Digital Jagathu: ಸ್ಮಾರ್ಟ್‌ವಾಚ್‌ ಮೂಲಕ ಜೀವ ಉಳಿಸಿಕೊಂಡವರ ಸತ್ಯಕತೆಗಳು, ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಸ್ಮಾರ್ಟ್‌ವಾಚ್‌ ಮೂಲಕ ಜೀವ ಉಳಿಸಿಕೊಂಡವರ ಸತ್ಯಕತೆಗಳು, ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ

Digital Jagathu: ಸ್ಮಾರ್ಟ್‌ವಾಚ್‌ ಮೂಲಕ ಜೀವ ಉಳಿಸಿಕೊಂಡವರ ಸತ್ಯಕತೆಗಳು, ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ

Life saving smartwatch: ತಂತ್ರಜ್ಞಾನ ಲೋಕದಲ್ಲಿ ಸ್ಮಾರ್ಟ್‌ವಾಚ್‌ಗಳು ಈಗ ಜೀವ ಉಳಿಸುವ ಆಪತ್ಭಾಂದವ. ಹೃದಯಘಾತ, ರಸ್ತೆ ಅಪಘಾತ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗುವಂತೆ ಎಚ್ಚರಿಸುವ, ಆಪ್ತರಿಗೆ ಮಾಹಿತಿ ತಿಳಿಸುವ ಸಾಧನಗಳಾಗಿ ಇವು ಜನಮೆಚ್ಚುಗೆ ಪಡೆಯುತ್ತಿವೆ.

Digital Jagathu: ಜೀವ ಉಳಿಸುವ ಸ್ಮಾರ್ಟ್‌ವಾಚ್‌, ಆಪಲ್‌ನದ್ದೇ ಆಗಬೇಕೆಂದಿಲ್ಲ ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ
Digital Jagathu: ಜೀವ ಉಳಿಸುವ ಸ್ಮಾರ್ಟ್‌ವಾಚ್‌, ಆಪಲ್‌ನದ್ದೇ ಆಗಬೇಕೆಂದಿಲ್ಲ ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ

ಕಳೆದ ವರ್ಷ ಮಹಾರಾಷ್ಟ್ರದ ಲೋನಾವಾಲಾ ವಿಸಾಪುರ ಕೋಟೆ ನೋಡಲು ಹೋದ ಯುವಕರ ತಂಡವೊಂದರಲ್ಲಿ ನೀಲೇಶ್‌ ಮೆಹ್ತಾ ಎಂಬ ಯುವಕ 150 ಅಡಿ ಆಳವಾದ ಪ್ರಪಾತಕ್ಕೆ ಬೀಳುತ್ತಾನೆ. ಆ ಪ್ರಪಾತಕ್ಕೆ ಬಿದ್ದು ಗಾಯಗೊಂಡ ಆತನ ಕೂಗು ಜತೆಗಿದ್ದ ಸ್ನೇಹಿತರಿಗೆ ತಿಳಿಯಲಿಲ್ಲ. ಈತ ಎಲ್ಲಿ ಹೋದ ಎಂದು ಅವರಿಗೂ ಗೊತ್ತಾಗಲಿಲ್ಲ. ದುರಾದೃಷ್ಟಕ್ಕೆ ಆತನ ಮೊಬೈಲ್‌ ಫೋನ್‌ ಕೂಡ ಸ್ನೇಹಿತರ ಬ್ಯಾಗ್‌ನಲ್ಲಿತ್ತು. ಆ ನಿರ್ಜನ, ದುರ್ಗಮ ಪ್ರಪಾತದೊಳಗೆ ಇದ್ದ ಆತನ ನೆರವಿಗೆ ಬಂದದ್ದು ಕೈಯಲ್ಲಿದ್ದ ಪುಟ್ಟ ಆಪಲ್‌ ವಾಚ್‌. ಆ ವಾಚ್‌ ಮೂಲಕ ತನ್ನ ಕುಟುಂಬಕ್ಕೆ ತನ್ನ ಪರಿಸ್ಥಿತಿಯ ಮಾಹಿತಿಯನ್ನು ನೀಡಿದ್ದ. ಬಳಿಕ ಆತನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ರಕ್ಷಣಾ ತಂಡ ಈತನನ್ನು ಆ ಪ್ರಪಾತದಿಂದ ರಕ್ಷಣೆ ಮಾಡಿದ ಸ್ಟೋರಿ ಎಲ್ಲೆಡೆ ವೈರಲ್‌ ಆಗಿತ್ತು.

ಕಳೆದ ವರ್ಷ ಹರ್ಯಾಣದಲ್ಲಿ ಡೆಂಟಿಸ್ಟ್‌ವೊಬ್ಬರ ಜೀವವನ್ನು ಸ್ಮಾರ್ಟ್‌ ವಾಚ್‌ ಉಳಿಸಿತ್ತು. ನಿತೀಶ್‌ ಚೋಪ್ರಾ ಎಂಬ ಡೆಂಟಿಸ್ಟ್‌ಗೆ ಯಾಕೋ ಎದೆ ನೋವು ಕಾಣಿಸಿಕೊಂಡಿತು. ಅವರು ತನ್ನಲ್ಲಿದ್ದ ಆಪಲ್‌ ವಾಚ್‌ ಮೂಲಕ ಇಸಿಜಿ ಟೆಸ್ಟ್‌ ಮಾಡಿದರು. ಈ ಸಮಯದಲ್ಲಿ ತನ್ನ ಆರ್ಟೆರಿಸ್‌ನಲ್ಲಿ ಶೇಕಡ 99.9ರಷ್ಟು ಬ್ಲಾಕೇಜ್‌ ಇರುವುದನ್ನು ಅವರು ಗಮನಿಸಿದರು. ತಕ್ಷಣ ಅವರು ವೈದ್ಯರ ಬಳಿ ಹೋದರು. ಸರ್ಜರಿ ಬಳಿಕ ಸ್ಟಂಟ್‌ ಅಳವಡಿಸಿಕೊಂಡರು. ಇವರಿಗೆ ಯಾರೋ ಉಡುಗೊರೆಯಾಗಿ ಒಂದು ವರ್ಷದ ಹಿಂದೆ ಈ ಸ್ಮಾರ್ಟ್‌ ವಾಚ್‌ ನೀಡಿದ್ದರಂತೆ, ಅದೇ ಉಡುಗೊರೆ ಇವರ ಜೀವ ಉಳಿಸಿತು.

ಇತ್ತೀಚೆಗೆ ರೆಡಿಟ್‌ನಲ್ಲಿ ಒಬ್ಬರು ತಮ್ಮ ತಾಯಿಯನ್ನು ಸ್ಮಾರ್ಟ್‌ವಾಚ್‌ ಹೇಗೆ ಕಾಪಾಡಿತು ಎಂದು ಬರೆದುಕೊಂಡಿದ್ದಾರೆ. ಇವರ ತಾಯಿ ಬಿಸ್ನೆಸ್‌ ಟ್ರಿಪ್‌ಗೆ ಹೋದವರು ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರು ಅದೇ ಹೋಟೆಲ್‌ನಲ್ಲಿದ್ದ ಸ್ನೇಹಿತರೊಬ್ಬರಿಗೆ ಟೆಕ್ಸ್ಟ್‌ ಸಂದೇಶ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಆ ಹೋಟೆಲ್‌ನಲ್ಲಿದ್ದ ಸ್ನೇಹಿತೆಯು ಇವರ ಸಂದೇಶ ನೋಡಿ ಇವರ ಕೊಠಡಿಗೆ ಬಂದು ನೋಡಿದಾಗ ಇವರು ನೆಲದಲ್ಲಿ ಕುಸಿದುಬಿದ್ದಿದ್ದರು. ತಕ್ಷಣ 911ಗೆ ಕರೆ ಮಾಡಬೇಕೆಂದುಕೊಂಡವರು ಹೊರಕ್ಕೆ ನೋಡುತ್ತಾರೆ, ಆಗಲೇ ಸೈರನ್‌ ಹಾಕುತ್ತ ಅಂಬ್ಯುಲೆನ್ಸ್‌ ಹೋಟೆಲ್‌ ಗೇಟ್‌ನೊಳಗೆ ಪ್ರವೇಶಿಸಿದೆ. ಆಪಲ್‌ ವಾಚ್‌ನಲ್ಲಿದ್ದ ಫಾಲ್‌ ಡಿಟೆಕ್ಷನ್‌ (ಬಿದ್ದಾಗ ಗುರುತಿಸಿ ತುರ್ತು ಕರೆ ಮಾಡುವ ಫೀಚರ್‌) ಇವರು ಕುಸಿದಾಗ ತುರ್ತು ಸಂದೇಶ ಕಳುಹಿಸಿತ್ತು. "ನನ್ನ ತಾಯಿಯ ಜೀವ ಉಳಿಸಿದ ಸ್ಮಾರ್ಟ್‌ವಾಚ್‌ಗೆ ಥ್ಯಾಂಕ್ಸ್‌, ನೀವೂ ಕೂಡ ಇಂತಹ ವಾಚ್‌ ಬಳಸಿʼʼ ಎಂದು ಅವರು ರೆಡಿಟ್‌ನಲ್ಲಿ ಬರೆದಿದ್ದಾರೆ.

ಇಮನಿ ಮೈಲ್‌ ಎಂಬ 12 ವರ್ಷದ ಬಾಲಕಿಯ ಜೀವವನ್ನೂ ಸ್ಮಾರ್ಟ್‌ ವಾಚ್‌ ಕಾಪಾಡಿತ್ತು. ನಿನ್ನ ಹಾರ್ಟ್‌ಬೀಟ್‌ ಸಮರ್ಪಕವಾಗಿಲ್ಲ ಎಂದು ಅದು ಎಚ್ಚರಿಸಿತು. ತಕ್ಷಣ ಇಮನಿಯ ಅಮ್ಮ ಆಸ್ಪತ್ರೆಗೆ ಕರೆದೊಯ್ದರು. ಮಕ್ಕಳಲ್ಲಿ ಅಪರೂಪವಾಗಿ ಕಾಣಿಸುವಂತಹ ಕ್ಯಾನ್ಸರೊಂದು ಇರುವುದು ಪತ್ತೆಯಾಗಿತ್ತು. ಬಳಿಕ ಆಕೆಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಈ ಮಗುವಿನ ಕೈಯಲ್ಲಿ ವಾಚ್‌ ಇಲ್ಲದೆ ಇದ್ದರೆ ಇಂತಹ ಅಪರೂಪದ ಕ್ಯಾನ್ಸರ್‌ ಇರುವುದು ಸಮಯ ಮಿಂಚುವ ತನಕ ತಿಳಿಯುತ್ತಿರಲಿಲ್ಲ ಎಂದು ಆ ಸಂದರ್ಭದಲ್ಲಿ ಡಾಕ್ಟರ್‌ ಹೇಳಿದ್ದರು.

ಅಮೆರಿಕದ ಇಂಡಿಯಾನಾಪೊಲಿಸ್‌ನಲ್ಲಿ ವಾಸಿಸುವ ನೋಲನ್‌ ಅಬೆಲ್‌ ಕಾರು ಚಲಾಯಿಸುತ್ತಿದ್ದಾಗ ಅಪಘಾತಗೊಂಡಿದೆ. ಈ ಸಂದರ್ಭದಲ್ಲಿ ಇವರ ಕೈಯಲ್ಲಿದ್ದ ಆಪಲ್‌ ವಾಚ್‌ನಲ್ಲಿರುವ ಎಸ್‌ಒಎಸ್‌ ಫೀಚರ್‌ ಅಪಘಾತವನ್ನು ಕಂಡುಹಿಡಿದಿದೆ. ನೀವು ಚೆನ್ನಾಗಿದ್ದಾರ ಎಂದು ಧ್ವನಿ ಮೂಲಕ ಇವರನ್ನು ಎಚ್ಚರಿಸಿದೆ. ಇವರು ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ತಕ್ಷಣ ಆಪಲ್‌ ವಾಚ್‌ ನೋಲನ್‌ ಅವರ ಸ್ನೇಹಿತರಿಗೆ, ಕುಟುಂಬದ ಸದಸ್ಯರಿಗೆ ಅಪಘಾತದ ಕುರಿತು ಅಲರ್ಟ್‌ ನೀಡಿದೆ.

ಈ ವರ್ಷದ ಫೆಬ್ರವರಿಯಲ್ಲಿ ಇಂಟರ್ನಲ್‌ ಬ್ಲೀಡಿಂಗ್‌ ಆದ ವ್ಯಕ್ತಿಯೊಬ್ಬರನ್ನು ಆಪಲ್‌ ವಾಚ್‌ ಬದುಕಿಸಿದೆ. ಆ ವ್ಯಕ್ತಿಗೆ ಯಾಕೋ ಸುಸ್ತಾಗಿದೆ ಎನಿಸಿತ್ತು. ಆತ ಆಪಲ್‌ ವಾಚ್‌ ಪರಿಶೀಲಿಸಿದಾಗ ಹಲವು ನೋಟಿಫಿಕೇಷನ್‌ಗಳು ಇವರಿಗಾಗಿ ಕಾಯುತ್ತಿತ್ತು. ಹೃದಯಬಡಿತದಲ್ಲಿ ಏರುಪೇರಾಗಿದೆ ಎಂಬ ಹಲವು ಅಲರ್ಟ್‌ ಇತ್ತು. ದೇಹದೊಳಗೆ ರಕ್ತಸ್ರಾವವಾಗುತ್ತಿರುವ ಮಾಹಿತಿ ಪಡೆದು ಅವರು ತುರ್ತು ಅಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಹೀಗೆ, ಈ ವ್ಯಕ್ತಿಯ ಜೀವವನ್ನು ಸ್ಮಾರ್ಟ್‌ ವಾಚ್‌ ಉಳಿಸಿತ್ತು.

ಸ್ಮಾರ್ಟ್‌ವಾಚ್‌ ಜೀವ ರಕ್ಷಿಸಬಹುದೇ ಎಂಬ ಪ್ರಶ್ನೆಗೆ ಈಗಾಗಲೇ ಹಲವು ವೈದ್ಯರು ಹೌದು ಎಂದಿದ್ದಾರೆ. ಈ ಕುರಿತು ವೈದ್ಯರೊಬ್ಬರು ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ ವಿವರ ಈ ರೀತಿ ಇದೆ.

"ಅಂದೊಮ್ಮೆ ನಮ್ಮಲ್ಲಿಗೆ 87 ವರ್ಷದ ಅಜ್ಜಿಯೊಬ್ಬರು ಚಿಕಿತ್ಸೆಗೆ ಬಂದಿದ್ದರು. ಆಕೆ ಬಂದಿರುವುದು ಆಪಲ್‌ ವಾಚ್‌ ಸಲಹೆಯಿಂದಾಗಿ. ಆಕೆಯ ಆಪಲ್‌ ವಾಚ್‌ನ ಸೈಡ್‌ ಬಟನ್‌ ಕ್ಲಿಕ್‌ ಮಾಡಿದಾಗ ಆಕೆಗೆ ಇಸಿಜಿ ಮಾಹಿತಿ ದೊರಕಿತು. 30 ಸೆಕೆಂಡಿನಲ್ಲಿ ಆಕೆಯ ವಾಚ್‌ನ ಸ್ಕ್ರೀನ್‌ ಮೇಲೆ ಮೂರು ಸಂದೇಶಗಳು ಇದ್ದವು. ಒಂದು ಸಂದೇಶವು ಇಸಿಜಿಯ ಏರಿಳಿತ ಸೂಚಿಸುತ್ತಿತ್ತು. ಎರಡನೆಯದ್ದು, ಆಕೆಯ ಹಾರ್ಟ್‌ ರೇಟ್‌ ಮಾಹಿತಿ ನೀಡಿತ್ತು. ಸಾಮಾನ್ಯವಾಗಿ ಹೃದಯದ ಬಡಿತ ನಿಮಿಷಕ್ಕೆ 80 ಇರಬೇಕಿತ್ತು. ಆದರೆ, ಅವರ ಹೃದಯದ ಬಡಿತ 40ಕ್ಕೆ ತಲುಪಿತು. ಮೂರನೇ ಸಂದೇಶದಲ್ಲಿ "ಕಾಲ್‌ ಯುವರ್‌ ಡಾಕ್ಟರ್‌" ಎಂಬ ಸಂದೇಶ ಇತ್ತು. ಆಕೆ ಅದನ್ನು ಅನುಸರಿಸಿ ಆಸ್ಪತ್ರೆಗೆ ಬಂದಿದ್ದರು. ತಡವಾಗಿದ್ದರೆ ತೊಂದರೆಯಾಗುತ್ತಿತ್ತು ಎಂದು ಆ ವೈದ್ಯರು ನೆನಪಿಸಿಕೊಂಡಿದ್ದಾರೆ.

ಹೀಗೆ, ಸ್ಮಾರ್ಟ್‌ ವಾಚ್‌ ಜೀವ ಉಳಿಸಿದ ನೂರಾರು ಪ್ರಸಂಗಗಳು ಇಂಟರ್‌ನೆಟ್‌ನಲ್ಲಿ ದೊರಕುತ್ತವೆ.

ಬಹುತೇಕ ಇಸಿಜಿ ವಾಚ್‌ಗಳು ಹೃದಯದ ಬಡಿತದ ರೇಟ್‌ ಅನ್ನು ದಾಖಲಿಸಿಕೊಂಡು ಈ ರೀತಿಯ ಅಲರ್ಟ್‌ ನೀಡುತ್ತವೆ. ಈಗ ಅನಿಯಮಿತ ಹೃದಯದ ಬಡಿತವೂ ಕೆಲವೊಮ್ಮೆ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರುವುದಿಲ್ಲ. ಕೆಲವೊಮ್ಮೆ ಇಂತಹ ಆಪಲ್‌ ವಾಚ್‌ ಅಥವಾ ಇತರೆ ಸ್ಮಾರ್ಟ್‌ವಾಚ್‌ಗಳು ನೀಡಿದ ಎಚ್ಚರಿಕೆಯಿಂದ ಆಸ್ಪತ್ರೆಗೆ ಬಂದು ಯಾವುದೇ ತೊಂದರೆಯಿಲ್ಲ ಎಂದು ಖಚಿತಪಡಿಸಿಕೊಂಡು ಹೋಗುವವರ ಸಂಖ್ಯೆಯೂ ಕಡಿಮೆ ಇಲ್ಲ.

"ಬಹುತೇಕ ವಾಚ್‌ಗಳು ತಕ್ಷಣ ಆಸ್ಪತ್ರೆಗೆ ಹೋಗಿ ಎನ್ನುವುದಿಲ್ಲ. ಒಂದು ಗಂಟೆಗೆ ಕನಿಷ್ಠ ಐದು ಬಾರಿ ಅನಿರ್ದಿಷ್ಟ ಹಾರ್ಟ್‌ ರೇಟ್‌ ಬಂದರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸುತ್ತವೆ. ಇಂತಹ ಸ್ಮಾರ್ಟ್‌ವಾಚ್‌ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ತಂತ್ರಜ್ಞಾನದೊಂದಿಗೆ ಸಾಕಷ್ಟು ಕ್ಲಿನಿಕಲ್‌ ರಿಸರ್ಚ್‌ ಕೂಡ ನಡೆದಿರುತ್ತದೆ. ಹೀಗಾಗಿ, ಇಂತಹ ವಾಚ್‌ಗಳ ಎಚ್ಚರಿಕೆಯನ್ನು ಸುಲಭವಾಗಿ ಕಡೆಗಣಿಸುವಂತೆ ಇಲ್ಲ ಎಂದು ಟೆಕ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

**

ಸ್ಮಾರ್ಟ್‌ವಾಚ್‌ಗಳಿಂದ ನೆರವು ಹೇಗೆ?

ಫಾಲ್‌ ಡಿಟೆಕ್ಷನ್‌: ಕೆಲವೊಂದು ಅನಾರೋಗ್ಯ ಕಾಡಿದಾಗ ತುರ್ತು ಪರಿಸ್ಥಿತಿಯಂತಹ ಸ್ಥಿತಿ ಉಂಟಾಗುತ್ತದೆ. ಕೆಲವು ಸೆಕೆಂಡ್‌ಗಳು ಇಂಪಾರ್ಟೆಂಟ್‌ ಆಗಿರುತ್ತವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ತುತ್ತಾದವರು ಹೆಲ್ಪ್‌ ಬಟನ್‌ ಕ್ಲಿಕ್‌ ಮಾಡಿ ಸಹಾಯಪಡೆಯಬಹುದು. ಇಂತಹ ಸ್ಮಾರ್ಟ್‌ವಾಚ್‌ಗಳಲ್ಲಿ ಡ್ರಾಪ್‌ ಸೆನ್ಸಾರ್‌ ಕೂಡ ಇರುತ್ತದೆ. ವ್ಯಕ್ತಿಯೊಬ್ಬರು ಬಿದ್ದಾಗ ಸ್ಮಾರ್ಟ್‌ವಾಚ್‌ ಡಿಟೆಕ್ಟ್‌ ಮಾಡಿ ಎಮರ್ನೆನ್ಸಿ ಸಂಪರ್ಕ ಸಂಖ್ಯೆಗಳಿಗೆ ಡಯಲ್‌ ಮಾಡುತ್ತದೆ. ಇಂತಹ ಫಾಲ್‌ ಡಿಟೆಕ್ಷನ್‌ ಫೀಚರ್‌ ಸಾಕಷ್ಟು ಜನರ ಪ್ರಾಣ ಉಳಿಸಲು ನೆರವಾಗಿದೆ.

ಹೃದಯದ ಬಡಿತದ ಮೇಲೆ ನಿಗಾ: ಆರೋಗ್ಯವಂತ ವಯಸ್ಸಕರು ನಿಮಿಷಕ್ಕೆ 60 -100 ನಡುವೆ ಹೃದಯದ ಬಡಿತ ಹೊಂದಿರಬಹುದು. ನಿಮ್ಮ ಹೃದಯದ ಬಡಿತವು ಮತ್ತೆಮತ್ತೆ ಕೆಳಮಟ್ಟಕ್ಕೆ ಕುಸಿಯುತ್ತಿದ್ದರೆ ಇಂತಹ ವಾಚ್‌ಗಳು ಡಿಟೆಕ್ಟ್‌ ಮಾಡಿ ಎಚ್ಚರಿಸುತ್ತದೆ.

ಫೋನ್‌ ಬಳಸುವ ಮೊದಲೇ ನೆರವು: ಕೆಲವು ತುರ್ತು ಅನಾರೋಗ್ಯ ಸಮಯದಲ್ಲಿ ಫೋನ್‌ ಬಳಸುವಷ್ಟು ಸಮಯ ಇರುವುದಿಲ್ಲ. ಇಂತಹ ಸಮಯದಲ್ಲಿ ಸ್ಮಾರ್ಟ್‌ವಾಚ್‌ನಲ್ಲಿರುವ ಬಟನ್‌, ಆಪ್‌ ಮೂಲಕ ನೆರವು ಪಡೆಯಬಹುದು. ಇದರಲ್ಲಿ ಮೆಡಿಕಲ್‌ ಅಲಾರ್ಟ್‌ ಸಿಸ್ಟಮ್‌ ಇತ್ಯಾದಿಗಳು ಇರುತ್ತವೆ.

ಹೃದಯದ ಇಸಿಜಿ: ಹೃದಯದ ಬಡಿತ ಮಾನಿಟರ್‌ ಮಾಡುವುದು ಮಾತ್ರವಲ್ಲದೆ ಎಲೆಕ್ಟ್ರೊಕಾರ್ಡಿಯೊಗ್ರಾಂ (ಇಸಿಜಿ/ಇಕೆಜಿ) ಮಾಹಿತಿಯನ್ನು ಕೆಲವು ಸ್ಮಾರ್ಟ್‌ವಾಚ್‌ಗಳು ಪಡೆದು ಅಲಾರ್ಟ್‌ ಮಾಡುತ್ತವೆ.

ಆಕ್ಟೀವ್‌ ಆಗಿರಲು ಸೂಚನೆ: ನಿಮ್ಮ ಜೀವನಶೈಲಿ ಸುಧಾರಿಸಲು ಸೂಚಿಸುತ್ತದೆ. ಪ್ರತಿದಿನ ಇಂತಿಷ್ಟು ಹೆಜ್ಜೆ ನಡೆಯುವಂತೆ, ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಲು ಪೂರಕವಾದ ಆಕ್ಟಿವಿಟಿಗಳನ್ನು ಸ್ಮಾರ್ಟ್‌ವಾಚ್‌ನಿಂದ ಪಡೆಯಬಹುದು.

ಇದರೊಂದಿಗೆ ವ್ಯಾಯಾಮ, ಗುಣಮಟ್ಟದ ನಿದ್ದೆ, ಬ್ಲಡ್‌ ಆಕ್ಸಿಜನ್‌ ಪ್ರಮಾಣ ಸೇರಿದಂತೆ ಹಲವು ವಿಷಯಗಳನ್ನು, ನೆರವನ್ನು ಸ್ಮಾರ್ಟ್‌ವಾಚ್‌ ನೀಡುತ್ತದೆ.

**

ಈ ಡಿಜಿಟಲ್‌ ಜಗತ್ತಿನಲ್ಲಿ ತಂತ್ರಜ್ಞಾನಗಳಿಂದ ಕೆಲವು ಅವಗುಣಗಳು ಇರುವುದಾದರೂ ತಂತ್ರಜ್ಞಾನಗಳ ಕೊಡುಗೆಗಳನ್ನು ಮರೆಯುವಂತೆ ಇಲ್ಲ. ಭಾರತದಲ್ಲಿ ಇಂತಹ ತಂತ್ರಜ್ಞಾನಗಳ ಕುರಿತು ಅಸಡ್ಡೆಯೂ ಜನರಲ್ಲಿದೆ. ನಮಗೇನಾಗುವುದಿಲ್ಲ ಎಂಬ ವರ್ತನೆ ಸಾಮಾನ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವು ಹೆಚ್ಚುತ್ತಿರುವಾಗ ತುರ್ತಾಗಿ ಆಸ್ಪತ್ರೆಗೆ ಹೋಗಲು ಇಂತಹ ಪುಟ್ಟ ಸಾಧನಗಳು ನೆರವಾಗುವುದನ್ನು ಅಲ್ಲಗೆಳೆಯುವಂತಿಲ್ಲ. ನಿಮ್ಮ ಮನೆಯ ಹಿರಿಯರಿಗೆ, ಮಕ್ಕಳಿಗೆ, ನಿಮಗೆ ಹೃದಯದ ಬಡಿತ ಮಾನಿಟರ್‌ ಮಾಡುವಂತಹ, ಇಸಿಜಿ ಇತ್ಯಾದಿ ಮಾಹಿತಿ ನೀಡುವ, ಆರೋಗ್ಯಕಾರಿ ಬದುಕಿಗೆ ಸಹಕರಿಸುವ ಸ್ಮಾರ್ಟ್‌ವಾಚ್‌ಗಳನ್ನು ನೀಡಲು ಮರೆಯಬೇಡಿ. ಆಪಲ್‌ ವಾಚ್‌ನಲ್ಲಿ ಹಲವು ಅತ್ಯುತ್ತಮ ಫೀಚರ್‌ಗಳಿವೆ. ಆದರೆ, ಆಪಲ್‌ ವಾಚ್‌, ಆಪಲ್‌ ಫೋನ್‌ ಎಲ್ಲರ ಕೈಗೆಟುಕುವಂತೆ ಇರುವುದಿಲ್ಲ. ಆದರೆ, ಇತರೆ ಸ್ಮಾರ್ಟ್‌ವಾಚ್‌ಗಳು ಉಪಯುಕ್ತವಾಗಿವೆ. ಒಂದಿಷ್ಟು ರಿವ್ಯೂ ನೋಡಿ, ಅವುಗಳ ಫೀಚರ್‌ಗಳ ಕುರಿತು ರಿಸರ್ಚ್‌ ಮಾಡಿ ಖರೀದಿಸಿದರೆ ನಷ್ಟವೇನಿಲ್ಲ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

Whats_app_banner