ಅಯ್ಯೋ, ನಮ್ಮ ದೋಸೆ ಉಳಿಸು ದೇವರೇ; ಐಸ್‌ಕ್ರೀಂ ದೋಸೆ ಕಂಡು ಭಗವಂತನಿಗೆ ಮೊರೆಯಿಟ್ಟ ಜನ, ವಿಡಿಯೊ ವೈರಲ್
Oct 15, 2024 06:16 PM IST
ಐಸ್‌ಕ್ರೀಂ ದೋಸೆ ವೈರಲ್ ವಿಡಿಯೊ
- ಇತ್ತೀಚಿನ ದಿನಗಳಲ್ಲಿ ಆಹಾರದ ಮೇಲೆ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಯಾವ್ಯಾವುದರ ಜೊತೆಗೆ ಏನೆನ್ನನ್ನೋ ಕಾಂಬಿನೇಷನ್ ಮಾಡುತ್ತಿದ್ದಾರೆ, ಇದೀಗ ದೋಸೆ ಜೊತೆಗೆ ಐಸ್‌ಕ್ರೀಂ ಸೇರಿಸಿ ಐಸ್‌ಕ್ರೀಮ್ ದೋಸೆ ಮಾಡಿರುವ ವಿಡಿಯೊ ವೈರಲ್ ಆಗಿದೆ. ಅದು ನಮ್ಮ ಬೆಂಗಳೂರಲ್ಲಿ. ಈ ವಿಡಿಯೊ ಕಂಡು ನಮ್ಮ ದೋಸೆ ಉಳಿದಪ್ಪಾ ದೇವ್ರೆ ಅಂತ ಜನ ಬೇಡ್ಕೋತಾ ಇದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೊಗಳನ್ನು ಕಂಡಾಗ ಒಮ್ಮೊಮ್ಮೆ ಭಗವಂತ ಹೀಗೆಲ್ಲಾ ಇರುತ್ತಾ ಅಂತ ಅನ್ನಿಸದೇ ಇರುವುದಿಲ್ಲ. ಅದರಲ್ಲೂ ಆಹಾರಕ್ಕೆ ಸಂಬಂಧಿಸಿದ ವೈರಲ್ ವಿಡಿಯೊಗಳನ್ನು ನೋಡಿದಾಗ ಇದೆಲ್ಲಾ ಸಾಧ್ಯನಾ, ಇದನ್ನ ತಿನ್ನೋಕೆ ಆಗುತ್ತಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ತಿನ್ನೋಕೆ ಆಗುತ್ತೋ ಬಿಡುತ್ತೋ ಆಹಾರದ ವಿಚಾರದಲ್ಲಿ ಹೊಸ ಹೊಸ ಪ್ರಯೋಗಗಳಂತೂ ನಡೆಯುತ್ತಲೇ ಇರುತ್ತವೆ.
ಈಗ್ಯಾಕಪ್ಪ ಈ ವಿಚಾರ ಮಾತಾಡ್ತಾ ಇದಾರೆ ಅಂದ್ಕೋತಾ ಇದೀರಾ. ಖಂಡಿತ ವಿಷ್ಯ ಇದೆ. ಇದೀಗ ಫೇಸ್‌ಬುಕ್‌ನಲ್ಲಿ ಐಸ್‌ಕ್ರೀಮ್ ದೋಸೆ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ವಿಡಿಯಿವೊಂದರಲ್ಲಿ ಐಸ್‌ಕ್ರೀಮ್ ದೋಸೆ ಮಾಡ್ತಾ ಇರೋದನ್ನು ನೀವು ಗಮನಿಸಬಹುದು. ಈ ಐಸ್‌ಕ್ರೀಮ್ ದೋಸೆ ಪ್ರಯೋಗ ಆಗಿರೋದು ಬೇರೆಲ್ಲೋ ಅಲ್ಲ, ನಮ್ಮ ಬೆಂಗಳೂರಿನಲ್ಲಿ. ಈ ವಿಡಿಯೊ ಕಂಡ ಮೇಲೆ ಜನರು ದೋಸೆ ಉಳಿವಿಗಾಗಿ ಪ್ರಾರ್ಥನೆ ಮಾಡ್ತಾ ಇದಾರಂತೆ, ಅದೆಲ್ಲಾ ಬಿಡಿ ಐಸ್‌ಕ್ರೀಮ್ ವೈರಲ್ ವಿಡಿಯೊದಲ್ಲಿ ಏನಿದೆ ನೋಡಿ.
Sukrit Jn ಎನ್ನುವ ಫೇಸ್‌ಬುಕ್ ಬಳಕೆದಾರರು ಈ ವಿಡಿಯೊವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊ ಆರಂಭದಲ್ಲಿ ದೋಸೆ ಮಾಡುವವರು ಕಾವಲಿಯ ಮೇಲೆ ದೋಸೆ ಹಿಟ್ಟನ್ನು ಹಾಕಿ ಅದನ್ನು ಮಸಾಲೆ ದೋಸೆ ಆಕಾರಕ್ಕೆ ತೀಡುತ್ತಾರೆ. ನಂತರ ಮೇಲ್ಗಡೆ ತುಪ್ಪ ಹಾಕುತ್ತಾರೆ. ಅದರ ಮೇಲೆ ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಐಸ್‌ಕ್ರೀಂ ಕಪ್‌ನಿಂದ ಇಟ್ಟು ಸವರಿ ಪ್ಲೇಟ್ ಮೇಲೆ ಹಾಕುತ್ತಾರೆ. ನಂತರ ದೋಸೆಯ ಮೇಲೆ ಜಾಮ್ ಹಾಕುತ್ತಾರೆ. ನಂತರ ಐಸ್‌ಕ್ರೀಮ್‌ಗಳನ್ನು ಜೋಡಿಸಿರುವ ತಟ್ಟೆಗೆ ದೋಸೆ ಹಾಕುತ್ತಾರೆ. ಐಸ್‌ಕ್ರೀಮ್‌ಗಳ ಮೇಲೆ ಮ್ಯಾಂಗೋ, ಸ್ಟ್ರಾಬೆರಿ ಹಾಗೂ ಲಿಚಿ ಜೆಲ್ ಒಂದೊಂದು ಚಮಚ ಹಾಕುತ್ತಾರೆ. ದೋಸೆಯ ಮೇಲೆ ಚಾಕೊಲೇಟ್ ಸಿರಪ್‌ನಿಂದ ಅಲಂಕರಿಸಲಾಗುತ್ತದೆ.
ಸೆಪ್ಟೆಂಬರ್ 23ರಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಐಸ್‌ಕ್ರೀಮ್ ದೋಸೆಗೆ ಏನೆಲ್ಲಾ ಕಾಮೆಂಟ್‌ಗಳು ಬಂದಿವೆ ನೋಡಿ.
ಐಸ್‌ಕ್ರೀಂ ದೋಸೆಗೆ ಬಂದ ಕಾಮೆಂಟ್‌ಗಳು ಹೀಗಿವೆ ನೋಡಿ
‘ದೇವರೆ ನಮ್ಮ ದೋಸೆಯನ್ನು ಉಳಿಸು. ಇಂತಹ ಜನರ ಕೈಗೆ ಸಿಲುಕಿ ನಮ್ಮ ದೋಸೆ ನರಳುತ್ತಿದೆ. ದಯವಿಟ್ಟು ದೋಸೆಯನ್ನ ರಕ್ಷಿಸು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೋಸೆ ವಿಚಾರದಲ್ಲಿ ಹಲವು ಪ್ರಯೋಗಗಳಾಗುತ್ತಿವೆ. ಟಾಯ್ಲೆಟ್ ವಿಚಾರಗಳನ್ನು ಹೊರತು ಪಡಿಸಿ ಎಂದು ಇನ್ನೊಬ್ಬರು ಐಸ್‌ಕ್ರೀಂ ದೋಸೆ ಬಗ್ಗೆ ವ್ಯಂಗ್ಯವಾಡಿ ಕಾಮೆಂಟ್ ಮಾಡಿದ್ದಾರೆ. ‘ಲೋ ಅಣ್ಣಂದಿರಾ ದೋಸೆನಾ ದೋಸೆ ತರನೇ ತಿನ್ನಬೇಕು ಕಣ್ರೋ‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ‘ಗುರು ದುಡ್ಡು ಮಾಡೋಕೆ ಬೇರೆ ದಾರಿಗಳು ಇದೆ. ಈ ತರ ಶಾರ್ಟ್ ಟೈಮ್‌ನಲ್ಲಿ ಶೋಕಿ ಮಾಡ್ಕೊಂಡು ಜನರ ಜೀವದ ಜೊತೆ ಆಟ ಆಡಕೊಂಡು ದುಡ್ಡು ಮಾಡ್ತೀರಾ‘ ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್ ಮೂಲಕ ರೋಷ ವ್ಯಕ್ತಪಡಿಸಿದ್ದಾರೆ. ‘ದೋಸೆ ಅನ್ನೋದನ್ನೇ ಮರೆತುಬಿಡಬೇಕು, ಐಯ್ಯೋ ದೇವರೇ ಏನು ಕಾಲಬಂತಪ್ಪ ಕರ್ಮ‘ ಅಂತ ವ್ಯಕ್ತಿಯೊಬ್ಬರು ಕಾಮೆಂಟ್ ಮೂಲಕ ಬೇಸರ ಹೊರ ಹಾಕಿದ್ದಾರೆ.