" ಇತ್ಯಾದಿ ಮಾಹಿತಿಯನ್ನು ಚಂದನ್‌ ಶರ್ಮಾ ತನ್ನ ಟಿವಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದರು.

ಎಐ ಅರಿವು ಮೂಡಿಸಿದ ಪವರ್‌ ಟಿವಿ

ಈಗಾಗಲೇ ಲೀಸಾ ಅಥವಾ ಅಜ್‌ತಕ್‌ನ ಸನಾ ಮುಂತಾದ ಎಐ ಆ್ಯಂಕರ್‌ಗಳು ಈ ರೀತಿ ಸೃಷ್ಟಿಯಾಗಿರುವುದಲ್ಲ. ಅವು ಪರಿಪೂರ್ಣ ಎಐ ತಂತ್ರಜ್ಞಾನವನ್ನು ಸುದ್ದಿ ಮಾಧ್ಯಮಕ್ಕಾಗಿ ಅಭಿವೃದ್ಧಿಪಡಿಸಿದ ಎಐಗಳು. ಪವರ್‌ ಟಿವಿಯ ಸೌಂದರ್ಯಳ ಅವತಾರ್‌ಗೆ ಹಿನ್ನೆಲೆ ಧ್ವನಿಯನ್ನು ಮನುಷ್ಯರು ನೀಡಬೇಕು. ಆದರೆ, ಲೀಸಾ, ಸನಾ ಮುಂತಾದ ಎಐ ಆಂಕರ್‌ಗಳು ಡೇಟಾವನ್ನು ಅರ್ಥಮಾಡಿಕೊಂಡು, ಅನುವಾದ ಮಾಡಿಕೊಂಡು ಸ್ವಯಂ ಆಂಕರಿಂಗ್‌ ಮಾಡುವ ಸಾಮರ್ಥ್ಯ ಹೊಂದಿವೆ. ಡೀಪ್‌ಬ್ರೇನ್‌ ಇತ್ಯಾದಿ ತಂತ್ರಜ್ಞಾನ ಬಳಸಿ ಈ ಸೌಂದರ್ಯಳನ್ನು ನಿರ್ಮಿಸಲಾಗಿದೆ ಎಂದು ಪವರ್‌ ಟಿವಿಯು ನಿನ್ನೆಯ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿತ್ತು.

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌

ಈಗ ಕೃತಕ ಬುದ್ಧಿಮತ್ತೆಯು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಸೌಂದರ್ಯಳ ಮೂಲಕ ಪವರ್‌ ಟಿವಿಯು ಇದರ ಬಳಕೆಯ ಹೊಸ ಸಾಧ್ಯತೆಯನ್ನು ಬಿಚ್ಚಿಟ್ಟಿದೆ. ಜತೆಗೆ, ಸಾಮಾನ್ಯ ಜನರಿಗೂ "ಇಂತಹ ತಂತ್ರಜ್ಞಾನ ಆಗಮಿಸಿದೆ" ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ಡೀಪ್‌ಬ್ರೇನ್‌ನಂತಹ ಹಲವು ಉಚಿತ ಎಐ ಟೂಲ್‌ಗಳು ಈಗ ಲಭ್ಯವಿದೆ. ಇವುಗಳನ್ನು ಬಳಸಿ ನೀವೂ ಕೂಡ ಇಂತಹ ವಿಡಿಯೋ ರಚಿಸಲು ಪ್ರಯತ್ನಿಸಬಹುದು.

ಜನರೇಟಿವ್‌ ಎಐ, ಡೀಪ್‌ಫೇಕ್‌, ಮೆಷಿನ್‌ ಲರ್ನಿಂಗ್‌, ಚಾಟ್‌ ಜಿಪಿಟಿ ಎಲ್ಲವೂ ಇಂದಿನ ಮತ್ತು ಭವಿಷ್ಯದ ತಂತ್ರಜ್ಞಾನಗಳಾಗಿದ್ದು, ಡಿಜಿಟಲ್‌ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡುವ ಸಾಧ್ಯತೆಯಿದೆ.

IPL_Entry_Point