logo
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಾ ಒಂದೇ ರೀತಿ ಚಟ್ನಿ ತಿಂದು ನಾಲಿಗೆ ರುಚಿ ಹೋಗಿದ್ಯಾ; ಇಡ್ಲಿ-ದೋಸೆ ಸವಿಯಲು ಈ 5 ಬಗೆಯ ಚಟ್ನಿ ಟ್ರೈ ಮಾಡಿ

ದಿನಾ ಒಂದೇ ರೀತಿ ಚಟ್ನಿ ತಿಂದು ನಾಲಿಗೆ ರುಚಿ ಹೋಗಿದ್ಯಾ; ಇಡ್ಲಿ-ದೋಸೆ ಸವಿಯಲು ಈ 5 ಬಗೆಯ ಚಟ್ನಿ ಟ್ರೈ ಮಾಡಿ

Jayaraj HT Kannada

Sep 13, 2024 06:50 PM IST

google News

ಇಡ್ಲಿ-ದೋಸೆ ಸವಿಯಲು 5 ಬಗೆಯ ಚಟ್ನಿ ಟ್ರೈ ಮಾಡಿ

    • ಚಟ್ನಿಯಲ್ಲಿ ಬಗೆಬಗೆಯ ಚಟ್ನಿ ಸವಿಯಬಹುದು. ಇಡ್ಲಿ ಹಾಗೂ ದೋಸೆ ಜೊತೆಗೆ ದಿನಕ್ಕೊಂದು ವೆರೈಟಿಯ ಚಟ್ನಿಯ ಸವಿ ನೋಡಲು ಈ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ. ಕೆಲವೇ ಪದಾರ್ಥಗಳನ್ನು ಹಾಕಿ ಬಾಯಿ ರುಚಿ ಹೆಚ್ಚು ಮಾಡಿಕೊಳ್ಳಬಹುದು.
ಇಡ್ಲಿ-ದೋಸೆ ಸವಿಯಲು 5 ಬಗೆಯ ಚಟ್ನಿ ಟ್ರೈ ಮಾಡಿ
ಇಡ್ಲಿ-ದೋಸೆ ಸವಿಯಲು 5 ಬಗೆಯ ಚಟ್ನಿ ಟ್ರೈ ಮಾಡಿ (Pixabay)

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ದೋಸೆ ಮತ್ತು ಇಡ್ಲಿಗೆ ಇರುವ ಬೇಡಿಕೆ ಪಿಜ್ಜಾ-ಬರ್ಗರ್‌ಗಳಿಗಿಲ್ಲ. ಬಗೆಬಗೆಯ ದೋಸೆಗಳನ್ನು ಭಿನ್ನ-ವಿಭಿನ್ನ ಚಟ್ನಿಯೊಂದಿಗೆ ಬಾಯಿ ಚಪ್ಪರಿಸಿಕೊಂಡು ಸವಿಯುವ ವರ್ಗವೇ ಇದೆ. ಆ ರುಚಿ ತಿಂದವರಿಗೆ ಗೊತ್ತಿರುತ್ತದೆ. ಇದೇ ವೇಳೆ ಇಡ್ಲಿ ಮತ್ತು ಚಟ್ನಿಯ ಕಾಂಬಿನೇಷನ್‌ ಕೂಡಾ ಭಾರಿ ಜನಪ್ರಿಯ. ದಕ್ಷಿಣ ಭಾರತದ ಅಡುಗೆಯಲ್ಲಿ ರಾಯಿತದ ಬಳಕೆಗಿಂತ ಚಟ್ನಿಯೇ ಹೆಚ್ಚು. ಸಾಂಪ್ರದಾಯಿಕ ಉಪಾಹಾರಗಳಾದ ಇಡ್ಲಿ, ದೋಸೆ ಮತ್ತು ವಡಾದಂತಹ ಹಲವು ತಿನಿಸುಗಳಿಗೆ ಸಾಂಬಾರ್‌ಗಿಂತ ಚಟ್ನಿಯೇ ಉತ್ತಮ ಜೊತೆಗಾರ. ನೀವು ನಿತ್ಯ ಒಂದೇ ಬಗೆಯ ಚಟ್ನಿ ಸೇವಿಸಿ ಬಾಯಿ ರುಚಿ ಹೋಗಿರಬಹುದು. ಅದಕ್ಕಾಗಿ ಪ್ರತಿದಿನವೂ ಭಿನ್ನ ಸ್ವಾದದ ಬಗೆಬಗೆಯ ಚಟ್ನಿಯನ್ನು ಪ್ರಯತ್ನಿಸಿ.

ತೆಂಗಿನಕಾಯಿ-ಉದ್ದಿನ ಬೇಳೆ ಚಟ್ನಿ

ಚಟ್ನಿಗಳಲ್ಲಿ ಕಾಯಿ ಚಟ್ನಿಗೆ ಮೊದಲ ಸ್ಥಾನ. ಈ ಚಟ್ನಿ ಮಾಡಲು, ಕೆಲವೇ ಪದಾರ್ಥಗಳು ಸಾಕು. ತೆಂಗಿನಕಾಯಿ, ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ಹುಣಸೆ ಹುಳಿ. ಮೊದಲಿಗೆ ತೆಂಗಿನಕಾಯಿ ತುರಿದು ಅದಕ್ಕೆ ಅಗತ್ಯಕ್ಕೆ ತಕ್ಕನಾಗಿ 3-4 ಹಸಿಮೆಣಸಿನಕಾಯಿ, 1-ಇಂಚಿನಷ್ಟು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಹುಳಿ ಹಾಕಿ ಸ್ವಲ್ಪವೇ ನೀರು ಹಾಕಿ ಮಿಕ್ಷಿ ಜಾರ್‌ನಲ್ಲಿ ರುಬ್ಬಿ. ಚಟ್ನಿಯು ದಪ್ಪ ಹದದಲ್ಲಿರಲಿ. ಒಗ್ಗರಣೆಗೆ ಒಂದು ಬಾಣಲೆಯನ್ನು ಒಲೆ ಮೇಲಿಟ್ಟು ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಅದಕ್ಕೆ 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, ಕರಿಬೇವು ಮತ್ತು 1-2 ಕೆಂಪು ಮೆಣಸು ಕತ್ತರಿಸಿ ಹಾಕಿ. ಹುರಿದ ನಂತರ ಚಿಟಿಕೆ ಇಂಗು ಸೇರಿಸಿ ಚಟ್ನಿಗೆ ಸೇರಿಸಿ ಮಿಕ್ಸ್‌ ಮಾಡಿ. ರುಚಿಯಾದ ಚಟ್ನಿ ಸವಿಯಲು ಸಿದ್ಧ.

ತೆಂಗಿನಕಾಯಿ ಮತ್ತು ಕೊತ್ತಂಬರಿ ಚಟ್ನಿ

ಮೇಲೆ ಹೇಳಿದಂತೆ ತೆಂಗಿನಕಾಯಿ ಚಟ್ನಿ ರುಬ್ಬುವಾಗ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಬೇಕು. ಉಳಿದಂತೆ ಮೇಲೆನ ಹಂತವನ್ನೇ ಅನುಸರಿಸಿದರೆ ಸಾಕು. ಕೊನೆಯಲ್ಲಿ ಒಗ್ಗರಣೆ ಹಾಕಿದರೆ ಕೊತ್ತಂಬರಿ ಚಟ್ನಿ ಸಿದ್ಧ.

ಶೇಂಗಾ ಚಟ್ನಿ

ಸ್ವಲ್ಪ ಎಣ್ಣೆಗೆ 1 ಈರುಳ್ಳಿ ಮತ್ತು ನಾಲ್ಕೈದು ಕೆಂಪು ಮೆಣಸಿನಕಾಯಿಯನ್ನು ಜೀರಿಗೆ ಮತ್ತು ಉದ್ದಿನ ಬೇಳೆಯೊಂದಿಗೆ ಫ್ರೈ ಮಾಡಿ. ಮಿಶ್ರಣವು ತಣ್ಣಗಾದ ನಂತರ ಅದನ್ನು ಗ್ರೈಂಡರ್ ಜಾರ್‌ಗೆ ಹಾಕಿ. ಇದರ ಜೊತೆಗೆ ಕಡಲೆ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನುಣ್ಣಗೆ ಪೇಸ್ಟ್ ಮಾಡಿದ ನಂತರ, ಒಗ್ಗರಣೆ ಹಾಕಿದರೆ ಸಾಕು. ರುಚಿಯಾದ ಚಟ್ನಿ ಸವಿಯಲು ಸಿದ್ಧ.

ಟೊಮೆಟೊ ಚಟ್ನಿ

ಸ್ಟವ್‌ ಮೇಲೆ ಮಧ್ಯಮ ಉರಿಯಲ್ಲಿ ಪ್ಯಾನ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಇದಕ್ಕೆ 2-3 ಕೆಂಪು ಮೆಣಸು, ಒಂದು ಚಮಚ ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಹಾಕಿ. ಅದು ಗೋಲ್ಡನ್ ಬ್ರೌನ್‌ ಆಗುವವರೆಗೆ ಫ್ರೈ ಮಾಡಿ. ಇದಕ್ಕೆ 5-6 ಎಸಳು ಬೆಳ್ಳುಳ್ಳಿ, 1 ದೊಡ್ಡ ಈರುಳ್ಳಿಯನ್ನು ಕತ್ತರಿಸಿ ಹಾಕಿ. ಕರಿಬೇವು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ ಫ್ರೈ ಆಗುವವರೆಗೂ ಬೇಯಿಸಿ. ಇದಕ್ಕೆ 2ರಿಂದ 3 ಟೊಮೆಟೊ,ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಟೊಮೆಟೊ ಹಾಕುವುದರಿಂದಾಗಿ ಹುಣಸೆ ಹುಳಿಯ ಅಗತ್ಯವಿಲ್ಲ. ನಿಮಗೆ ಹೆಚ್ಚು ಹುಳಿ ಬೇಕೆಂದರೆ ಸೇರಿಸಿ. ಟೊಮೆಟೊಗಳು ಮೆತ್ತಗಾಗುವವರೆಗೆ ಬೇಯಿಸಿ ಸ್ಟವ್‌ ಆಫ್‌ ಮಾಡಿ. ಮಿಶ್ರಣ ತಣ್ಣಗಾದ ಬಳಿಕ ಸ್ವಲ್ಪ ಬೆಲ್ಲ ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ ಒಗ್ಗರಣೆ ಹಾಕಿದರೆ ರುಚಿಯಾದ ಚಟ್ನಿ ಸಿದ್ಧ.

ಹುಣಸೆ ಹಣ್ಣಿನ ಚಟ್ನಿ

ಹುಣಸೆಹಣ್ಣಿನ ಹುಳಿ ಚಟ್ನಿ ಮಾಡಲು, 1 ಕಪ್ ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದರ ತಿರುಳನ್ನು ಹಿಂಡಿ ತೆಗೆದಿಟ್ಟುಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ 1 ಚಮಚ ಜೀರಿಗೆ ಸೇರಿಸಿ. ಅವು ಸಿಡಿದ ನಂತರ ಹುಣಸೆಹಣ್ಣಿನ ತಿರುಳನ್ನು ಹಾಕಿ. ಇದಕ್ಕೆ 1 ಕಪ್ ಬೆಲ್ಲ, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಮತ್ತು 1/2 ಟೀಸ್ಪೂನ್ ಉಪ್ಪು ಸೇರಿಸಿ ಬೆರೆಸಿ. ಬೆಲ್ಲ ಕರಗಿ ಮಿಶ್ರಣ ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ತಣ್ಣಗಾದ ನಂತರ ಗಾಳಿಯಾಡದ ಜಾರ್‌ನಲ್ಲಿ ಹಾಕಿಡಿ.ಇದು ದೋಸೆ ಅಥವಾ ಇಡ್ಲಿಗೆ ಸೈಡ್‌ ಡಿಶ್‌ ಆಗಿ ಬಳಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ