logo
ಕನ್ನಡ ಸುದ್ದಿ  /  ಜೀವನಶೈಲಿ  /  ಆಪಲ್‌ ವಾಚ್‌ನಿಂದಲೇ ಪ್ರೆಗ್ನೆನ್ಸಿ ಪತ್ತೆ, ಗರ್ಭಿಣಿಯರಿಗೆ ಆಪತ್ಬಾಂಧವ ಈ ಕೈಗಡಿಯರ; ವೈದ್ಯರು ನೀಡಿರುವ ವಿವರಣೆ ಕೇಳಿದ್ರೆ ಅಚ್ಚರಿ ಖಾತ್ರಿ

ಆಪಲ್‌ ವಾಚ್‌ನಿಂದಲೇ ಪ್ರೆಗ್ನೆನ್ಸಿ ಪತ್ತೆ, ಗರ್ಭಿಣಿಯರಿಗೆ ಆಪತ್ಬಾಂಧವ ಈ ಕೈಗಡಿಯರ; ವೈದ್ಯರು ನೀಡಿರುವ ವಿವರಣೆ ಕೇಳಿದ್ರೆ ಅಚ್ಚರಿ ಖಾತ್ರಿ

Praveen Chandra B HT Kannada

Sep 26, 2024 12:31 PM IST

google News

ಆಪಲ್‌ ವಾಚ್‌ ಪ್ರೆಗ್ನೆನ್ಸಿ ಟ್ರ್ಯಾಕಿಂಗ್‌ ಫೀಚರ್‌ ಗರ್ಭಿಣಿಯರಿಗೆ ಹೇಗೆ ನೆರವು ನೀಡುತ್ತದೆ ಎಂದು ವೈದ್ಯರು ಇಲ್ಲಿ ವಿವರಿಸಿದ್ದಾರೆ.

  • Apple watch pregnancy tracking: ಆಪಲ್‌ ಕಂಪನಿಯ ಕ್ಲಿನಿಕಲ್‌ ತಂಡದಲ್ಲಿ ವೈದ್ಯರಾಗಿರುವ ಡಾ. ಲಾರೆನ್ ಚೆಯುಂಗ್ ಜತೆಗೆ ಎಚ್‌ಟಿ ಟೆಕ್‌ ನಡೆಸಿದ ಸಂದರ್ಶನದಲ್ಲಿ ಆಪಲ್‌ ವಾಚ್‌ನ ಅದ್ಭುತ ಪ್ರೆಗ್ನೆನ್ಸಿ ಫೀಚರ್‌ಗಳ ಮಾಹಿತಿ ದೊರಕಿದೆ. ಆಪಲ್‌ ವಾಚ್‌ ಗರ್ಭಿಣಿಯರಿಗೆ ಹೇಗೆ ಆಪ್ತ ಸಂಗಾತಿಯಾಗಬಲ್ಲದು ಎಂದು ತಿಳಿದುಕೊಳ್ಳೋಣ ಬನ್ನಿ.

ಆಪಲ್‌ ವಾಚ್‌ ಪ್ರೆಗ್ನೆನ್ಸಿ ಟ್ರ್ಯಾಕಿಂಗ್‌ ಫೀಚರ್‌ ಗರ್ಭಿಣಿಯರಿಗೆ ಹೇಗೆ ನೆರವು ನೀಡುತ್ತದೆ ಎಂದು ವೈದ್ಯರು ಇಲ್ಲಿ ವಿವರಿಸಿದ್ದಾರೆ.
ಆಪಲ್‌ ವಾಚ್‌ ಪ್ರೆಗ್ನೆನ್ಸಿ ಟ್ರ್ಯಾಕಿಂಗ್‌ ಫೀಚರ್‌ ಗರ್ಭಿಣಿಯರಿಗೆ ಹೇಗೆ ನೆರವು ನೀಡುತ್ತದೆ ಎಂದು ವೈದ್ಯರು ಇಲ್ಲಿ ವಿವರಿಸಿದ್ದಾರೆ.

Apple watch pregnancy tracking: ಆಪಲ್‌ ವಾಚ್‌ ಈಗಾಗಲೇ ಸಾಕಷ್ಟು ಜನರ ಜೀವ ಉಳಿಸಿ ಟೆಕ್‌ ಪ್ರಿಯರ ಮನಗೆದ್ದಿದೆ. ಟ್ರೆಂಡಿ ಗ್ಯಾಜೆಟ್‌ನಿಂದ ನಿರ್ಣಾಯಕ ಆರೋಗ್ಯ ಟ್ರ್ಯಾಕಿಂಗ್‌ ಸಾಧನವಾಗಿ ನಿಧಾನವಾಗಿ ಆಪಲ್‌ ವಾಚ್‌ ವಿಕಸನಗೊಳ್ಳುತ್ತಿದೆ. ಈಗಾಗಲೇ ಆಪಲ್‌ ವಾಚ್‌ನ “ಹೃದಯದ ಆರೋಗ್ಯ ಟ್ರ್ಯಾಕಿಂಗ್‌ ವ್ಯವಸ್ಥೆ” ಎಲ್ಲರ ಮನಗೆದ್ದಿದೆ. ನಮ್ಮ ಜೀವವನ್ನು ಹೇಗೆ ಆಪಲ್‌ ವಾಚ್‌ ಉಳಿಸಿತು ಎಂದು ಸಾಕಷ್ಟು ಜನರು ಈಗಾಗಲೇ ಮಾಹಿತಿ ನೀಡಿದ್ದಾರೆ. ಈಗ ಆಪಲ್‌ ವಾಚ್‌ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಆಪಲ್‌ ವಾಚ್‌ನಲ್ಲಿ ಗರ್ಭಧಾರಣೆಯನ್ನೂ ಟ್ರ್ಯಾಕ್‌ ಮಾಡಬಹುದು. ಅಷ್ಟು ಮಾತ್ರವಲ್ಲ ಕ್ಲಿನಿಕಲ್‌ ಪರೀಕ್ಷೆಗೆ ಮುನ್ನವೇ ಮಹಿಳೆಯರು ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಆಪಲ್‌ ವಾಚ್‌ ಮಹಿಳೆಯರ ಆರೋಗ್ಯದ ಮೇಲೆ ವಿಶೇಷ ನಿಗಾ ಇಡುತ್ತದೆ. ಗರ್ಭಧಾರಣೆ ಪತ್ತೆಯಾದ ಬಳಿಕವಂತೂ ಗರ್ಭಿಣಿಯ ಆರೋಗ್ಯದ ಮೇಲೆ ವಿಶೇಷ ನಿಗಾ ಇಡುತ್ತದೆ. ಹೀಗಾಗಿ, ಗರ್ಭಿಣಿಯರಿಗೆ ಆಪಲ್‌ ವಾಚ್‌ ಆಪತ್ಬಾಂಧವ ಎನ್ನಬಹುದು.

ಆಪಲ್‌ ವಾಚ್‌ನ ಪ್ರೆಗ್ನೆನ್ಸಿ ಫೀಚರ್‌ಗಳು

ಆಪಲ್‌ ವಾಚ್‌ ಗರ್ಭಿಣಿಯರಿಗೆ ಹೇಗೆ ನೆರವಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಹೊಸ ವಾಚ್‌ಒಎಸ್‌ 11, ಐಒಎಸ್‌ 18 ಮತ್ತು ಐಪ್ಯಾಡ್‌ಒಎಸ್‌ 18 ಸಾಫ್ಟ್‌ವೇರ್‌ಗಳು ಗರ್ಭಿಣಿಯರಿಗೆ ಹೆಚ್ಚುವರಿ ಬೆಂಬಲ ನೀಡುತ್ತವೆ. ಗರ್ಭಿಣಿಯರ ದೈಹಿಕ, ಮಾನಸಿಕ ಆರೋಗ್ಯದ ಬದಲಾವಣೆಗಳನ್ನು ಈ ಆಪಲ್‌ ವಾಚ್‌ಗಳು ಗುರುತಿಸುತ್ತವೆ. ಬಳಕೆದಾರರರು ಐಫೋನ್‌ ಅಥವಾ ಐಪ್ಯಾಡ್‌ನಲ್ಲಿರುವ ಹೆಲ್ತ್‌ ಅಪ್ಲಿಕೇಷನ್‌ನಲ್ಲಿ ಲಾಗ್‌ ಮಾಡಿ ತಮ್ಮ ಗರ್ಭಧಾರಣೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳಬಹುದು. ಗರ್ಭಧಾರಣೆಯ ವಯಸ್ಸು (gestational age) ತಿಳಿಯಬಹುದು. ಗರ್ಭಾವಸ್ಥೆಯಲ್ಲಿ ಹೊಂದಿರುವ ರೋಗಲಕ್ಷಣಗಳನ್ನು ತಿಳಿಯಬಹುದು. ಗರ್ಭಾವಸ್ಥೆಯಲ್ಲಿ ಹೃದಯ ಬಡಿತವು ಹೆಚ್ಚಾಗುವುದರಿಂದ ಗರ್ಭಿಣಿಯರ ಹೃದಯದ ಬಡಿತದ ಮೇಲೆ ವಿಶೇಷ ನಿಗಾ ಇಡುತ್ತದೆ.

ಐಫೋನ್‌ ಅಥವಾ ಐಪ್ಯಾಡ್‌ನಲ್ಲಿರುವ ಹೆಲ್ತ್‌ ಆಪ್‌ನಲ್ಲಿ ಗರ್ಣಿಣಿಯರು ಮಾಸಿಕ ಆಧಾರದಲ್ಲಿ ತಮ್ಮ ಮಾನಸಿಕ ಆರೋಗ್ಯದ ಮೌಲ್ಯಮಾಪನ ವರದಿಯನ್ನೂ ಪಡೆಯಬಹುದು. ಪ್ರೆಗ್ನೆನ್ಸಿ ಸಮಯದಲ್ಲಿ ಖಿನ್ನತೆಯಂತ ಸ್ಥಿತಿಯನ್ನು ಹೆಚ್ಚಾಗಿ ಅನುಭವಿಸುವವರಿಗೆ ಇದು ಅನುಕೂಲ. ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ (trimester) ಜಾರಬಹುದಾದ ಸೂಚನೆಯನ್ನೂ ಆಪಲ್‌ ವಾಚ್‌ ನೀಡಬಹುದು. ಈ ಸಮಯದಲ್ಲಿ  ಬೀಳುವುದು ಹೆಚ್ಚು. ಆಪಲ್‌ ವಾಚ್‌ನಲ್ಲಿ ಮೊದಲೇ ಸೂಚನೆ ದೊರಕಿದರೆ ಗರ್ಭಿಣಿಯರು ಹೆಚ್ಚುವರಿ ಕಾಳಜಿ ವಹಿಸಬಹುದು.

ಮೊದಲ ಬಾರಿಗೆ ಗರ್ಭಿಣಿಯಾಗುವವರಿಗೆ ಕೈಯಲ್ಲಿರುವ ಆಪಲ್‌ ವಾಚ್‌ ಹೇಗೆ ಪ್ರಯೋಜನಕಾರಿ ಎಂದು ಡಾ. ಲಾರೆನ್ ಚೆಯುಂಗ್ ಎಚ್‌ಟಿ ಟೆಕ್‌ (ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪತ್ರಿಕೆ) ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಡಾ. ಲಾರೆನ್ ಚೆಯುಂಗ್ ಅವರು ಆಫಲ್‌ನ ಕ್ಲಿನಿಕಲ್‌ ತಂಡದ ಇಂಟರ್ನಲ್‌ ಮೆಡಿಸಿನ್‌ ವೈದ್ಯರಾಗಿದ್ದಾರೆ.

ಪ್ರಶ್ನೆ?: ಆಪಲ್‌ ವಾಚ್‌ನಲ್ಲಿ ಹೊಸ ಫೀಚರ್‌ ಅಭಿವೃದ್ಧಿಪಡಿಸಲು ಆಪಲ್‌ ಕ್ಲಿನಿಕಲ್‌ ತಂಡವು ಸಾಫ್ಟ್‌ವೇರ್, ಹಾರ್ಡ್‌ವೇರ್ ಮತ್ತು ಇತರ ಪ್ರಮುಖ ಉತ್ಪನ್ನ ತಂಡಗಳೊಂದಿಗೆ ಹೇಗೆ ಕಾರ್ಯನಿರ್ವಹಿಸಿದೆ?

ಉತ್ತರ: ಹೊಸ ಆರೋಗ್ಯ ಮತ್ತು ಯೋಗಕ್ಷೇಮ ಉತ್ಪನ್ನಗಳು ಮತ್ತು ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು ಎಂಜಿನಿಯರ್‌ಗಳು, ವಿನ್ಯಾಸಕರು, ವಿಜ್ಞಾನಿಗಳು ಸೇರಿದಂತೆ ಅನೇಕ ಜನರು ಈ ಕ್ಲಿನಿಕಲ್‌ ತಂಡದಲ್ಲಿ ಕೆಲಸ ಮಾಡಿದ್ದಾರೆ. ಅವರಲ್ಲಿ ನಾನೂ ಒಬ್ಬಳು. ಗರ್ಭಿಣಿಯರ ಆರೋಗ್ಯದ ಮೇಲ್ವಿಚಾರಣೆ ಮಾಡಲು, ಆರೋಗ್ಯವನ್ನು ಅರ್ಥಮಾಡಿಕೊಳ್ಳಲು, ಈ ಸಾಫ್ಟ್‌ವೇರ್‌ಗಳನ್ನು ಸುಧಾರಣೆ ಮಾಡಲು ಅವಿರತವಾಗಿ ಶ್ರಮಿಸಿದ್ದೇವೆ. ಸಾಕಷ್ಟು ಒಳನೋಟದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ವಿಜ್ಞಾನವೂ ಇದೆ. ಇದರ ವಿವರ ಗೌಪ್ಯ.

ಪ್ರಶ್ನೆ: ಮೊದಲ ಬಾರಿಗೆ ಗರ್ಭ ಧರಿಸುವವಳು ಆಪಲ್‌ ವಾಚ್‌ ಹೊಂದಿರುವಾಗ ಮತ್ತು ಹೊಂದಿಲ್ಲದೆ ಇರುವಾಗ ಯಾವ ವ್ಯತ್ಯಾಸ ಅನುಭವಿಸಬಹುದು? ದಯವಿಟ್ಟು ಸರಳವಾಗಿ ತಿಳಿಸಿ.

ಉತ್ತರ: ಗರ್ಭಾವಸ್ಥೆಯು ವ್ಯಕ್ತಿಯ ಜೀವನದ ಪ್ರಮುಖ ಸಮಯ. ಈ ಅವಧಿಯಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಇವುಗಳನ್ನು ಟ್ರ್ಯಾಕ್‌ ಮಾಡುವುದು ಅತ್ಯಂತ ಅಗತ್ಯ. ದೇಹದಲ್ಲಿ ಆಗುವ ಸಾಕಷ್ಟು ಬದಲಾವಣೆಗಳಲ್ಲಿ ಯಾವುದು ಸಾಮಾನ್ಯ? ಯಾವುದರ ಕುರಿತು ಎಚ್ಚರಿಕೆ ವಹಿಸಬೇಕು? ಎಂದು ತಿಳಿಯುವುದು ಕಷ್ಟಕರ. ನಮ್ಮ ಆಪಲ್‌ ವಾಚ್‌ನ ಹೊಸ ಫೀಚರ್‌ಗಳಿಂದ ಗರ್ಭಿಣಿಗೆ ಈ ವಿಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಕೆಲವೊಮ್ಮೆ ದೇಹದಲ್ಲಿ ಆಗುವ ಪ್ರತಿಯೊಂದು ವಿಚಾರಕ್ಕೂ ಟೆನ್ಷನ್‌ ಆಗುವ ಅಗತ್ಯವಿಲ್ಲ. ಕೆಲವೊಂದು ವಿಚಾರವನ್ನು ಕಡೆಗಣಿಸಬಾರದು. ಆಪಲ್‌ ವಾಚ್‌ ಇದ್ದರೆ ಯಾವುದರ ಕುರಿತು ಎಚ್ಚರಿಕೆ ಬೇಕು ಎಂಬ ಅರಿವು ಮೂಡುತ್ತದೆ.

ಐಫೋನ್‌ ಮತ್ತು ಐಪ್ಯಾಡ್‌ನಲ್ಲಿರುವ ಹೆಲ್ತ್‌ ಆಪ್‌ನಲ್ಲಿ ದೊರಕುವ ಚಾರ್ಟ್‌ನಿಂದ ಗರ್ಭಿಣಿಯ ಸಾಕಷ್ಟು ವಿವರ ದೊರಕುತ್ತದೆ. ಗರ್ಭಾವಸ್ಥೆಯಲ್ಲಿ ಆಗಾಗ್ಗೆ ಅನುಭವಿಸುವ ಆಯಾಸ ಅಥವಾ ಕೆಳ ಬೆನ್ನುನೋವಿನಂತಹ ರೋಗಲಕ್ಷಣಗಳ ಲಕ್ಷಣಗಳನ್ನು ಕೂಡ ಇದರಲ್ಲಿ ಲಾಗ್ ಮಾಡಬಹುದಾಗಿದೆ. ಗರ್ಭಿಣಿಯ ಆರೋಗ್ಯವೆಂದರೆ ಆಪಲ್‌ ವಾಚ್‌ ದೇಹ ಮತ್ತು ಮನಸ್ಸು ಎರಡನ್ನೂ ನೋಡುತ್ತದೆ. ಗರ್ಭಿಣಿ ಆಪಲ್‌ ವಾಚ್‌ ಬಳಕೆದಾರರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೌಲ್ಯಮಾಪನ ಮಾಡಲು ಇದರಿಂದ ಸಾಧ್ಯವಾಗುತ್ತದೆ. ಗರ್ಭಿಣಿಯಾದ ಬಳಿಕ ಮತ್ತು ನಂತರ ಖಿನ್ನತೆ ಇತ್ಯಾದಿಗಳು ಹೆಚ್ಚುತ್ತವೆ.

ಆಪಲ್‌ ವಾಚ್‌ ನೆರವಿನಿಂದ ಹೃದಯ ಬಡಿತ, ಉಸಿರಾಟದ ದರ, ನಿದ್ರೆ ಮತ್ತು ಇತರೆ ವಿಚಾರಗಳನ್ನು ಸೆನ್ಸಾರ್‌ ನೆರವಿನಿಂದ ದಾಖಲಿಸಿಕೊಳ್ಳಲಾಗುತ್ತದೆ. ನಿಮ್ಮ ಆರೋಗ್ಯದ ಡೇಟಾ ಹೆಚ್ಚು ನಿಖರವಾಗಿ ಇದರಲ್ಲಿ ತಿಳಿಯುತ್ತದೆ. ಆಪಲ್‌ ನಡೆಸಿದ ಮಹಿಳೆಯರ ಆರೋಗ್ಯ ಅಧ್ಯಯನದಲ್ಲಿ ಗರ್ಭಧಾರಣೆಗಿಂತ ಮೊದಲು ಹೃದಯದ ಸರಾಸರಿ ಬಡಿತ 65.5 ಬಿಪಿಎಂ ಮತ್ತು ಗರ್ಭಾವಸ್ಥೆಯ ಬಳಿಕ ಇದು ಹೆಚ್ಚಾಗಿರುವುದು ತಿಳಿದುಬಂದಿದೆ. ಮೂರನೇ ತ್ರೈಮಾಸಿಕದಲ್ಲಿ ಇದು 77 ಬಿಪಿಎಂವರೆಗೆ ಹೋಗಿತ್ತು. ಡೆಲಿವರಿ ಬಳಿಕ ಇದು ಇಳಿಕೆ ಕಂಡಿತು. ಆಪಲ್‌ ಹೆಲ್ತ್‌ ಚಾರ್ಟ್‌ನಲ್ಲಿ ಸಾಕಷ್ಟು ವಿವರ ದೊರಕುತ್ತದೆ.

ಪ್ರಶ್ನೆ: ಆಪಲ್ ವಾಚ್‌ನಂತಹ ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ತಮ್ಮ ಆರೋಗ್ಯದ ಕುರಿತು ಅನಗತ್ಯ ಚಿಂತೆ ಉಂಟುಮಾಡುವಂತೆ ಮಾಡುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಹೆಲ್ತ್‌ ವಾಚ್‌ ಕಟ್ಟಿಕೊಂಡವರು ಹೆಲ್ತ್‌ ಕುರಿತು ಹೆಚ್ಚು ಟೆನ್ಷನ್‌ನಿಂದ ಇರುತ್ತಾರೆ. ಇದರ ಬಗ್ಗೆ ನಿಮ್ಮ ದೃಷ್ಟಿಕೋನವೇನು?

ಉತ್ತರ: ಅಗತ್ಯವಿರುವಾಗ ಮಾತ್ರ ಬಳಕೆಯಾಗುವಂತೆ, ಅಗತ್ಯವಿಲ್ಲದೆ ಇರುವಾಗ ಅನಗತ್ಯ ಎಚ್ಚರಿಕೆ ನೀಡದಂತೆ ಅತ್ಯಂತ ಎಚ್ಚರಿಕೆಯಿಂದ ನಮ್ಮ ಎಲ್ಲಾ ಉತ್ಪನ್ನಗಳನ್ನು ಮತ್ತು ಫೀಚರ್‌ಗಳನ್ನು ವಿನ್ಯಾಸಗೊಳಿಸಿದ್ದೇವೆ. ನಾವು ನೀಡುವ ಆರೋಗ್ಯ ಡೇಟಾವು ನಿಖರ, ಅರ್ಥಪೂರ್ಣವಾಗಿರುತ್ತದೆ ಎಂದು ಖಚಿತಪಡಿಸುತ್ತೇನೆ. ಜನರಿಗೆ ಅಗತ್ಯವಿರುವಾಗ ನೋಟಿಫಿಕೇಷನ್‌ ಅಥವಾ ಅಲರ್ಟ್‌ ನೀಡುತ್ತೇವೆ. ಉದಾಹರಣೆಗೆ irregular rhythm notification ಗಮನಿಸಿ. ಆರು ಅನುಕ್ರಮ ಟ್ಯಾಕೋಗ್ರಾಮ್ ರೀಡಿಂಗ್‌ಗಳಲ್ಲಿ ಐದು ಅನಿಯಮಿತ ಲಯವನ್ನು ಪ್ರದರ್ಶಿಸಿದರೆ ಮಾತ್ರ ಇದು ಅಲರ್ಟ್‌ ನೀಡುತ್ತದೆ. ಇದರಲ್ಲಿ ಗರ್ಭಾವಸ್ಥೆಯಲ್ಲಿ ಇರುವವರಿಗೆ ಹೃದಯದ ಬಡಿತವು ನಿರ್ದಿಷ್ಟ ಮಿತಿಗಿಂತ ಕಡಿಮೆ ಇದ್ದರೆ ಮಾತ್ರ ಎಚ್ಚರಿಸುತ್ತೇವೆ. ನಿರ್ದಿಷ್ಟ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ಯಾಟರ್ನ್‌ ಪತ್ತೆಯಾದರೆ ಮಾತ್ರ ಅಲರ್ಟ್‌ ನೀಡುತ್ತದೆ. ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಸಾಕಷ್ಟು ಪರಿಣಿತ ತಂಡವು ಎಚ್ಚರಿಕೆಯಿಂದ ಇಂತಹ ಫೀಚರ್‌ಗಳನ್ನು ಅಭಿವೃದ್ಧಿಪಡಿಸಿದೆ. ನಾವು ನಿರಂತರವಾಗಿ ಅಪ್‌ಡೇಟ್‌ ಮಾಡುತ್ತ ಇರುತ್ತೇವೆ.

ಪ್ರಶ್ನೆ: ಈಗ ಫಿಟ್ನೆಸ್‌ ಮತ್ತು ಹೆಲ್ತ್‌ ಗ್ಯಾಡ್ಜೆಟ್‌ಗಳ ಬಳಕೆ ಹೆಚ್ಚುತ್ತಿದೆ. ಆದರೆ, ಸಾಕಷ್ಟು ವೈದ್ಯರು ಈ ವಾಚ್‌ಗಳು ನೀಡುವ ಡೇಟಾವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ದೂರುಗಳಿವೆ. ನಿಮ್ಮ ಪ್ರಕಾರ ಸ್ಮಾರ್ಟ್‌ ವಾಚ್‌ ಡೇಟಾದ ವಿಶ್ವಾಸಾರ್ಹತೆ ಹೆಚ್ಚಿಸಲು ಮತ್ತು ವೈದ್ಯರು ಗಂಭೀರವಾಗಿ ಪರಿಗಣಿಸಲು ಏನು ಮಾಡಬಹುದು?

ಉತ್ತರ: ಆಪಲ್‌ನಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸವು ವಿಜ್ಞಾನವನ್ನು ಆಧರಿಸಿದೆ. ವೈದ್ಯಕೀಯ ಸಮುದಾಯ ಮತ್ತು ಬಳಕೆದಾರರು ನಾವು ಹಂಚಿಕೊಳ್ಳುವ ಒಳನೋಟವನ್ನು ನಂಬಬಹುದು. ಈ ರೀತಿಯ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮವಹಿಸಲಾಗಿದೆ. ಹಲವು ವರ್ಷಗಳಿಂದ ಪ್ರಯೋಗ ನಡೆಸಿದ್ದೇವೆ. ಇದು ಕೇವಲ ಸಂಖ್ಯೆಯನ್ನು ನೀಡುವ ಸಾಧನವಲ್ಲ. ಆ ಸಂಖ್ಯೆಗಳ ಅರ್ಥವನ್ನೂ ನೀಡುತ್ತೇವೆ. ಸಾಧ್ಯವಿರುವಷ್ಟು ಸರಳ ಪದಗಳಲ್ಲಿ ತಿಳಿಸುತ್ತೇವೆ. ಯಾವಾಗ ವೈದ್ಯರನ್ನು ಭೇಟಿಯಾಗಬೇಕೆಂದೂ ವಾಚ್‌ನಲ್ಲಿ ತಿಳಿಸುತ್ತೇವೆ. ನಾವು ನಿಯಮಿತವಾಗಿ ಶ್ವೇತಪತ್ರ (ವೈಟ್‌ ಪೇಪರ್‌) ಪ್ರಕಟಿಸುತ್ತೇವೆ. ನಮ್ಮ ಒಳನೋಟಗಳ ಕುರಿತು ಪಾರದರ್ಶಕವಾಗಿ ವಿವರ ನೀಡುತ್ತೇವೆ. ಇಸಿಜಿ ಆಪ್‌, ಅನಿಯಮಿತ ಮಿಡಿತದ ಸೂಚನೆ (ಇರೆಗ್ಯುಲರ್‌ ರಿದಮ್‌ ನೋಟಿಫಿಕೇಷನ್‌, ಬ್ಲಡ್‌ ಆಕ್ಸಿಜನ್‌, ಸ್ಲೀಪ್‌ ಸ್ಟೇಜಸ್‌ ಇತ್ಯಾದಿಗಳ ಕುರಿತು ಸಾಕಷ್ಟು ನಿಖರವಾದ ವಿವರವನ್ನು ನಮ್ಮ ಹೆಲ್ತ್‌ ಆಪ್‌ ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ