ರಣವೀರ್ ಅಲ್ಲಾಬಾಡಿಯಾನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಯ್ತು; ತಿಂಗಳಿಗೆ 35 ಲಕ್ಷ ರೂಪಾಯಿ ನೀಡುತ್ತಿದ್ದ ಚಿನ್ನದ ಕೋಳಿ ಮಟಾಶ್
Sep 26, 2024 05:37 PM IST
ರಣವೀರ್ ಅಲ್ಲಾಬಾಡಿಯಾನ ಯೂಟ್ಯೂಬ್ ಚಾನೆಲ್ ಹ್ಯಾಕ್
- Ranveer Allahbadia Youtube Hacked: ಭಾರತದ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ನಡೆಸುತ್ತಿದ್ದ ಚಾನೆಲ್ ಹ್ಯಾಕ್ ಆಗಿದೆ. ತಿಂಗಳಿಗೆ ಕಡಿಮೆಯೆಂದರೂ ತನ್ನ ಯೂಟ್ಯೂಬ್ ಚಾನೆಲ್‌ಗಳಲ್ಲಿ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಇದು ನನ್ನ ಕರಿಯರ್‌ನ ಅಂತ್ಯವೇ ಎಂದು ಯೂಟ್ಯೂಬರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Ranveer Allahbadia Youtube Hacked: ಭಾರತದ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಇತ್ತೀಚಿನ ಸೈಬರ್ ದಾಳಿಯ ಬಲಿಪಶುವಾಗಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್‌ಗಳು ಹ್ಯಾಕ್ ಆಗಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಪ್ರಮುಖವಾಗಿ BeerBiceps ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಈ ಚಾನೆಲ್‌ನ ಹೆಸರನ್ನು ಹ್ಯಾಕರ್‌ಗಳು @Elon.trump.tesla_live2024 ಮತ್ತು ಇವರ ಪರ್ಸನಲ್ ಚಾನೆಲ್ ಹೆಸರನ್ನು @Tesla.event.trump_2024 ಎಂದು ಬದಲಾಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರು ಇಲ್ಲಿಯವರೆಗೆ ಮಾಡಿರುವ ಬಹುತೇಕ ಸಂದರ್ಶನಗಳು ಮತ್ತು ಪಾಡ್‌ಕಾಸ್ಟ್ ವಿಡಿಯೋಗಳನ್ನು ಹ್ಯಾಕರ್‌ಗಳು ಡಿಲೀಟ್ ಮಾಡಿದ್ದಾರೆ. ಈ ಮೂಲಕ ಗೂಗಲ್‌ಗೆ ಅರ್ಜಿ ಸಲ್ಲಿಸಿ ಚಾನೆಲ್ ರಿಕವರಿ ಮಾಡುವ ಆಸೆಯೂ ಬತ್ತಿ ಹೋಗಿದೆ. ಇದು ನನ್ನ ಕರಿಯರ್‌ನ ಅಂತ್ಯವೇ ಎಂದು ಬೇಸರದಲ್ಲಿ ರಣವೀರ್ ಅಲ್ಲಾಬಾಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್‌ನಲ್ಲಿದ್ದ ವಿಡಿಯೋಗಳು ಮಾಯ
ರಣವೀರ್ ಅಲ್ಲಾಬಾಡಿಯಾ ಹಲವು ಸೆಲೆಬ್ರಿಟಿಗಳೊಂದಿಗೆ ಸಂದರ್ಶನ ನಡೆಸುತ್ತಿದ್ದರು. ಹಲವು ಪಾಡ್‌ಕಾಸ್ಟ್ ನಡೆಸುತ್ತಿದ್ದರು. ಈ ವಿಡಿಯೋಗಳೆನ್ನೆಲ್ಲ ಆನ್‌ಲೈನ್ ಖದೀಮರು ಡಿಲೀಟ್ ಮಾಡಿದ್ದಾರೆ. ಈ ವಿಡಿಯೋಗಳ ಬದಲು ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ವಿಡಿಯೋಗಳನ್ನು ಹಾಕಿದ್ದಾರೆ. ಇದೀಗ ಯೂಟ್ಯೂಬ್ ಈ ಚಾನೆಲ್ ಅನ್ನು ಡೌನ್ ಮಾಡಿದೆ. ಈ ಪುಟ ಲಭ್ಯವಿಲ್ಲ ಎಂಬ ಸಂದೇಶ ಬರುತ್ತದೆ.
ರಣವೀರ್ ಅಲ್ಲಾಬಾಡಿಯಾ ಅವರು ಸಿಂಗಾಪುರದಲ್ಲಿದ್ದರು. ಬಳಿಕ ಮುಂಬೈಗೆ ಬಂದಿದ್ದರು. ತನ್ನ ಚಾನೆಲ್ ಹ್ಯಾಕ್ ಆಗಿರುವ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಇನ್‌ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಮತ್ತು ಸೂಚ್ಯವಾಗಿ ಪರಿಸ್ಥಿತಿಯ ಕುರಿತು ತಿಳಿಸಿದಾರೆ. "ನನ್ನ ಎರಡು ಪ್ರಮುಖ ಚಾನೆಲ್‌ಗಳು ಹ್ಯಾಕ್ ಆಗಿವೆ. ವೀಗನ್ ಬರ್ಗರ್ಸ್, ಬೀರ್‌ಬೈಸೆಪ್ಸ್ ಚಾನೆಲ್‌ಗಳು ಹ್ಯಾಕ್ ಆಗಿವೆ" ಎಂದು ಅವರು ಹೇಳಿದ್ದಾರೆ. "ಇದು ನನ್ನ ಯೂಟ್ಯೂಬ್ ಕರಿಯರ್‌ನ ಅಂತ್ಯವೇ?" ಎಂದು ಕೇಳಿದ್ದಾರೆ. ಇದೇ ಸಮಯದಲ್ಲಿ ಇವರು ಎಲಾನ್ ಮಸ್ಕ್ ಜತೆಗಿನ ಸೆಲ್ಫಿ ಫೋಟೋವನ್ನೂ ಹಾಕಿದ್ದಾರೆ. ಈ ಮೂಲಕ ವ್ಯಂಗ್ಯವಾಗಿ ತನ್ನ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಅನ್ನು ಅಲ್ಲಾಬಾಡಿಯಾರಿಗೆ ರಿಕವರ್ ಮಾಡಲು ಸಾಧ್ಯವಿದೆಯೇ ಎನ್ನುವ ಕುರಿತು ಸ್ಪಷ್ಟತೆ ಇಲ್ಲ.
ಯಾರಿವರು ರಣವೀರ್ ಅಲ್ಲಾಬಾಡಿಯಾ?
ಇವರು ಮುಂಬೈನಲ್ಲಿ 1993ರ ಜೂನ್ 2ರಂದು ಜನಿಸಿದರು. ಮುಂಬೈನ ಧೀರುಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಹಳೆ ವಿದ್ಯಾರ್ಥಿ. ದ್ವಾರಕದಾಸ್ ಜೀವನ್‌ಲಾಲ್ ಶಾಂಘ್ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2022ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ಏಷ್ಯಾದ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಭಾರತದ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ತನ್ನ 22ನೇ ವಯಸ್ಸಿನಲ್ಲಿ ಯೂಟ್ಯೂಬ್‌ನಲ್ಲಿ ಕಂಟೆಂಟ್ ರಚನೆ ಆರಂಭಿಸಿದ್ದರು. ಬೀರ್‌ಬೈಸೆಪ್ಸ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಕರಿಯರ್ ಆರಂಭಿಸಿದ್ದರು. ಇವರು ಒಟ್ಟು 7 ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ. 12 ದಶಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಜನಪ್ರಿಯ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುವ ಮೂಲಕ ಇತ್ತೀಚೆಗೆ ಇವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು.
ರಣವೀರ್ ಅಲ್ಲಾಬಾಡಿಯಾ ಸಂಪತ್ತು, ಆದಾಯ ವಿವರ
ರಣವೀರ್ ಅವರು "ದಿ ರಣವೀರ್ ಶೋ" ಎಂಬ ಪಾಡ್‌ಕಾಸ್ಟ್ ನಡೆಸುತ್ತಿದ್ದರು. ಇವರು ಮಾಂಕೆ ಎಂಟರ್‌ಟೇನ್‌ಮೆಂಟ್‌ನ ಸಹ ಸ್ಥಾಪಕರು. ಇದು ಜನಪ್ರಿಯ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಮತ್ತು ಇನ್‌ಫ್ಲೂಯೆನ್ಸರ್ ಮಾರ್ಕೆಟಿಂಗ್ ಏಜೆನ್ಸಿಯಾಗಿದೆ. ವರದಿಗಳ ಪ್ರಕಾರ ಇವರ ನಿವ್ವಳ ಸಂಪತ್ತು 58 ಕೋಟಿ ರೂಪಾಯಿ. ಹಲವು ವರದಿಗಳು ಇವರ ಯೂಟ್ಯೂಬ್ ಆದಾಯದ ಕುರಿತು ಮಾಹಿತಿ ನೀಡಿವೆ. ರಣವೀರ್ ಅಲ್ಲಾಬಾಡಿಯಾ ಅವರು ತನ್ನ ಬೀರ್‌ಬೈಸೆಪ್ಸ್ ಮತ್ತು ಇತರೆ ಚಾನೆಲ್‌ಗಳ ಮೂಲ ತಿಂಗಳಿಗೆ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದು ತಿಳಿಸಿವೆ. ಇದರೊಂದಿಗೆ ಇವರು ಹಲವು ಬ್ರ್ಯಾಂಡ್ ಪ್ರಮೋಷನ್‌ಗಳನ್ನೂ ಮಾಡುತ್ತಾರೆ. ಇವರ ಇತರೆ ಆದಾಯಗಳ ಕುರಿತು ಮಾಹಿತಿ ಲಭ್ಯವಿಲ್ಲ. ಯೂಟ್ಯೂಬ್‌ನ ಸಂಪಾದನೆಯೇ ಇಷ್ಟೊಂದು ಇರುವಾಗ ತನ್ನ ಏಜೆನ್ಸಿ ಹಾಗೂ ಇತರೆ ವ್ಯವಹಾರಗಳ ಮೂಲಕವೂ ಹಲವು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರಬಹುದು ಎನ್ನಲಾಗಿದೆ. ಒಟ್ಟಾರೆ, ಇಂಟರ್‌ನೆಟ್ ಜಗತ್ತಿನಲ್ಲಿ ಸಾಕಷ್ಟು ಜನರು ಡಿಜಿಟಲ್ ಕಂಟೆಂಟ್ ಕ್ರಿಯೆಟರ್‌ಗಳಾಗಿ ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ.