Lightning Arrester for Home: ಲೈಟ್ನಿಂಗ್ ಅರೆಸ್ಟರ್ ದರವೆಷ್ಟು? ಮನೆಗೆ ಮಿಂಚು ಪ್ರತಿಬಂಧಕ ಅಳವಡಿಕೆ ಹೇಗೆ? ಸಿಡಿಲು ಮಿಂಚಿನಿಂದ ರಕ್ಷಣೆ
Oct 01, 2024 10:47 AM IST
Lightning Arrester for Home: ಮನೆಗೆ ಮಿಂಚು ಪ್ರತಿಬಂಧಕ ಅಳವಡಿಸುವುದು ಹೇಗೆ? ಈ ಕುರಿತು ಸಮಗ್ರ ವಿವರ ಇಲ್ಲಿದೆ
- Lightning Arrester for Home: ಮಳೆಗಾಲದಲ್ಲಿ ಮನೆಗೆ ಸಿಡಿಲು ಮಿಂಚು ಹೊಡೆದು ಹಾನಿಯಾಗುವುದನ್ನು ತಪ್ಪಿಸಲು ಲೈಟ್ನಿಂಗ್ ಅರೆಸ್ಟರ್, ಲೈಟ್ನಿಂಗ್ ರಾಡ್‌ಗಳನ್ನು ಅಳವಡಿಸುವುದು ಉತ್ತಮ. ಮಿಂಚು ಪ್ರತಿರೋಧಕ ವ್ಯವಸ್ಥೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Lightning Arrester for Home: ಮಳೆಗಾಲದಲ್ಲಿ ಸಿಡಿಲು ಮಿಂಚಿನ ಭಯದಲ್ಲಿ ಸಾಕಷ್ಟು ಜನರು ಮನೆಯಲ್ಲಿ ಬದುಕುತ್ತಾರೆ. ಸಿಡಿಲು ಬಡಿದು ಸಾವು ಎಂಬ ಸುದ್ದಿಗಳು ಪ್ರತಿದಿನ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಮನೆಗೆ ಮಿಂಚು ಹೊಡೆದು ಇನ್ವರ್ಟರ್, ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಸಕಲ ಎಲೆಕ್ಟ್ರಿಕಲ್ ವ್ಯವಸ್ಥೆಯೇ ಹಾಳಾಗಿ ಸಾಕಷ್ಟು ಜನರು ಕಷ್ಟಪಡುತ್ತಾರೆ. ಕಳೆದ ಕೆಲವು ದಿನಗಳಿಂದ ಮಂಗಳೂರು ಸೇರಿದಂತೆ ವಿವಿಧೆಡೆ ಅನಿರೀಕ್ಷಿತ ಮಳೆ ಮಿಂಚು ಗುಡುಗಿಗೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಿಂಚಿನ ಹೊಡೆತದಿಂದ ಪಾರಾಗಲು ಅನೇಕ ವಿಧಾನಗಳು ಇವೆ. ಮನೆ ನಿರ್ಮಾಣ ಸಮಯದಲ್ಲಿಯೇ ಕೆಲವರು ಸೂಕ್ತ ಮಿಂಚು ಪ್ರತಿಬಂಧಕ ವ್ಯವಸ್ಥೆ ರೂಪಿಸಿರುತ್ತಾರೆ. ಹಳೆಯ ಮನೆಗಳಿಗೂ ಜೋಡಿಸಬಹುದಾದ ಮಿಂಚು ಪ್ರತಿಬಂಧಕಗಳು (Copper Lightning Arresters) ಲಭ್ಯ ಇವೆ. ಇವುಗಳನ್ನು ಅಳವಡಿಸಿ ಸಿಡಿಲು ಮಿಂಚಿನಿಂದ ರಕ್ಷಣೆ ಪಡೆಯಬಹುದು.
"ಈಗ ಜಿಲ್ಲಾಡಳಿತವೇ ಸಾಕಷ್ಟು ಕಡೆ ಮಿಂಚು ಪ್ರತಿರೋಧಕಗಳನ್ನು ಅಳವಡಿಸಿವೆ. ಅಂದರೆ, ಎತ್ತರದ ಕಟ್ಟಡಗಳು, ಪ್ರಮುಖ ಸ್ಥಳಗಳಲ್ಲಿ ಮಿಂಚು ಪ್ರತಿರೋಧಕಗಳನ್ನು ಅಳವಡಿಸಿದೆ. ಮೊಬೈಲ್ ಟವರ್ ಹತ್ತಿರವಿರುವವರಿಗೂ ಟವರ್‌ನಲ್ಲಿರುವ ಲೈಟ್ನಿಂಗ್ ಅರೆಸ್ಟರ್ ನೆರವು ನೀಡುತ್ತದೆ. ಆದರೆ, ಒಂಟಿ ಮನೆಗಳು, ಕಡಿಮೆ ಮನೆಗಳು ಇರುವ ಸ್ಥಳಗಳು, ಗುಡ್ಡಗಾಡಿನ ಸಮೀಪ ಇರುವ ಮನೆಯವರಿಗೆ ಇಂತಹ ವ್ಯವಸ್ಥೆ ಇರುವುದಿಲ್ಲ. ಸಣ್ಣಪುಟ್ಟ ಊರುಗಳಲ್ಲಿಯೂ ಇಂತಹ ಸೌಕರ್ಯ ಇರುವುದಿಲ್ಲ. ಮನೆ ನಿರ್ಮಾಣ ಸಂದರ್ಭದಲ್ಲಿ ಅಥವಾ ನಂತರ ಮಾರುಕಟ್ಟೆಯಲ್ಲಿ ದೊರಕುವ ತಾಮ್ರದ ಲೈಟ್ನಿಂಗ್ ಅರೆಸ್ಟರ್‌ಗಳನ್ನು ಅಳವಡಿಸಿಕೊಳ್ಳಬಹುದು. ಈ ರೀತಿ ಲೈಟ್ನಿಂಗ್ ಅರೆಸ್ಟರ್ ಅಳವಡಿಸಿಕೊಡುವವರೂ ಪ್ರತಿ ಊರಿನಲ್ಲಿ ಇರಬಹುದು. ಯೂಟ್ಯೂಬ್ ವಿಡಿಯೋ ನೋಡಿಕೊಂಡು ಕೂಡ ಇಂತಹ ಅರೆಸ್ಟರ್ ಅಳವಡಿಸಿಕೊಳ್ಳಬಹುದು" ಎಂದು ಪುತ್ತೂರು ತಾಲೂಕಿನ ಅಮ್ಚಿನಡ್ಕದ ತನು ಎಲೆಕ್ಟ್ರಿಕಲ್ಸ್‌ನ ಗಣೇಶ್ ಬಂಗೇರ ಹೇಳುತ್ತಾರೆ.
ಮಿಂಚು ಅಥವಾ ಸಿಡಿಲಿನ ಹೊಡೆತದಿಂದ ಸಾಕಷ್ಟು ಹಾನಿಯಾಗುತ್ತದೆ. ಇವು 30 ಸಾವಿರದಿಂದ 50 ಸಾವಿರ ಫ್ಯಾರನ್ ಹೀಟ್ ಉಷ್ಣವನ್ನು ಬಿಡುಗಡೆ ಮಾಡಬಲ್ಲವು. ಅಂದರೆ, ಸೂರ್ಯನ ಮೇಲ್ಮೈ ಬಿಸಿಗಿಂತಲೂ ಹೆಚ್ಚಿರುತ್ತದೆ. ಇದರಿಂದ ಪಾರಾಗಲು ಲೋಹದ ಸಲಾಕೆಯನ್ನು ಮನೆಯ ಮೇಲೆ, ಕಟ್ಟಡದ ಮೇಲೆ ನೆಡಬಹುದು. ಈ ಲೋಹದ ಸಲಾಕೆಯ ಒಂದು ತುದಿಗೆ ವೈರ್ ಮೂಲಕ ಜೋಡಿಸಿ ಅದನ್ನು ನೆಲಕ್ಕೆ ಅರ್ಥಿಂಗ್ ಮಾಡಲಾಗುತ್ತದೆ.
ಲೈಟ್ನಿಂಗ್ ಅರೆಸ್ಟರ್ ದರವೆಷ್ಟು?
ಇಂತಹ ಮಿಂಚು ಪ್ರತಿಬಂಧಕಗಳು ದುಬಾರಿಯಲ್ಲ. ಒಂದೆರಡು ಸಾವಿರ ರೂಪಾಯಿಯಿಂದ ಹತ್ತಿಪ್ಪತ್ತು ಸಾವಿರ ರೂಪಾಯಿಯೊಳಗೆ ಇಂತಹ ಮಿಂಚು ಪ್ರತಿಬಂಧಕಗಳು ದೊರಕುತ್ತವೆ. ಕೆಲವು ಇಕಾಮರ್ಸ್ ತಾಣಗಳಲ್ಲಿಯೂ 1 ಸಾವಿರ ರೂಪಾಯಿ ಆಸುಪಾಸಿನಲ್ಲಿ ಲೈಟ್ನಿಂಗ್ ಅರೆಸ್ಟರ್‌ಗಳು ದೊರಕುತ್ತವೆ. "ನಿಮ್ಮ ಊರಿನಲ್ಲಿರುವ ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಮನೆ ನಿರ್ಮಾಣ ಮಾಡುವವರಲ್ಲಿ ಈ ಕುರಿತು ಜ್ಞಾನ ಇರುವವರು ಇರುತ್ತಾರೆ. ಅವರಿಂದ ಇಂತಹ ಲೈಟ್ನಿಂಗ್ ಅರೆಸ್ಟರ್‌ಗಳನ್ನು ಜೋಡಿಸಿಕೊಳ್ಳಬಹುದು. ಇವುಗಳನ್ನು ಸರಿಯಾದ ಸ್ಥಳದಲ್ಲಿ ಜೋಡಿಸಿ, ಸರಿಯಾದ ರೀತಿಯಲ್ಲಿ ನೆಲಕ್ಕೆ ವೈರ್ ಮೂಲಕ ಅರ್ಥ್ ನೀಡುವುದು ಮುಖ್ಯವಾಗುತ್ತದೆ" ಎಂದು ಗಣೇಶ್ ಹೇಳಿದ್ದಾರೆ.
ಲೈಟ್ನಿಂಗ್ ಅರೆಸ್ಟರ್ (ಸಿಡಿಲು/ಮಿಂಚು ಪ್ರತಿಬಂಧಕ) ಅಳವಡಿಕೆ ಹೇಗೆ?
- ತ್ರಿಶೂಲ ಆಕಾರದ ತಾಮ್ರದ ಲೈಟ್ನಿಂಗ್ ಅರೆಸ್ಟರ್ ಅನ್ನು ಸೂಕ್ತ ಕ್ಲ್ಯಾಂಪ್ ಮತ್ತು ಬೋಲ್ಟ್ ಸಹಾಯದಿಂದ ಮನೆ/ಕಟ್ಟಡದ ಮೇಲ್ಬಾಗದಲ್ಲಿ ಜೋಡಿಸಿ.
- ಇದಕ್ಕೆ ಅರ್ಥಿಂಗ್ ವೈರ್ ಜೋಡಿಸಿ. ಅರ್ಥಿಂಗ್ ವೈರ್ ಅನ್ನು ಗೋಡೆಗಳಿಗೆ ಸರಿಯಾಗಿ ಕ್ಲ್ಯಾಂಪ್ (ಜೋಡಣೆ) ಮಾಡಿ.
- ನೆಲದಲ್ಲಿ ತುಸು ಆಳವಾದ ಗುಂಡಿ ತೆಗೆಯಿರಿ. ಅದಕ್ಕೆ ಅರ್ಥಿಂಗ್ ವೈರ್ ಹಾಕಿ.
ಈ ಪ್ರಕ್ರಿಯೆ ಸರಿಯಾಗಿ ಅರ್ಥವಾಗಬೇಕಿದ್ದರೆ ಐದಾರೂ ಯೂಟ್ಯೂಬ್ ವಿಡಿಯೋ ನೋಡಿ. ಯಾವುದಾದರೂ ಒಂದು ವಿಡಿಯೋ ನೋಡಿ ಅದನ್ನೇ ಪಾಲಿಸಬೇಡಿ. ವಿಡಿಯೋಗೆ ಬಂದಿರುವ ಕಾಮೆಂಟ್‌ಗಳನ್ನು ನೋಡಿಕೊಳ್ಳಿ. ಹೆಚ್ಚು ನಂಬಿಕಸ್ಥವೆನಿಸುವ ವಿಡಿಯೋ ಮಾರ್ಗದರ್ಶನವನ್ನು ಅನುಸರಿಸಿ. ಮಳೆಗಾಲದಲ್ಲಿ ಮಿಂಚು ಸಿಡಿಲಿನಿಂದ ಸುರಕ್ಷಿತವಾಗಿರಿ.