ಗಂಡನ ಹತ್ರ ತರಕಾರಿ ತರ್ಸೋಕೆ ಹೆಂಡ್ತಿ ಇಷ್ಟೆಲ್ಲಾ ಸರ್ಕಸ್ ಮಾಡ್ಬೇಕಾ; ವೈರಲ್ ಆಯ್ತು ಐಎಫ್‌ಎಸ್ ಅಧಿಕಾರಿ ಹಂಚಿಕೊಂಡ ತರಕಾರಿ ಚೀಟಿ
ಗಂಡನ ಹತ್ರ ಮನೆ ಕೆಲಸ ಮಾಡ್ಸೋದು ಸುಲಭ ಅಲ್ಲ ಅನ್ನೋ ಕಾರಣಕ್ಕೆ ಇರ್ಬೇಕು ಹೆಣ್ಣುಮಕ್ಕಳು ತಾವೇ ಎಲ್ಲಾ ಕೆಲಸ ಮಾಡ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಐಎಫ್‌ಎಸ್ ಅಧಿಕಾರಿಯೊಬ್ಬರು ಮಡದಿಯೊಬ್ಬಳು ತನ್ನ ಗಂಡನಿಗೆ ತರಕಾರಿ ತರಲು ಚೀಟಿ ರೆಡಿ ಮಾಡಿದ್ದನ್ನು ಹಂಚಿಕೊಂಡಿದ್ದಾರೆ. ಅದು ಈಗ ಸಖತ್ ವೈರಲ್ ಆಗಿದೆ. ಆ ಚೀಟಿಯಲ್ಲಿ ಇರುವುದು ನೋಡಿದ್ರೆ ಪಕ್ಕಾ ನಗು ಬರುತ್ತೆ.
ಮನೆಕೆಲಸ ಹೆಂಗಸರು ಅಥವಾ ಮಡದಿಯರಿಗೆ ಸೀಮಿತ ಅನ್ನೋ ಕಾಲ ಈಗಿಲ್ಲ. ಈಗ ಮನೆ ಕೆಲಸವನ್ನು ಗಂಡ–ಹೆಂಡತಿ ಹಂಚಿಕೊಂಡು ಮಾಡುತ್ತಾರೆ. ಆದರೂ ಕೆಲವು ಹೆಂಗಸರು ಗಂಡನ ಕೈಯಲ್ಲಿ ಕೆಲಸ ಮಾಡಿಸೋಕೆ ಹೆದುರುತ್ತಾರೆ, ಇದಕ್ಕೆ ಗಂಡ ಮೇಲಿನ ಭಯ ಖಂಡಿತ ಕಾರಣವಲ್ಲ. ಅಯ್ಯೋ ಅವರ ಹತ್ರ ತರಕಾರಿ ತರೋಕೆ ಹೇಳಿದ್ರೆ ನಾನು ಹೇಳಿದ್ದು ಬಿಟ್ಟು ಉಳಿದಿದ್ದೆಲ್ಲಾ ತರ್ತಾರೆ ಅನ್ನೋ ಗೋಳು ಒಬ್ಬರದ್ದಾದ್ರೆ, ಗಂಡನ ಬಳಿ ಹಣ್ಣು ತರೋಕೆ ಹೇಳಿದ್ರೆ ಒಂದು ಕೆಜಿ ಹಣ್ಣಲ್ಲಿ ಅರ್ಧ ಕೆಜಿ ಕೊಳೆತಿರುವುದೇ ಇದೇ ಎನ್ನುವುದು ಇನ್ನೊಬ್ಬರ ದೂರು. ಇದು ಸುಳ್ಳು ಅಂತಾನೂ ಹೇಳೋಕೆ ಆಗೊಲ್ಲ.
ಅದಕ್ಕೆ ಸಾಕ್ಷಿ ಎಂಬಂತೆ ತರಕಾರಿ ಚೀಟಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ಇದು ಮಡದಿಯೊಬ್ಬಳು ತಮ್ಮ ಗಂಡನಿಗೆ ತರಕಾರಿ ತರಲು ಹೇಳುವಾಗ ಬರೆದಿದ್ದು. ಇದನ್ನು ನೋಡಿದ್ರೆ ಆಕೆಗೆ ತನ್ನ ಗಂಡ ಇಂತಹ ತರಕಾರಿ ತರಬಹುದು ಎಂಬುದರ ಸ್ಪಷ್ಟ ಕಲ್ಪನೆ ಇರುವುದು ಅರ್ಥವಾಗುತ್ತದೆ. ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ತರಕಾರಿ ಚೀಟಿ ನೋಡಿದ್ರೆ ನಿಮಗೆ ನಗದೇ ಇರಲು ಸಾಧ್ಯವಿಲ್ಲ. ಹಾಗಾದ್ರೆ ಅಂಥದ್ದೇನಿದೆ ಈ ಚೀಟಿಯಲ್ಲಿ ಅಂತೀರಾ, ಮುಂದೆ ನೋಡಿ.
ವೈರಲ್ ತರಕಾರಿ ಚೀಟಿಯಲ್ಲಿರುವುದು
ಟೊಮೆಟೊ ಅವರ ಲಿಸ್ಟ್‌ನಲ್ಲಿ ಮೊದಲಿದೆ. ಅದರ ಮುಂದೆ ಸ್ವಲ್ಪ ಹಳದಿ, ಸ್ವಲ್ಪ ಕೆಂಪು, ಯಾವುದೇ ತೂತು ಇರಬಾರದು. 1.5 ಕೆಜಿ ಎಂದು ಬರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಈರುಳ್ಳಿ ಇದೆ. ಇದಂತೂ ಸಖತ್ ಮಜಾ ಇದೆ. ಯಾಕಂದ್ರೆ ಚಿಕ್ಕ ಗಾತ್ರದ್ದು, ರೌಂಡ್ ಶೇಪ್ ಎಂದು ಬರೆದಿರುವುದು ಮಾತ್ರವಲ್ಲ, ಈರುಳ್ಳಿ ಚಿತ್ರವನ್ನೂ ಬಿಡಿಸಿದ್ದಾರೆ. ಮೆಂತ್ಯೆ ಸೊಪ್ಪು ತರಕಾರಿ ಚೀಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎತ್ತರ ಕಡಿಮೆ, ಎಲೆಗಳು ಹಸಿರಾಗಿರಬೇಕು 1 ಬಂಡಲ್ ಎಂದು ಬರೆದು ಮೆಂತ್ಯೆ ಸೊಪ್ಪಿನ ಚಿತ್ರ ಕೂಡ ಬಿಡಿಸಿದ್ದಾರೆ. ಹೀಗೆ ಆಲೂಗೆಡ್ಡೆ, ಹಾಲು, ಬೆಂಡೆಕಾಯಿ, ಹಸಿಮೆಣಸು, ಪಾಲಕ್ ಎಲ್ಲವನ್ನೂ ಹೇಗೆ ಬೇಕು ಎಂದು ಬರೆದಿರುವ ಅವರು ಕೊನೆಯಲ್ಲಿ ಈ ಎಲ್ಲವನ್ನೂ ಹಾರ್ಡ್‌ವೇರ್ ಶಾಪ್ ಬಿಟ್ಟು ಬೇರೆ ಕಡೆಯಿಂದ ತನ್ನಿ ಎಂದು ಬರೆದಿದ್ದಾರೆ.
ಈ ವೆಜಿಟೇಬಲ್ ಚೀಟಿ ನೋಡಿದ ಗೃಹಿಣಿಯರು ತಾವು ಕೂಡ ಇನ್ನು ಮುಂದೆ ತರಕಾರಿ ತರೋಕೆ ಗಂಡನನ್ನು ಕಳುಹಿಸುವಾಗ ಇದೇ ರೀತಿ ಪ್ಲಾನ್ ಮಾಡಬೇಕು ಎಂದು ಯೋಚಿಸುತ್ತಿರುವುದು ಸುಳ್ಳಲ್ಲವಂತೆ. ಇದು ಐದಾರು ವರ್ಷದ ಹಿಂದೆ ಎರಾ ಲೊಂಡೆ ಎನ್ನುವವರು ತಮ್ಮ ಗಂಡನಿಗೆ ತರಕಾರಿ ತರಲು ಹೇಳಲು ರೆಡಿ ಮಾಡಿದ್ದ ಚೀಟಿಯಾಗಿತ್ತು. ಇದೇ ಈಗ ಬೇರೆ ರೂಪ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಈ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಅವರ ಮಡದಿಯೇ ಈ ಚೀಟಿ ತಯಾರಿಸಬೇಕು ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸ್ವಷ್ಟನೆ ನೀಡಿರುವ ಅಧಿಕಾರಿ ಚೀಟಿ ಯಾರದ್ದು ಎಂದು ಟ್ವೀಟ್‌ನಲ್ಲಿ ಮೂಲ ಖಾತೆಯನ್ನು ಹುಡುಕಿ ಟ್ಯಾಗ್ ಮಾಡಿದ್ದಾರೆ. ಇದೆಲ್ಲಾ ಏನೇ ಇರ್ಲಿ ಹೆಂಡತಿಯರು ಮಾತ್ರ ಈ ರೀತಿ ಚೀಟಿ ರೆಡಿ ಮಾಡಿ ಕೊಡೋದೇ ಬೆಸ್ಟ್ ಅಂತ ಡಿಸೈಡ್ ಆಗಿದ್ದಾರಂತೆ.