ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಕೊಕೊನಟ್ ಚಿಕನ್ ರೆಸಿಪಿ, ಇನ್ನು ಏನೇನೆಲ್ಲಾ ನೋಡಬೇಕಪ್ಪಾ ದೇವ್ರೆ ಅಂದ್ರು ನೆಟ್ಟಿಗರು-food nov veg recipes how to make coconut chicken in simple way social media viral video chicken recipes rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಕೊಕೊನಟ್ ಚಿಕನ್ ರೆಸಿಪಿ, ಇನ್ನು ಏನೇನೆಲ್ಲಾ ನೋಡಬೇಕಪ್ಪಾ ದೇವ್ರೆ ಅಂದ್ರು ನೆಟ್ಟಿಗರು

ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಕೊಕೊನಟ್ ಚಿಕನ್ ರೆಸಿಪಿ, ಇನ್ನು ಏನೇನೆಲ್ಲಾ ನೋಡಬೇಕಪ್ಪಾ ದೇವ್ರೆ ಅಂದ್ರು ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಕೊಕೊನಟ್ ಚಿಕನ್ ರೆಸಿಪಿ ಭಾರಿ ವೈರಲ್ ಆಗುತ್ತಿದೆ. ತೆಂಗಿನಕಾಯಿ ಚಿಪ್ಪಿನಲ್ಲಿ ಚಿಕನ್ ಮಿಶ್ರಣವನ್ನು ಸೇರಿಸಿ ಬೇಯಿಸುವ ಈ ರೆಸಿಪಿ ಕೆಲವರಿಗೆ ಇಷ್ಟ ಆದ್ರೆ, ಇನ್ನೂ ಕೆಲವರು ದೇವ್ರೇ ಇದೇನು ಹೀಗೆ ಅಂತ ಪ್ರಶ್ನೆ ಮಾಡ್ತಾ ಇದಾರೆ. ಹಾಗಾದರೆ ಈ ರೆಸಿಪಿ ಮಾಡೋದು ಹೇಗೆ, ರೆಸಿಪಿ ಬಗ್ಗೆ ಜನರೆಲ್ಲಾ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ.

ಕೊಕೊನಟ್ ಚಿಕನ್ ರೆಸಿಪಿ
ಕೊಕೊನಟ್ ಚಿಕನ್ ರೆಸಿಪಿ

ಇತ್ತೀಚಿನ ದಿನಗಳಲ್ಲಿ ಜನರು ಪಾಕಪ್ರವೀಣರಾಗುತ್ತಿದ್ದಾರೆ. ಹೊಸ ಹೊಸ ರೆಸಿಪಿಗಳನ್ನು ಅಭ್ಯಾಸ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ‍ಪೋಸ್ಟ್ ಮಾಡುತ್ತಿದ್ದಾರೆ, ಇದು ವೈರಲ್ ಕೂಡ ಆಗುತ್ತಿದೆ. ಇದೀಗ ಕೊಕೊನಟ್ ಚಿಕನ್ ರೆಸಿಪಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇಡಿ ತೆಂಗಿನಕಾಯಿಯಲ್ಲಿ ತಯಾರಿಸುವ ಈ ರೆಸಿಪಿಯನ್ನು ನೋಡಿ ಕೆಲವರು ವಾವ್ ಅಂದ್ರೆ, ಇನ್ನೂ ಕೆಲವರು ಇದೇನಪ್ಪಾ ಕರ್ಮ, ಇನ್ನೂ ಏನೆಲ್ಲಾ ಮಾಡ್ತಾರೋ ಅಂತ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಚಿಕನ್ ತುಂಡು, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಈರುಳ್ಳಿ ಮುಂತಾದವರನ್ನೆಲ್ಲಾ ಸೇರಿಸಿ ತೆಂಗಿನಕಾಯಿಯ ಮೇಲ್ಭಾಗವನ್ನು ಕತ್ತರಿಸಿ ಅದರಲ್ಲಿ ಚಿಕನ್ ತುಂಡುಗಳನ್ನು ತುಂಬಿಸಿ ಬೇಯಿಸುವ ಈ ಚಿಕನ್ ರೆಸಿಪಿ ಬಹುತೇಕರಿಗೆ ಸಖತ್ ಆಗಿದೆ ಅನ್ನಿಸಿದ್ರೂ ಕೆಲವರು ಇದನ್ನು ನೋಡಿ ವ್ಯಾಕ್ ಅನ್ನುತ್ತಿದ್ದಾರೆ.

Nashik Traveller ಎನ್ನುವ ಫೇಸ್‌ಬುಕ್ ಪುಟದಲ್ಲಿ ಈ ಕೊಕೊನಟ್ ಚಿಕನ್ ತಯಾರಿಸುವ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 1.3 ಮಿಲಿಯನ್ ಜನ ವೀಕ್ಷಿಸಿದ್ದಾರೆ. 6 ಸಾವಿರಕ್ಕೂ ಅಧಿಕ ಲೈಕ್‌ ಮಾಡಿದ್ದಾರೆ 60ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡುವ ಮೂಲಕ ಈ ರೆಸಿಪಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಈ ವೈರಲ್ ಚಿಕನ್ ರೆಸಿಪಿ ವಿಡಿಯೊಗೆ ಬಂದ ಕಾಮೆಂಟ್‌ಗಳು ಹೀಗಿವೆ

‘ಲೇ ಮಂಗ್ಯ ತಿನ್ನುವ ಪದಾರ್ಥಗಳನ್ನು ಎಲ್ಲರೂ ತಿನ್ನುವ ತರ ಮಾಡಿ, ಕಲ್ಗಚ್ಚು ತರ ಮಾಡಿ ಯಾಕೆ ತಿನ್ನೋರಿಗು ತಿಂದೆ ಇರುತರ ಮಾಡಿತೀರ‘ ಅಂತ ನಟರಾಜ್ ಕೆಟಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ‘ಇದು ಸಾಧ್ಯವಿಲ್ಲ, ಯಾಕಂದ್ರೆ ತೆಂಗಿನಚಿಪ್ಪು ಶಾಖ ಹೀರಿಕೊಳ್ಳುವುದಿಲ್ಲ‘ ಎಂದು ಜಾಕೊಬ್ ಓಮೆನ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ‘ಇದು ಚೆನ್ನಾಗಿಲ್ಲ‘ ಎಂದು ಸಿಕೆ ರೆಡ್ಡಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ‘ಈ ಐಡಿಯಾ ಒಂಥರಾ ಚೆನ್ನಾಗಿದೆ. ಆದರೆ ತೆಂಗಿನಕಾಯಿ ಒಳಗೆ ಸೀ ಫುಡ್‌ಗಳನ್ನು ಮಾಡಿದ್ರೆ ಚೆನ್ನಾಗಿರುತ್ತೆ ಅನ್ಸುತ್ತೆ‘ ಅಂತ ಸೋಲರಿಸ್‌ ಜಾರ್ಜ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದಕ್ಕೆ ಸಖತ್ ಆಗಿದೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.

ಅವರ ಕಾಮೆಂಟ್‌ಗಳು ಏನೇ ಇರಲಿ, ಈ ರೆಸಿಪಿಯನ್ನು ನೀವು ಟ್ರೈ ಮಾಡಬೇಕು ಅಂತಿದ್ರೆ ಹೇಗೆ ಮಾಡೋದು ಅಂತ ನೋಡಿ

ಕೊಕೊನಟ್ ಚಿಕನ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡುಗಳು – ಕಾಲು ಕೆಜಿ, ಹಸಿಮೆಣಸು – 10 ರಿಂದ 12, ಶುಂಠಿ – ಒಂದು ಇಂಚಿನಷ್ಟು, ಬೆಳ್ಳುಳ್ಳಿ – 20 ಎಸಳು, ಜೀರಿಗೆ – 2 ಚಮಚ, ಈರುಳ್ಳಿ – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಖಾರದಪುಡಿ, ಕೊತ್ತಂಬರಿ ಪುಡಿ, ಉಪ್ಪು, ಎಣ್ಣೆ, ಇಡಿ ತೆಂಗಿನಕಾಯಿ, ಗೋಧಿಹಿಟ್ಟು

ಕೊಕೊನಟ್ ಚಿಕನ್ ಮಾಡುವ ವಿಧಾನ

ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕಲ್ಲಿನ ಮೇಲೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಿ, ಕಲ್ಲು ಇಲ್ಲ ಅಂದರೆ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ನಂತರ ಚಿಕನ್ ತುಂಡು ಇರುವ ಪಾತ್ರೆಗೆ ಹಸಿಮೆಣಸಿನ ಪೇಸ್ಟ್ ಸೇರಿಸಿ.ಕತ್ತರಿಸಿಕೊಂಡು ಈರುಳ್ಳಿ ಹಾಕಿ. ಇದರ ಮೇಲೆ ಖಾರದಪುಡಿ, ಕೊತ್ತಂಬರಿ ಪುಡಿ, ಉಪ್ಪಿನ ಮಿಶ್ರಣ ಮಾಡಿ. ಎಣ್ಣೆ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಕಲೆಸಿ. ತೆಂಗಿನಕಾಯಿಯನ್ನ ಮೇಲ್ಭಾಗದಿಂದಲೇ ಕತ್ತರಿಸಿ, ಮಿಶ್ರಣ ಮಾಡಿಟ್ಟುಕೊಂಡ ಚಿಕನ್ ತುಂಡುಗಳನ್ನು ಅದರೊಳಗೆ ತುಂಬಿ. ಗೋಧಿಹಿಟ್ಟನ್ನು ಕಲೆಸಿಕೊಂಡು ತೆಂಗಿನಕಾಯಿ ಬಾಯಿಯ ಸುತ್ತಲೂ ಅಂಟಿಸಿ. ಅದರ ಮೇಲೆ ಕತ್ತರಿಸಿಟ್ಟ ಚಿಪ್ಪು ಇಡಿ. ನಂತರ ಅದನ್ನು ಕೆಂಡದಲ್ಲಿ ಬೇಯಿಸಿಬೇಕು, ಈಗ ನಿಮ್ಮ ಮುಂದೆ ರುಚಿಯಾದ ಕೊಕೊನಟ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.

mysore-dasara_Entry_Point