logo
ಕನ್ನಡ ಸುದ್ದಿ  /  ಜೀವನಶೈಲಿ  /  ಐತಿಹಾಸಿಕ ತಾಣ ಒಡಿಶಾದ ಪುರಿಗೆ ಭೇಟಿ ನೀಡುವ ಪ್ಲಾನ್‌ ಇದ್ರೆ, ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

ಐತಿಹಾಸಿಕ ತಾಣ ಒಡಿಶಾದ ಪುರಿಗೆ ಭೇಟಿ ನೀಡುವ ಪ್ಲಾನ್‌ ಇದ್ರೆ, ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

Reshma HT Kannada

Mar 11, 2024 07:30 AM IST

google News

ಐತಿಹಾಸಿಕ ತಾಣ ಒಡಿಶಾದ ಪುರಿಗೆ ಭೇಟಿ ನೀಡುವ ಪ್ಲಾನ್‌ ಇದ್ರೆ, ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

    • ಇತಿಹಾಸ ಪ್ರಸಿದ್ಧ ಧಾರ್ಮಿಕ ಮಂದಿರಗಳು, ಮನಸೂರೆಗೊಳಿಸುವ ಕಡಲತೀರಗಳು, ನಾಲಿಗೆಯ ರುಚಿ ಹೆಚ್ಚಿಸುವ ಸ್ಥಳೀಯ ತಿಂಡಿ ತಿನಿಸುಗಳು ಹೀಗೆ ಒಡಿಶಾದ ಪುರಿ ಪಟ್ಟಣ ಹೊಸ ಅನುಭವಗಳನ್ನು ನೀಡಬಲ್ಲದು. ನೀವು ಮೊದಲ ಬಾರಿಗೆ ಪುರಿಗೆ ಹೋಗಬಯಸಿದರೆ ತಿಳಿದುಕೊಳ್ಳಲೇ ಬೇಕಿರುವ ಒಂದಿಷ್ಟು ವಿಚಾರಗಳು ಇಲ್ಲಿವೆ.
ಐತಿಹಾಸಿಕ ತಾಣ ಒಡಿಶಾದ ಪುರಿಗೆ ಭೇಟಿ ನೀಡುವ ಪ್ಲಾನ್‌ ಇದ್ರೆ, ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು
ಐತಿಹಾಸಿಕ ತಾಣ ಒಡಿಶಾದ ಪುರಿಗೆ ಭೇಟಿ ನೀಡುವ ಪ್ಲಾನ್‌ ಇದ್ರೆ, ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆ ಮಾತು ಅದೆಷ್ಟು ನಿಜ ಅಲ್ವಾ? ಅನೇಕತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶವನ್ನು, ದೇಶದ ವಿವಿಧ ರಾಜ್ಯಗಳನ್ನು ಸುತ್ತಿ ನೋಡಿದರೆ ಮಾತ್ರವೇ ಅಲ್ಲಿನ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರ, ಆಹಾರ ಪದ್ಧತಿಗಳು, ಪ್ರವಾಸೀ ತಾಣಗಳನ್ನು ಕಂಡು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಐತಿಹಾಸಿಕ ನಗರಗಳ ಪೈಕಿ, ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿ ನಗರ ಪ್ರಮುಖವಾದುದು.

ಅನೇಕ ಆಧ್ಯಾತ್ಮಿಕ ತಾಣಗಳು, ಪ್ರಕೃತಿಯ ಸುಂದರ ನೆಲೆಬೀಡುಗಳು, ಕಡಲತೀರಗಳು ಸೇರಿದಂತೆ ನೈಜ ಸೌಂದರ್ಯವನ್ನು ಹೊಂದಿರುವ ಪುರಿ ಪಟ್ಟಣ ತನ್ನದೇ ಆದ ವಿಶೇಷ ಸಂಸ್ಕೃತಿಗೆ ಹೆಸರು ಮಾಡಿದೆ. ಅಲ್ಲದೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಂತಹ ವಿಶೇಷ ಅನುಭವಗಳನ್ನು ನೀಡುವ ಪುರಿ ನಗರಿಯ ಕುರಿತು ತಿಳಿಯಲೇಬೇಕಾಗಿರುವ ಒಂದಿಷ್ಟು ವಿಚಾರಗಳು ಇಲ್ಲಿವೆ.

ಆಧ್ಯಾತ್ಮಕ್ಕೆ ಮತ್ತೊಂದು ಹೆಸರೇ ಒಡಿಶಾದ ಪುರಿ ನಗರ

ಪುರಿ ಪಟ್ಟಣದಲ್ಲಿರುವ ಜಗನ್ನಾಥ ದೇವಾಲಯವು ಭಾರತದ ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದಾಗಿದ್ದು, ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿದೆ. ಪುರಿ ನಗರಕ್ಕೆ ನೀವು ಭೇಟಿ ನೀಡಿದರೆ ವಿಶ್ವದ ಕೌತುಕಗಳಲ್ಲಿ ಒಂದಾಗಿರುವ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಆದರೆ ಪುರಾಣ ಪ್ರಸಿದ್ಧ ಈ ದೇವಾಲಯಕ್ಕೆ ತೆರಳುವ ಮುನ್ನ ದೇವಾಲಯದ ಸಂಪ್ರದಾಯಗಳಿಗೆ ಧಕ್ಕೆಯಾಗದಂತೆ, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟುಕೊಳ್ಳೋದನ್ನು ಮರೆಯಬೇಡಿ.

ಪುರಿಯ ಕಡಲತೀರಗಳಲ್ಲಿ ಒಮ್ಮೆಯಾದರೂ ಸುತ್ತಲೇಬೇಕು

ಪುರಿಯು ಬಂಗಾಳಕೊಲ್ಲಿಯನ್ನು ಸಂಧಿಸುವ ಅನೇಕ ಭಾಗಗಳಲ್ಲಿ ಸುಂದರವಾದ ಕಡಲ ತೀರಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಂತಿದೆ. ಪುರಿ ಬೀಚ್‌ನ ಹೊಂಬಣ್ಣದ ಮರಳಲ್ಲಿ, ಸೂರ್ಯನ ಹದವಾದ ಬೆಳಕಿನ ಜೊತೆಗೆ ಕಡಲ ತೀರದಲ್ಲಿ ಬೀಸುವ ತಣ್ಣನೆಯ ಗಾಳಿಗೆ ನೀವೂ ಒಮ್ಮೆ ಮೈಯೊಡ್ಡಲೇಬೇಕು. ಇದಲ್ಲದೇ ಅಡ್ವೆಂಚರ್‌ ಇಷ್ಟಪಡುವ ಮಂದಿಗಂತೂ ಸರ್ಫಿಂಗ್, ಜೆಟ್-ಸ್ಕೀಯಿಂಗ್ ಮತ್ತು ಪ್ಯಾರಾಸೈಲಿಂಗ್‌ನಂತಹ ರೋಮಾಂಚಕ ಜಲ ಕ್ರೀಡೆಗಳು ಇಲ್ಲಿದ್ದು, ಸಮಯ ಹೋಗುವುದೇ ತಿಳಿಯುವುದಿಲ್ಲ. ಸಾಗರದ ಅಲೆಗಳ ನಡುವೆ ಮೈನವಿರೇಳಿಸುವಂತಹ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ.

ಬಾಯಲ್ಲಿ ನೀರೂರುವ ಸ್ಥಳೀಯ ಭಕ್ಷ್ಯಗಳನ್ನು ತಿನ್ನದೇ ಇರಬೇಡಿ

ಯಾವುದೇ ಜಾಗಕ್ಕೆ ಭೇಟಿ ಕೊಟ್ಟರೂ ಅಲ್ಲಿಯ ಸ್ಥಳೀಯ ತಿಂಡಿ ತಿನಿಸುಗಳನ್ನು ಸವಿಯಬೇಕು. ಆ ರುಚಿ ನೀವು ಅದೆಷ್ಟು ಹುಡುಕಿದರೂ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅದರಲ್ಲೂ ಪುರಿ ನಗರಕ್ಕೆ ಭೇಟಿ ಕೊಟ್ಟ ಮೇಲೆ ಅಲ್ಲಿನ ಸ್ಥಳೀಯ ಭಕ್ಷ್ಯಗಳನ್ನು ಸವಿಯದಿದ್ದರೆ ಪ್ರವಾಸ ಪೂರ್ಣಗೊಳ್ಳದು. ಸಾಂಪ್ರದಾಯಿಕ ಒಡಿಯಾ ಸಿಹಿ ತಿನಿಸುಗಳು, ವಿಭಿನ್ನ ಬಗೆಯ ಸೀಫುಡ್‌ಗಳಂತೂ ನಿಮ್ಮ ನಾಲಿಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ನಗರದ ತುಂಬಾ ಹರಡಿಕೊಂಡಿರುವ ಬೀದಿ ಬದಿಯ ಸ್ಟಾಲ್‌ಗಳಲ್ಲಿ ಲಭ್ಯವಾಗುವ ಬಿಸಿ ಬಿಸಿ ರಸಗುಲ್ಲಾಗಳು, ಗರಿಗರಿಯಾದ ಚೆನಾ ಪೋಡಾ ಮಾತ್ರವಲ್ಲದೆ ಖಾರ ಖಾರವಾದ ಮೀನಿನ ವಿವಿಧ ಬಗೆಯ ಖಾದ್ಯಗಳಂತೂ ಒಮ್ಮೆಯಾದರೂ ಸವಿಯಲೇ ಬೇಕು. ಇವೆಲ್ಲದರ ನಡುವೆ ಜಗನ್ನಾಥ ದೇವಾಲಯದಲ್ಲಿ ಸಿಗುವಂತಹ 'ಮಹಾಪ್ರಸಾದ'ವನ್ನು ಸವಿಯಲು ಮರೆಯಬೇಡಿ.

ಪುರಿಯನ್ನು ತಿಳಿಯಲು ಸ್ಥಳೀಯರೊಂದಿಗೆ ಬೆರೆತು ನೋಡಿ

ಯಾವುದೇ ಪರಿಸರವನ್ನೂ ಅರ್ಥ ಮಾಡಿಕೊಳ್ಳಬೇಕಾದರೆ ಸ್ಥಳೀಯರೊಂದಿಗೆ ಮನಸ್ಸು ಬಿಚ್ಚಿ ಬೆರೆಯುವುದು ಅಷ್ಟೇ ಮುಖ್ಯ. ನಿಮ್ಮ ಪ್ರವಾಸದಲ್ಲಿ ಪುರಿಯನ್ನು ಅರಿತುಕೊಳ್ಳಲು ಮೊದಲಿಗೆ ಅಲ್ಲಿನ ಸ್ಥಳೀಯರೊಂದಿಗೆ ಬೆರೆತು ನೋಡಿ. ಸಮುದ್ರದೊಂದಿಗೆ ಜೀವನನ ನಂಟು ಬೆರೆಸಿರುವ ಬೆಸ್ತರು, ಗದ್ದಲದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಅಥವಾ ದೇವಾಲಯದ ಪುರೋಹಿತರೊಂದಿಗೆ ನೀವೂ ಒಮ್ಮೆ ಮಾತನಾಡಿ. ಸ್ಥಳೀಯ ವಿಚಾರ, ರೀತಿ ನೀತಿಗಳು, ನಗರದ ಒಳಗಿನ ಸೌಂದರ್ಯವನ್ನು ನೀವೇ ಅರಿತುಕೊಳ್ಳಿ.

ಸ್ಥಳೀಯ ಸಂಪ್ರದಾಯಗಳಿಗೆದ ಧಕ್ಕೆಯಾಗದಂತೆ ನೋಡಿಕೊಳ್ಳಿ

ಐತಿಹಾಸಿವಾಗಿ, ಧಾರ್ಮಿಕವಾಗಿ ಹೆಸರು ಮಾಡಿರುವ ಪುರಿ ಪಟ್ಟಣದ ಸ್ಥಳೀಯ ಸಂಪ್ರದಾಯಗಳು ಹಾಗೂ ಸ್ಥಳೀಯರ ಭಾವನೆಗಳನ್ನು ಪ್ರವಾಸಿಗರು ಗೌರವಿಸಬೇಕು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ತೊಟ್ಟುಕೊಳ್ಳುವ ಉಡುಗೆಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಲ್ಲದೆ, ಪವಿತ್ರ ಸ್ಥಳಗಳಲ್ಲಿ ಫೋಟೋಗಳನ್ನು ತೆಗೆಯುವ ಮೊದಲು ಸೂಕ್ತವಾದವರಲ್ಲಿ ಅನುಮತಿ ಪಡೆಯವುದು ಅತೀ ಅಗತ್ಯ.

ಪುರಿ ಪಟ್ಟಣದಲ್ಲಿ ನೀವು ಭೇಟಿ ನೀಡಲೇಬೇಕಾದ ಇನ್ನೂ ಹಲವು ಪ್ರವಾಸೀ ತಾಣಗಳಿವೆ. ಕೋನಾರ್ಕ್ ಸೂರ್ಯ ದೇವಾಲಯ, ಮಾರ್ಕಂಡೇಶ್ವರ ದೇವಸ್ಥಾನ, ಪ್ರಶಾಂತವಾದ ಚಿಲಿಕಾ ಸರೋವರ, ನಂದನ್‌ಕಾನನ್‌ನಲ್ಲಿರುವ ವನ್ಯಜೀವಿ ಅಭಯಾರಣ್ಯಕ್ಕೆ ನೀವು ಭೇಟಿ ನೀಡಬೇಕಾದರೆ ಒಂದಿಡೀ ದಿನವನ್ನು ನಿಗದಿ ಮಾಡಲೇಬೇಕು. ಪ್ರವಾಸಕ್ಕೆ ತೆರಳಿದ ಮೇಲೆ ಶಾಪಿಂಗ್‌ ಮಾಡುವ ಮನಸ್ಸಾದರೆ ಪುರಿಯಲ್ಲಿರುವ ಪಿಪಿಲಿ ಪಟ್ಟಣಕ್ಕೆ ಭೇಟಿ ಕೊಟ್ಟರೆ ಸಾಕು. ಒಟ್ಟಿನಲ್ಲಿ ಒಡಿಶಾದ ಪುರಿ ನಗರಕ್ಕೆ ಮೊದಲ ಬಾರಿಗೆ ನೀವು ಭೇಟಿ ನೀಡಿದರೂ ಯಾವ ಚಿಂತೆಯೂ ಇಲ್ಲದೆಯೇ ಮನಸ್ಸಿಗೆ ಮುದ ನೀಡುವ ಇಲ್ಲಿನ ಪರಿಸರ ಹಾಗೂ ವಾಸ್ತುಶಿಲ್ಪದ ಅದ್ಭುತಗಳನ್ನು ತಪ್ಪದೇ ಎಂಜಾಯ್‌ ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ